ವ್ಯಕ್ತಿ ಸ್ವಾತಂತ್ರ್ಯ ಕುರಿತಂತೆ ನ್ಯಾ. ಡಿ ವೈ ಚಂದ್ರಚೂಡ್‌ ನಿರ್ಧರಿಸಿದ ಐದು ಪ್ರಕರಣಗಳು ಇವು…

ನ್ಯಾ. ಚಂದ್ರಚೂಡ್‌ ಅವರು ಈ ಹಿಂದೆ ನೀಡಿದ ಆದೇಶ ಮತ್ತು ತೀರ್ಪುಗಳನ್ನು ಅವಲೋಕಿಸಿದರೆ ಅವರು ವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಬ್ಯಾಟ್‌ ಮಾಡಿರುವುದೇ ಹೆಚ್ಚು ಎನ್ನುತ್ತಾರೆ ಅಂಕಣಕಾರ ಮುರಳಿ ಕೃಷ್ಣನ್.
Justice Chandrachud
Justice Chandrachud

ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಸುಪ್ರೀಂ ಕೋರ್ಟ್ ಪೀಠ ರಿಪಬ್ಲಿಕ್ ಟಿವಿ ಪ್ರಧಾನ ಸಂಪಾದಕ ಅರ್ನಾಬ್ ಗೋಸ್ವಾ ಮಿ ಅವರಿಗೆ ಜಾಮೀನು ನೀಡಿದೆ. ದಿನವಿಡೀ ನಡೆದ ವಿಚಾರಣೆ ವೇಳೆ ವ್ಯಕ್ತಿ ಸ್ವಾತಂತ್ರ್ಯ ಮತ್ತು ಸಂವಿಧಾನಾತ್ಮಕ ನ್ಯಾಯಾಲಯಗಳನ್ನು ರಕ್ಷಿಸುವ ಜವಾಬ್ದಾರಿಯೊಂದಿಗೆ ನ್ಯಾ. ಚಂದ್ರಚೂಡ್‌ ಅವರು ಕೆಲ ಅಭಿಪ್ರಾಯ ದಾಖಲಿಸಿದರು.

“ಪ್ರಸ್ತುತ ಪ್ರಕರಣದಲ್ಲಿ ಮಧ್ಯಪ್ರವೇಶಿಸದಿದ್ದರೆ ವಿನಾಶದ ಹಾದಿಯಲ್ಲಿ ನಾವು ಮುಂದುವರಿಯುತ್ತೇವೆ. ನನ್ನ ಆಯ್ಕೆಗೇ ಬಿಟ್ಟರೆ, ನಾನು ಆ ವಾಹಿನಿಯನ್ನು (ರಿಪಬ್ಲಿಕ್) ನೋಡುವುದಿಲ್ಲ. ನೀವು ಸೈದ್ಧಾಂತಿಕವಾಗಿ ಭಿನ್ನವಾಗಿರಬಹುದು ಆದರೆ ಸಾಂವಿಧಾನಿಕ ನ್ಯಾಯಾಲಯಗಳು ಅಂತಹ ಸ್ವಾತಂತ್ರ್ಯವನ್ನು ರಕ್ಷಿಸಬೇಕಾಗುತ್ತದೆ. ಇಲ್ಲವಾದರೆ ನಾವು ವಿನಾಶದ ಹಾದಿಯಲ್ಲಿ ಸಾಗುತ್ತೇವೆ.” ಎಂದು ಹೇಳಿದ್ದರು.

ಸೂಕ್ತ ನ್ಯಾಯಾಲಯವನ್ನು ಸಂಪರ್ಕಿಸುವಂತೆ ಸೂಚಿಸಿ ಗೋಸ್ವಾಮಿ ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ತಿರಸ್ಕರಿಸಿದ್ದನ್ನು ಗಮನಿಸಿದ ನ್ಯಾಯಮೂರ್ತಿ ಚಂದ್ರಚೂಡ್‌, ʼತಾಂತ್ರಿಕತೆ ಎಂಬುದು ಯಾರದೇ ಸ್ವಾತಂತ್ರ್ಯವನ್ನು ನಿರಾಕರಿಸುವ ಭೂಮಿಕೆಯಾಗಬಾರದು” ಎಂದು ಪ್ರತಿಕ್ರಿಯಿಸಿದ್ದರು.

