Surrogacy  
ಸುದ್ದಿಗಳು

ಹಿರಿಯ ದಂಪತಿಯು ಬಾಡಿಗೆ ತಾಯ್ತನ ಆಯ್ಕೆ ಮಾಡಿಕೊಳ್ಳಲು ಮೂರು ಹಂತದ ಪರೀಕ್ಷೆ ಪರಿಹಾರ ಸೂಚಿಸಿದ ಕರ್ನಾಟಕ ಹೈಕೋರ್ಟ್‌

Bar & Bench

ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆ 2021ರ ಅಡಿ ನಿರ್ಬಂಧಕ್ಕೊಳಗಾಗಿರುವ ಮಕ್ಕಳಿಲ್ಲದ ದಂಪತಿಗೆ ಅನುಕೂಲ ಮಾಡಿಕೊಡುವ ನಿಟ್ಟಿನಲ್ಲಿ ಆನುವಂಶಿಕ (ಜೆನೆಟಿಕ್), ದೈಹಿಕ ಮತ್ತು ಆರ್ಥಿಕ ಪರೀಕ್ಷೆ ಎಂಬ ಮೂರು ಹಂತದ ಪರೀಕ್ಷೆಗೆ ಕರ್ನಾಟಕ ಹೈಕೋರ್ಟ್‌ ಈಚೆಗೆ ಸೂಚಿಸಿದೆ [ಎಚ್‌ ಸಿದ್ದರಾಜು ವರ್ಸಸ್‌ ಭಾರತ ಸರ್ಕಾರ].

ಬೆಂಗಳೂರಿನ ಗೋಕುಲದ ಸಿದ್ದರಾಜು ದಂಪತಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಭಾಗಶಃ ಮಾನ್ಯ ಮಾಡಿದೆ.

ಆನುವಂಶಿಕ ಪರೀಕ್ಷೆಯ ಕುರಿತು ವೈದ್ಯಕೀಯವಾಗಿ ಹೇಳುವುದಾದರೆ ಭ್ರೂಣಕ್ಕೆ ಆರೋಗ್ಯಕರವಾದ ವೀರ್ಯ ಮತ್ತು ಅಂಡಾಣು ಬೇಕಿದೆ ಎಂದು ನ್ಯಾಯಾಲಯ ಹೇಳಿದೆ. “ವೀರ್ಯದ ಬಲ ಪರೀಕ್ಷೆ ಮಾಡುವುದು ಅತ್ಯಗತ್ಯ. ಏಕೆಂದರೆ, ಹೊಸ ಸೃಷ್ಟಿಗೆ ಅಗತ್ಯವಾದ ಆನುವಂಶಿಕ ಮಾಹಿತಿಯನ್ನು ಅದು ಒಳಗೊಂಡಿರುತ್ತದೆ. 35 ರಿಂದ 40 ವರ್ಷವಾದ ಪುರುಷರಲ್ಲಿ ವೀರ್ಯದ ಆರೋಗ್ಯ ಕುಗ್ಗುತ್ತದೆ ಎಂದು ವೈದ್ಯಕೀಯವಾಗಿ ಕಂಡುಕೊಳ್ಳಲಾಗಿದೆ. ಅರ್ಜಿದಾರರಿಗೆ ಈಗ 57 ವರ್ಷ ವಯಸ್ಸಾಗಿದ್ದು, ವೀರ್ಯದ ಆರೋಗ್ಯ ತಿಳಿದುಕೊಳ್ಳಲು ಅವರು ಆನುವಂಶಿಕ ಪರೀಕ್ಷೆಗೆ ಒಳಗಾಗುವುದು ಅಗತ್ಯ” ಎಂದು ನ್ಯಾಯಾಲಯ ಒತ್ತಿ ಹೇಳಿದೆ.

ಮಗು ಪಡೆಯಲು ಬಯಸಿರುವ ದಂಪತಿಯು ಮಗುವಿನ ಕಾಳಜಿ ಮಾಡುವ ಮಟ್ಟಕ್ಕೆ ಇರಬೇಕೆ ವಿನಾ ಅವರನ್ನು ತ್ಯಜಿಸುವ ರೀತಿಯಲ್ಲಿರಬಾರದು. “ಮಗುವನ್ನು ಬೆಳೆಸುವ ದೈಹಿಕ ಶಕ್ತಿಯನ್ನು ದಂಪತಿ ಹೊಂದಿರಬೇಕು. ಎಂದರೆ ಮಗುವನ್ನು ಎಲ್ಲಾ ಕಡೆ ಒಯ್ಯಬೇಕು ಎಂದಲ್ಲ. ಅವರ ಕಾಳಜಿ ಮಾಡುವುದಕ್ಕೆ ಸಂಬಂಧಿಸಿದ್ದಾಗಿದೆ” ಎಂದು ನ್ಯಾಯಾಲಯ ಹೇಳಿದೆ. ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲಿಚ್ಛಿಸುವ ದಂಪತಿಯು ಆರ್ಥಿಕವಾಗಿ ಸಬಲರಾಗಿರಬೇಕು. ಮಗು ಬಡತನ ಎದುರಿಸುವಂತಾಗಬಾರದು ಎಂದು ನ್ಯಾಯಾಲಯ ಹೇಳಿದೆ.

