ಕೋವಿಡ್ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಯಾವುದೇ ತೆರನಾದ ಸಾರ್ವಜನಿಕ ಸಮಾವೇಶ ನಡೆಸಿಲ್ಲ ಎಂದು ಆಡಳಿತಾರೂಢ ಭಾರತೀಯ ಜನತಾ ಪಕ್ಷ ಸಲ್ಲಿಸಿದ್ದ ಅಫಿಡವಿಟ್‌ಗೆ ಕರ್ನಾಟಕ ಹೈಕೋರ್ಟ್ ಕೆಂಡಾಮಂಡಲವಾಗಿದೆ. ಇದು ವಚನಭ್ರಷ್ಟತೆಗೆ ಸಮನಾಗುವುದರ ಜೊತೆಗೆ ಸಮಾವೇಶ ನಡೆಸಿದ್ದ ಕುರಿತಾದ ಚಿತ್ರಗಳು ತನ್ನ ಬಳಿ ಇದ್ದು ಆಡಳಿತ ಪಕ್ಷದ ಹೇಳಿಕೆಗೆ ಅದು ವಿರುದ್ಧವಾಗಿದೆ ಎಂದಿದೆ.
ಅಫಿಡವಿಟ್‌ನಲ್ಲಿ ಸಲ್ಲಿಸಲಾಗಿರುವ ಮಾಹಿತಿಯನ್ನು ಗಮನಿಸಿದ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಅವರಿದ್ದ ಪೀಠವು ಬಿಜೆಪಿಯು ಸುಳ್ಳು ಹೇಳಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿತು. “ಈ ಪಕ್ಷವು ಯಾವುದೇ ತೆರನಾದ ರೋಡ್‌ಷೋ ಅಥವಾ ಸಮಾವೇಶ ನಡೆಸಿಲ್ಲ ಎಂಬ ಹೇಳಿಕೆ ನೀಡಿದೆ. ಇದು ಸುಳ್ಳು. ನೀವು ಅದನ್ನು ಸರಿಪಡಿಸಿಕೊಳ್ಳಿ. ನೀವು ಹೇಳುವುದಕ್ಕೆ ವಿರುದ್ಧವಾದುದನ್ನು ತೋರಿಸಲು ನಮ್ಮ ಬಳಿ ಚಿತ್ರಗಳಿವೆ” ಎಂದು ಮುಖ್ಯ ನ್ಯಾಯಮೂರ್ತಿ ಓಕಾ ಆವರು ವಿಚಾರಣೆ ವೇಳೆ ಹೇಳಿದರು.
ಅಫಿಡವಿಟ್‌ನಲ್ಲಿ ಸುಳ್ಳು ಹೇಳಿಕೆ ಸಲ್ಲಿಸಿರುವುದಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಬಿಜೆಪಿ ಪರ ವಕೀಲರಿಗೆ ನ್ಯಾಯಾಲಯ ಎಚ್ಚರಿಕೆ ನೀಡಿತು. “ನೀವು ಸಲಹೆ-ಸೂಚನೆ ಪಡೆದುಕೊಳ್ಳಿ. ಇಲ್ಲವಾದರೆ ಪ್ರಮಾಣದಲ್ಲಿ ನೀವು ಸುಳ್ಳು ಹೇಳಿಕೆ ದಾಖಲಿಸಿದಂತಾಗುತ್ತದೆ. ಒಂದೇ ಒಂದು ರೋಡ್ ಷೋ ಅಥವಾ ಸಮಾವೇಶವನ್ನು ನೀವು ನಡೆಸಿಲ್ಲವೇ? ಈ ಹೇಳಿಕೆಯ ಬಗ್ಗೆ ನೀವು ಗಂಭೀರವಾಗಿದ್ದೀರಾ? ಎಂದು ಸಿಜೆ ಓಕಾ ಪ್ರಶ್ನಿಸಿದರು.
