<div class="paragraphs"><p>Azim Premji</p></div>

Azim Premji

 
ಸುದ್ದಿಗಳು

ಅಜೀಂ ಪ್ರೇಮ್‌ಜಿ ವಿರುದ್ಧ ಕ್ಷುಲ್ಲಕ ಪ್ರಕರಣ: ಇಬ್ಬರನ್ನು ನ್ಯಾಯಾಂಗ ನಿಂದನೆ ಅಡಿ ಅಪರಾಧಿಗಳು ಎಂದ ಹೈಕೋರ್ಟ್‌

Bar & Bench

ವಿಪ್ರೊ ಮುಖ್ಯಸ್ಥ ಅಜೀಂ ಪ್ರೇಮ್‌ಜಿ ವಿರುದ್ಧ ಹಲವು ಕ್ಷುಲ್ಲಕ ಪ್ರಕರಣಗಳನ್ನು ದಾಖಲಿಸಿದ್ದಕ್ಕೆ ಸಂಬಂಧಿಸಿದಂತೆ ನ್ಯಾಯಾಂಗ ನಿಂದನೆ ಆರೋಪದಡಿ ಇಬ್ಬರನ್ನು ಈಚೆಗೆ ಕರ್ನಾಟಕ ಹೈಕೋರ್ಟ್‌ ಅಪರಾಧಿಗಳು ಎಂದು ಘೋಷಿಸಿದೆ.

ಇಂಡಿಯಾ ಅವೇಕ್‌ ಫಾರ್‌ ಟ್ರಾನ್ಸ್‌ಫರೆನ್ಸಿಯ (ಪಾರದರ್ಶಕತೆಗೆ ಎಚ್ಚರವಾಗಿರುವ ಭಾರತ) ಇಬ್ಬರು ಪ್ರತಿನಿಧಿಗಳಿಗೆ ನ್ಯಾಯಮೂರ್ತಿಗಳಾದ ಬಿ ವೀರಪ್ಪ ಮತ್ತು ಕೆ ಎಸ್‌ ಹೇಮಲೇಖಾ ಅವರಿದ್ದ ವಿಭಾಗೀಯ ಪೀಠವು ಎರಡು ತಿಂಗಳ ಜೈಲು ಶಿಕ್ಷೆ ಮತ್ತು ₹2,000 ದಂಡ ವಿಧಿಸಿದೆ. ಅಲ್ಲದೇ, ಭವಿಷ್ಯದಲ್ಲಿ ಬೇರೆಲ್ಲೂ ಪ್ರೇಮ್‌ಜಿ ವಿರುದ್ಧ ದಾವೆ ಹೂಡದಂತೆ ಅಪರಾಧಿಗಳಿಗೆ ನ್ಯಾಯಾಲಯ ನಿರ್ಬಂಧ ವಿಧಿಸಿದೆ.

“ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್‌ 2(ಸಿ) ಅಡಿ ಆರೋಪಿಗಳು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಎಸಗಿದ್ದಾರೆ. ಪ್ರಕರಣದ ವಾಸ್ತವ ಮತ್ತು ಪರಿಸ್ಥಿತಿಯನ್ನು ಆಧರಿಸಿ ಆರೋಪಿಗಳು ನ್ಯಾಯಾಂಗ ನಿಂದನೆ ಕಾಯಿದೆಯ ಸೆಕ್ಷನ್‌ 12ರ ಅಡಿ ಶಿಕ್ಷೆಗೆ ಅರ್ಹವಾಗಿದ್ದಾರೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ದೇಶದ ಪ್ರತಿಯೊಬ್ಬ ನಾಗರಿಕನೂ ಆರಾಧಿಸುವ ಏಕೈಕ ದೇವಾಲಯ ನ್ಯಾಯಾಂಗವಾಗಿದೆ. ಹೀಗಾಗಿ, ಈ ದೇವಾಲಯದಲ್ಲಿ ಒಳಗಿನಿಂದ ಬಿರುಕು ಕಾಣದಂತೆ ಖಾತರಿಪಡಿಸಲು ಹೆಚ್ಚು ಜಾಗರೂಕತೆ ವಹಿಸಬೇಕಿದೆ ಎಂದು ಪೀಠ ಹೇಳಿದೆ. “ಹೊರಗಿನ ಚಂಡಮಾರುತಕ್ಕಿಂತ ಒಳಗಿನ ಮರಕುಟಿಕ (ವುಡ್‌ ಪೆಕರ್‌) ಹೆಚ್ಚು ಅಪಾಯ ತಂದೊಡ್ಡುತ್ತದೆ ಎಂಬುದನ್ನು ನಾವು ನೆನಪಿಟ್ಟುಕೊಳ್ಳಬೇಕು” ಎಂದು ನ್ಯಾಯಾಲಯ ಹೇಳಿದೆ.