ಅರ್ನಾಬ್‌ ಅವರಿಗೆ ಜಾಮೀನು ನೀಡಿದ್ದರಿಂದಾಗಿ ಇಂತದ್ದೇ ಪ್ರಕರಣಗಳಲ್ಲಿ ಅನೇಕ ಆರೋಪಿತ ವ್ಯಕ್ತಿಗಳಿಗೆ ಹಾಗೂ ಸಾಮಾಜಿಕ ಹೋರಾಟಗಾರರಿಗೆ ಜಾಮೀನು ದೊರೆಯದೇ ಇದ್ದುದು ಕಿಡಿ ಹೊತ್ತಿಕೊಳ್ಳಲು ಕಾರಣವಾಯಿತು.

ಆದರೆ ಕುತೂಹಲಕಾರಿ ಸಂಗತಿ ಎಂದರೆ, ನ್ಯಾ. ಚಂದ್ರಚೂಡ್ ಅವರು ತಮ್ಮ ತೀರ್ಪಿಗಳಲ್ಲಿ ವ್ಯಕ್ತಿ ಸ್ವಾತಂತ್ರ್ಯದ ಪರವಾಗಿ ಬ್ಯಾಟ್‌ ಮಾಡಿರುವುದೇ ಹೆಚ್ಚು. ಅವರು ತೀರ್ಪು ನೀಡಿದ ವ್ಯಕ್ತಿ ಸ್ವಾತಂತ್ರ್ಯ ಅಥವಾ ಜಾಮೀನಿಗೆ ಸಂಬಂಧಿಸಿದ ಅಂತಹ ಕೆಲವು ಪ್ರಕರಣಗಳು ಹೀಗಿವೆ:

Bhima Koregaon
Bhima Koregaon

ಭೀಮಾ- ಕೋರೆಗಾಂವ್ ಬಂಧನಗಳು

ಭೀಮಾ ಕೋರೆಗಾಂವ್ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ವಕೀಲರು ಮತ್ತು ಸಾಮಾಜಿಕ ಹೋರಾಟಗಾರರನ್ನು ಬಂಧಿಸಲಾಗಿತ್ತು ಇದರ ತನಿಖೆಗಾಗಿ ವಿಶೇಷ ತನಿಖಾ ತಂಡ ರಚಿಸಬೇಕೆಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ಸೆಪ್ಟೆಂಬರ್‌ 2018ರಲ್ಲಿ ತಿರಸ್ಕರಿಸಿತ್ತು.

ಅಂದಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ದೀಪಕ್ ಮಿಶ್ರಾ ಅವರ ನೇತೃತ್ವದ ಮೂವರು ಸದಸ್ಯರ ಪೀಠ ಈ ತೀರ್ಪು ನೀಡಿತ್ತು. ನ್ಯಾಯಮೂರ್ತಿ ಎ.ಎಂ.ಖಾನ್ವಿಲ್ಕರ್ ಅವರು ತಮ್ಮ ಮತ್ತು ನ್ಯಾಯಮೂರ್ತಿ ಮಿಶ್ರಾ ಅವರ ಪರವಾಗಿ ಬಹುಮತದ ತೀರ್ಪು ನೀಡಿದ್ದರು.

Also Read
ತಡೆಯಾಜ್ಞೆಗಳು ಈ ನೆಲದ ಕಾನೂನಾಗುವುದು ನಮಗೆ ಇಷ್ಟವಿಲ್ಲ: ನ್ಯಾ. ಡಿ ವೈ ಚಂದ್ರಚೂಡ್

ಆದರೆ, ನ್ಯಾಯಪೀಠದ ಮೂರನೇ ನ್ಯಾಯಾಧೀಶರಾಗಿದ್ದ ನ್ಯಾ. ಚಂದ್ರಚೂಡ್ ಅವರು ತೀವ್ರ ಭಿನ್ನಾಭಿಪ್ರಾಯ ದಾಖಲಿಸಿದ್ದರು. ಪ್ರಸಿದ್ಧ ಇತಿಹಾಸಕಾರ್ತಿ ರೋಮಿಲಾ ಥಾಪರ್ ಹಾಗೂ ಇತರ ನಾಲ್ವರು ಹೋರಾಟಗಾರರು ಈ ಅರ್ಜಿ ಸಲ್ಲಿಸಿದ್ದರು. ಮಹಾರಾಷ್ಟ್ರ ಸರ್ಕಾರ ಪ್ರಕರಣದ ಸಿಂಧುತ್ವವನ್ನು ಪ್ರಶ್ನಿಸಿತ್ತು

