ಕಾವೇರಿ ಕಾಲಿಂಗ್ ಯೋಜನೆಗೆ ಸಾರ್ವಜನಿಕರಿಂದ ದೇಣಿಗೆ ಸಂಗ್ರಹಿಸದಂತೆ ಅಧ್ಯಾತ್ಮ ಗುರು ಜಗ್ಗಿ ವಾಸುದೇವ್ ಅವರ ಇಶಾ ಫೌಂಡೇಶನ್‌ಗೆ ನಿರ್ದೇಶಿಸುವಂತೆ ಕೋರಿದ್ದ ಮನವಿಗೆ ಸಂಬಂಧಿಸಿದ ತೀರ್ಪನ್ನು ಕರ್ನಾಟಕ ಹೈಕೋರ್ಟ್ ಬುಧವಾರ ಕಾಯ್ದಿರಿಸಿದೆ.
ಅರ್ಜಿದಾರ ಎ ವಿ ಅಮರನಾಥನ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮನವಿಯ ಕುರಿತು ವಾದ-ಪ್ರತಿವಾದ ಆಲಿಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸಚಿನ್ ಶಂಕರ್ ಮಗದುಮ್ ಅವರಿದ್ದ ವಿಭಾಗೀಯ ಪೀಠವು ಪ್ರಕರಣಕ್ಕೆ ಸಂಬಂಧಿಸಿದ ಇದುವರೆಗೆ ನ್ಯಾಯಾಲಯ ಹೊರಡಿಸಿರುವ ಆದೇಶಗಳನ್ನು ಸಂಕ್ಷಿಪ್ತವಾಗಿ ಸಲ್ಲಿಸುವಂತೆ ಉಭಯ ಪಕ್ಷಕಾರರ ಪರ ವಕೀಲರಿಗೆ ಆದೇಶಿಸಿತು.
ಅರ್ಜಿದಾರರ ಪರ ವಕೀಲೆ ಬಿ ವಿ ವಿದ್ಯುಲ್ಲತಾ ಅವರು “ಇಶಾ ಫೌಂಡೇಶನ್ 253 ಕೋಟಿ ಗಿಡ ನೆಡಲು ಪ್ರತಿ ಗಿಡಕ್ಕೆ 42 ರೂಪಾಯಿ ಸಂಗ್ರಹಿಸುತ್ತಿದೆ. ಅಂದರೆ ಅಂದಾಜು ₹10,626 ಕೋಟಿಯನ್ನು ಜನರಿಂದ ಸಂಗ್ರಹಿಸಲಾಗುತ್ತಿದೆ. ಇದರ ಬಗ್ಗೆ ನ್ಯಾಯಾಲಯ ಕಳಕಳಿ ಹೊಂದಿದೆ. ಕಾವೇರಿ ನದಿ ತೀರದ ಪ್ರದೇಶದವಾದ ತಲಕಾವೇರಿಯಿಂದ ತಮಿಳುನಾಡಿನ ತಿರುವಾಯೂರುವರೆಗೆ 639.1 ಕಿ.ಮೀ. ಪ್ರದೇಶದಲ್ಲಿ ಗಿಡ ನೆಡಲಾಗುವುದು ಎಂದು ಇಶಾ ಫೌಂಡೇಶನ್ ಹೇಳಿದೆ. ಈ ಪ್ರದೇಶದಲ್ಲಿ ಅರಣ್ಯ ಪ್ರದೇಶವೂ ಸೇರಿದಂತೆ ಸರ್ಕಾರಕ್ಕೆ ಸೇರಿದ ಜಾಗವಿದೆ. ಅರಣ್ಯ ಭೂಮಿಯಲ್ಲಿ ಗಿಡ ನೆಡಲಾಗುವುದು ಎಂದು ಕಾವೇರಿ ಕಾಲಿಂಗ್ ಯೋಜನೆಯಲ್ಲಿ ಹೇಳಲಾಗಿದೆ. ಇದೇ ಕಾರಣಕ್ಕಾಗಿ ನ್ಯಾಯಾಲಯವು ಪ್ರಕರಣವನ್ನು ಕೈಗೆತ್ತುಕೊಂಡಿದೆ” ಎಂದರು.
