High Court of Karnataka
High Court of Karnataka  
ಸುದ್ದಿಗಳು

ಖಾಸಗಿ, ಅನುದಾನರಹಿತ ಶೈಕ್ಷಣಿಕ ಸಂಸ್ಥೆಗಳಿಗೆ ಶೇ. 70 ಬೋಧನಾ ಶುಲ್ಕ ಸಂಗ್ರಹಿಸಲು ಆದೇಶ: ಹೈಕೋರ್ಟ್‌ನಲ್ಲಿ ಪ್ರಶ್ನೆ

Bar & Bench

ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ಖಾಸಗಿ, ಅನುದಾನರಹಿತ ಶೈಕ್ಷಣಿಕ ಸಂಸ್ಥೆಗಳಿಂದ ಶೇ. 70 ಬೋಧನಾ ಶುಲ್ಕ ಸಂಗ್ರಹಿಸಲು ಮಾತ್ರ ಅವಕಾಶ ನೀಡಿ ಹಾಗೂ ಬೇರಾವುದೇ ಶುಲ್ಕ ಸಂಗ್ರಹಿಸದಂತೆ ಸೂಚಿಸಿ ಜನವರಿ 29ರಂದು ಆದೇಶಿಸಿರುವ ರಾಜ್ಯ ಸರ್ಕಾರದ ನಿರ್ಣಯ ಪ್ರಶ್ನಿಸಿ ಸಲ್ಲಿಸಿದ್ದ ಹಲವು ಮನವಿಗಳ ವಿಚಾರಣೆ ನಡೆಸಿದ ಹೈಕೋರ್ಟ್‌ ಈಚೆಗೆ ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ್ದು, ಪ್ರತಿಕ್ರಿಯಿಸುವಂತೆ ಸೂಚಿಸಿದೆ.

ನ್ಯಾಯಮೂರ್ತಿ ಆರ್‌ ದೇವದಾಸ್‌ ನೇತೃತ್ವದ ಏಕಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದ್ದು, ಹತ್ತು ದಿನಗಳ ಒಳಗೆ ಪ್ರತಿಕ್ರಿಯಿಸುವಂತೆ ಸರ್ಕಾರಕ್ಕೆ ಸೂಚಿಸಿದೆ. ಪ್ರತಿವಾದಿಗಳು ತಕರಾರು ಹೇಳಿಕೆ ಸಲ್ಲಿಸಿದ ತಕ್ಷಣ ಪ್ರಕರಣದ ವಿಚಾರಣೆ ನಡೆಸುವುದಾಗಿ ನ್ಯಾಯಾಲಯ ಹೇಳಿದೆ.

3,655 ಖಾಸಗಿ ಅನುದಾನರಹಿತ ಬಜೆಟ್‌ ಶಾಲೆಗಳು ತಮ್ಮಲ್ಲಿ ಸದಸ್ಯತ್ವ ಪಡೆದಿವೆ ಎಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಆಡಳಿತ ಮಂಡಳಿ ಒಕ್ಕೂಟ (ಕೆಎಎಂಎಸ್‌) ಸಲ್ಲಿಸಿರುವ ಮನವಿಯಲ್ಲಿ ತಿಳಿಸಲಾಗಿದೆ. ಈ ಶಾಲೆಗಳಲ್ಲಿ 55,000 ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯಿಂದು 15 ಲಕ್ಷ ವಿದ್ಯಾರ್ಥಿಗಳಿದ್ದಾರೆ. ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ವೇತನ ಪಾವತಿಸಲು ಶಾಲೆಗಳು ವಿದ್ಯಾರ್ಥಿಗಳು ಪಾವತಿಸುವ ಶಾಲಾ ಶುಲ್ಕವನ್ನು ಅವಲಂಬಿಸಿವೆ ಎಂದು ಕೆಎಎಂಎಸ್‌ ಹೇಳಿದೆ.

ವಿದ್ಯಾರ್ಥಿಗಳ ಪೋಷಕರು ಇದುವರೆಗೂ ಶಾಲಾ ಶುಲ್ಕ ಪಾವತಿಸಲು ಮುಂದೆ ಬರದೇ ಇರುವುದಿರಂದ ಇಲ್ಲಿಯ ತನಕ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗೆ ಸಂಬಂಧಿತ ಅನುದಾನರಹಿತ ಖಾಸಗಿ ಶಿಕ್ಷಣ ಸಂಸ್ಥೆಗಳು ವೇತನ ಪಾವತಿಸಲು ಸಾಧ್ಯವಾಗಿಲ್ಲ. ಒಂದೊಮ್ಮೆ ಸಿಬ್ಬಂದಿಗೆ ವೇತನ ಪಾವತಿಸದೇ ಇದ್ದರೆ ಅವರು ಬೇರೆ ಉದ್ಯೋಗದತ್ತ ಮುಖ ಮಾಡುತ್ತಾರೆ. ಈ ವೇಳೆ ಶಾಲೆಗಳು ಮತ್ತೆ ಆರಂಭವಾದಾಗ ಸಿಬ್ಬಂದಿಯ ಕೊರತೆ ಉಂಟಾಗುತ್ತದೆ ಎಂದು ಕೆಎಎಂಎಸ್‌ ವಾದಿಸಿದೆ.

ಇದರ ಜೊತೆಗೆ ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳು ಸಿಬ್ಬಂದಿಯ ಭವಿಷ್ಯ ನಿಧಿ, ಇಎಸ್ಐ ಸೌಲಭ್ಯಗಳು, ವಿವಿಧ ತೆರಿಗೆ, ವಿದ್ಯುತ್‌ ಮತ್ತು ನೀರಿನ ಶುಲ್ಕ, ಭದ್ರಾ ವ್ಯವಸ್ಥೆಯ ನಿರ್ವಹಣೆಗೆ ಹಣ ಪಾವತಿಸಬೇಕಿದೆ. ರಾಜ್ಯ ಸರ್ಕಾರ ಜನವರಿ 29ರಂದು ಹೊರಡಿಸಿರುವ ಆದೇಶವು ಟಿಎಂಎ ಪೈ ಫೌಂಡೇಶನ್‌ ಮತ್ತ ಇತರರು ವರ್ಸಸ್‌ ಕರ್ನಾಟಕ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ಹೊರಡಿಸಿರುವ ಆದೇಶಕ್ಕೆ ವಿರುದ್ಧವಾಗಿದೆ ಎಂದು ಮನವಿಯಲ್ಲಿ ಹೇಳಲಾಗಿದೆ.