ಗೋಸ್ವಾಮಿ ಅವರ ಪ್ರಕರಣದಂತೆಯೇ ಈ ಪ್ರಕರಣದಲ್ಲಿಯೂ ನ್ಯಾ. ಚಂದ್ರಚೂಡ್‌ ಅವರು ನಿಜವಾದ ನ್ಯಾಯ ಒದಗಿಸಲು ತಾಂತ್ರಿಕತೆಗಳನ್ನು ಅನುಮತಿಸಲಾಗದು ಎಂದು ಅಭಿಪ್ರಾಯಪಟ್ಟಿದ್ದರು.

ಸಾರ್ವಜನಿಕ ಅಭಿಪ್ರಾಯ ರೂಪಿಸಲು ಎಲೆಕ್ಟ್ರಾನಿಕ್ ಮಾಧ್ಯಮವನ್ನು ಬಳಸಿದ್ದಾರೆ ಎಂದು ಮಹಾರಾಷ್ಟ್ರ ಪೊಲೀಸರ ವಿರುದ್ಧ ಅವರು ಕಿಡಿಕಾರಿದ್ದರು. ಸುಪ್ರೀಂಕೋರ್ಟ್ ಮಧ್ಯಂತರ ಆದೇಶ ಹೊರಡಿಸಿದ ಕೂಡಲೇ ಪುಣೆ ಪೊಲೀಸರು ನಡೆಸಿದ ಪತ್ರಿಕಾಗೋಷ್ಠಿ ಉಲ್ಲೇಖಿಸಿದ್ದ ನ್ಯಾ. ಚಂದ್ರಚೂಡ್ ಅವರು ಇದು ಮಾಹಿತಿಯನ್ನು ಸೋರಿಕೆ ಮಾಡುವ ಪ್ರಯತ್ನ ಎಂದು ಹೇಳಿದ್ದರು. ಜೊತೆಗೆ "ನೆಮ್ಮದಿದಾಯಕವಾದುದಲ್ಲ” ಎಂದು ಪ್ರತಿಕ್ರಿಯಿಸಿದ್ದರು.

ಎಲೆಕ್ಟ್ರಾನಿಕ್‌ ಮಾಧ್ಯಮ ಮತ್ತು ಮಾಧ್ಯಮಗಳ ಪೊಲೀಸ್‌ ಹೇಳಿಕೆಗಳು ಸಾರ್ವಜನಿಕ ಅಭಿಪ್ರಾಯವನ್ನು ಬಿಂಬಿಸುವ ಮಾರ್ಗವಾಗುತ್ತಿವೆ ಎಂದು ಹೇಳಿದ್ದರು. ಇದಲ್ಲದೆ ಆರೋಪಿ ಸುಧಾ ಭಾರದ್ವಾಜ್‌ ಅವರು ಬರೆದಿರುವ ಪತ್ರವನ್ನು ಉಲ್ಲೇಖಿಸಿದ್ದ ನ್ಯಾಯಮೂರ್ತಿಗಳು ಇದನ್ನು ಟಿವಿ ವಾಹಿನಿಗಳಿಗೆ ಸೋರಿಕೆ ಮಾಡಲಾಗಿದೆ. ತನಿಖೆಯ ವಿವರಗಳನ್ನು ಬಹಿರಂಗಪಡಿಸಿರುವುದು ನ್ಯಾಯಯುತ ತನಿಖೆಯ ಮೇಲೆ ಪ್ರಭಾವ ಬೀರುತ್ತದೆ ಎಂದಿದ್ದರು.