ಅರ್ಜಿದಾರ ದಂಪತಿಯ 23 ವರ್ಷದ ಪುತ್ರ ಕಳೆದ ವರ್ಷ ಅಪಘಾತದಲ್ಲಿ ಸಾವನ್ನಪ್ಪಿದ್ದು, 57 ವರ್ಷದ ತಂದೆ ಮತ್ತು 46 ವರ್ಷದ ತಾಯಿ ಖಿನ್ನತೆಗೆ ಒಳಗಾಗಿದ್ದಾರೆ. ಆರಂಭದಲ್ಲಿ ಮಗುವನ್ನು ದತ್ತು ಪಡೆಯುವ ಯೋಚನೆಯಲ್ಲಿದ್ದ ದಂಪತಿಗೆ ಕಾನೂನು ತೊಡಕಿನಿಂದ ಸಮಸ್ಯೆಯಾಗಿತ್ತು.

ಈ ಸಂದರ್ಭದಲ್ಲಿ ಬಾಡಿಗೆ ತಾಯ್ತನದ ಬಗ್ಗೆ ದಂಪತಿಗೆ ತಿಳಿಯಿತು. ತಾಯಿಯ ಗರ್ಭಕೋಶ ತೆಗೆಯಲಾಗಿದ್ದು, ಅವರು ಬಾಡಿಗೆ ತಾಯ್ತನ ಪ್ರಕ್ರಿಯೆಯಲ್ಲಿ ಭಾಗವಹಿಸುವ ಸ್ಥಿತಿಯಲ್ಲಿ ಇಲ್ಲ. ಹೀಗಾಗಿ, ಪತಿಯ ಅತ್ತಿಗೆಯು ಅಂಡಾಣು ನೀಡಲು ಒಪ್ಪಿದ್ದು, ಕುಟುಂಬದ ಸ್ನೇಹಿತೆಯೊಬ್ಬರು ಬಾಡಿಗೆ ತಾಯಿ ಆಗಲು ಸಮ್ಮತಿಸಿದ್ದರು. ಅದಾಗ್ಯೂ, ತಂದೆಯ ವಯಸ್ಸು ಮತ್ತು ಬಾಡಿಗೆ ತಾಯಿಯು ಆನುವಂಶಿಕ ಸಂಬಂಧಿಯಲ್ಲ ಎಂಬ ಎರಡು ವಿಚಾರಗಳು ಅವರ ಸ್ವಂತ ಮಗು ಪಡೆಯುವ ಕನಸಿಗೆ ತಣ್ಣೀರೆರಚಿದ್ದವು.

ಬಾಡಿಗೆ ತಾಯ್ತನ (ನಿಯಂತ್ರಣ) ಕಾಯಿದೆಯ ಪ್ರಕಾರ 55 ವರ್ಷವರೆಗಿನ ಪುರುಷರು ವೀರ್ಯ ನೀಡಬಹುದು ಅಥವಾ ಪ್ರಕ್ರಿಯೆಯಲ್ಲಿ ಭಾಗವಹಿಸಬಹುದು. ಅಂತೆಯೇ ಆನುವಂಶಿಕ ಸಂಬಂಧ ಹೊಂದಿರುವ ಮಹಿಳೆ ಬಾಡಿಗೆ ತಾಯಿಯಾಗಬಹುದು ಎಂದು ಹೇಳಲಾಗಿದೆ. ಈ ಎರಡೂ ನಿಬಂಧನೆಗಳನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಮತ್ತೊಂದು ಪ್ರಕರಣದಲ್ಲಿ ಸದರಿ ವಿಚಾರವು ಸುಪ್ರೀಂ ಕೋರ್ಟ್‌ ಪರಿಗಣನೆಯಲ್ಲಿರುವಾಗ ಆ ಎರಡೂ ನಿಬಂಧನೆಗಳನ್ನು ರದ್ದುಪಡಿಸಲಾಗದು ಎಂದು ಹೈಕೋರ್ಟ್‌ ಹೇಳಿದೆ. ಅದಾಗ್ಯೂ, ಪರಿಸ್ಥಿತಿಯನ್ನು ಪರಿಹರಿಸಬೇಕಿದ್ದು, ಶಾಸನದಲ್ಲಿನ ಸಿಕ್ಕನ್ನು ಸರಿಪಡಿಸಬೇಕಿದೆ ಎಂದು ನ್ಯಾಯಾಲಯ ಹೇಳಿದೆ.

