Justices B Verappa and M G Uma

 
ಸುದ್ದಿಗಳು

ರಿಜಿಸ್ಟ್ರಾರ್‌ ಜನರಲ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ: ಆರೋಪಿ ರಾಜನ್‌ಗೆ ₹11 ಲಕ್ಷ ದಂಡ ಹಾಕಿದ ಹೈಕೋರ್ಟ್‌

ಎಎಬಿಗೆ ಎರಡು ತಿಂಗಳ ಒಳಗೆ ರಾಜನ್‌ ಅವರು ರೂ. 11 ಲಕ್ಷ ದಂಡ ಪಾವತಿಸಬೇಕು. ಇಲ್ಲವಾದಲ್ಲಿ ದಂಡದ ಮೊತ್ತವನ್ನು ತುಂಬಿಕೊಳ್ಳಲು ಎಎಬಿ ಕಾರ್ಯದರ್ಶಿಯು ರಾಜನ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬಹುದು ಎಂದ ಪೀಠ.

Bar & Bench

ಉಡುಪಿಯ ಕಾರ್ಕಳದ ಜಿತೇಂದ್ರ ಕುಮಾರ್‌ ರಾಜನ್‌ ಅವರು ವಿವೇಚನಾರಹಿತವಾಗಿ ರಿಜಿಸ್ಟ್ರಾರ್‌ ಜನರಲ್‌ ಟಿ ಜಿ ಶಿವಶಂಕರೇಗೌಡ ಅವರ ವಿರುದ್ಧ ದಾಖಲಿಸಿದ್ದ 11 ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ಈಚೆಗೆ ವಜಾ ಮಾಡಿರುವ ಕರ್ನಾಟಕ ಹೈಕೋರ್ಟ್‌ ಪ್ರತಿ ಮನವಿಗೆ ತಲಾ ಒಂದು ಲಕ್ಷ ರೂಪಾಯಿಯಂತೆ 11 ಲಕ್ಷ ರೂಪಾಯಿ ದಂಡ ವಿಧಿಸಿದೆ.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ವೀರಪ್ಪ‌ ಮತ್ತು ಎಂ ಜಿ ಉಮಾ ಅವರು ದೂರುದಾರರು ದಂಡದ ಮೊತ್ತ ಪಾವತಿಸದಿದ್ದರೆ ಅವರ ಯಾವುದೇ ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸದಂತೆ ನಿರ್ದೇಶಿಸಿದೆ.

ಅಲ್ಲದೇ, ನ್ಯಾಯಾಂಗ ನಿಂದನೆ ಕಾಯಿದೆ 1971ರ ಸೆಕ್ಷನ್‌ 2(ಸಿ) ಅಡಿ ಸ್ವಯಂಪ್ರೇರಿತವಾಗಿ ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸುವಂತೆ ನ್ಯಾಯಿಕ ರಿಜಿಸ್ಟ್ರಾರ್‌ ಅವರಿಗೆ ನಿರ್ದೇಶನ ನೀಡಿದೆ.

ಪಾರ್ಟಿ ಇನ್‌ ಪರ್ಸನ್‌ ಆದ ರಾಜನ್‌ ಅವರು ಹಿಂದೆ ಎರಡು ಮನವಿಗಳನ್ನು ಸಲ್ಲಿಸಿದ್ದು, ಅದನ್ನು 2021ರ ಮೇ 19 ರಂದು ಮತ್ತು 2021ರ ಮೇ 16ರಂದು ಏಕಸದಸ್ಯ ಪೀಠವು ವಜಾ ಮಾಡಿದೆ. ಇದಕ್ಕೆ ಸಂಬಂಧಿಸಿದಂತೆ ರಾಜನ್‌ ಅವರು ಯಾವುದೇ ಮನವಿ ಸಲ್ಲಿಸಿದರೂ ನಿರ್ದೇಶನ ನೀಡಿರುವುದನ್ನು ಅದಕ್ಕೆ ಲಗತ್ತಿಸಬೇಕು ಮತ್ತು ರಾಜನ್‌ ಅವರಿಗೆ ರೂ. 1 ಲಕ್ಷ ರೂಪಾಯಿ ಠೇವಣಿ ಇಡಲು ಆದೇಶ ಮಾಡಬೇಕು. ಇಲ್ಲವಾದಲ್ಲಿ ಅವರ ಮನವಿಯನ್ನು ವಿಚಾರಣೆಗೆ ನಿಗದಿಪಡಿಸಬಾರದು ಎಂದು 2021ರ ಮೇ 19ರ ಆದೇಶದಲ್ಲಿ ಹೇಳಿತ್ತು.

ಅರ್ಜಿ ವಜಾ ಮಾಡಿರುವುದಕ್ಕೆ ಸಂಬಂಧಿಸಿದಂತೆ ಮೇಲ್ಮನವಿ ಸಲ್ಲಿಸುವುದಕ್ಕೆ ಬದಲಾಗಿ ರಾಜನ್‌ ಅವರು ರಿಜಿಸ್ಟ್ರಾರ್‌ ಜನರಲ್‌ ಮತ್ತು ನ್ಯಾಯಿಕ ರಿಜಿಸ್ಟ್ರಾರ್‌ ಜನರಲ್‌ ಅವರು ಉದ್ದೇಶಪೂರ್ವಕವಾಗಿ ನ್ಯಾಯಾಲಯದ ಆದೇಶಗಳಿಗೆ ಅಗೌರವ ತೋರಿದ್ದಾರೆ ಎಂದು ಅವರ ವಿರುದ್ಧ 11 ನ್ಯಾಯಾಂಗ ನಿಂದನೆ ಪ್ರಕರಣಗಳನ್ನು ದಾಖಲಿಸಿದ್ದರು.

