Ola cab and Karnataka HC 
ಸುದ್ದಿಗಳು

ಕಾರು ಚಾಲಕನಿಂದ ಲೈಂಗಿಕ ಕಿರುಕುಳ ಅನುಭವಿಸಿದ ಸಂತ್ರಸ್ತೆಗೆ ₹5 ಲಕ್ಷ ಪರಿಹಾರ ನೀಡಲು ಓಲಾಗೆ ನಿರ್ದೇಶಿಸಿದ ಹೈಕೋರ್ಟ್‌

ಓಲಾ ಮಾತೃ ಸಂಸ್ಥೆ ಎಎನ್‌ಐ ಟೆಕ್ನಾಲಜೀಸ್‌ನ ಆಂತರಿಕ ದೂರುಗಳ ಪರಿಹಾರ ಸಮಿತಿಗೆ ಪೋಷ್‌ ಕಾಯಿದೆ ಅನ್ವಯ ತನಿಖೆ ನಡೆಸಲು ಆದೇಶಿಸಿದೆ. 

Bar & Bench

ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುವ ವೇಳೆ ಚಾಲಕನಿಂದ ಲೈಂಗಿಕ ದೌರ್ಜನ್ಯಕ್ಕೆ ಒಳಗಾದ ಯುವತಿಗೆ ಪರಿಹಾರ ರೂಪದಲ್ಲಿ ₹5 ಲಕ್ಷ ನೀಡುವಂತೆ ಓಲಾ ಕ್ಯಾಬ್‌ ಮಾತೃ ಸಂಸ್ಥೆ ಎಎನ್‌ಐ ಟೆಕ್ನಾಲಜೀಸ್ ಪ್ರೈವೇಟ್‌ ಲಿಮಿಟೆಡ್‌ಗೆ ಕರ್ನಾಟಕ ಹೈಕೋರ್ಟ್ ಸೋಮವಾರ ನಿರ್ದೇಶಿಸಿದೆ.

ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ನಿಷೇಧ, ತಡೆ ಮತ್ತು ಪರಿಹಾರ) ಕಾಯಿದೆ 2013ರ ಸೆಕ್ಷನ್‌ಗಳ ಅನ್ವಯ ಓಲಾ ಕ್ಯಾಬ್ಸ್‌ನ ಮಾತೃಸಂಸ್ಥೆ ಎಎನ್‌ಐ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ನ ಆಂತರಿಕ ದೂರು ಸಮಿತಿಗೆ 2018ರ ಸೆಪ್ಟೆಂಬರ್‌ 30ರಂದು ನೀಡಿರುವ ದೂರಿನ ತನಿಖೆ ನಡೆಸಲು ನಿರ್ದೇಶಿಸುವಂತೆ ಕೋರಿ 22 ವರ್ಷದ ಯುವತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ಕಾಯ್ದಿರಿಸಿದ್ದ ಆದೇಶವನ್ನು ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ಏಕಸದಸ್ಯ ಪೀಠ ಆದೇಶ ಇಂದು ಪ್ರಕಟಿಸಿತು.

₹5 ಲಕ್ಷ ಪರಿಹಾರ ಹಣವಲ್ಲದೆ ಸಂತ್ರಸ್ತೆಗೆ ವ್ಯಾಜ್ಯ ವೆಚ್ಚವಾಗಿ ಹೆಚ್ಚುವರಿ ₹50 ಸಾವಿರ ಮೊತ್ತವನ್ನು ಕಂಪನಿ ಪಾವತಿಸಬೇಕು ಎಂದಿದೆ. ಇದಲ್ಲದೆ ಕರ್ನಾಟಕ ರಾಜ್ಯ ಸಾರಿಗೆ ಪ್ರಾಧಿಕಾರದ ಹೆಚ್ಚುವರಿ ಕಾರ್ಯದರ್ಶಿ ಹಾಗೂ ಕಾರ್ಯದರ್ಶಿಯವರು ವೈಯಕ್ತಿಕವಾಗಿ ₹1 ಲಕ್ಷ ಹಣವನ್ನು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರಕ್ಕೆ ಸಲ್ಲಿಸಬೇಕು ಎಂದು ಆದೇಶದಲ್ಲಿ ಹೇಳಲಾಗಿದೆ. ಮುಂದುವರೆದು, ಸಂತ್ರಸ್ತೆ ನೀಡಿದ ದೂರಿನ ಕುರಿತು ಕಂಪನಿಯ ಆಂತರಿಕ ದೂರುಗಳ ಸಮಿತಿ ವಿಚಾರಣೆ ನಡೆಸಬೇಕು. ಆ ವಿಚಾರಣಾ ಪ್ರಕ್ರಿಯೆಯನ್ನು 90 ದಿನಗಳಲ್ಲಿ ಪೂರ್ಣಗೊಳಿಸಬೇಕು. ಬೆಂಗಳೂರು ನಗರ ಜಿಲ್ಲಾಧಿಕಾರಿ ಸಮಿತಿಯ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಬೇಕು ಎಂದು ಪೀಠ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: 2019ರಲ್ಲಿ ಓಲಾ ಕ್ಯಾಬ್‌ನಲ್ಲಿ ಪ್ರಯಾಣಿಸುವಾಗ ಚಾಲಕನಿಂದ ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದು, ಚಾಲಕನ ವಿರುದ್ಧ ಕ್ರಮ ಜರುಗಿಸುವಂತೆ ಕೋರಿ ಕೋರಿ ಸಂತ್ರಸ್ತೆಯು ಎಎನ್‌ಐ ಟೆಕ್ನಾಲಜೀಸ್‌ಗೆ ದೂರು ನೀಡಿದ್ದರು. ಆಂತರಿಕ ದೂರುಗಳ ಸಮಿತಿಯು ತಮ್ಮ ದೂರನ್ನು ಪರಿಗಣಿಸಿ ಅದರ ಬಗ್ಗೆ ವಿಚಾರಣೆ ನಡೆಸುವ ಅಧಿಕಾರ ಹೊಂದಿಲ್ಲ ಎಂದು ಕಂಪನಿ ಸಂತ್ರಸ್ತೆಗೆ ತಿಳಿಸಿತ್ತು. ಇದನ್ನು ಪ್ರಶ್ನಿಸಿ ಸಂತ್ರಸ್ತೆ ಹೈಕೋರ್ಟ್ ಮೆಟ್ಟಿಲೇರಿದ್ದರು.