ರಾಜಕೀಯ ಸಭೆಗಳಲ್ಲಿ ಮಾಸ್ಕ್‌ ಧರಿಸಲು, ಅಂತರ ಕಾಪಾಡಲು ನಿರ್ದೇಶಿಸುವಿರೇ ಎಂದು ರಾಜಕೀಯ ಪಕ್ಷಗಳನ್ನು ಕೇಳಿದ ಹೈಕೋರ್ಟ್‌

ಕೋವಿಡ್‌ ನಿರ್ವಹಣೆಯ ರಾಷ್ಟ್ರೀಯ ನಿರ್ದೇಶನಗಳನ್ನು ಕರ್ನಾಟಕದಲ್ಲಿ ಅನುಸರಿಸಲಾಗಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯವು ರಾಜಕೀಯ ಪಕ್ಷಗಳು ಕಾರ್ಯಕರ್ತರಿಗೆ ಕಠಿಣ ಸೂಚನೆ ನೀಡುವ ಸಮಯ ಬಂದಿದೆ ಎಂದಿದೆ.
People Wearing Masks
People Wearing MasksKerala Kaumudi

ರಾಜಕೀಯ ಪಕ್ಷಗಳು ಸಭೆ, ಸಮಾವೇಶಗಳಲ್ಲಿ ಕೋವಿಡ್‌ ನಿಯಮಾವಳಿಯಂತೆ ತಮ್ಮ ಬೆಂಬಲಿಗರು, ಕಾರ್ಯಕರ್ತರು ಮಾಸ್ಕ್‌ ಧರಿಸಲು ಮತ್ತು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ಸಂಬಂಧ ಸಲಹೆ-ಸೂಚನೆ ನೀಡುವ ಆಲೋಚನೆ ಹೊಂದಿವೆಯೇ ಎನ್ನುವ ಬಗ್ಗೆ ಕರ್ನಾಟಕ ಹೈಕೋರ್ಟ್‌ ಮಂಗಳವಾರ ಬಿಜೆಪಿ, ಕಾಂಗ್ರೆಸ್‌ ಮತ್ತು ಇತರೆ ರಾಜಕೀಯ ಪಕ್ಷಗಳಿಂದ ಪ್ರತಿಕ್ರಿಯೆ ಬಯಸಿತು.

ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ತಮ್ಮ ಪಕ್ಷದ ಕಾರ್ಯಕರ್ತರು ಕೊರೊನಾ ನಿಯಂತ್ರಣಕ್ಕಾಗಿ ಸರ್ಕಾರ ಜಾರಿಗೊಳಿಸಿರುವ ಮಾರ್ಗಸೂಚಿಗಳನ್ನು ಅನುಸರಿಸುವಂತೆ ಮೇಲ್ನೋಟಕ್ಕೆ ಸೂಚಿಸುವುದು ರಾಜಕೀಯ ಪಕ್ಷಗಳ ಜವಾಬ್ದಾರಿಯಾಗಿದ್ದು, ಆ ಮೂಲಕ ಸರ್ಕಾರದ ಜೊತೆ ಕೈಜೋಡಿಸಬೇಕಿದೆ ಎಂದು ತನ್ನ ಆದೇಶದಲ್ಲಿ ನ್ಯಾಯಾಲಯವು ವಿಶೇಷವಾಗಿ ಒತ್ತಿ ಹೇಳಿತು.

ಸಾಮಾಜಿಕ ಅಂತರ ಸೇರಿದಂತೆ ಕೋವಿಡ್‌ ನಿಯಮಾವಳಿಗಳನ್ನು ಉಲ್ಲಂಘಿಸಿ ಹಲವು ರಾಜಕೀಯ ಸಮಾವೇಶಗಳನ್ನು ರಾಜಕೀಯ ಪಕ್ಷಗಳು ನಡೆಸಿವೆ ಎಂಬುದನ್ನು ಪರಿಗಣಿಸಿರುವ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಬಿಜೆಪಿ, ಕಾಂಗ್ರೆಸ್‌, ಜೆಡಿಎಸ್‌, ಸಿಪಿಐ, ಸಿಪಿಐ (ಎಂ) ಮತ್ತು ಕನ್ನಡ ಚಳವಳಿ ವಾಟಾಳ್‌ ಪಕ್ಷಕ್ಕೆ ನೋಟಿಸ್‌ ಜಾರಿಗೊಳಿಸಿದೆ. ವಿಚಾರಣೆಯನ್ನು ಡಿಸೆಂಬರ್‌ 4ಕ್ಕೆ ಮುಂದೂಡಲಾಗಿದೆ.

