Sr Counsel Indira Jaising, Advocate Genaral Prabhuling Navadagi and Karnataka HC 
ಸುದ್ದಿಗಳು

[ಜಾರಕಿಹೊಳಿ ಪ್ರಕರಣ] ಎಸ್‌ಐಟಿ ಅಂತಿಮ ವರದಿ ಸಲ್ಲಿಸುವ ವಿಚಾರ: ಇಲ್ಲಿದೆ ಜೈಸಿಂಗ್‌-ನಾವದಗಿ ವಾದ ಪ್ರತಿವಾದದ ವಿವರ

ಯಾರ ಹಿತಾಸಕ್ತಿ ಕಾಯಲು ಮುಚ್ಚಿದ ಲಕೋಟೆಯಲ್ಲಿದ್ದ ಎಸ್‌ಐಟಿ ವರದಿಯನ್ನು ಸೋರಿಕೆ ಮಾಡಲಾಗಿದೆ? ನ್ಯಾಯಾಲಯ ಮತ್ತು ಎಸ್‌ಐಟಿ ಹೊರತುಪಡಿಸಿ ವರದಿಯ ಕಸ್ಟಡಿ ಯಾರಿಗೂ ಇರಲಿಲ್ಲ. ಈ ಕುರಿತು ನ್ಯಾಯಾಂಗ ತನಿಖೆಯಾಗಬೇಕು ಎಂದು ಆಗ್ರಹಿಸಿದ ಜೈಸಿಂಗ್‌.

Siddesh M S

ರಾಜ್ಯ ರಾಜಕಾರಣದಲ್ಲಿ ಅಲ್ಲೋಲಕಲ್ಲೋಲಕ್ಕೆ ಕಾರಣವಾಗಿದ್ದ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರ ಸಿ ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ದಳ (ಎಸ್‌ಐಟಿ) ಸಿದ್ಧಪಡಿಸಿರುವ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸುವ ಸಂಬಂಧ ಅನುಮತಿ ನೀಡಬೇಕೆ, ಬೇಡವೇ ಎಂಬ ವಿಚಾರವನ್ನು ಸೆಪ್ಟೆಂಬರ್‌ 27ರಂದು ನಿರ್ಧರಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ಹೇಳಿದೆ.

ಎಸ್‌ಐಟಿ ಸಿಂಧುತ್ವ ಪ್ರಶ್ನಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿ, ಎಸ್‌ಐಟಿ ವಜಾ ಮಾಡಿ ಮರು ತನಿಖೆಗೆ ಆದೇಶಿಸುವಂತೆ ಕೋರಿರುವ ಸಿ ಡಿ ಹಗರಣದ ಸಂತ್ರಸ್ತ ಯುವತಿಯ ಅರ್ಜಿ ಹಾಗೂ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಆರೋಪಿ ರಮೇಶ ಜಾರಕಿಹೊಳಿ ದಾಖಲಿಸಿರುವ ಮನವಿಯನ್ನು ವಜಾ ಮಾಡುವಂತೆ ಸಂತ್ರಸ್ತೆಯು ವಕೀಲ ಸಂಕೇತ್‌ ಏಣಗಿ ಮೂಲಕ ಸಲ್ಲಿಸಿರುವ ಮೂರು ಪ್ರತ್ಯೇಕ ಮನವಿಗಳ ವಿಚಾರಣೆಯನ್ನು ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್‌ ಶಂಕರ್‌ ಮಗದುಮ್‌ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

“ಈ ಪ್ರಕರಣವು ಹೆಚ್ಚು ಸಮಯ ತೆಗೆದುಕೊಳ್ಳಲಿದೆ. ಈ ನ್ಯಾಯಾಲಯವು ಹಿಂದೆ ಅಪರಾಧದ ತನಿಖೆ ಮುಂದುವರಿಯಬೇಕು. ಆದರೆ, ನ್ಯಾಯಾಲಯದ ಅನುಮತಿ ಇಲ್ಲದೇ ಎಸ್‌ಐಟಿ ಅಂತಿಮ ವರದಿಯನ್ನು ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸುವಂತಿಲ್ಲ ಎಂದು ಮಧ್ಯಂತರ ಆದೇಶ ಮಾಡಿದೆ. ಹೀಗಾಗಿ, ಎಸ್‌ಐಟಿ ಅಂತಿಮ ವರದಿ ಸಲ್ಲಿಸಲು ಅನುಮತಿಸಬೇಕೆ ಅಥವಾ ಬೇಡವೇ ಎಂಬುದನ್ನು ಮುಂದಿನ ವಿಚಾರಣೆಯಲ್ಲಿ ನಿರ್ಧರಿಸಲಾಗುವುದು” ಎಂದು ಪೀಠ ಹೇಳಿತು.

