ಮಹಿಳಾ ಆರೋಪಿಗಳ ಬಗ್ಗೆ ಮಾಧ್ಯಮಗಳು ಮಾನಹಾನಿ ವರದಿಗಾರಿಕೆ ಮಾಡುವುದನ್ನು ನಿರ್ಬಂಧಿಸುವ ಸಂಬಂಧ ಕೇಂದ್ರ ಸರ್ಕಾರಕ್ಕೆ ಮಾರ್ಗಸೂಚಿ ರೂಪಿಸಲು ನಿರ್ದೇಶಿಸುವಂತೆ ಕೋರಿರುವ ಅರ್ಜಿಗೆ ಸಂಬಂಧಿಸದಿಂತೆ ಕರ್ನಾಟಕ ಹೈಕೋರ್ಟ್ ಈಚೆಗ ನೋಟಿಸ್ ಜಾರಿ ಮಾಡಿದೆ.
ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಬಂಧಿತಳಾಗಿರುವ ರನ್ಯಾ ರಾವ್ ತಾಯಿ ರೋಹಿಣಿ ಹಾಗೂ ಆಕೆಯ ಮಲತಂದೆ ಕೆ ರಾಮಚಂದ್ರ ರಾವ್ ಅವರು ಮಾಧ್ಯಮಗಳಿಗೆ ನಿರ್ಬಂಧ ವಿಧಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ರನ್ಯಾ ಮತ್ತು ಆಕೆಯ ಕುಟುಂಬ ಸದಸ್ಯರ ವಿರುದ್ಧ ಮಾನಹಾನಿ ಸುದ್ದಿಗಳನ್ನು ಪ್ರಕಟಿಸದಂತೆ ಬೆಂಗಳೂರಿನ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಲಯ ಹಾಗೂ ರಾಮಚಂದ್ರರಾವ್ ಪರವಾಗಿ ಹೈಕೋರ್ಟ್‌ನ ಸಮನ್ವಯ ಪೀಠ ಮಾಡಿರುವ ಆದೇಶ ಪಾಲಿಸುವಂತೆ ಮಾಧ್ಯಮ ಸಂಸ್ಥೆಗಳಿಗೆ ನ್ಯಾ. ನಾಗಪ್ರಸನ್ನ ಅವರು ನಿರ್ದೇಶಿಸಿದ್ದಾರೆ.
“ನ್ಯಾಯಾಲಯಗಳು ಆದೇಶ ಮಾಡಿದಂತೆ ನಿರ್ಬಂಧ ಆದೇಶ ಪಾಲಿಸುವಂತೆ ಈಗಾಗಲೇ ಕೇಂದ್ರ ಸರ್ಕಾರವು ಮಾಧ್ಯಮ ಸಂಸ್ಥೆಗಳಿಗೆ ನಿರ್ದೇಶಿಸಿದೆ. ಕೇಂದ್ರ ಸರ್ಕಾರದ ನಿರ್ದೇಶನದ ಹಿನ್ನೆಲೆಯಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮ ಸೇರಿದಂತೆ ಎಲ್ಲಾ ಮಾಧ್ಯಮ ಸಂಸ್ಥೆಗಳು ನ್ಯಾಯಾಲಯಗಳು ಮಾಡಿರುವ ಪ್ರತಿಬಂಧಕಾದೇಶವನ್ನು ಪಾಲಿಸಬೇಕು” ಎಂದು ಹೈಕೋರ್ಟ್ ಆದೇಶಿಸಿದೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ನ್ಯಾಯಾಲಯಗಳು ಆದೇಶ ಮಾಡಿದಾಗ ಅದನ್ನು ಪಾಲಿಸಬೇಕು ಎಂದು ಕೇಂದ್ರ ಸರ್ಕಾರವು ಮಾಧ್ಯಮ ಸಂಸ್ಥೆಗಳಿಗೆ ನೋಟಿಸ್ ಜಾರಿ ಮಾಡಿದೆ. ತನಿಖಾ ಮಾಹಿತಿಯನ್ನು ಪ್ರಸಾರ ಮಾಡದ ಮಾಧ್ಯಮಗಳು, ಆರೋಪಿಗಳ ವರ್ಚಸ್ಸನ್ನು ಅನುಚಿತವಾಗಿ ಬಿಂಬಿಸಲಾಗುತ್ತಿದೆ. ಹೀಗಾಗಿ, ನಿರ್ಬಂಧ ಆದೇಶ ಮಾಡಬೇಕು” ಎಂದು ಕೋರಿದರು.
ವಾದ ಆಲಿಸಿದ ಪೀಠವು ಪ್ರತಿವಾದಿಗಳಿಗೆ ತುರ್ತು ನೋಟಿಸ್ ಜಾರಿ ಮಾಡಿ, ವಿಚಾರಣೆ ಮುಂದೂಡಿತು.