ಈ ಮಧ್ಯೆ, ನ್ಯಾ. ಶರ್ಮಾ ಅವರು “ಯೋಜನೆಗೆ ₹42 ನೀಡಬೇಕೆಂಬುದು ಕಡ್ಡಾಯವೋ ಅಥವಾ ಸ್ವಯಂಪ್ರೇರಿತವೋ” ಎಂದು ಪ್ರಶ್ನಿಸಿತು. ಆಗ, ವಕೀಲೆ ವಿದ್ಯುಲ್ಲತಾ ಅವರು “ಇಶಾ ಫೌಂಡೇಶನ್ ಟ್ರಸ್ಟ್ ಆಗಿದ್ದು, ಇಚ್ಛೆ ಹೊಂದಿರುವವರು ದೇಣಿಗೆ ನೀಡಬಹುದು” ಎಂದರು.
ಆಗ ಪೀಠವು “ಸರ್ಕಾರದ ಜಾಗದಲ್ಲಿ ಜನರು ಗಿಡ ನೆಡುವುದನ್ನು ತಡೆಯುವ ಯಾವುದಾದರೂ ಕಾನೂನು ಇದೆಯೇ” ಎಂದು ಪೀಠ ಪ್ರಶ್ನಿಸಿತು. ಆಗ, ವಿದ್ಯುಲತಾ ಅವರು “ಗಿಡ ನೆಡುವವರು ಅಗತ್ಯ ಅನುಮತಿ ಪಡೆಯಬೇಕಿದೆ” ಎಂದರು. ಮುಂದುವರಿದು “ಇಶಾ ಫೌಂಡೇಶನ್ ಅರಣ್ಯ ಪ್ರದೇಶವನ್ನು ಪತ್ತೆ ಹಚ್ಚಿ ಗಿಡ ನೆಡಲಾಗುವುದು ಮತ್ತು ಯೋಜನೆಯ ಇಡೀ ವೆಚ್ಚವನ್ನು ಸರ್ಕಾರ ಭರಿಸಲಿದೆ ಎಂದು ಹೇಳಿದೆ. ಇದಕ್ಕೆ ವಿರುದ್ಧವಾಗಿ ಸಾರ್ವಜನಿಕರಿಂದ ಪ್ರತಿ ಗಿಡಕ್ಕೆ ₹42 ಸಂಗ್ರಹಿಸುತ್ತಿದೆ” ಎಂದು ವಾದಿಸಿದರು.
“ಗಿಡ ನೆಡುವ ಯೋಜನೆಗೆ ಸಹಕರಿಸುತ್ತಿರುವುದಾಗಿ ಸರ್ಕಾರ ಎಲ್ಲದಾದರೂ ಹೇಳಿದೆಯೇ? ಇದಕ್ಕೆ ಸಂಬಂಧಿಸಿದ ದಾಖಲೆ ಇದೆಯೇ?” ಎಂದು ಪೀಠ ಪ್ರಶ್ನಿತು. ಆಗ ವಿದ್ಯುಲ್ಲತಾ ಅವರು “ಇದು ಸರ್ಕಾರದ ಯೋಜನೆಯಲ್ಲ ಎಂದು ರಾಜ್ಯ ಸರ್ಕಾರ ಆಕ್ಷೇಪಣೆ ಸಲ್ಲಿಸಿದ್ದು, ತನ್ನ ನಿಲುವುವನ್ನು ಸ್ಪಷ್ಟಪಡಿಸಿದೆ. ಇದು ಇಶಾ ಫೌಂಡೇಶನ್ ಯೋಜನೆ” ಎಂದರು.