ರಾಜ್ಯ ಸರ್ಕಾರವನ್ನು ಪ್ರತಿನಿಧಿಸಿದ್ದ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರು “ಹೈಕೋರ್ಟ್‌ ಅನುಮತಿ ನೀಡದೇ ವಿಚಾರಣಾಧೀನ ನ್ಯಾಯಾಲಯಕ್ಕೆ ಎಸ್‌ಐಟಿ ವರದಿ ಸಲ್ಲಿಸುವುದಿಲ್ಲ ಎಂದು ನ್ಯಾಯಾಲಯಕ್ಕೆ ತಿಳಿಸಿದ್ದೇವೆ. ಸಿಆರ್‌ಪಿಸಿ ಸೆಕ್ಷನ್‌ 173ರ ಅನ್ವಯ ಹೈಕೋರ್ಟ್‌ ಆದೇಶಕ್ಕೆ ಒಳಪಟ್ಟು ವಿಚಾರಣಾಧೀನ ನ್ಯಾಯಾಲಯಕ್ಕೆ ಎಸ್‌ಐಟಿ ಅಂತಿಮ ವರದಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು. ಸಿಆರ್‌ಪಿಸಿ ಸೆಕ್ಷನ್‌ 173 (2)ರ ಪ್ರಕಾರ ಎರಡು ತಿಂಗಳಲ್ಲಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಬೇಕಿದೆ” ಎಂದರು.

ಮುಂದುವರೆದು, “ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದರೆ ಆರೋಪಿ ಮತ್ತು ಸಂತ್ರಸ್ತೆ ಎಲ್ಲಿ ನಿಲ್ಲುತ್ತಾರೆ ಎಂಬುದು ತಿಳಿಯುತ್ತದೆ. ಇಬ್ಬರ ಹಕ್ಕುಗಳ ವಿಚಾರದಲ್ಲಿ ನಾವು ಸಮತೋಲನ ಸಾಧಿಸಬೇಕಿದೆ. ಅಂತಿಮ ವರದಿಯಲ್ಲಿ ಆರೋಪಿಗೆ ಕ್ಲೀನ್‌ಚಿಟ್‌ ಅಥವಾ ಶಿಕ್ಷೆಯನ್ನು ನಿರ್ಧರಿಸಲಾಗಿಲ್ಲ. ಹೈಕೋರ್ಟ್‌ ಆದೇಶಕ್ಕೆ ಒಳಪಟ್ಟು ಕೆಳಹಂತದ ನ್ಯಾಯಾಲಯಕ್ಕೆ ವರದಿ ಸಲ್ಲಿಸುತ್ತೇವೆ. ವರದಿ ಸಲ್ಲಿಸದೇ ತುಂಬಾ ದಿನ ಹೀಗೆ ಮುಂದುವರಿಯಲಾಗದು. ಪಿಐಎಲ್‌ ಅಥವಾ ಸಂತ್ರಸ್ತೆಯ ಅರ್ಜಿಗೆ ಸಂಬಂಧಿಸಿದಂತೆ ಯಾವುದೇ ಪೂರ್ವಾಗ್ರಹವನ್ನು ಹೊಂದಲಾಗಿಲ್ಲ” ಎಂದು ನಾವದಗಿ ಪೀಠಕ್ಕೆ ವಿವರಿಸಿದರು.

