Karnataka HC 
ಸುದ್ದಿಗಳು

'ಅಲ್ಲಮಪ್ರಭು ಸ್ವಾಮಿ ದೇವಸ್ಥಾನ ಪ್ರಾಚೀನ ಸ್ಮಾರಕವೇ?' ಪರಿಶೀಲಿಸಲು ತ್ರಿಸದಸ್ಯ ಸಮಿತಿ ರಚನೆಗೆ ಹೈಕೋರ್ಟ್ ನಿರ್ದೇಶನ

ದೇವಸ್ಥಾನವನ್ನು 17 ಮತ್ತು18ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಪ್ರಾಚೀನ ಸ್ಮಾರಕ ವ್ಯಾಖ್ಯಾನಕ್ಕೆ ಒಳಪಡುತ್ತದೆ. ಐತಿಹಾಸಿಕ, ಧಾರ್ಮಿಕ ಮಹತ್ವದ ಹಿನ್ನೆಲೆಯಲ್ಲಿ ದೇವಾಲಯವನ್ನು ಪ್ರಾಚೀನ ಸ್ಮಾರಕ ಎಂದು ಘೋಷಿಸಬೇಕು ಎಂಬುದು ಅರ್ಜಿದಾರರ ಮನವಿ.

Bar & Bench

ಬೆಳಗಾವಿ ಜಿಲ್ಲೆ ಹುಕ್ಕೇರಿ ತಾಲ್ಲೂಕಿನ ಹಿಡಕಲ್ ಜಲಾಶಯದ ಹಿನ್ನೀರಿನಲ್ಲಿರುವ ಅಲ್ಲಮಪ್ರಭು ಸ್ವಾಮಿ ದೇವಸ್ಥಾನ, ಅದಕ್ಕೆ ಸಂಬಂಧಿಸಿದ ಶಾಸನ ಹಾಗೂ ಪಳೆಯುಳಿಕೆಗಳು ಕರ್ನಾಟಕ ಪಾರಂಪರಿಕ ಸ್ಮಾರಕಗಳ ಕಾಯಿದೆ 1961ರನ್ವಯ ಪುರಾತನ ಸ್ಮಾರಕಗಳ ವ್ಯಾಪ್ತಿಗೆ ಬರಲಿದೆಯೇ ಎಂಬ ಬಗ್ಗೆ ನಿರ್ಧರಿಸಲು ತ್ರಿಸದಸ್ಯ ತಜ್ಞರ ಸಮಿತಿ ರಚಿಸುವಂತೆ ರಾಜ್ಯ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಮಹಾರಾಷ್ಟ್ರದ ಕೊಲ್ಹಾಪುರದ ಕಾನೂನು ವಿದ್ಯಾರ್ಥಿನಿ ನಿಖಿಲ್‌ ವಿಠ್ಠಲ್‌ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ಎನ್‌ ವಿ ಅಂಜಾರಿಯಾ ಮತ್ತು ನ್ಯಾಯಮೂರ್ತಿ ಕೆ ವಿ ಅರವಿಂದ್‌ ಅವರ ನೇತೃತ್ವದ ವಿಭಾಗೀಯ ಪೀಠವು ನಡೆಸಿತು.

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಯು ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಯನ್ನು ಒಳಗೊಂಡ ಮೂವರು ಸದಸ್ಯರ ಸಮಿತಿಯನ್ನು ರಚಿಸಬೇಕು. ರಾಜ್ಯ ಸರ್ಕಾರವು ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದಿರುವ ನ್ಯಾಯಾಲಯವು ವಿಚಾರಣೆಯನ್ನು ಡಿಸೆಂಬರ್‌ 10ಕ್ಕೆ ಮುಂದೂಡಿತು.

ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ್ದ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ ಅರವಿಂದ್‌ ಕಾಮತ್‌ ಅವರು “ಅಲ್ಲಮ ಪ್ರಭು ದೇವಾಲಯವನ್ನು ರಾಷ್ಟ್ರೀಯ ಮಹತ್ವದ ಸ್ಮಾರಕ ಎಂದು ಘೋಷಿಸಲಾಗಿಲ್ಲ. ಆದರೆ, ಅದು ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಪಳೆಯುಳಿಕೆ ಕಾಯಿದೆ ಅಡಿ ಪ್ರಾಚೀನ ಸ್ಮಾರಕಗಳ ವ್ಯಾಖ್ಯಾನದ ವ್ಯಾಪ್ತಿಗೆ ಒಳಪಡುತ್ತದೆ. ಕೇಂದ್ರದ ಕಾಯಿದೆ ಅಡಿ ಅಲ್ಲಮ ಪ್ರಭು ದೇವಾಲಯವನ್ನು ಪ್ರಾಚೀನ ಸ್ಮಾರಕ ಎಂದು ಘೋಷಿಸಿಲ್ಲವಾದ್ದರಿಂದ ಕರ್ನಾಟಕ ಪ್ರಾಚೀನ ಮತ್ತು ಐತಿಹಾಸಿಕ ಸ್ಥಳಗಳು ಮತ್ತು ಪಳೆಯುಳಿಕೆ ಕಾಯಿದೆ 1961ರ ಅಡಿ ಪರಿಗಣಿಸಬಹುದು” ಎಂದರು.

ಅಲ್ಲಮ ಪ್ರಭು ಸ್ವಾಮಿ ದೇವಾಲಯವು ಶತಮಾನಗಳಿಗೂ ಹೆಚ್ಚು ಹಳೆಯದಾಗಿದ್ದು, ಅದನ್ನು ಸಂರಕ್ಷಿತ ಸ್ಮಾರಕ ಎಂದು ಘೋಷಿಸಬೇಕು. ದೇವಾಲಯವು ವರ್ಷದ ಆರು ತಿಂಗಳು ನೀರಿನಲ್ಲಿ ಮುಳುಗುವುದರಿಂದ ಅದನ್ನು ಬೇರೊಂದು ಸ್ಥಳಕ್ಕೆ ಸ್ಥಳಾಂತರ ಮಾಡಬೇಕು. ದೇವಸ್ಥಾನವನ್ನು 17 ಮತ್ತು18ನೇ ಶತಮಾನದಲ್ಲಿ ನಿರ್ಮಿಸಲಾಗಿದ್ದು, ಅದು ಪ್ರಾಚೀನ ಸ್ಮಾರಕಗಳ ವ್ಯಾಖ್ಯಾನಕ್ಕೆ ಒಳಪಡುತ್ತದೆ. ಐತಿಹಾಸಿಕ ಮತ್ತು ಧಾರ್ಮಿಕ ಮಹತ್ವದ ಹಿನ್ನೆಲೆಯಲ್ಲಿ ದೇವಾಲಯವನ್ನು ಪ್ರಾಚೀನ ಸ್ಮಾರಕ ಎಂದು ಘೋಷಿಸಬೇಕು ಎಂದು ಅರ್ಜಿದಾರರು ಕೋರಿದ್ದಾರೆ.