ಹೈಕೋರ್ಟ್‌ಗಳು ಆದೇಶ ಬರೆಯುವಾಗ ಸಮರ್ಥ ಕಾರಣಗಳನ್ನು ನೀಡದೇ ಕಟ್, ಪೇಸ್ಟ್ ಮಾದರಿ ಅನುಸರಿಸುತ್ತಿವೆ ಎಂದು ಸುಪ್ರೀಂ ಕೋರ್ಟ್ ಹಿರಿಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಸುಪ್ರೀಂ ಕೋರ್ಟ್‌ನ ಇ-ಸಮಿತಿಯ ಮುಖ್ಯಸ್ಥರು ಮತ್ತು ತಂತ್ರಜ್ಞಾನಕ್ಕೆ ಹೊಂದಿಕೊಂಡಿರುವ ಪ್ರಮುಖ ಟೆಕ್‌ಸ್ಯಾವಿ ನ್ಯಾಯಮೂರ್ತಿ ಎನಿಸಿಕೊಂಡಿರುವ ಚಂದ್ರಚೂಡ್ ಅವರು ಇದು ಕಂಪ್ಯೂಟರ್ ಕಾಲಮಾನದ ಸಮಸ್ಯೆಗಳಲ್ಲಿ ಒಂದು ಎಂದಿದ್ದಾರೆ.
“ಕಂಪ್ಯೂಟರ್ ಕಾಲಮಾನದ ಗುರುತರ ಸಮಸ್ಯೆಗಳಲ್ಲಿ ಕಟ್ ಅಂಡ್ ಪೇಸ್ಟ್ ಆದೇಶವೂ ಒಂದು. ಕಟ್ ಅಂಡ್ ಪೇಸ್ಟ್‌ಗೆ ಸೀಮಿತವಾದ ಹೈಕೋರ್ಟ್ ಆದೇಶಗಳನ್ನು ನೋಡಲು ನನಗೆ ಇಷ್ಟವಾಗುವುದಿಲ್ಲ. ನೀವು ಏನನ್ನಾದರೂ ಎತ್ತಿಹಿಡಿಯುತ್ತೀರಿ ಎಂದರೆ ಅದಕ್ಕೆ ಕಾರಣಗಳನ್ನು ನೀಡಬೇಕು” ಎಂದು ನ್ಯಾ. ಚಂದ್ರಚೂಡ್ ಹೇಳಿದ್ದಾರೆ. ಕೇಂದ್ರ ಲೋಕಸೇವಾ ಆಯೋಗದ (ಯುಪಿಎಸ್‌ಸಿ) ವಿರುದ್ಧ ಭಾರತೀಯ ಆಡಳಿತ ಸೇವೆಗೆ (ಐಎಎಸ್) ಪ್ರವೇಶ ಕೋರಿದ್ದ ವ್ಯಕ್ತಿಯೊಬ್ಬರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ಅವರು ಈ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಹೈಕೋರ್ಟ್‌ಗಳು ಕಟ್ ಅಂಡ್ ಪೇಸ್ಟ್ ಕೆಲಸ ಮಾಡುವುದನ್ನು ನೋಡಲು ನಾನು ಇಷ್ಟಪಡುವುದಿಲ್ಲ.ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್
ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾ ಹೈಕೋರ್ಟ್ ಆದೇಶವನ್ನು ಬದಿಗೆ ಸರಿಸಿದ ನ್ಯಾಯಮೂರ್ತಿ ಎಂ. ಆರ್ ಶಾ ಅವರನ್ನು ಒಳಗೊಂಡ ನ್ಯಾ. ಚಂದ್ರಚೂಡ್ ಅವರ ನೇತೃತ್ವದ ವಿಭಾಗೀಯ ಪೀಠವು ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಂತ್ರವಾಗಿ ವಿವೇಚನೆ ನಡೆಸಲು ಹೈಕೋರ್ಟ್ ವಿಫಲವಾಗಿದೆ ಎಂದಿದೆ.
“ನ್ಯಾಯಾಧಿಕರಣದ ತೀರ್ಪಿನಿಂದ ಕಟ್ ಮಾಡಿ ಪೇಸ್ಟ್ ಮಾಡುವುದರಿಂದ ಪುಟಗಳ ಸಂಖ್ಯೆ ಹೆಚ್ಚಾಗುವುದೇ ವಿನಾ ಮೇಲ್ಮನವಿಯ ಪ್ರಮುಖ ವಿಚಾರವನ್ನು ಅದು ಪ್ರಸ್ತಾಪಿಸುವುದಿಲ್ಲ” ಎಂದು ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಹೇಳಿದರು.
ಯುಪಿಎಸ್‌ಸಿ ಮಾರ್ಗಸೂಚಿಗಳ ಅನ್ವಯ ಐಎಎಸ್ ಅಧಿಕಾರಿಗಳ ಆಯ್ಕೆ ನಡೆಯುತ್ತದೆ. ಯುಪಿಎಸ್‌ಸಿಯನ್ನು ಸಂವಿಧಾನದ 320ನೇ ವಿಧಿಯ ಅನ್ವಯ ಸ್ಥಾಪಿಸಲಾಗಿದೆ ಎಂದು ನ್ಯಾಯಾಲಯ ಹೇಳಿದ್ದು, ಹೀಗಾಗಿ ಆ ವಿಚಾರಕ್ಕೆ ಸಂಬಂಧಿಸಿದಂತೆ ವಿಚಾರಣೆ ಮುಂದುವರಿಸಲು ಹೈಕೋರ್ಟ್‌ಗೆ ಆದೇಶಿಸಿರುವ ಸುಪ್ರೀಂ ಕೋರ್ಟ್ ಅರ್ಜಿದಾರರ ಮೇಲ್ಮನವಿಯನ್ನು (ಲೆಟರ್ಸ್ ಪೇಟೆಂಟ್ ಅಪೀಲು) ಪುನರ್ ಸ್ಥಾಪಿಸಿದೆ.
ಸುಪ್ರೀಂ ಕೋರ್ಟ್‌ನಲ್ಲಿ ಭೌತಿಕವಾಗಿ ಮನವಿ ಸಲ್ಲಿಸುವುದಕ್ಕೆ ಬದಲಾಗಿ ಆನ್‌ಲೈನ್ ಮೂಲಕ ಅರ್ಜಿಗಳನ್ನು ದಾಖಲಿಸುವ ಇಡೀ ಪ್ರಕ್ರಿಯೆಯನ್ನು ತಮ್ಮ ಅವಧಿಯಲ್ಲಿ ನ್ಯಾಯಮೂರ್ತಿ ಚಂದ್ರಚೂಡ್ ಯಶಸ್ವಿಯಾಗಿ ಜಾರಿಗೊಳಿಸಿದ್ದಾರೆ. ಶ್ರೀಸಾಮಾನ್ಯನ ಬಳಿಗೆ ವಿಚಾರಣಾಧೀನ ನ್ಯಾಯಾಲಯ ತರುವುದು ಸೇರಿದಂತೆ ದೇಶಾದ್ಯಂತ ಹಲವು ಕ್ರಮಗಳನ್ನು ಜಾರಿಗೊಳಿಸುವಲ್ಲಿ ನ್ಯಾ. ಚಂದ್ರಚೂಡ್ ಶ್ರಮ, ಸಲಹೆಸೂಚನೆಗಳು ಮಹತ್ವದ್ದಾಗಿವೆ.