“ಇಶಾ ಫೌಂಡೇಶನ್ ಪ್ರಕಾರ ಯೋಜನೆಗೆ ₹52.5 ಕೋಟಿ ತಗುಲುತ್ತದೆ ಎಂದು ಹೇಳಲಾಗಿದೆ. ಆದರೆ, ಇದಕ್ಕೆ ವಿರುದ್ಧವಾಗಿ ಸಾರ್ವಜನಿಕರಿಂದ ಸುಮಾರು ₹10,626 ಕೋಟಿ ಸಂಗ್ರಹಿಸಲಾಗುತ್ತಿದೆ. 2020-23ರ ನಡುವೆ ನಾಲ್ಕು ವರ್ಷಗಳಲ್ಲಿ ಗಿಡ ನೆಡಲು ಒಟ್ಟು ಬಜೆಟ್ ₹40.9 ಕೋಟಿ ಬೇಕು ಎಂದು ಇಶಾ ಫೌಂಡೇಶನ್ ಹೇಳಿದೆ. ಈ ಪೈಕಿ, 2020ರಲ್ಲಿ ₹34.7 ಕೋಟಿ ಅಗತ್ಯವಿದ್ದು, ಇದೇ ವರ್ಷ ಗಿಡ ನೆಡುವ ಕಾರ್ಯ ಆರಂಭಿಸಲಾಗುವುದು ಎಂದು ಹೇಳಲಾಗಿದೆ. ಪ್ರತಿವಾದಿಗಳೇ ತಿಳಿಸಿರುವಂತೆ ಯೋಜನೆಗೆ ₹10,626 ಕೋಟಿ ಬೇಕಿಲ್ಲ. ಹೀಗಿರುವಾಗ, ಅಪಾರ ಪ್ರಮಾಣದ ಹಣವನ್ನು ವಂಚಿಸುವ ಮೂಲಕ ಸಂಗ್ರಹಿಸಲಾಗುತ್ತಿದೆ ಎಂದು ದಾಖಲೆಗಳು ಹೇಳುತ್ತಿವೆ" ಎಂದರು.
ಮುಂದುವರೆದು, "ಸರ್ಕಾರದ ಜಾಗದಲ್ಲಿ ಗಿಡ ನೆಡುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದಿಂದ ಯಾವುದೇ ಪೂರ್ವಾನುಮತಿ ಪಡೆದಿಲ್ಲ. ಯೋಜನೆಗೆ ಸರ್ಕಾರ ನೆರವು ನೀಡುತ್ತಿದೆ ಎಂದು ಹೇಳಿದ್ದು, ಮತ್ತೊಂದು ಕಡೆ ಅಪಾರ ಪ್ರಮಾಣದ ಹಣವನ್ನು ಜನರಿಂದ ದೇಣಿಗೆಯ ರೂಪದಲ್ಲಿ ಪಡೆಯಲಾಗುತ್ತಿದೆ. ಜನರಿಂದ ದೇಣಿಗೆ ಸಂಗ್ರಹ ಮಾಡುತ್ತಿರುವ ಕುರಿತು ಇಶಾ ಫೌಂಡೇಶ್‌ನಿಂದ ನ್ಯಾಯಾಲಯವು ಸ್ಪಷ್ಟೀಕರಣ ಪಡೆಯಬೇಕು” ಎಂದು ಮನವಿ ಮಾಡಿದರು.
ಇದಕ್ಕೆ ಪೀಠವು “ಜನರಿಂದ ಸಂಗ್ರಹಿಸಿದ ಹಣದ ವಿಚಾರದ ಕುರಿತು ಗಮನಿಸಲು ಆದಾಯ ತೆರಿಗೆ ಇಲಾಖೆ, ಭಾರತ ಸರ್ಕಾರದ ವಿವಿಧ ಏಜೆನ್ಸಿಗಳು ಇವೆ. ಇವುಗಳನ್ನು ಅವು ನೋಡಿಕೊಳ್ಳಲಿವೆ. ಇನ್ನು ಸರ್ಕಾರ ಮತ್ತು ಅರಣ್ಯ ಭೂಮಿಯಲ್ಲಿ ಗಿಡ ನೆಡಲು ಅನುಮತಿ ಅಗತ್ಯ ಎಂಬ ನಿಮ್ಮ ವಾದಕ್ಕೆ ಸಂಬಂಧಿಸಿದಂತೆ ನಾವು ಒಂದಷ್ಟು ಮಾಹಿತಿ ಜಾಲಾಡುತ್ತೇವೆ” ಎಂದಿತು.
