High Court of Karnataka 
ಸುದ್ದಿಗಳು

ವೈಯಕ್ತಿಕ ಲಾಭಕ್ಕಾಗಿ ವಿದ್ಯಾರ್ಥಿಗಳನ್ನು ಬಳಸಿ ಅರ್ಜಿ ಸಲ್ಲಿಸಿದ್ದ 2 ದಂತ ವೈದ್ಯಕೀಯ ಕಾಲೇಜುಗಳಿಗೆ ಹೈಕೋರ್ಟ್ ದಂಡ

ಕಾಲೇಜುಗಳು ಶುದ್ಧ ಹಸ್ತದೊಂದಿಗೆ ಅರ್ಜಿ ಸಲ್ಲಿಸದೆ ನ್ಯಾಯಾಲಯದ ಅರ್ಧ ದಿನಕ್ಕೂ ಹೆಚ್ಚಿನ ಸಮಯ ವ್ಯರ್ಥ ಮಾಡಿ ನೈಜ ದಾವೆದಾರರ ಸಮಯ ಕಸಿದುಕೊಂಡಿವೆ ಎಂದು ಪೀಠ ಅಸಮಾಧಾನ ವ್ಯಕ್ತಪಡಿಸಿತು.

Bar & Bench

ಪ್ರಸಕ್ತ ಸಾಲಿನ (2021- 22) ದಂತ ವೈದ್ಯಕೀಯ ಕೋರ್ಸ್‌ಗಳಲ್ಲಿ ಖಾಲಿ ಉಳಿದಿದ್ದ ಸೀಟ್‌ಗಳನ್ನು ಭರ್ತಿ ಮಾಡುವ ಸಲುವಾಗಿ ವಿದ್ಯಾರ್ಥಿಗಳ ಪರ ಅರ್ಜಿ ಸಲ್ಲಿಸಿ ನ್ಯಾಯಾಲಯದ ಸಮಯ ಹಾಳು ಮಾಡಿದ್ದ ಎರಡು ಖಾಸಗಿ ದಂತ ವೈದ್ಯಕೀಯ ಕಾಲೇಜುಗಳಿಗೆ ಕರ್ನಾಟಕ ಹೈಕೋರ್ಟ್‌ ತಲಾ ₹ 1 ಲಕ್ಷ ದಂಡ ವಿಧಿಸಿದೆ. [ಶ್ರೀ ವೆಂಕಟೇಶ್ವರ ಡೆಂಟಲ್ ಕಾಲೇಜು ಮತ್ತು ಆಸ್ಪತ್ರೆ ಹಾಗೂ ಕರ್ನಾಟಕ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಕಾಲೇಜುಗಳು ಶುದ್ಧ ಹಸ್ತದೊಂದಿಗೆ ನ್ಯಾಯಾಲಯವನ್ನು ಸಂಪರ್ಕಿಸದೆ ಅದರ ಅರ್ಧ ದಿನಕ್ಕೂ ಹೆಚ್ಚಿನ ಸಮಯ ವ್ಯರ್ಥ ಮಾಡಿ ನೈಜ ದಾವೆದಾರರ ಸಮಯ ಕಸಿದುಕೊಂಡಿವೆ ಎಂದು ನ್ಯಾಯಮೂರ್ತಿಗಳಾದ ಬಿ.ವೀರಪ್ಪ ಮತ್ತು ಕೆ.ಎಸ್.ಹೇಮಲೇಖಾ ಅವರಿದ್ದ ಪೀಠ ಅತೃಪ್ತಿ ವ್ಯಕ್ತಪಡಿಸಿತು.

ಕಾಲೇಜುಗಳು ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡುವ ಉದ್ದೇಶದಿಂದ ಆಕಾಂಕ್ಷಿ ವಿದ್ಯಾರ್ಥಿಗಳ ಪರವಾಗಿ ನ್ಯಾಯಾಲಯವನ್ನು ಸಂಪರ್ಕಿಸುವಂತಿಲ್ಲ ಎಂದು ನ್ಯಾಯಾಲಯ ಹೇಳಿದೆ.

ಕಾಲೇಜುಗಳು ವಿದ್ಯಾರ್ಥಿಗಳ ಪರವಾಗಿ ರಿಟ್‌ ಅರ್ಜಿ ಸಲ್ಲಿಸುವಂತಿಲ್ಲ.
ಕರ್ನಾಟಕ ಹೈಕೋರ್ಟ್

ವಿದ್ಯಾರ್ಥಿಗಳು ಮಾಪ್‌ ಅಪ್‌ ಪರೀಕ್ಷೆಯಲ್ಲಿ ಪ್ರವೇಶಾತಿ ಪಡೆಯದಿದ್ದರೂ ಕೂಡ ಕಾಲೇಜಿನ ಉಸ್ತುವಾರಿಯಲ್ಲಿದ್ದಾರೆ (ಕೇರಾಫ್‌) ಎಂದು ತಿಳಿಸಿ ಒಂದೇ ಆಡಳಿತ ಮಂಡಳಿಯಿಂದ ನಡೆಯುವ ಕಾಲೇಜುಗಳು, ಆರು ವಿದ್ಯಾರ್ಥಿಗಳ ಜೊತೆಗೂಡಿ ಅರ್ಜಿ ಸಲ್ಲಿಸಿದ್ದವು.

ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (ಕೆಇಎ) ಜಾಲತಾಣ ತೆರೆಯದ ಕಾರಣ ಮೇ 2022ರಲ್ಲಿ ನಡೆದ ಮಾಪ್-ಅಪ್ ಸುತ್ತಿಗೆ  ಪ್ರವೇಶಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಮಾಪ್‌ ಅಪ್‌ ಸುತ್ತಿನ ಪ್ರವೇಶಾತಿ ಸಲುವಾಗಿ ತಮ್ಮನ್ನು ನೋಂದಾಯಿಸಿಕೊಳ್ಳಲು ವಿದ್ಯಾರ್ಥಿಗಳಿಗೆ ಅವಕಾಶ ಮಾಡಿಕೊಡುವಂತೆ ಕೆಇಎಗೆ ನಿರ್ದೇಶನ ನೀಡಬೇಕು ಎಂದು ಬೆಂಗಳೂರಿನ ಶ್ರೀ ವೆಂಕಟೇಶ್ವರ ದಂತ ವೈದ್ಯಕೀಯ ಕಾಲೇಜು ಮತ್ತು ಸುಳ್ಯದ ಕೆವಿಜಿ ದಂತ ವೈದ್ಯಕೀಯ ಕಾಲೇಜುಗಳು ಸೇರಿದಂತೆ  ಅರ್ಜಿದಾರರು ಕೋರಿದ್ದರು.

ವಿದ್ಯಾರ್ಥಿಗಳು ತಾವು ವಿದ್ಯಾರ್ಥಿಗಳೇ ಆಗಿರದ ಕಾಲೇಜುಗಳ ಉಸ್ತುವಾರಿಗೆ ಹೇಗೆ ಬಂದರು ಎಂದು ಪ್ರಶ್ನಿಸಿದ ಪೀಠ ಖಾಲಿ ಇರುವ ಸೀಟುಗಳನ್ನು ಭರ್ತಿ ಮಾಡುವ ಉದ್ದೇಶದಿಂದಾಗಿ ಪರೋಕ್ಷ ವಿಧಾನದ ಮೂಲಕ ಕಾಲೇಜುಗಳು ನ್ಯಾಯಾಲಯದ ಮೊರೆ ಹೋಗಿವೆ ಎಂದು ತೀರ್ಮಾನಿಸಿತು.

ಇದಲ್ಲದೆ, ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು ನಿಜವಾಗಿಯೂ ಸೀಟುಗಳಿಂದ ವಂಚಿತರಾಗಿದ್ದರೆ, ಅವರು ಸ್ವತಂತ್ರವಾಗಿ ನ್ಯಾಯಾಲಯದ ಮೊರೆ ಹೋಗುತ್ತಿದ್ದರು ಎಂದ ಪೀಠ ಕಾಲೇಜುಗಳು ವಿದ್ಯಾರ್ಥಿಗಳ ಪರವಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸುವಂತಿಲ್ಲ ಎಂಬುದಾಗಿ ತಾಕೀತು ಮಾಡಿತು.

ಕಾಲೇಜುಗಳು ನ್ಯಾಯಾಲಯದ ಮತ್ತು ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳ ಸಮಯವನ್ನಷ್ಟೇ ವ್ಯರ್ಥ ಮಾಡಿಲ್ಲ ಬದಲಿಗೆ ಕೆಇಎ ಮತ್ತಿತರ ಕಾನೂನಬದ್ಧ ಪ್ರಾಧಿಕಾರಗಳನ್ನು ನ್ಯಾಯಾಲಯಗಳಿಗೆ ದೂಡಿ ಅನಗತ್ಯ ದಾವೆಗಳಲ್ಲಿ ಮಗ್ನರಾಗುವಂತೆ ಮಾಡಿದವು ಎಂದು ಪೀಠ ತಿಳಿಸಿತು.

ತನ್ನೆದುರು ಕಪೋಲಕಲ್ಪಿತ ದಾವೆ ಹೂಡುವ ಇತ್ತೀಚಿನ ಪ್ರವೃತ್ತಿಯನ್ನು ಪ್ರಸ್ತಾಪಿಸಿದ ನ್ಯಾಯಾಲಯ ಅಂತಹ ಮೊಕದ್ದಮೆಗಳನ್ನು ತೆಗೆದುಹಾಕುವುದು ತನ್ನ ಕರ್ತವ್ಯ ಎಂದಿತು. ಆ ಮೂಲಕ ಅರ್ಜಿ ವಜಾಗೊಳಿಸಿದ ನ್ಯಾಯಾಲಯ ದಂಡದ ಮೊತ್ತವನ್ನು ಬೆಂಗಳೂರಿನ ವಕೀಲರ ಸಂಘಕ್ಕೆ ಪಾವತಿಸುವಂತೆ ಸೂಚಿಸಿತು.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Sri_Venkateshwara_Dental_College_And_Hospital_vs_The_State_of_Karnataka_and_Ors_.pdf
Preview