ಮಹಾರಾಷ್ಟ್ರ ಪೊಲೀಸರು ನ್ಯಾಯಯುತವಾಗಿ ತನಿಖೆ ನಡೆಸಬಹುದೇ ಎಂಬ ಅನುಮಾನ ಮೂಡಿಸುವ ಮಟ್ಟಿಗೂ ಅವರು ಹೋದರು. 'ಪ್ರತಿರೋಧದ ಧ್ವನಿಗಳು ಜನಪ್ರಿಯವಲ್ಲ ಎಂಬ ಕಾರಣಕ್ಕೆ ಅವುಗಳ ಬಾಯಿ ಮುಚ್ಚಿಸುವುದು ಸರಿಯಲ್ಲ' ಎಂದು ತಿಳಿಸಿ ಎಸ್‌ಐಟಿ ತನಿಖೆಗೆ ಆದೇಶಿಸಿದ್ದರು.

ಹಾದಿಯಾ ಪ್ರಕರಣ

ವ್ಯಕ್ತಿ ಸ್ವಾತಂತ್ರ್ಯದ ಬಗ್ಗೆ ನ್ಯಾ. ಚಂದ್ರಚೂಡ್ ನೀಡಿದ ಮತ್ತೊಂದು ಪ್ರಮುಖ ತೀರ್ಪು ಹಾದಿಯಾ ಪ್ರಕರಣಕ್ಕೆ ಸಂಬಂಧಿಸಿದ್ದು. ಅಂದಿನ ಸಿಜೆಐ ದೀಪಕ್ ಮಿಶ್ರಾ ಮತ್ತು ನ್ಯಾಯಮೂರ್ತಿ ಎ ಎಂ ಖಾನ್ವಿಲ್ಕರ್ ಅವರನ್ನೊಳಗೊಂಡ ನ್ಯಾಯಪೀಠವೇ ಈ ಪ್ರಕರಣವನ್ನೂ ಇತ್ಯರ್ಥಪಡಿಸಿತ್ತು. ಹಾದಿಯಾ ಮತ್ತು ಶಫೀನ್‌ ಜಹಾನ್‌ ವಿವಾಹ ರದ್ದುಗೊಳಿಸಿದ ಕೇರಳ ಹೈಕೋರ್ಟ್‌ ತೀರ್ಪನ್ನು ಅಮಾನ್ಯಗೊಳಿಸಿ ಮೂವರು ನ್ಯಾಯಮೂರ್ತಿಗಳು ಒಮ್ಮತದ ತೀರ್ಪು ಘೋಷಿಸಿದ್ದರು.

ಹಿಂದೂ ಧರ್ಮಕ್ಕೆ ಸೇರಿದ್ದ ಹಾದಿಯಾ ಇಸ್ಲಾಂಗೆ ಮತಾಂತರಗೊಂಡು ಮುಸ್ಲಿಂ ಯುವಕ ಶಫೀನ್‌ ಜಹಾನ್‌ ಅವರನ್ನು ವರಿಸಿದ್ದರು. ಬಲವಂತದಿಂದ ಮುಕ್ತವಾಗಿಲ್ಲ ಎಂದು ಹೇಳಿ ಕೇರಳ ಹೈಕೋರ್ಟ್‌ ಮದುವೆಯನ್ನು ರದ್ದುಪಡಿಸಿತ್ತು. ಹಾದಿಯಾ ತನ್ನ ಹೆತ್ತವರ ವಶದಲ್ಲಿರಬೇಕೆಂದು ಅದು ಆದೇಶಿಸಿತ್ತು.

Also Read
ಅರ್ನಾಬ್‌ಗೆ ಜಾಮೀನು: ನ್ಯಾ.ಚಂದ್ರಚೂಡ್‌ ಅವರ ನೇತೃತ್ವದ ಸುಪ್ರೀಂ ಕೋರ್ಟ್‌ ಪೀಠ ಹೇಳಿದ ಪ್ರಮುಖ ಅಂಶಗಳೇನು?