ಸಂತ್ರಸ್ತೆ ಪರ ಹಿರಿಯ ವಕೀಲೆ ಇಂದಿರಾ ಜೈಸಿಂಗ್‌ ಅವರು “ವಿಚಾರಣಾಧೀನ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಅವಕಾಶ ಮಾಡಿಕೊಡುವಂತೆ ಕೋರುತ್ತಿರುವ ಎಜಿ ವಾದಕ್ಕೆ ನಮ್ಮ ತೀವ್ರ ಆಕ್ಷೇಪವಿದೆ. ಈ ಮೂಲಕ ನಮ್ಮ ಮನವಿಯನ್ನು ಪೂರ್ವದಲ್ಲೇ ಬಲಹೀನಗೊಳಿಸುವ ಉದ್ದೇಶ ಹೊಂದಿದ್ದಾರೆ. ಅಂದಿನ ಗೃಹ ಸಚಿವರಿಗೆ ಎಸ್‌ಐಟಿ ರಚಿಸುವ ಹಕ್ಕಿರಲಿಲ್ಲ ಎಂಬುದನ್ನು ನಮ್ಮ ಮನವಿಯಲ್ಲಿ ಪ್ರಶ್ನಿಸಿದ್ದೇವೆ” ಎಂದರು.

“ಮೊದಲಿಗೆ ಎಜಿ ಹೇಳುವಂತೆ ಸಿಆರ್‌ಪಿಸಿ ಸೆಕ್ಷನ್‌ 174ರ ಪ್ರಕಾರ ಎಸ್‌ಐಟಿಯದು ಅಂತಿಮ ವರದಿಯಲ್ಲ. ತಮಗೆ ಮಾಹಿತಿ ನೀಡಲು ಗೃಹ ಸಚಿವರು ರಚಿಸಿರುವ ಎಸ್‌ಐಟಿ ವರದಿಯಾಗಿದೆ. ಎರಡನೆಯದಾಗಿ, ಸಿಆರ್‌ಪಿಸಿ ಸೆಕ್ಷನ್‌ 173ರ ಪ್ರಕಾರ ಕಾನೂನಿಗೆ ಅನುಗುಣವಾಗಿ ವರದಿ ಇಲ್ಲ. ಇದೇ ಕಾರಣಕ್ಕಾಗಿ ಹಿಂದಿನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಅಭಯ್‌ ಶ್ರೀನಿವಾಸ್‌ ಓಕ್‌ ಅವರು “ನ್ಯಾಯಾಲಯದ ಅನುಮತಿ ಪಡೆಯದೇ ಅಂತಿಮ ವರದಿಯನ್ನು ಸಲ್ಲಿಸುವಂತಿಲ್ಲ” ಎಂದು ಮಧ್ಯಂತರ ಆದೇಶ ಮಾಡಿದ್ದಾರೆ. ಮಧ್ಯಂತರ ಆದೇಶವನ್ನು ತೆಗೆದರೆ ಅಂತಿಮ ವಿಚಾರಣೆಗೆ ಅವಕಾಶ ಮಾಡಿಕೊಟ್ಟಂತಾಗುತ್ತದೆ. ಎಸ್‌ಐಟಿ ಸಲ್ಲಿಸಿರುವ ವರದಿಯು ಸಿಆರ್‌ಪಿಸಿ ಸೆಕ್ಷನ್‌ 173ರ ಅಡಿ ಕಾನೂನಿಗೆ ಬದ್ಧವಾಗಿಲ್ಲ ಎಂಬುದನ್ನು ನ್ಯಾಯಾಲಯಕ್ಕೆ ನನ್ನ ವಾದದ ಮೂಲಕ ತಿಳಿಸಬೇಕಾಗುತ್ತದೆ” ಎಂದರು.

