ಸದ್ಗುರು ಜಗ್ಗಿ ವಾಸುದೇವ್ ನೇತೃತ್ವದ ಇಶಾ ಫೌಂಡೇಶನ್ ಸಂಸ್ಥೆಯ ಮಹತ್ವಾಕಾಂಕ್ಷಿ ಕಾವೇರಿ ಕಾಲಿಂಗ್ ಯೋಜನೆಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸುವುದನ್ನು ನಿರ್ಬಂಧಿಸುವಂತೆ ಕೋರಿದ್ದ ಮನವಿಯನ್ನು ಮಂಗಳವಾರ ಕರ್ನಾಟಕ ಹೈಕೋರ್ಟ್ ವಜಾ ಮಾಡಿದೆ.
ಅರ್ಜಿದಾರ ಎ ವಿ ಅಮರನಾಥನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ತೀರ್ಪು ಕಾಯ್ದಿರಿಸಿದ್ದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠವು ಗಿಡ ನೆಡುವ ಸಂಬಂಧದ ಇಶಾ ಫೌಂಡೇಶನ್ ಕಾರ್ಯಕ್ರಮಕ್ಕೆ ಮೆಚ್ಚುಗೆಯನ್ನೂ ಸೂಚಿಸಿದೆ.
“ಮೇಲೆ ಹೇಳಲಾದ ಪ್ರಕರಣದಲ್ಲಿ ಅರಣ್ಯ ನಾಶದಿಂದ ಸಂಭವಿಸುತ್ತಿರುವ ವಿಪತ್ತು ಹಾಗೂ ಅರಣ್ಯದ ಅಗತ್ಯತೆಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ವಿಸ್ತೃತವಾಗಿ ಚರ್ಚಿಸಿದೆ. ಹೀಗಾಗಿ, ಮಾನವ ಕುಲ ಮತ್ತು ಭೂಮಿಯನ್ನು ರಕ್ಷಿಸಲು ಇರುವ ಏಕೈಕ ಅವಕಾಶ ಅರಣ್ಯೀಕರಣ. ಈ ನೆಲೆಯಲ್ಲಿ ಮೂರನೇ ಪ್ರತಿವಾದಿಯಾದ ಇಶಾ ಔಟ್‌ರೀಚ್ ಕೈಗೊಂಡಿರುವ ಅರಣ್ಯೀಕರಣದ ಕಾರ್ಯಕ್ರಮಕ್ಕೆ ನಾವು ಮೆಚ್ಚುಗೆಯನ್ನು ದಾಖಲಿಸಬೇಕಾಗುತ್ತದೆ. ಇದನ್ನು ಪ್ರಶ್ನಿಸಿರುವ ಅರ್ಜಿ ವಜಾಕ್ಕೆ ಅರ್ಹವಾಗಿದೆ” ಎಂದು ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ.
ಮುಂದುವರೆದು ಮನವಿಯನ್ನು ಕ್ಷುಲ್ಲಕ ಎಂದಿರುವ ಪೀಠವು ನ್ಯಾಯಾಲಯದ ಮಧ್ಯಪ್ರವೇಶದ ಅಗತ್ಯತೆ ಇರಲಿಲ್ಲ ಎಂದು ಹೇಳಿದೆ. ಕಳೆದ ಬುಧವಾರ ವಾದ - ಪ್ರತಿವಾದವನ್ನು ಆಲಿಸಿದ್ದ ಪೀಠವು ತೀರ್ಪು ಕಾಯ್ದಿರಿಸಿತ್ತು.
ಕಳೆದ ವರ್ಷದ ಅಕ್ಟೋಬರ್ 15ರಂದು ಕರ್ನಾಟಕ ಹೈಕೋರ್ಟ್ ಹೊರಡಿಸಿದ್ದ ಆದೇಶವನ್ನು ಪ್ರಶ್ನಿಸಿ ಮಾರ್ಚ್‌ನಲ್ಲಿ ಸುಪ್ರೀ ಕೋರ್ಟ್‌ಗೆ ಇಶಾ ಫೌಂಡೇಶನ್ ಮೇಲ್ಮನವಿ ಸಲ್ಲಿಸಿತ್ತು. ಅಂದು, ಹೈಕೋರ್ಟ್ ಇಶಾ ಫೌಂಡೇಶನ್‌ನ ಕಾವೇರಿ ಕಾಲಿಂಗ್ ಯೋಜನೆಯ ಕುರಿತಾದ ಮನವಿಯನ್ನು ಸ್ವಯಂಪ್ರೇರಿತ ಮನವಿ ಎಂದು ಪರಿಗಣಿಸಲು ನಿರ್ಧರಿಸಿತ್ತು.
ಬತ್ತಿರುವ ನದಿಗಳನ್ನು ಪುನರುಜ್ಜೀವನಗೊಳಿಸುವುದು ಕಾವೇರಿ ಕಾಲಿಂಗ್‌ನ ಯೋಜನೆಯ ಭಾಗವಾಗಿದೆ. ಸರ್ಕಾರಿ ಭೂಮಿಯಲ್ಲಿ ಗಿಡ ನೆಡುವುದರ ಜೊತೆಗೆ ಇದಕ್ಕಾಗಿ ಇಶಾ ಫೌಂಡೇಶನ್ ಜನರಿಂದ ದೇಣಿಗೆ ಸಂಗ್ರಹಿಸುತ್ತಿದೆ ಎಂದು ಮನವಿಯಲ್ಲಿ ಆರೋಪಿಸಲಾಗಿತ್ತು.
ಯೋಜನೆಯ ಸಾಧಕ-ಬಾಧಕವನ್ನು ಅರಿಯದೇ ಸರ್ಕಾರಿ ಜಾಗದಲ್ಲಿ ಖಾಸಗಿ ಸಂಸ್ಥೆ ಗಿಡ ನೆಡಲು ಅವಕಾಶ ಮಾಡಿಕೊಡಲಾಗುತ್ತಿದೆ ಎಂದು ಅರ್ಜಿದಾರರು ತಕರಾರು ಎತ್ತಿದ್ದರು. ಸಾರ್ವಜನಿಕರಿಂದ ಹಣ ಸಂಗ್ರಹವು ದಿಗಿಲು ಹುಟ್ಟಿಸುತ್ತಿದ್ದು, ಬರೋಬ್ಬರಿ ₹10,626 ಕೋಟಿಯನ್ನು ಇಶಾ ಫೌಂಡೇಶನ್ ಸಂಗ್ರಹಿಸಲಿದೆ ಎಂದು ವಾದಿಸಲಾಗಿತ್ತು.