ನ್ಯಾ. ಚಂದ್ರಚೂಡ್ ಅವರು ಪ್ರತ್ಯೇಕ ತೀರ್ಪು ನೀಡುತ್ತಾ, “ಪ್ರಕರಣದಲ್ಲಿ, ಕೇರಳ ಹೈಕೋರ್ಟ್ ಸಾಂವಿಧಾನಿಕ ನ್ಯಾಯಾಲಯದ ವ್ಯಾಪ್ತಿ ಮೀರಿ ನಡೆದುಕೊಂಡಿದೆ” ಎಂದು ತಿಳಿಸಿದ್ದರು. ಕಾನೂನಾಗಲಿ ಅಥವಾ ನ್ಯಾಯಾಧೀಶರಾಗಲಿ ಪ್ರವೇಶಿಸಲು ಸಾಧ್ಯವಾಗದ ಮಹಿಳೆಯರು ಮತ್ತು ಪುರುಷರಿಗಾಗಿಯೇ ಕಾಯ್ದಿರಿಸಲಾಗಿರುವ ಖಾಸಗಿ ಅವಕಾಶವನ್ನು ಹೈಕೋರ್ಟ್‌ ಅಭಿಪ್ರಾಯಗಳು ಅತಿಕ್ರಮಿಸಿವೆ” ಎಂದು ಅವರು ಹೇಳಿದ್ದರು.

"ಇಪ್ಪತ್ನಾಲ್ಕು ವರ್ಷದ ಹಾದಿಯಾ ದುರ್ಬಲೆ ಮತ್ತು ಅಶಕ್ತೆ, ಆಕೆ ಶೋಷಣೆಗೆ ಒಳಗಾಗಿರುವ ಸಾಧ್ಯತೆ ಇದೆ ಎಂದು ಕೇರಳ ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ. ಆಕೆ ವಯಸ್ಕಳು, ತನ್ನದೇ ಆದ ನಿರ್ಧಾರ ಕೈಗೊಳ್ಳುವಷ್ಟು ಸಾಮರ್ಥ್ಯ ಹೊಂದಿದ್ದಾಳೆ ಎಂಬ ವಾಸ್ತವಾಂಶದ ಬಗ್ಗೆ ಅದು ದೃಷ್ಟಿಹೀನವಾಗಿದೆ. ತನ್ನಿಚ್ಛೆಯಂತೆ ಜೀವನ ನಡೆಸಬಹುದೆಂದು ಸಂವಿಧಾನ ನೀಡಿರುವ ಹಕ್ಕಿಗೆ ಆಕೆ ಅರ್ಹರಾಗಿದ್ದಾರೆ. ಮದುವೆಯಾಗಬೇಕೆ ಅಥವಾ ಬೇಡವೇ ಮತ್ತು ಯಾರನ್ನು ಮದುವೆಯಾಗಬೇಕು ಎಂಬ ಬಗ್ಗೆ ವ್ಯಕ್ತಿಗಳ ಆಯ್ಕೆ ಸರ್ಕಾರದ ನಿಯಂತ್ರಣದ ಹೊರಗೆ ಇರುತ್ತದೆ. ಸಾಂವಿಧಾನಿಕ ಸ್ವಾತಂತ್ರ್ಯ ಎತ್ತಿ ಹಿಡಿಯುವ ನ್ಯಾಯಾಲಯಗಳು ಈ ಸ್ವಾತಂತ್ರ್ಯಗಳನ್ನು ರಕ್ಷಿಸಬೇಕು. ಅಂತಹ ವಿಷಯಗಳಲ್ಲಿ ಸರ್ಕಾರದ ಹಸ್ತಕ್ಷೇಪ ಸ್ವಾತಂತ್ರ್ಯದ ಪ್ರಕ್ರಿಯೆ ಮೇಲೆ ಗಂಭೀರ ಪರಿಣಾಮ ಬೀರುತ್ತದೆ” ಎಂದು ಅಭಿಪ್ರಾಯಪಟ್ಟಿದ್ದರು. ಹೀಗಾಗಿ ಹಾದಿಯಾ ಅವರನ್ನು ಪೋಷಕರ ವಶದಿಂದ ಬಿಡುಗಡೆ ಮಾಡುವಂತೆ ನ್ಯಾಯಾಲಯ ಆದೇಶಿಸಿತ್ತು.

ಅಸಮ ಜಾಮೀನು ಷರತ್ತುಗಳ ಹೇರಿಕೆಗೆ ವಿರೋಧ

ತೀರಾ ಇತ್ತೀಚಿನ ತೀರ್ಪೊಂದರಲ್ಲಿ ನ್ಯಾ. ಚಂದ್ರಚೂಡ್‌ ಅವರು ಕ್ರಿಮಿನಲ್‌ ನ್ಯಾಯ ಜಾರಿಗೆ ತರುವಾಗ ಆರೋಪಿಯ ಹಕ್ಕುಗಳ ಜೊತೆಗೆ ಸಾರ್ವಜನಿಕ ಹಿತಾಸಕ್ತಿಯನ್ನು ಸರಿದೂಗಿ ಜಾಮೀನು ನೀಡಬೇಕು ಎಂದು ಅಭಿಪ್ರಾಯಪಟ್ಟಿದ್ದರು.