“ಮೂರನೆಯದಾಗಿ, ಎಸ್‌ಐಟಿಯ ಗೌಪ್ಯವಾದ ವರದಿಯನ್ನು ಮಾಧ್ಯಮಕ್ಕೆ ಸೋರಿಕೆ ಮಾಡಲಾಗಿದೆ. ಪ್ರಕರಣದ ವಿಚಾರಣೆ ನಿಗದಿಯಾಗಿದ್ದ ದಿನವೇ ಎಸ್‌ಐಟಿ ಗೌಪ್ಯ ವರದಿಯನ್ನು ಸೋರಿಕೆ ಮಾಡುವ ಮೂಲಕ ಸಂತ್ರಸ್ತೆಯ ಆರೋಪದಲ್ಲಿ ಹುರುಳಿಲ್ಲ ಎಂಬ ತೀರ್ಮಾನಕ್ಕೆ ಬರಲಾಗಿದೆ. ಈ ಕಾರಣಕ್ಕಾಗಿ ಅವರು ವಿಚಾರಣಾಧೀನ ನ್ಯಾಯಾಲಯಕ್ಕೆ ಅಂತಿಮ ವರದಿ ಸಲ್ಲಿಸಲು ಆತುರ ಮಾಡುತ್ತಿದ್ದಾರೆ. ಆ ಮೂಲಕ ಆರೋಪಿಯಾಗಿರುವ ಮಾಜಿ ಸಚಿವ ರಮೇಶ ಜಾರಕಿಹೊಳಿ ಅವರಿಗೆ ರಕ್ಷಣೆ ಒದಗಿಸಲು ಪ್ರಯತ್ನಿಸುತ್ತಿದ್ದಾರೆ. ಯಾರ ಹಿತಾಸಕ್ತಿ ಕಾಯಲು ಮುಚ್ಚಿದ ಲಕೋಟೆಯಲ್ಲಿದ್ದ ಎಸ್‌ಐಟಿ ವರದಿಯನ್ನು ಸೋರಿಕೆ ಮಾಡಲಾಗಿದೆ? ಎಸ್‌ಐಟಿ ವರದಿಯ ಕಸ್ಟಡಿ ಯಾರದ್ದು? ನ್ಯಾಯಾಲಯ ಮತ್ತು ಎಸ್‌ಐಟಿ ಹೊರತುಪಡಿಸಿ ವರದಿಯ ಕಸ್ಟಡಿ ಯಾರಿಗೂ ಇರಲಿಲ್ಲ. ಗೌಪ್ಯವಾದ ಎಸ್‌ಐಟಿ ವರದಿಯನ್ನು ಮಾಧ್ಯಮಕ್ಕೆ ಸೋರಿಕೆ ಮಾಡಿರುವುದರ ಕುರಿತು ನ್ಯಾಯಾಂಗ ತನಿಖೆಯಾಗಬೇಕು” ಪೀಠವನ್ನು ಆಗ್ರಹಿಸಿದರು.

“ಆರೋಪಿ ರಮೇಶ ಜಾರಕಿಹೊಳಿ ಪ್ರಬಲ ವ್ಯಕ್ತಿಯಾಗಿದ್ದು, ಇದೇ ಕಾರಣಕ್ಕಾಗಿ ನಾನು ಸಂತ್ರಸ್ತೆಯನ್ನು ಪ್ರತಿನಿಧಿಸುತ್ತಿದ್ದೇನೆ. ಈ ನ್ಯಾಯಾಲಯವು ನೇಮಿಸಿದ ಎಸ್‌ಐಟಿ ಪ್ರಕರಣದ ತನಿಖೆ ನಡೆಸಬೇಕು. ನ್ಯಾಯಾಲಯ ನೇಮಿಸಿದ್ದ ಎಸ್‌ಐಟಿಯಾಗಿದ್ದರೆ ನನ್ನ ವಾದ ಬೇರೆಯೇ ಇರುತ್ತಿತ್ತು. ನ್ಯಾಯಾಲಯವು ಸಹ ಪ್ರಕರಣವನ್ನು ಭಿನ್ನ‌ ರೀತಿಯಲ್ಲಿ ನೋಡುತ್ತಿತ್ತು. ಈ ನ್ಯಾಯಾಲಯವು ಸೋ ಕಾಲ್ಡ್‌ ಎಸ್‌ಐಟಿಯನ್ನು ನೇಮಿಸಿಲ್ಲ. ಗೃಹ ಸಚಿವರು ಎಸ್‌ಐಟಿ ನೇಮಿಸಿಲು ಆದೇಶ ಮಾಡಿದ್ದು, ಬೆಂಗಳೂರು ಪೊಲೀಸ್‌ ಆಯುಕ್ತರು ತಮ್ಮ ಇಚ್ಛೆಯ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿ ರಚಿಸಿದ್ದಾರೆ. ಇಲ್ಲಿ ಸಿಆರ್‌ಪಿಸಿ ಚೌಕಟ್ಟಿನ ವ್ಯಾಪ್ತಿ ಮೀರಿ ಎಸ್‌ಐಟಿ ರಚಿಸಲಾಗಿದೆ. ಅಲ್ಲದೇ, ವರದಿಯನ್ನು ಗೃಹ ಸಚಿವರಿಗೆ ಸಲ್ಲಿಸುವಂತೆ ಆದೇಶಿಸಲಾಗಿದೆಯೇ ವಿನಾ ಹೈಕೋರ್ಟ್‌ ಅಥವಾ ವಿಚಾರಣಾಧೀನ ನ್ಯಾಯಾಲಯಕ್ಕೆ ಸಲ್ಲಿಸುವಂತೆ ಆದೇಶ ಮಾಡಲಾಗಿಲ್ಲ. ಎಸ್‌ಐಟಿ ವರದಿಯ ಮಾನ್ಯತೆ ಏನು ಎಂಬ ಮಹತ್ವದ ವಿಚಾರವನ್ನು ನಾನು ನ್ಯಾಯಾಲಯದ ಗಮನಕ್ಕೆ ತರಲು ಬಯಸುತ್ತೇನೆ” ಎಂದು ವರದಿ ಸಲ್ಲಿಸಲು ಅನುಮತಿ ಕೋರಿದ ಎಜಿ ವಾದಕ್ಕೆ ತೀವ್ರ ಆಕ್ಷೇಪ ದಾಖಲಿಸಿದರು.

