High Court of Karnataka
High Court of Karnataka  
ಸುದ್ದಿಗಳು

ಮೂರು ವರ್ಷದ ಕಾನೂನು ಕೋರ್ಸ್: ಅಂತಿಮ ವರ್ಷದ ನಿರ್ಧಾರ ಬೆಸ ಸೆಮಿಸ್ಟರ್‌ಗೆ ಸೀಮಿತಗೊಳಿಸಬಹುದೇ? ನ್ಯಾಯಾಲಯದ‌ ಪ್ರಶ್ನೆ

Bar & Bench

ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ ಅಂತಿಮ ವರ್ಷದ ಪರೀಕ್ಷೆ ನಡೆಸುವ ನಿರ್ಧಾರವನ್ನು ಕೇವಲ ಬೆಸ ಸೆಮಿಸ್ಟರ್‌ ಪರೀಕ್ಷೆಗಳಿಗೆ ಮಾತ್ರವೇ ಸೀಮಿತಗೊಳಿಸಿ ನಿರ್ಧಾರ ಕೈಗೊಳ್ಳಲಾಗುವುದೇ ಎನ್ನುವ ಬಗ್ಗೆ ತಿಳಿಸುವಂತೆ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ (ಕೆಎಸ್‌ಎಲ್‌ಯು) ಶುಕ್ರವಾರ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಐದು ವರ್ಷಗಳ ಎಲ್‌ಎಲ್‌ಬಿ ಕೋರ್ಸ್‌ಗೆ ಸಂಬಂಧಿಸಿದಂತೆ ಕಳೆದ ವಾರ ನ್ಯಾಯಾಲಯ ಇದೇ ತೆರನಾದ ನಿರ್ದೇಶನ ನೀಡಿರುವುದರಿಂದ ನ್ಯಾಯಮೂರ್ತಿ ಆರ್‌ ದೇವದಾಸ್‌ ಅವರಿದ್ದ ಏಕಸದಸ್ಯ ಪೀಠವು ಮೇಲಿನ ಪ್ರಶ್ನೆ ಹಾಕಿದೆ.

“… 09.11.2020 ರಂದು ಪ್ರತಿವಾದಿ ವಿಶ್ವವಿದ್ಯಾಲಯದ ಸುತ್ತೋಲೆಯನ್ನು ನ್ಯಾಯಾಲಯವು ವಜಾಗೊಳಿಸಿದ್ದು, ಅಂತಿಮ ವರ್ಷದ ಕೋರ್ಸ್‌ನ ಬೆಸ ಸೆಮಿಸ್ಟರ್‌ಗೆ ಮಾತ್ರ ಪರೀಕ್ಷೆ ನಡೆಸುವಂತೆ ವಿಶ್ವವಿದ್ಯಾಲಯಕ್ಕೆ ನಿರ್ದೇಶಿಸಿದೆ. ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ನ‌ ವಿದ್ಯಾರ್ಥಿಗಳ ವಿಚಾರದಲ್ಲಿಯೂ ಇದೇ ಆದೇಶವನ್ನು ವಿಶ್ವವಿದ್ಯಾಲಯವು ಒಪ್ಪಿಕೊಳ್ಳುವುದೇ ಎನ್ನುವ ಬಗ್ಗೆ ವಿವಿಯು ನಿರ್ಧರಿಸಬೇಕಿದೆ. ವಿಶ್ವವಿದ್ಯಾಲಯದ ನಿರ್ಧಾರಕ್ಕೆ ಕಾಯುತ್ತಿದ್ದೇವೆ," ಎಂದು ಶುಕ್ರವಾರ ಹೊರಡಿಸಿದ ಆದೇಶದಲ್ಲಿ ನ್ಯಾಯಾಲಯವು ಹೇಳಿದೆ.

ಪ್ರಸಕ್ತ ವರ್ಷ ಕೆಎಸ್‌ಎಲ್‌ಯುನಲ್ಲಿ ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗೆ ಅಂತಿಮ ಸೆಮಿಸ್ಟರ್‌ ಪರೀಕ್ಷೆಗಳನ್ನು ನಡೆಸುವ ನಿರ್ಧಾರ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಪೀಠವು ನಡೆಸಿತು. ಆಫ್‌ಲೈನ್‌ ಮೂಲಕ ಮಧ್ಯಂತರ ಸೆಮಿಸ್ಟರ್‌ ಪರೀಕ್ಷೆಗಳನ್ನು ನಡೆಸುವ ಸಂಬಂಧ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಮತ್ತು ಕೆಎಸ್‌ಎಲ್‌ಯು ಸುತ್ತೋಲೆಯನ್ನು ಕಳೆದ ವಾರ ನ್ಯಾಯಾಲಯ ವಜಾಗೊಳಿಸಿತ್ತು.

ಐದು ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗೆ ಅಳವಡಿಸಿಕೊಂಡಿದ್ದ ವಿಧಾನವನ್ನೇ ಮೂರು ವರ್ಷದ ಎಲ್‌ಎಲ್‌ಬಿ ಕೋರ್ಸ್‌ಗೂ ಅಳವಡಿಸಿಕೊಳ್ಳುವ ಸೀಮಿತ ಮನವಿಯನ್ನು ಅರ್ಜಿಯ ಮೂಲಕ ಮಾಡಿಕೊಳ್ಳುತ್ತಿದ್ದೇವೆ ಎಂದು ಶುಕ್ರವಾರ ಅರ್ಜಿದಾರರ ಪರ ವಕೀಲ ವಿ ಜೆ ಜೋಸೆಫ್‌ ಹೇಳಿದರು.

“ವಿಶ್ವವಿದ್ಯಾಲಯವು ಸ್ವಯಂಪ್ರೇರಿತವಾಗಿ ನಿರ್ಧಾರ ಕೈಗೊಂಡರೆ ಸಮಸ್ಯೆ ಬಗೆಹರಿಯಲಿದೆ… ಅಲ್ಲಿಯವರೆಗೆ ನಾವು ಮನವಿಯನ್ನು ಬಾಕಿ ಇರಿಸುತ್ತೇವೆ. ವಿಶ್ವವಿದ್ಯಾಲಯ ನಿರ್ಧಾರ ಕೈಗೊಳ್ಳುವವರೆಗೆ ಕಾಯೋಣ” ಎಂದು ನ್ಯಾಯಮೂರ್ತಿ ದೇವದಾಸ್‌ ಹೇಳಿದರು.

ಕೋವಿಡ್‌ ಸಾಂಕ್ರಾಮಿತೆಯ ಹಿನ್ನೆಲೆಯಲ್ಲಿ ಮೂರು ವರ್ಷದ ಎಲ್‌ಎಲ್‌ಬಿ ವಿದ್ಯಾರ್ಥಿಗಳಿಗೆ ಅಂತಿಮ ಸೆಮಿಸ್ಟರ್‌ ಪರೀಕ್ಷೆಗಳನ್ನು ಮುಂದೂಡಲಾಗಿದೆ ಎಂದು ಕೆಎಸ್‌ಎಲ್‌ಯು ಪರ ವಕೀಲ ಹೇಳಿದ್ದರು. ಈ ಸಂಬಂಧ ಇಂದು ಸುತ್ತೋಲೆಯನ್ನು ಕೆಎಸ್‌ಎಲ್‌ಯು ಪರ ವಕೀಲರು ಪ್ರಸ್ತುತಪಡಿಸಿದರು. ಫೆಬ್ರುವರಿ 21ಕ್ಕೆ ವಿಚಾರಣೆ ಮುಂದೂಡಲಾಗಿದೆ.