
ಚಿನ್ನ ಕಳ್ಳ ಸಾಗಣೆಯಲ್ಲಿ ಬಂಧಿತಳಾಗಿರುವ ರನ್ಯಾ ರಾವ್ ಪತಿ ಜತಿನ್ ವಿಜಯಕುಮಾರ್ ಹುಕ್ಕೇರಿ ಬಂಧನದ ಸಂಬಂಧ ಆತುರದಿಂದ ನಡೆದುಕೊಳ್ಳಬಾರದು ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯಕ್ಕೆ ಸೂಚಿಸಿರುವ ಮಧ್ಯಂತರ ಆದೇಶವನ್ನು ಸೋಮವಾರ ವಿಸ್ತರಿಸಿರುವ ಕರ್ನಾಟಕ ಹೈಕೋರ್ಟ್, ಡಿಆರ್‌ಐಗೆ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದೆ.
ಯಾವುದೇ ಆತುರದ ಕ್ರಮಕೈಗೊಳ್ಳುವುದಕ್ಕೂ ಮುನ್ನ ಕಾನೂನು ಪ್ರಕ್ರಿಯೆ ಪಾಲಿಸಲು ಡಿಆರ್‌ಐಗೆ ನಿರ್ದೇಶಿಸಿಬೇಕು ಎಂದು ಜತಿನ್ ವಿಜಯಕುಮಾರ್ ಹುಕ್ಕೇರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಹೇಮಂತ್ ಚಂದನಗೌಡರ್ ಅವರ ಏಕಸದಸ್ಯ ಪೀಠವು ವಿಚಾರಣೆ ನಡೆಸಿತು.
ಡಿಆರ್‌ಐ ಪ್ರತಿನಿಧಿಸಿದ್ದ ವಕೀಲರು “ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಿದರೆ ಗುರುವಾರ ಸಲ್ಲಿಕೆ ಮಾಡಲಾಗುವುದು” ಎಂದರು.
ಆಗ ಪೀಠವು “ನಿಮ್ಮ ಬಳಿ ಮೇಲ್ನೋಟಕ್ಕೆ ಸಾಕ್ಷಿ ಇದ್ದರೆ ನೀವು ಆತುರದ ಕ್ರಮಕೈಗೊಳ್ಳಲು ಮುಂದಾಗಬಹುದು" ಎಂದಿತು.
ಜತಿನ್ ಪರವಾಗಿ ಹಾಜರಾಗಿದ್ದ ಹಿರಿಯ ವಕೀಲ ಪ್ರಭುಲಿಂಗ ನಾವದಗಿ ಅವರು “ರನ್ಯಾ ಅವರನ್ನು ಜತಿನ್ ಕಳೆದ ವರ್ಷ ನ.24ರಂದು ಮದುವೆಯಾಗಿದ್ದಾರೆ. ಡಿಸೆಂಬರ್‌ನಲ್ಲಿ ಇಬ್ಬರ ನಡುವೆ ಕೆಲವೊಂದು ಮನಸ್ತಾಪ ಉಂಟಾಗಿದೆ. ಫೆಬ್ರವರಿಯಲ್ಲಿ ರನ್ಯಾ ಅವರು ಚಿನ್ನ ಕಳ್ಳ ಸಾಗಣೆ ಪ್ರಕರಣದಲ್ಲಿ ಸಿಲುಕಿದ್ದಾರೆ. ಈಗ ಈ ಪ್ರಕರಣದಲ್ಲಿ ಜತಿನ್ ಎಳೆದು ತರಲಾಗಿದೆ. ಜತಿನ್ ಹೆಸರಾಂತ ವಾಸ್ತುಶಿಲ್ಪಿಯಾಗಿದ್ದು, ಈಗ ಏನು ಹೇಳಬೇಕೊ ಗೊತ್ತಾಗುತ್ತಿಲ್ಲ” ಎಂದರು.
ಇದನ್ನು ಆಲಿಸಿದ ಪೀಠವು “ಜತಿನ್ ಮುಗ್ಧರೋ, ಇಲ್ಲವೋ ಅದು ಬೇರೆ ಮಾತು. ಡಿಆರ್‌ಐ ಆಕ್ಷೇಪಣೆ ಸಲ್ಲಿಸಲಿ. ಮಾರ್ಚ್ 24ಕ್ಕೆ ವಿಚಾರಣೆ ನಡೆಸೋಣ” ಎಂದು ಹೇಳಿದ ನ್ಯಾಯಾಲಯ, ಆತುರದ ಕ್ರಮಕೈಗೊಳ್ಳದಂತೆ ಈ ಹಿಂದೆ ಮಾಡಿದ್ದ ಮಧ್ಯಂತರ ಆದೇಶವನ್ನು ವಿಸ್ತರಿಸಿತು.