ಅಮೆರಿಕ ಗ್ರೀನ್‌ ಕಾರ್ಡ್‌ ಹೊಂದಿದ್ದ ಆರೋಪಿಯೊಬ್ಬರ ಪ್ರಕರಣ ಇದಾಗಿದ್ದು ಅಮೆರಿಕಕ್ಕೆ ಪ್ರಯಾಣಿಸಲು ಅನುಕೂಲವಾಗುವಂತೆ ಜಾಮೀನು ಷರತ್ತುಗಳನ್ನು ಸಡಿಲಿಸಲು ನ್ಯಾಯಾಲಯವನ್ನು ಕೋರಿದ್ದರು. ಭಾರತೀಯ ಪ್ರಜೆಯಾದ ಆರೋಪಿ 1985ರಿಂದ ಅಮೆರಿಕದ ನಿವಾಸಿಯಾಗಿದ್ದರು. ಆಗಾಗ್ಗೆ ಭಾರತಕ್ಕೆ ಬಂದು ಹೋಗುತ್ತಿದ್ದರು. 2020ರ ಫೆಬ್ರವರಿಯಲ್ಲಿ ಭಾರತ ಪ್ರವಾಸದಲ್ಲಿದ್ದಾಗ ಅವರನ್ನು ಬಂಧಿಸಲಾಯಿತು. 2020ರ ಮೇನಲ್ಲಿ ಬಾಂಬೆ ಹೈಕೋರ್ಟ್ ಆರೋಪಿಯ ಪಾಸ್‌ಪೋರ್ಟ್ ಮತ್ತು ಗ್ರೀನ್ ಕಾರ್ಡ್ ಜಪ್ತಿ ಮಾಡಬೇಕು ಮತ್ತು ವಿಚಾರಣಾ ನ್ಯಾಯಾಲಯದ ಪೂರ್ವಾನುಮತಿ ಇಲ್ಲದೆ ಠಾಣೆ ಪೊಲೀಸ್ ಆಯುಕ್ತರ ಅಧಿಕಾರ ವ್ಯಾಪ್ತಿ ಮೀರಿ ಹೊರಗೆ ಹೋಗಬಾರದು ಎಂದು ಷರತ್ತು ವಿಧಿಸಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.

1952ರ ಅಮೆರಿಕ ವಲಸೆ ಮತ್ತು ರಾಷ್ಟ್ರೀಯತೆ ಕಾಯ್ದೆ ಪ್ರಕಾರ ಗ್ರೀನ್ ಕಾರ್ಡ್ ಮರು ಮೌಲ್ಯೀಕರಣಕ್ಕಾಗಿ ಅಲ್ಪಾವಧಿಯ ಅಮೆರಿಕ ಪ್ರಯಾಣ ಕೈಗೊಳ್ಳಬೇಕಿದೆ ಎಂಬುದಾಗಿ ಆರೋಪಿ ಹೈಕೋರ್ಟ್‌ಗೆ ಸೂಚಿಸಿದ್ದರು. ಆದ್ದರಿಂದ, ಮೇನಲ್ಲಿ ಅವರು ಜಾಮೀನು ಷರತ್ತುಗಳನ್ನು ಸಡಿಲಿಸಲು ಕೋರಿದ್ದರು. ಆದರೆ ಅವರ ಮನವಿ ತಿರಸ್ಕೃತಗೊಂಡಿತು.