ಕೇಂದ್ರ ಗೃಹ ಇಲಾಖೆಯು ಕೋವಿಡ್‌ ನಿರ್ವಹಣೆಗೆ ಜಾರಿಗೊಳಿಸಿರುವ ರಾಷ್ಟ್ರೀಯ ನಿರ್ದೇಶನಗಳನ್ನು ಕರ್ನಾಟಕದಲ್ಲಿ ಅನುಸರಿಸಲಾಗಿಲ್ಲ ಎಂದು ಆರೋಪಿಸಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು ರಾಜಕೀಯ ಪಕ್ಷಗಳು ತಮ್ಮ ಕಾರ್ಯಕರ್ತರಿಗೆ ಕಠಿಣ ಸೂಚನೆ ನೀಡುವ ಸಮಯ ಬಂದಿದೆ ಎಂದು ಹೇಳಿದೆ.

ವಿಚಾರಣೆಯ ಸಂದರ್ಭದಲ್ಲಿ ಸೆಪ್ಟೆಂಬರ್‌ 30ರಂದು ಸಂಸದ ಹಾಗೂ ವಕೀಲ ತೇಜಸ್ವಿ ಸೂರ್ಯ ಭಾಗಿಯಾಗಿದ್ದ ಸಮಾವೇಶದಲ್ಲಿ ಎಷ್ಟು ಜನರು ಭಾಗವಹಿಸಿದ್ದರು ಎಂದು ರಾಜ್ಯ ಸರ್ಕಾರವನ್ನು ಪೀಠ ಪ್ರಶ್ನಿಸಿತು. 25 ಮಂದಿಯಿಂದ ದಂಡ ಸಂಗ್ರಹಿಸಲಾಗಿದೆ ಎಂದು ಸರ್ಕಾರಿ ಮನವಿದಾರ ವಿಕ್ರಂ ಹುಯಿಲಗೋಳ ಪ್ರತಿಕ್ರಿಯಿಸಿದರು.

ಇದಕ್ಕೆ ನ್ಯಾಯಪೀಠವು “ಈ ಎಲ್ಲಾ ಸಮಾವೇಶಗಳಿಗೆ ಸಂಬಂಧಿಸಿದಂತೆ ಯಾವುದನ್ನೂ ನೀವು ದಾಖಲೆಯಲ್ಲಿ ಸಲ್ಲಿಸಿಲ್ಲ… ಎಷ್ಟು ಜನರು ಭಾಗವಹಿಸಿದ್ದರು? ಸಮಾವೇಶವನ್ನು ನೋಡಿದರೆ ಅಲ್ಲಿ ಕೇವಲ 25 ಜನರು ಮಾತ್ರ ಇರಲಿಲ್ಲ. ನೀವು ತನಿಖೆ ನಡೆಸಿಲ್ಲ…” ಎಂದಿತು.
Also Read
ಮಾಸ್ಕ್‌ ಧರಿಸದ ಸಂಸದ ತೇಜಸ್ವಿ ಸೂರ್ಯರಿಂದ 250 ರೂಪಾಯಿ ದಂಡ ವಸೂಲಿ: ಹೈಕೋರ್ಟ್‌ಗೆ ಮಾಹಿತಿ ನೀಡಿದ ಸರ್ಕಾರ

ಶಾಸಕರು ಮತ್ತು ಸಂಸದರು ರಾಜಕೀಯ ಸಮಾವೇಶಗಳನ್ನು ನಡೆಸುವುದರ ಕುರಿತು ಸುಪ್ರೀಂ ಕೋರ್ಟ್‌ ಸೋಮವಾರ ಕಟುವಾಗಿ ಪ್ರತಿಕ್ರಿಯಿಸಿದೆ. ಕೋವಿಡ್‌ ಪೂರ್ವಸಿದ್ಧತೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಗಳನ್ನೂ ಸರ್ವೋಚ್ಚ ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿದೆ” ಎಂದು ಹೈಕೋರ್ಟ್‌ಗೆ ವಕೀಲ ಜಿ ಆರ್‌ ಮೋಹನ್‌ ವಿವರಿಸಿದರು.

ಮರಾಠಾ ಅಭಿವೃದ್ಧಿ ಪ್ರಾಧಿಕಾರ ರಚಿಸಿರುವ ರಾಜ್ಯ ಸರ್ಕಾರದ ಕ್ರಮವನ್ನು ವಿರೋಧಿಸಿ ಡಿಸೆಂಬರ್‌ 5ರಂದು ಕನ್ನಡ ಸಂಘಟನೆಗಳು ರಾಜ್ಯ ಬಂದ್‌ಗೆ ಕರೆ ನೀಡಿವೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು. ಪ್ರತಿಭಟನೆಯ ಸಂದರ್ಭದಲ್ಲಿ ಸಾಮಾಜಿಕ ಅಂತರ ನಿಯಮಗಳನ್ನು ಉಲ್ಲಂಘಿಸುವ ಸಾಧ್ಯತೆ ಇದೆ ಎಂದು ಪೀಠ ಹೇಳಿತು.

Related Stories

No stories found.
Kannada Bar & Bench
kannada.barandbench.com