ಮುಂದುವರಿದು, “ಅಡ್ವೊಕೇಟ್‌ ಜನರಲ್‌ ಅರ್ಹತೆಯ ಆಧಾರದಲ್ಲಿ ಪ್ರಕರಣವನ್ನು ವಾದಿಸಲು ಮುಂದಾದರೆ ನಾನು ಅದಕ್ಕೆ ಸಿದ್ಧವಿದ್ದೇನೆ. ಹಿಂದೆ ಪೀಠವು ಎಸ್‌ಐಟಿ ತನಿಖೆಯು ಸಿಆರ್‌ಪಿಸಿ ವ್ಯಾಪ್ತಿಯಲ್ಲಿ ನಡೆಯುತ್ತಿಲ್ಲ ಎಂಬ ನನ್ನ ಆಕ್ಷೇಪವನ್ನು ದಾಖಲಿಸಿಕೊಂಡಿದ್ದು, ನಮ್ಮ ವಾದ ಆಲಿಸುವುದಾಗಿಯೂ ಭರವಸೆ ನೀಡಿದೆ. ಎಸ್‌ಐಟಿ ಮುಖ್ಯಸ್ಥ ಸೌಮೇಂದು ಮುಖರ್ಜಿ ಸುದೀರ್ಘ ರಜೆಯಲ್ಲಿರುವಾಗ ಸಲ್ಲಿಸಿರುವ ವರದಿಯನ್ನು ಎಸ್‌ಐಟಿ ವರದಿ ಎನ್ನಬಹುದೇ? ಎಂಬ ವಿಚಾರದ ಕುರಿತು ನ್ಯಾಯಾಲಯವು ವಾದ ಆಲಿಸಲು ಬಯಸಿತ್ತು. ಹೈಕೋರ್ಟ್‌ ಆದೇಶವಿಲ್ಲದೇ ಎಸ್‌ಐಟಿ ಅಂತಿಮ ವರದಿ ಸಲ್ಲಿಸುವಂತಿಲ್ಲ” ಎಂದು ಪೀಠ ಆದೇಶ ಮಾಡಿತ್ತು ಎಂದು ನೆನಪಿಸಿದರು.