ನ್ಯಾ. ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಬಾಂಬೆ ಹೈಕೋರ್ಟ್‌ನ ಈ ತೀರ್ಪನ್ನು ಅಲ್ಲಗಳೆದು ಆರೋಪಿಗೆ 8 ವಾರಗಳ ಕಾಲ ಅಮೆರಿಕ ಪ್ರಯಾಣಕ್ಕೆ ಆರೋಪಿಗೆ ಅವಕಾಶ ನೀಡಿತು. ಆರೋಪಿಯ ಉಪಸ್ಥಿತಿ, ಸೂಕ್ತ ತನಿಖೆಯ ಹಾದಿ ಮತ್ತು ಅಂತಿಮವಾಗಿ ನ್ಯಾಯಯುತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳುವ ಅಗತ್ಯಕ್ಕೆ ಅನುಗುಣವಾಗಿರದ ಷರತ್ತುಗಳನ್ನು ಹೇರುವ ಮೂಲಕ ಘನತೆಯಿಂದ ಜೀವಿಸುವ ಮಾನವ ಹಕ್ಕು ಮತ್ತು ಸಾಂವಿಧಾನಿಕ ಸುರಕ್ಷತೆಗಳ ರಕ್ಷಣೆ ಎಂಬುದು ಭ್ರಮೆಯಾಗಬಾರದು. ಷರತ್ತುಗಳನ್ನು ವಿಧಿಸುವ ಉದ್ದೇಶಕ್ಕೆ ಅನುಗುಣವಾದ ಸಂಬಂಧವನ್ನು ನ್ಯಾಯಾಲಯ ವಿಧಿಸುವ ಷರತ್ತುಗಳು ಹೊಂದಿರಬೇಕು” ಎಂದು ಅವರು ಹೇಳಿದರು.

ಕೋವಿಡ್‌ ದೃಢಪಟ್ಟ ಪೋಷಕರನ್ನು ಭೇಟಿಯಾಗಲು ಮಧ್ಯಂತರ ಜಾಮೀನು , ನಿಯಮಿತ ಜಾಮೀನಿಗೆ ನಕಾರ

ನ್ಯಾ. ಚಂದ್ರಚೂಡ್ ನೇತೃತ್ವದ ಪೀಠ ಜುಲೈ 7 ರಂದು ಯುನಿಟೆಕ್ ಪ್ರವರ್ತಕ ಸಂಜಯ್ ಚಂದ್ರ ಅವರಿಗೆ ಒಂದು ತಿಂಗಳ ಕಾಲ ಮಧ್ಯಂತರ ಜಾಮೀನು ನೀಡಿತು. ಆರೋಪಿಗಳ ಪೋಷಕರು ಕೋವಿಡ್‌ಗೆ ತುತ್ತಾಗಿದ್ದಾರೆ ಎಂಬುದನ್ನು ಪರಿಗಣಿಸಿ ಈ ಜಾಮೀನು ಮಂಜೂರು ಮಾಡಲಾಗಿತ್ತು.

ಆದರೂ ಅಕ್ಟೋಬರ್ 30, 2017ರಂದು ಸುಪ್ರೀಂಕೋರ್ಟ್‌ ನೀಡಿದ್ದ ಆದೇಶದಲ್ಲಿ ವಿಧಿಸಲಾದ ಷರತ್ತುಗಳನ್ನು ಪಾಲಿಸದ ಕಾರಣ ಸಂಜಯ್‌ ಚಂದ್ರ ಮತ್ತು ಅಭಯ್‌ ಚಂದ್ರ ಅವರಿಗೆ ನಂತರವೂ ನಿಯಮಿತ ಜಾಮೀನು ನೀಡಲು ನ್ಯಾ. ಚಂದ್ರಚೂಡ್‌ ನಿರಾಕರಿಸಿದರು. ಡಿ. ಡಿಸೆಂಬರ್ 31, 2017 ರ ಒಳಗಾಗಿ ನ್ಯಾಯಾಲಯದ ರಿಜಿಸ್ಟ್ರಿಗೆ ರೂ 750 ಕೋಟಿ ಪಾವತಿಸಿದರೆ ಮಾತ್ರ ಜಾಮೀನು ನೀಡುವುದಾಗಿ ನೀಡಿದ್ದ ತೀರ್ಪು ಅದಾಗಿತ್ತು.