ಇಶಾ ಫೌಂಡೇಶನ್ ಪರ ಹಿರಿಯ ವಕೀಲ ಉದಯ್ ಹೊಳ್ಳ ಅವರು “ರಾಜ್ಯ ಸರ್ಕಾರವು ಕಾವೇರಿ ಕಾಲಿಂಗ್ ಯೋಜನೆ ನಮ್ಮದಲ್ಲ ಎಂದಿದೆ. ಮೂರನೇ ಪ್ರತಿವಾದಿಯಾದ ಇಶಾ ಫೌಂಡೇಶನ್ ಯೋಜನೆ ಕೈಗೆತ್ತುಕೊಂಡಿದ್ದು, ಖಾಸಗಿ ಭೂಮಿಯಲ್ಲಿ ಗಿಡ ನೆಡಲಾಗುತ್ತಿದೆ. 2020ರ ಜುಲೈ 1ರಂದು ಸಲ್ಲಿಸಲಾದ ಆಕ್ಷೇಪಣೆಯಲ್ಲಿ ₹82.5 ಕೋಟಿ ಮಾತ್ರ ಸಂಗ್ರಹಿಸಲಾಗಿದೆ ಎಂದು ಹೇಳಿದ್ದೇವೆ. ನಮ್ಮದು ಸಾರ್ವಜನಿಕ ಟ್ರಸ್ಟ್ ಆಗಿದ್ದು, ಪ್ರತಿ ವರ್ಷ ಆದಾಯ ತೆರಿಗೆ ಪಾವತಿಸುತ್ತೇವೆ. ರೈತರಿಗೆ ಸಹಾಯಧನ ನೀಡಬೇಕು, ಗಿಡವನ್ನು ನೆಡುವುದನ್ನು ಖಾತರಿಪಡಿಸಬೇಕು. ತಮಿಳುನಾಡಿನಲ್ಲಿ 30 ನರ್ಸರಿಗಳಿದ್ದು, ಬೆಂಗಳೂರು ಮತ್ತು ಮೈಸೂರಿನಲ್ಲಿ ತಲಾ ಒಂದೊಂದು ನರ್ಸರಿಗಳು ಇವೆ. ಇವೆಲ್ಲವನ್ನೂ ನಿರ್ವಹಿಸಬೇಕಿರುವುದರಿಂದ ₹42 ಕೋಟಿ ದೇಣಿಗೆ ಪಡೆಯುತ್ತಿದ್ದೇವೆ” ಎಂದು ಜನರಿಂದ ದೇಣಿಗೆ ಸಂಗ್ರಹಿಸುತ್ತಿರುವುದನ್ನು ಸಮರ್ಥಿಸಿದರು.
