ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್‌ 2(ಸಿ)(i) ಸಿಂಧುತ್ವ ಪ್ರಶ್ನೆ: ಎಎಸ್‌ಜಿ ಗೈರು, ವಿಚಾರಣೆ ಮುಂದೂಡಿದ ಹೈಕೋರ್ಟ್‌

ಹಿರಿಯ ಪತ್ರಕರ್ತರಾದ ಕೃಷ್ಣ ಪ್ರಸಾದ್‌, ಅರುಣ್‌ ಶೌರಿ, ಎನ್‌ ರಾಮ್‌ ಮತ್ತು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್‌ 2(ಸಿ)(i)ನ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದಾರೆ.
Karnataka HC, Sr. Journalists N Ram, Arun Shourie, Krishna Prasad, Prashanth Bhushan

Karnataka HC, Sr. Journalists N Ram, Arun Shourie, Krishna Prasad, Prashanth Bhushan

ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ವಿರುದ್ಧವಾಗಿರುವ ನ್ಯಾಯಾಂಗ ನಿಂದನೆ ಕಾಯಿದೆ- 1971ರ ಸೆಕ್ಷನ್‌ 2(ಸಿ)(i) ಅನ್ನು ಅಸಾಂವಿಧಾನಿಕ ಎಂದು ಘೋಷಿಸುವಂತೆ ಕೋರಿ ಸಲ್ಲಿಸಿಲಾಗಿರುವ ಮನವಿಯ ವಿಚಾರಣೆಯನ್ನು ಕರ್ನಾಟಕ ಹೈಕೋರ್ಟ್‌ ಮಂಗಳವಾರ ಮುಂದೂಡಿದೆ.

ಹಿರಿಯ ಪತ್ರಕರ್ತರಾದ ಕೃಷ್ಣ ಪ್ರಸಾದ್‌, ಅರುಣ್‌ ಶೌರಿ, ಎನ್‌ ರಾಮ್‌ ಮತ್ತು ಹಿರಿಯ ವಕೀಲ ಪ್ರಶಾಂತ್‌ ಭೂಷಣ್‌ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮನವಿಯು ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಮತ್ತು ನ್ಯಾಯಮೂರ್ತಿ ಸೂರಜ್‌ ಗೋವಿಂದರಾಜ್‌ ನೇತೃತ್ವದ ವಿಭಾಗೀಯ ಪೀಠದ ಮುಂದೆ ವಿಚಾರಣೆಗೆ ಬಂದಿತ್ತು.

ಈ ಸಂದರ್ಭದಲ್ಲಿ ಪ್ರತಿವಾದಿ ಭಾರತ ಸರ್ಕಾರದ ಪರವಾಗಿ ಹಾಜರಿದ್ದ ವಕೀಲ ಮಧುಕರ್‌ ದೇಶಪಾಂಡೆ ಅವರು “ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಅವರಿಗೆ ವಿವರಣೆ ನೀಡಲಾಗಿದೆ. ಅನಿವಾರ್ಯ ಕಾರಣಗಳಿಂದ ಅವರು ಇಂದು ವಿಚಾರಣೆಗೆ ಹಾಜರಾಗಲು ಸಾಧ್ಯವಾಗಿಲ್ಲ. ನ್ಯಾಯಾಲಯಕ್ಕೆ ಸೂಕ್ತ ಎನ್ನುವ ದಿನವನ್ನು ವಿಚಾರಣೆಗೆ ನಿಗದಿಪಡಿಸಬೇಕು” ಎಂದು ಮನವಿ ಮಾಡಿದರು.

ಇದಕ್ಕೆ ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಶಾದಾನ್‌ ಫರಾಸತ್‌ ಅವರು “ಕಡಿಮೆ ಅವಧಿಯಲ್ಲಿ ಪ್ರಕರಣವನ್ನು ವಿಚಾರಣೆಗೆ ನಿಗದಿಪಡಿಸಬೇಕು. ಕೋರಿಕೆ ಮುಗಿದಿದ್ದು, ಪ್ರಕರಣದ ಅರ್ಹತೆಯ ಆಧಾರದಲ್ಲಿ ನಾವು ವಾದ ಮಂಡಿಸುತ್ತೇವೆ” ಎಂದರು.

ಆಗ ಮುಖ್ಯ ನ್ಯಾಯಮೂರ್ತಿ ರಿತುರಾಜ್‌ ಅವಸ್ಥಿ ಅವರು “ಯಾವ ಆಧಾರದಲ್ಲಿ ನೀವು ಕಾಯಿದೆಯನ್ನು ಪ್ರಶ್ನಿಸುತ್ತಿದ್ದೀರಿ” ಎಂದರು.