“ಹೊರಗಿನ ಷೇರುದಾರರು ಅಥವಾ ಹೂಡಿಕೆದಾರರಿಗೆ ಯಾವುದೇ ಸಮಸ್ಯೆಯಾಗದಿದ್ದರೂ ಇನ್ನೊಂದು ಸಮೂಹ ಸಂಸ್ಥೆಯ ಜೊತೆ ಅಜೀಂ ಪ್ರೇಮ್‌ಜಿ ಸಮೂಹ ಸಂಸ್ಥೆಗಳು ಸೇರ್ಪಡೆಗೊಂಡಿರುವುದರ ಕಾನೂನುಬದ್ಧತೆಯನ್ನು ಪ್ರಶ್ನಿಸಿ ಹತ್ತಕ್ಕೂ ಹೆಚ್ಚು ದಾವೆಗಳು ದಾಖಲಾಗಿವೆ” ಎಂದು ದೂರುದಾರರ ಪರ ವಕೀಲರು ಪ್ರಸಕ್ತ ಪ್ರಕರಣದಲ್ಲಿ ಅರೋಪ ನಿಗದಿಯ ನಂತರ ವಾದಿಸಿದ್ದರು.

“ದೂರುದಾರ ಸಂಸ್ಥೆಯಾದ ಇಂಡಿಯಾ ಅವೇಕ್‌ ಫಾರ್‌ ಟ್ರಾನ್ಸ್‌ಪೆರೆನ್ಸಿ ನಕಲಿ (ಶೆಲ್‌) ಕಂಪೆನಿಯಾಗಿದ್ದು, ಇದಕ್ಕೆ ಯಾವುದೇ ಆದಾಯ, ಖರ್ಚು ಕೂಡ ನಗಣ್ಯ. ಅಲ್ಲದೇ, ಇದು ಯಾವುದೇ ಬ್ಯಾಂಕ್‌ ಖಾತೆ ಹೊಂದಿಲ್ಲ. ಆರೋಪಿತ ವ್ಯಕ್ತಿಗಳಲ್ಲಿ ಒಬ್ಬರು ಕಂಪೆನಿಯ ವಕೀಲರಾಗಿ ಮತ್ತು ಸಹಿ ಮಾಡುವ ಅಧಿಕಾರ ಹೊಂದಿರುವ ಅಧಿಕೃತ ಸಹಿದಾರನಾಗಿ ಎರಡೂ ಪಾತ್ರಗಳನ್ನು ನಿಭಾಯಿಸುತ್ತಿದ್ದಾರೆ” ಎಂಬುದನ್ನು ಸಹ ಪೀಠದ ಗಮನಕ್ಕೆ ತರಲಾಯಿತು.

“ವಿಭಿನ್ನ ಕಾರಣಗಳಿಗೆ ಪ್ರತ್ಯೇಕ ಮನವಿಗಳನ್ನು ಸಲ್ಲಿಸುವುದು ನ್ಯಾಯಿಕ ಪ್ರಕ್ರಿಯೆ ದುರ್ಬಳಕೆಯಾಗುವುದಿಲ್ಲ. ಅಲ್ಲದೇ, ತಾವು ಎರಡು ಪಾತ್ರಗಳನ್ನು ನಿಭಾಯಿಸುತ್ತಿಲ್ಲ ಎಂದು ಆರೋಪಿಗಳು ಆರೋಪವನ್ನು ಅಲ್ಲಗಳೆದಿದ್ದರು. ಪ್ರಾಸಿಕ್ಯೂಷನ್‌ನಿಂದ ತಪ್ಪಿಸಿಕೊಳ್ಳಲು ಅಜೀಂ ಪ್ರೇಮ್‌ಜಿ ಮತ್ತು ಸಂಸ್ಥೆಗಳು ದುರುದ್ದೇಶಪೂರಿತ ನ್ಯಾಯಾಂಗ ನಿಂದನೆ ದಾವೆ ಹೂಡಿವೆ” ಎಂದು ಆರೋಪಿಸಿದ್ದರು.

