High Court of Karnataka
High Court of Karnataka 
ಸುದ್ದಿಗಳು

ಹಿರಿಯ ನಾಗರಿಕರಿಗೆ ವೃದ್ಧಾಪ್ಯ ಮಾಸಾಶನ ಹೆಚ್ಚಿಸುವಂತೆ ಅರ್ಜಿ: ಕೇಂದ್ರ, ರಾಜ್ಯ ಸರ್ಕಾರಗಳಿಗೆ ಹೈಕೋರ್ಟ್‌ನಿಂದ ನೋಟಿಸ್

Bar & Bench

ಸುಪ್ರೀಂ ಕೋರ್ಟ್‌ ಡಾ. ಅಶ್ವನಿ ಕುಮಾರ್‌ ವರ್ಸಸ್ ಭಾರತ ಸರ್ಕಾರ ಪ್ರಕರಣದಲ್ಲಿ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ಮಾಸಾಶನ ಹೆಚ್ಚಿಸುವಂತೆ ನಿರ್ದೇಶಿಸಿರುವ ಹಿನ್ನೆಲೆಯಲ್ಲಿ ಈ ಕುರಿತು ಸಲ್ಲಿಸಿರುವ ಮನವಿ ಆಧರಿಸಿ ಕರ್ನಾಟಕ ಹೈಕೋರ್ಟ್ ಈಚೆಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ ನೋಟಿಸ್ ಜಾರಿಗೊಳಿಸಿದೆ. ನವೆಂಬರ್ 19ಕ್ಕೆ ಮುಂದಿನ ವಿಚಾರಣೆ ನಿಗದಿಗೊಳಿಸಿದೆ.

ಹಿರಿಯ ನಾಗರಿಕರ ಅವಶ್ಯಕತೆಗಳನ್ನು ಗುರುತಿಸುವ ಮೂಲಕ ಅವರ ಜೀವನ ಮತ್ತು ಘನತೆ ಕಾಪಾಡುವಂತೆ ಮನವಿ ಮಾಡಲಾಗಿದ್ದು, ಆರೋಗ್ಯ ತಪಾಸಣೆ ಮತ್ತು ಔಷಧಿಗೆ ಅನುಕೂಲ, ಆಹಾರ, ಮಾಸಾಶನ ಮತ್ತು ಸಾಮಾಜಿಕ ಭದ್ರತೆ ಹಕ್ಕು ಭದ್ರಪಡಿಸುವ ಕುರಿತು ಅಖಿಲ ಕರ್ನಾಟಕ ವಯೋವೃದ್ಧರ ಒಕ್ಕೂಟ (ಐಕ್ಯತಾ) ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ ಅವರಿದ್ದ ವಿಭಾಗೀಯ ಪೀಠವು ಹೀಗೆ ಹೇಳಿದೆ.

“ಸಂಧ್ಯಾ ಸುರಕ್ಷಾ ಯೋಜನೆ ಮತ್ತು ಇಂದಿರಾ ಗಾಂಧಿ ರಾಷ್ಟ್ರೀಯ ವೃದ್ಧಾಪ್ಯ ಮಾಸಾಶನ ಯೋಜನೆ (ಹಿರಿಯ ನಾಗರಿಕರಿಗೆ) ಅಡಿ ನೀಡಲಾಗುವ ಹಣವನ್ನು ನಿಯಮಿತವಾಗಿ ಪಾವತಿಸಲಾಗುತ್ತಿಲ್ಲ ಎಂದು ಮನವಿಯಲ್ಲಿ ಅರ್ಜಿದಾರರು ಅಹವಾಲು ವಿವರಿಸಿದ್ದಾರೆ. ಈ ಅಹವಾಲಿನೆಡೆಗೆ ರಾಜ್ಯ ಸರ್ಕಾರ ತುರ್ತಾಗಿ ಗಮನಹರಿಸಬೇಕಿದೆ.”
ಕರ್ನಾಟಕ ಹೈಕೋರ್ಟ್‌

2020ರ ಜನವರಿಯಿಂದಲೂ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನ ಪಾವತಿಯಾಗಿಲ್ಲ. ಬದುಕುಳಿಯಲು ಅಗತ್ಯವಾದ ಔ‍‍ಷಧ ಮತ್ತು ಆಹಾರ ಉತ್ಪನ್ನಗಳನ್ನು ಖರೀದಿಸಲು ಅವರಿಗೆ ಆದಾಯದ ಮೂಲ ಇಲ್ಲವಾಗಿದೆ. ಹಲವು ಸಲಹೆ, ಸೂಚನೆ ಮತ್ತು ಶಿಷ್ಟಾಚಾರಗಳನ್ನು ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಹೊರಡಿಸಿದ್ದರೂ ಹಿರಿಯ ನಾಗರಿಕರಿಗೆ ಸಂಬಂಧಿಸಿದ ಆಹಾರ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆ ಸಮಸ್ಯೆಗಳನ್ನು ಬಗೆಹರಿಸಲು ವಿಫಲವಾಗಿವೆ ಎಂದು ಪಿಐಎಲ್ ನಲ್ಲಿ ವಿವರಿಸಲಾಗಿದೆ.

ಇದು ಸಂವಿಧಾನದ ಮೂಲಭೂತ ಹಕ್ಕುಗಳಾದ 14, 19 ಮತ್ತು 21ನೇ ವಿಧಿ ಹಾಗೂ ಸಂವಿಧಾನದ ನಿರ್ದೇಶಕ ತತ್ವಗಳಾದ 41 ಮತ್ತು 46ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಮನವಿಯಲ್ಲಿ ವಿವರಿಸಲಾಗಿದೆ.