ಇದಕ್ಕೆ ಫರಾಸತ್‌ ಅವರು “ನ್ಯಾಯಾಂಗ ನಿಂದನೆ ಕಾಯಿದೆಯ ಸೆಕ್ಷನ್‌ 2(ಸಿ)(i) ನ್ಯಾಯಾಲಯವನ್ನು ವಿವಾದಾತ್ಮಕವಾಗಿಸುವುದಕ್ಕೆ ಸಂಬಂಧಿಸಿದ್ದಾಗಿದೆ. ಕಾಯಿದೆಯ ಸೆಕ್ಷನ್‌ 2(ಸಿ)(2) ರಲ್ಲಿ ಕ್ರಿಮಿನಲ್‌ ನಿಂದನೆ ಮತ್ತು ನ್ಯಾಯದಾನ ಎರಡನ್ನೂ ಸೇರ್ಪಡೆಗೊಳಿಸಲಾಗಿದೆ. ನ್ಯಾಯಾಲಯವನ್ನು ವಿವಾದಾತ್ಮಕಗೊಳಿಸುವುದರ ಜೊತೆಗೆ ನ್ಯಾಯದಾನದಲ್ಲಿ ಮಧ್ಯಪ್ರವೇಶವು ಅಸಂಬದ್ಧ ಮತ್ತು ವ್ಯಾಪ್ತಿ ಮೀರಿದ್ದಾಗಿದೆ. ಹೀಗಾಗಿ, ಆಕ್ಷೇಪಾರ್ಹ ಸೆಕ್ಷನ್‌ ಸಂವಿಧಾನದ 19(1)(ಎ) ವಿಧಿಯನ್ನು ಉಲ್ಲಂಘಿಸುತ್ತದೆ. ಅಲ್ಲದೇ ಸ್ವೇಚ್ಛೆಯಿಂದ ಕೂಡಿದ್ದು, ಸಂವಿಧಾನದ 14ನೇ ವಿಧಿಗೆ ವಿರುದ್ಧವಾಗಿದೆ. ಈ ಸಂಬಂಧ ಮನವಿಯಲ್ಲಿ ಹಲವು ತೀರ್ಪುಗಳನ್ನು ಉಲ್ಲೇಖಿಸಲಾಗಿದೆ” ಎಂದರು. ಇದನ್ನು ಆಲಿಸಿದ ಪೀಠವು ವಿಚಾರಣೆಯನ್ನು ಮುಂದೂಡಿತು.

Also Read
ನ್ಯಾಯಾಂಗ ನಿಂದನೆ ಕಾಯಿದೆ ಸೆಕ್ಷನ್‌ 2(ಸಿ)(ಐ) ಪ್ರಶ್ನಿಸಿ ಅರ್ಜಿ; ಕೇಂದ್ರದ ಪ್ರತಿಕ್ರಿಯೆ ಬಯಸಿದ ರಾಜ್ಯ ಹೈಕೋರ್ಟ್‌

ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣಗಳಲ್ಲಿ ಉನ್ನತ ನ್ಯಾಯಾಲಯಗಳು ಕ್ರಮಕೈಗೊಳ್ಳುವಾಗ ಸ್ವಾಭಾವಿಕ ನ್ಯಾಯ ಮತ್ತು ನಿಷ್ಪಕ್ಷಪಾತ ನಿಲುವಿನ ತತ್ವಗಳನ್ನು ಗಮನದಲ್ಲಿಟ್ಟುಕೊಂಡು ನಿಯಮಗಳು ಮತ್ತು ಮಾರ್ಗಸೂಚಿಗಳನ್ನು ರೂಪಿಸಬೇಕು ಎಂದೂ ವಕೀಲೆ ಮೈತ್ರೇಯಿ ಕೃಷ್ಣನ್‌ ಅವರ ಮೂಲಕ ಸಲ್ಲಿಸಲಾಗಿರುವ ಮನವಿಯಲ್ಲಿ ವಿವರಿಸಲಾಗಿದೆ.

ಬಹುತೇಕ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ತಮ್ಮದೇ ಪ್ರಕರಣಗಳನ್ನು ವಿಚಾರಣೆ ನಡೆಸುತ್ತಾರೆ. ಇದರಿಂದ ಸ್ವಾಭಾವಿಕ ನ್ಯಾಯ ತತ್ವ ಮತ್ತು ನ್ಯಾಯಾಲಯ ಬಯಸುವ ಸಾರ್ವಜನಿಕ ನಂಬಿಕೆಯ ಮೇಲೆ ಪರಿಣಾಮ ಉಂಟು ಮಾಡುತ್ತದೆ. ಇಡೀ ನ್ಯಾಯಾಲಯದ ಪರವಾಗಿ ಪೂರ್ಣಪೀಠದ ಒಪ್ಪಿಗೆ ಪಡೆಯದೇ ನಿರ್ದಿಷ್ಟ ಪೀಠವು ಸ್ವಯಂಪ್ರೇರಿತವಾಗಿ ಕ್ರಮಕೈಗೊಳ್ಳುವ ವಿಚಾರಗಳನ್ನು ಕ್ರಿಮಿನಲ್‌ ನ್ಯಾಯಾಂಗ ನಿಂದನೆ ಪ್ರಕರಣಗಳ ವಿಚಾರಣೆ ನಡೆಸುವಾಗ ಗಮನಹರಿಸಬೇಕಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.

Kannada Bar & Bench
kannada.barandbench.com