ಎರಡನೇ ಆರೋಪಿಯು ವಕೀಲ ಮತ್ತು ಕಂಪೆನಿಯ ಅಧಿಕೃತ ಸಹಿದಾರನಾಗಿ ಕೆಲಸ ಮಾಡುತ್ತಿರುವುದನ್ನು ದೃಢಪಡಿಸಿಕೊಂಡಿದ್ದು, ಎರಡು ಪಾತ್ರಗಳನ್ನು ನಿಭಾಯಿಸುತ್ತಿರುವುದರಲ್ಲಿ ಹುರುಳಿದೆ ಎಂಬುದನ್ನು ಪತ್ತೆ ಹಚ್ಚಿತ್ತು.

“ಇನ್ನೊಂದು ಸಮೂಹ ಸಂಸ್ಥೆಯ ಜೊತೆ ಅಜೀಂ ಪ್ರೇಮ್‌ಜಿ ಸಮೂಹ ಸಂಸ್ಥೆಗಳು ಸೇರ್ಪಡೆಗೊಂಡಿರುವುದರ ಕಾನೂನಾತ್ಮಕತೆಯನ್ನು ಪ್ರಶ್ನಿಸಿ ಅಸ್ತಿತ್ವದಲ್ಲಿಲ್ಲದ ಕಂಪೆನಿಯ ಮೂಲಕ ದಾವೆ ಹೂಡಲಾಗಿದೆ. ಅದೂ ಕ್ಷುಲ್ಲಕ ಮತ್ತು ಆಧಾರರಹಿತವಾಗಿ ಪ್ರಶ್ನೆ ಮಾಡಲಾಗಿದೆ” ಎಂಬುದನ್ನು ಲಭ್ಯವಿರುವ ದಾಖಲೆಗಳಿಂದ ನ್ಯಾಯಾಲಯ ದೃಢಪಡಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಕ್ರಮಕ್ಕೆ ರಿಜಿಸ್ಟ್ರಾರ್‌ಗೆ ನಿರ್ದೇಶಿಸಿದೆ.

ಅಜೀಂ ಪ್ರೇಮ್‌ಜಿ ಮತ್ತು ಸಂಸ್ಥೆಯನ್ನು ಹಿರಿಯ ವಕೀಲರಾದ ಎಸ್‌ ಗಣೇಶ್‌ ಮತ್ತು ಸಿ ವಿ ನಾಗೇಶ್‌, ವಕೀಲ ಸಂದೀಪ್‌ ಹುಯಿಲಗೋಳ ಪ್ರತಿನಿಧಿಸಿದ್ದರೆ, ಆರೋಪಿಗಳನ್ನು ಹಿರಿಯ ವಕೀಲ ಡಿ ಆರ್‌ ರವಿಶಂಕರ್‌ ಮತ್ತು ವಕೀಲ ಶಖೀರ್‌ ಅಬ್ಬಾಸ್‌ ಎಂ ಪ್ರತಿನಿಧಿಸಿದ್ದರು.

ಕರ್ನಾಟಕ ಹೈಕೋರ್ಟ್‌ನಲ್ಲಿ ಬಾಕಿ ಇರುವ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣವನ್ನು ತುರ್ತಾಗಿ ವಿಲೇವಾರಿ ಮಾಡುವಂತೆ ಕರ್ನಾಟಕ ಹೈಕೋರ್ಟ್‌ಗೆ ಕಳೆದ ವರ್ಷ ಸುಪ್ರೀಂ ಕೋರ್ಟ್‌ ನಿರ್ದೇಶಿಸಿತ್ತು.

ಅಜೀಂ ಪ್ರೇಮ್‌ಜಿ ಮತ್ತು ಇತರರ ವಿರುದ್ಧ ಒಂದೇ ವ್ಯಾಜ್ಯ ಕಾರಣವಿರಿಸಿಕೊಂಡು ಪ್ರಕರಣ ದಾಖಲಿಸುವುದಕ್ಕೆ ಕೋರಿ ಹಲವು ಮನವಿಗಳನ್ನು ಸಲ್ಲಿಸಿದ್ದ ಸರ್ಕಾರೇತರ ಸಂಸ್ಥೆಯಾದ ಇಂಡಿಯಾ ಅವೇಕ್‌ ಫಾರ್‌ ಟ್ರಾನ್ಸ್‌ಪೆರೆನ್ಸಿಗೆ ಕಳೆದ ವರ್ಷ ಕರ್ನಾಟಕ ಹೈಕೋರ್ಟ್‌ನ ಏಕಸದಸ್ಯ ಪೀಠವು 10 ಲಕ್ಷ ರೂಪಾಯಿ ದಂಡ ವಿಧಿಸಿತ್ತು.