ಅಫಿಡವಿಟ್ ಹಿಂಪಡೆದು ಹೊಸದನ್ನು ಸಲ್ಲಿಸುತ್ತೇನೆ ಎಂದು ಬಿಜೆಪಿ ಪರ ವಕೀಲರು ಹೇಳಿದರು. ಹೊಸ ಅಫಿಡವಿಟ್ ಸಲ್ಲಿಸಲು ಅನುಮತಿ ನೀಡಿರುವ ನ್ಯಾಯಾಲಯವು ಸದ್ಯದ ಅಫಿಡವಿಟ್ ದಾಖಲೆಯಲ್ಲಿ ಇರಲಿದೆ ಎಂದಿತು.
ಸರಿಯಾದ ರೀತಿಯಲ್ಲಿ ಕೋವಿಡ್ ನಿಯಮಾವಳಿ ಜಾರಿಗೊಳಿಸುವಂತೆ ಕೋರಿ ಸರ್ಕಾರೇತರ ಸಂಸ್ಥೆ ʼಲೆಟ್ಜ್‌ಕಿಟ್ಸ್ ಫೌಂಡೇಶನ್ʼ ಸಲ್ಲಿಸಿರುವ ಮನವಿಯ ವಿಚಾರಣೆಯನ್ನು ಪೀಠ ನಡೆಸಿತು.
ಕರ್ನಾಟಕ ಸಾಂಕ್ರಾಮಿಕ ರೋಗಗಳ (ತಿದ್ದುಪಡಿ) ಕಾಯಿದೆ 2020ರ ಸೆಕ್ಷನ್ 5ಕ್ಕೆ ಸೇರಿಸಲಾದ ಉಪವಿಭಾಗ (3 ಎ) ಅಡಿಯಲ್ಲಿ ಉಲ್ಲೇಖಿಸಿರುವಂತೆ ದಂಡ ವಿಧಿಸುವ ನಿಯಮಗಳನ್ನು ರೂಪಿಸಿರುವುದರ ಬಗ್ಗೆ ಪ್ರತಿಕ್ರಿಯಿಸುವಂತೆ ನ್ಯಾಯಾಲಯವು ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಅಲ್ಲದೇ ಪಂಚಮಸಾಲಿ ಲಿಂಗಾಯತ ಸಮುದಾಯವು ಫೆಬ್ರವರಿ ೧೨ರಂದು ತಮಗೆ ಹಿಂದುಳಿದ ವರ್ಗದಡಿ ಮೀಸಲಾತಿ ಕಲ್ಪಿಸುವ ಸಂಬಂಧ ರ್ಯಾಲಿ ಆಯೋಜಿಸಿದ್ದಾಗ ಕೋವಿಡ್ ನಿಯಮಾವಳಿ ಉಲ್ಲಂಘಿಸಿದ್ದಕ್ಕೆ ಕ್ರಮಕೈಗೊಂಡಿರುವುದರ ವರದಿ ಸಲ್ಲಿಸುವಂತೆ ನಗರ ಪೊಲೀಸ್ ಆಯುಕ್ತರಿಗೆ ನ್ಯಾಯಾಲಯ ಸೂಚಿಸಿದೆ.
ಸಾಮಾಜಿಕ ಅಂತರ ನಿಯಮಗಳನ್ನು ಉಲ್ಲಂಘಿಸಿ ಸಮಾವೇಶಗಳನ್ನು ನಡೆಸಿದ ಆರೋಪದ ಮೇಲೆ ನ್ಯಾಯಾಲಯವು ಬಿಜೆಪಿ, ಸಿಪಿಐ, ಜೆಡಿಎಸ್, ಸಿಪಿಐ(ಎಂ), ಕಾಂಗ್ರೆಸ್, ಕನ್ನಡ ಚಳವಳಿ ವಾಟಾಳ್ ಪಕ್ಷಗಳಿಗೆ ಕಳೆದ ವರ್ಷದ ನವೆಂಬರ್‌ನಲ್ಲಿ ನೋಟಿಸ್ ಜಾರಿ ಮಾಡಿತ್ತು.