ಯಾವುದೇ ವಿಶೇಷ ಪರಿಸ್ಥಿತಿಯನ್ನು ಪರಿಹರಿಸಿ, ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯುವ ದಂಪತಿಗೆ ಅರ್ಹತಾ ಸರ್ಟಿಫಿಕೇಟ್‌ ಅನ್ನು ರಾಷ್ಟ್ರೀಯ ಅಥವಾ ರಾಜ್ಯ ಮಂಡಳಿ ಅಥವಾ ಸಕ್ಷಮ ಪ್ರಾಧಿಕಾರ ನೀಡಲಾಗದು. ಕಾನೂನನ್ನು ಸರಿಪಡಿಸಬೇಕೆ ಎಂಬುದನ್ನು ಶಾಸನಸಭೆ ವಿಚಾರ ಮಾಡಬೇಕು ಎಂದು ನ್ಯಾಯಾಲಯ ಹೇಳಿದೆ.

ಬಾಡಿಗೆ ತಾಯಿಯು ಮಗು ಪಡೆಯುವ ದಂಪತಿಗೆ ಆನುವಂಶಿಕ ಸಂಬಂಧಿಯಾಗಿರಬೇಕು ಎಂಬುದು ತರ್ಕ ಮತ್ತು ಪರಹಿತಚಿಂತಕ ಬಾಡಿಗೆ ತಾಯ್ತನದ ಉದ್ದೇಶವನ್ನೇ ಸೋಲಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಪರಹಿತಚಿಂತಕ ಬಾಡಿಗೆ ತಾಯ್ತನ ಪ್ರಕ್ರಿಯೆಯಲ್ಲಿ ಬಾಡಿಗೆ ತಾಯಿಗೆ ಗರ್ಭಿಣಿಯಾದ ಸಂದರ್ಭದಲ್ಲಿ ವೈದ್ಯಕೀಯ ವೆಚ್ಚ ಮತ್ತು ಆರೋಗ್ಯ ವಿಮೆ ಮಾತ್ರ ನೀಡಲಾಗುತ್ತದೆಯೇ ವಿನಾ ಹಣ ಅಥವಾ ಮತ್ತಾವುದೇ ನೆರವು ನೀಡಲಾಗುವುದಿಲ್ಲ.

ಬಾಡಿಗೆ ತಾಯ್ತನದ ಮೂಲಕ ಮಗು ಪಡೆಯಲು ಇಚ್ಛಿಸುವ ದಂಪತಿಯು ಸಕ್ಷಮ ಪ್ರಾಧಿಕಾರದ ಮುಂದೆ ತಾವು ಏನೆಲ್ಲಾ ಆಸ್ತಿ ಹೊಂದಿದ್ದೇವೆ ಎಂಬುದರ ಅಫಿಡವಿಟ್‌ ಸಲ್ಲಿಸಬೇಕು. ಇದು ದಂಪತಿಯ ಆರ್ಥಿಕ ಸಾಮರ್ಥ್ಯ ನಿರ್ಧರಿಸಲು ಪ್ರಾಧಿಕಾರಕ್ಕೆ ಅನುಕೂಲವಾಗಲಿದೆ. “ಮಗು ಪಡೆಯಲು ಇಚ್ಛಿಸುವ ದಂಪತಿಯು ಮಗುವಿನ ಭವಿಷ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಅದನ್ನು ರಕ್ಷಿಸುವ ಅಗತ್ಯವಿದ್ದು, ಈ ಪ್ರಕ್ರಿಯೆ ಮತ್ತು ಆರ್ಥಿಕ ಪರೀಕ್ಷೆ ಕೇಳುವ ಸೂಕ್ಷ್ಮಾತಿಸೂಕ್ಷ್ಮ ವಿಚಾರವನ್ನು ಸಕ್ಷಮ ಪ್ರಾಧಿಕಾರ ನಿರ್ಧರಿಸಲು ಬಿಡುವುದು ಸೂಕ್ತವಾಗಿದೆ. ಆದರೆ, ಅಂಥ ಆರ್ಥಿಕ ಪರೀಕ್ಷೆ ಅತ್ಯಗತ್ಯ” ಎಂದು ಪೀಠ ಸ್ಪಷ್ಟಪಡಿಸಿದೆ.

ಹಾಲಿ ಆದೇಶದಲ್ಲಿ ಉಲ್ಲೇಖಿಸಿರುವ ಮೂರು ಪರೀಕ್ಷೆಗಳಲ್ಲಿ ದಂಪತಿ ಉತ್ತೀರ್ಣರಾದರೆ ಅವರ ಅರ್ಜಿಯನ್ನು ಮತ್ತೊಮ್ಮೆ ಸಕ್ಷಮ ಪ್ರಾಧಿಕಾರ ಪರಿಗಣಿಸಬೇಕು ಎಂದು ನ್ಯಾಯಾಲಯ ಹೇಳಿದೆ. ಅರ್ಜಿದಾರರನ್ನು ವಕೀಲ ಎ ಸಂಪತ್‌ ಪ್ರತಿನಿಧಿಸಿದ್ದರು. ಕೇಂದ್ರ ಸರ್ಕಾರದ ಪರ ವಕೀಲ ಎಂ ಎನ್‌ ಕುಮಾರ್‌ ವಾದಿಸಿದ್ದರು.

H Siddaraju vs Union of India.pdf
Preview