“ಅತ್ಯಾಚಾರ, ಲೈಂಗಿಕ ದೌರ್ಜನ್ಯಕ್ಕೆ ಒಳಗಾಗಿರುವ ಸಂತ್ರಸ್ತೆಯನ್ನು ನಾನು ಪ್ರತಿನಿಧಿಸುತ್ತಿದ್ದೇನೆ. ಆಕೆ ನ್ಯಾಯಕೋರಿ ನ್ಯಾಯಾಲಯದ ಮೆಟ್ಟಿಲೇರಿದ್ದು, ಘನ ನ್ಯಾಯಾಲಯ ನಿಗದಿಪಡಿಸುವ ದಿನಾಂಕದಂದು ಸರ್ವಸನ್ನದ್ಧವಾಗಿ ವಾದ ಮಂಡಿಸಲು ಸಿದ್ಧವಿದ್ದೇನೆ” ಎಂದು ಪೀಠಕ್ಕೆ ತಿಳಿಸಿದರು.

ಆರೋಪಿ ರಮೇಶ ಜಾರಕಿಹೊಳಿ ಪರ ಹಿರಿಯ ವಕೀಲ ಸಿ ವಿ ನಾಗೇಶ್‌ ಅವರು ಇಂದಿರಾ ಜೈಸಿಂಗ್‌ ಅವರನ್ನು ಉದ್ದೇಶಿಸಿ “ಅಸಮಂಜಸವಾದ, ಅವಾಸ್ತವಿಕ ವಾದ ಮಂಡಿಸಲಾಗುತ್ತಿದೆ. ಅವರಿಗೆ ಎಸ್‌ಐಟಿ ತನಿಖೆ ಬೇಕಾಗಿಲ್ಲ. ಸಬ್‌ ಇನ್‌ಸ್ಪೆಕ್ಟರ್‌ ತನಿಖೆ ಬೇಕಾಗಿದೆ” ಎಂದರು. ಇದರಿಂದ ಕೆರಳಿದ ಇಂದಿರಾ ಜೈಸಿಂಗ್‌ ಅವರು “ನ್ಯಾಯಾಲಯದ ದಿಕ್ಕು ತಪ್ಪಿಸುವ ಕೆಲಸ ಮಾಡಬೇಡಿ” ಎಂದು ಏರುಧ್ವನಿಯಲ್ಲಿ ಹೇಳಿದರು. ಆಗ ಮಧ್ಯಪ್ರವೇಶಿಸಿದ ನ್ಯಾಯಾಲಯವು ಉಭಯ ವಕೀಲರನ್ನು ಸಮಾಧಾನಪಡಿಸಿ “ನೀವಿಬ್ಬರೂ ನ್ಯಾಯಾಲಯದಲ್ಲಿ ಉಪಸ್ಥಿತರಾಗಿಲ್ಲ ಎಂಬುದು ಒಳ್ಳೆಯದೇ ಆಯಿತು” ಎಂದು ಲಘು ದಾಟಿಯಲ್ಲಿ ಹೇಳಿತು.

ಎಸ್‌ಐಟಿಯನ್ನು ಪ್ರತಿನಿಧಿಸಿದ್ದ ವಕೀಲ ಪ್ರಸನ್ನಕುಮಾರ್‌ ಅವರು “ಎಸ್‌ಐಟಿ ತನಿಖೆಯನ್ನು ಪ್ರಶ್ನಿಸಿರುವುದಕ್ಕೆ ಇವತ್ತಿನ ಸಂದರ್ಭದಲ್ಲಿ ಮಹತ್ವವೇ ಇಲ್ಲ. ಏಕೆಂದರೆ ಕಬ್ಬನ್‌ ಪಾರ್ಕ್‌ ಮತ್ತು ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ದಾಖಲಾಗಿರುವ ಅಪರಾಧ ಪ್ರಕರಣಗಳನ್ನು ತನಿಖೆ ಮಾಡಲು ಬೆಂಗಳೂರು ಪೊಲೀಸ್‌ ಆಯುಕ್ತರು ಪ್ರತ್ಯೇಕ ಆದೇಶದ ಮೂಲಕ ಪ್ರತ್ಯೇಕ ತನಿಖಾಧಿಕಾರಿಗಳನ್ನು ನೇಮಿಸಿದ್ದಾರೆ. ಅವರು ಸಲ್ಲಿಸಿರುವ ವರದಿ ನ್ಯಾಯಾಲಯಕ್ಕೆ ಸಲ್ಲಿಸಲು ಸಿದ್ಧವಾಗಿದೆ” ಎಂದು ಹೇಳಿದರು.