ಮೊದಲೇ "ಮಾನಸಿಕವಾಗಿ ಘಾಸಿಗೊಂಡಿರುವ ವ್ಯಕ್ತಿಗಳಾದ" ಅರ್ಜಿದಾರರೇ ತಮ್ಮ ಪ್ರಕರಣಗಳನ್ನು ವಾದಿಸುವ (ಪಾರ್ಟಿ ಇನ್‌ ಪರ್ಸನ್‌) ಪ್ರಕರಣಗಳ ಕಷ್ಟದ ಬಗ್ಗೆ ವಿಚಾರಣೆ ವೇಳೆ ನ್ಯಾಯಾಲಯವು ಪ್ರಸ್ತಾಪಿಸಿತು. ಕಾನೂನು ಹಿನ್ನೆಲೆಯಿಂದ ಬಂದಿರದ ಇಂತಹ ವ್ಯಕ್ತಿಗಳೆಡೆಗೆ ನ್ಯಾಯಾಲಯ ಸಹಾನುಭೂತಿ ಹೊಂದಿರಬೇಕಾಗುತ್ತದೆ ಎಂದಿತು. ಪಾರ್ಟಿ-ಇನ್-ಪರ್ಸನ್‌ ಆಗಿ ನ್ಯಾಯಾಲಯದ ಮುಂದೆ ಹಾಜರಾಗುತ್ತಿದ್ದ ಅರ್ಜಿದಾರರ ಬಗ್ಗೆ ಹೈಕೋರ್ಟ್‌ ಸಾಕಷ್ಟು ಸಹಾನುಭೂತಿ ಹೊಂದಿತ್ತು, ಅವರೆಡೆಗೆ ಅಗತ್ಯಮೀರಿದ ಉದಾರತೆಯನ್ನು ಪ್ರದರ್ಶಿಸಿತ್ತು. ಇಷ್ಟಾದರೂ ಅವರು ನ್ಯಾಯಾಲಯದ ಸಲಹೆಯನ್ನು ತೆಗೆದುಕೊಳ್ಳಲಿಲ್ಲ, ಅದರ ಒಳ್ಳೆಯತನವನ್ನು ದೌರ್ಬಲ್ಯವಾಗಿ ಪರಿಗಣಿಸಿದರು ಎಂದು ಹೇಳಿತು.

ದೂರುದಾರರು ಸಲ್ಲಿಸಿರುವ ನ್ಯಾಯಾಂಗ ನಿಂದನೆ ಮನವಿಗಳು ನ್ಯಾಯಿಕ ಅಧಿಕಾರಿಗಳಾದ ರಿಜಿಸ್ಟ್ರಾರ್‌ ಜನರಲ್‌ ಮತ್ತು ನ್ಯಾಯಿಕ ರಿಜಿಸ್ಟ್ರಾರ್‌ ಜನರಲ್‌ ಅವರಿಗೆ ಬೆದರಿಕೆ ಹಾಕುವ ಕ್ರಮವಾಗಿದೆ. “ರಾಜ್ಯದ ನ್ಯಾಯಿಕ ಅಧಿಕಾರಿಗಳನ್ನು ರಕ್ಷಣೆ ಮಾಡಲು ನ್ಯಾಯಾಲಯದ ದೃಷ್ಟಿಯಿಂದ ಇದು ಮಹತ್ವದ ಸಮಯವಾಗಿದ್ದು, ಇಲ್ಲವಾದಲ್ಲಿ ಇಂಥ ಕ್ಷುಲ್ಲಕ ದಾವೆಗಳಿಗೆ ಕೊನೆಯೇ ಇಲ್ಲವಾಗುತ್ತದೆ” ಎಂದು ಪೀಠವು ಅಭಿಪ್ರಾಯಪಟ್ಟಿತು.

ಬೆಂಗಳೂರು ವಕೀಲರ ಸಂಘಕ್ಕೆ ಎರಡು ತಿಂಗಳ ಒಳಗೆ ರಾಜನ್‌ ಅವರು ರೂ. 11 ಲಕ್ಷ ದಂಡವನ್ನು ಪಾವತಿಸಬೇಕು. ಇಲ್ಲವಾದಲ್ಲಿ ದಂಡದ ಮೊತ್ತವನ್ನು ತುಂಬಿಕೊಳ್ಳಲು ಬೆಂಗಳೂರು ವಕೀಲರ ಸಂಘದ ಕಾರ್ಯದರ್ಶಿಯು ರಾಜನ್‌ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆ ಆರಂಭಿಸಬಹುದು ಎಂದು ಪೀಠವು ಹೇಳಿದೆ.

Jitendra Kumar Rajan versus RG.pdf
Preview