“ಜನರಿಗೆ ವಂಚಿಸಿ ಹಣ ಸಂಗ್ರಹಿಸಲಾಗಿದೆ ಎಂದು ವಕೀಲೆ ವಿದ್ಯುಲ್ಲತಾ ಹೇಳಿದ್ದಾರೆ. ನಮ್ಮ ಟ್ರಸ್ಟ್‌ಗೆ ತಮ್ಮದೇ ಆದ ಘನತೆ ಇದೆ. ಸಂಸ್ಥೆಗೆ ಸಾಕಷ್ಟು ಪ್ರಶಸ್ತಿ-ಪುನಸ್ಕಾರಗಳು ಸಂದಿವೆ. ಒಂದೊಮ್ಮೆ ಇಶಾ ಟ್ರಸ್ಟ್ ವಂಚಿಸಿದ್ದರೆ ಇದೆಲ್ಲವೂ ಸಾಧ್ಯವಾಗುತ್ತಿರಲಿಲ್ಲ. ಹೀಗಾಗಿ, ವಂಚಿಸಿದ್ದಾರೆ ಎಂದು ಹೇಳುವುದು ಸರಿಯಲ್ಲ” ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ವಿದ್ಯುಲತಾ “ನಾನು ಇಶಾ ಫೌಂಡೇಶನ್ ವಂಚಿಸಿದೆ ಎಂದು ಹೇಳಿಲ್ಲ. ಫೌಂಡೇಶನ್ ಸಲ್ಲಿಸಿರುವ ದಾಖಲೆಗಳನ್ನು ಆಧರಿಸಿ ವಾದಿಸಿದ್ದೇನೆ” ಎಂದು ಸಮರ್ಥಿಸಿದರು.
ಆಗ ಉದಯ್ ಹೊಳ್ಳ ಅವರು “ಗಿಡ ನೆಡುವ ಅಭಿಯಾನಕ್ಕೆ ವಿದ್ಯುಲ್ಲತಾ ಅವರು ಕೊಡುಗೆ ನೀಡುವಂತೆ ಮನವಿ ಮಾಡುತ್ತೇನೆ” ಎಂದು ಲಘು ದಾಟಿಯಲ್ಲಿ ಹೇಳಿದರು. ಆಗ ನ್ಯಾ. ಶರ್ಮಾ ಅವರು “ಸರ್ಕಾರಿ ಬಂಗಲೆಗೆ ಬಂದಾಗಿನಿಂದ ಅಲ್ಲಿರುವ ಯಾರೊ ನೆಟ್ಟು ಬೆಳೆಸಿದ ಐದು ತೆಂಗಿನ ಮರಗಳಲ್ಲಿನ ತೆಂಗಿನಕಾಯಿಯನ್ನು ಬಳಸುತ್ತಿದ್ದೇನೆ. ಹೀಗಾಗಿ, ನಾನೂ ಐದು ತೆಂಗಿನ ಗಿಡಗಳನ್ನು ನೆಟ್ಟಿದ್ದೇನೆ. ಈ ವಿಚಾರವನ್ನು ಅವರಿಗೆ (ವಿದ್ಯುಲತಾ) ನಾನು ಸಲಹೆ ಮಾಡಬಹುದಷ್ಟೇ” ಎಂದರು.
“ಗಿಡ ನೆಡುವ ಚಟುವಟಿಕೆ ಸದುದ್ದೇಶದಿಂದ ಕೂಡಿದೆ. ಇದಕ್ಕೆ ಸಹಕರಿಸಬೇಕಿದೆ” ಎಂದು ಒಂದು ಹಂತದಲ್ಲಿ ಪೀಠ ಹೇಳಿತು. ನ್ಯಾ. ಶರ್ಮಾ ಅವರು ತಮ್ಮ ಮನೆಯ ನಿರ್ಮಾಣ ಸಂಬಂಧ ಮಾವಿನ ಮರ ಉರುಳಿಸುವುದನ್ನು ತಡೆಯಲು ಮನೆಯ ನಿರ್ಮಾಣ ಯೋಜನೆಯನ್ನೇ ಬದಲಾಯಿಸಿದ್ದರಿಂದ ಪ್ರತಿ ವರ್ಷ ಹೊರಗಿನಿಂದ ಮಾವಿನ ಹಣ್ಣನ್ನು ಖರೀದಿಸಿದ್ದನ್ನೇ ನಿಲ್ಲಿಸಿರುವ ವೈಯಕ್ತಿಕ ವಿಚಾರವನ್ನೂ ಹಂಚಿಕೊಂಡರು.