"ಅಕ್ಟೋಬರ್ 30, 2017 ರ ಆದೇಶದಲ್ಲಿ ವಿಧಿಸಲಾದ ಷರತ್ತುಗಳನ್ನು ಪಾಲಿಸದ ಕಾರಣ, ಅರ್ಜಿದಾರರನ್ನು ಬಂಧನದಿಂದ ಬಿಡುಗಡೆ ಮಾಡಬೇಕು ಎಂಬ ಮನವಿಯನ್ನು ನಾವು ಸ್ವೀಕರಿಸಲು ಸಾಧ್ಯವಿಲ್ಲ" ಎಂದು ನ್ಯಾಯಾಲಯ ಹೇಳಿತು. ಇಬ್ಬರು ಸಹೋದರರು ತಾವು 770 ಕೋಟಿ ರೂ.ಗಳಿಗಿಂತ ಹೆಚ್ಚು ಹಣವನ್ನು ಠೇವಣಿ ಇಟ್ಟಿದ್ದೇವೆ. ಆದ್ದರಿಂದ ಜಾಮೀನು ಪಡೆಯಲು ಅರ್ಹರು ಎಂದು ತಮ್ಮ ಜಾಮೀನು ಅರ್ಜಿಯಲ್ಲಿ ಹೇಳಿಕೊಂಡಿದ್ದರು.

ಆದರೂ, ಡಿಸೆಂಬರ್ 31, 2017 ರ ಗಡುವಿನ ನಂತರ ಸಹೋದರರು ಹಣ ಠೇವಣಿ ಮಾಡಿದ್ದಾರೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿತು ಮತ್ತು ನ್ಯಾಯಾಲಯಕ್ಕೆ ಠೇವಣಿ ಇರಿಸಿದ ಒಂದು ಭಾಗವು ಯುನಿಟೆಕ್ ಲಿಮಿಟೆಡ್‌ನ ಆಸ್ತಿ ಮಾರಿದ ಗಳಿಸಿದ ಹಣದಿಂದ ಬಂದಿದೆ ಎಂದು ಅದು ಗಮನಿಸಿತು.

ದೆಹಲಿ ಪೊಲೀಸರ ಆರ್ಥಿಕ ಅಪರಾಧ ಘಟಕ ಸಂಜಯ್‌ ಚಂದ್ರ ಅವರನ್ನು 2017ರ ಮಾರ್ಚ್‌ನಲ್ಲಿ ಬಂಧಿಸಿತ್ತು. ಫ್ಲಾಟ್‌ ಖರೀದಿದಾರರಿಂದ ಪಡೆದ ಹಣವನ್ನು ಗುಳುಂ ಮಾಡಲಾಗಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿರುವುದಾಗಿ ತನಿಖಾಧಿಕಾರಿಗಳು ಹೇಳಿದ್ದರು.

3 ವರ್ಷಗಳ ಜೈಲುವಾಸದ ನಂತರ ಜಾಮೀನು

ಜೈಲಿನಲ್ಲಿ ಮೂರು ವರ್ಷಗಳ ಕಾಲ ಕೊಳೆಯುತ್ತಿದ್ದ ವಿಚಾರಣಾಧೀನ ಕೈದಿಯೊಬ್ಬರಿಗೆ 9 ಜೂನ್‌ 2020ರಂದು ಚಂದ್ರಚೂಡ್ ನೇತೃತ್ವದ ನ್ಯಾಯಪೀಠ ಜಾಮೀನು ನೀಡಿತು. ವ್ಯಕ್ತಿಯ ವಿರುದ್ಧ ಡಕಾಯತಿ, ಅಪಹರಣ ಮತ್ತು ಸ್ವಯಂಪ್ರೇರಿತ ಧಕ್ಕೆ ತಂದ ಆರೋಪವಿತ್ತು. ಆರೋಪಿ ಮೂರು ವರ್ಷಗಳ ಕಾಲ ಬಂಧನದಲ್ಲಿದ್ದು ಅವರ ವಿರುದ್ಧ ಆರೋಪ ನಿಗದಿ ಪಡಿಸಲು ಸಾಧ್ಯವಾಗಿಲ್ಲ ಎಂದು ನ್ಯಾಯಾಲಯ ತಿಳಿಸಿತು. ವಿಚಾರಣಾ ನ್ಯಾಯಾಲಯವು ವಿಧಿಸಬಹುದಾದಂತಹ ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟು ಜಾಮೀನು ನೀಡುವುದು ಸೂಕ್ತ ಎಂಬುದಾಗಿ ನ್ಯಾಯಾಲಯ ಅಭಿಪ್ರಾಯಪಟ್ಟಿತು.

Related Stories

No stories found.
Kannada Bar & Bench
kannada.barandbench.com