ಓಲಾ ಚಾಲಕನಿಂದ ಲೈಂಗಿಕ ಕಿರುಕುಳ: ಸಾರಿಗೆ ಅಧಿಕಾರಿಗಳ ನಿಷ್ಕ್ರಿಯತೆಗೆ ಕೆಂಡಾಮಂಡಲವಾದ ಹೈಕೋರ್ಟ್‌

'ಆಂತರಿಕವಾಗಿ ಏನು ಮಾಡಿದ್ದೀರಿ? ನಿಮ್ಮ ಅಧಿಕಾರಿಗಳು ಸುಮ್ಮನೆ ಕುಳಿತಿದ್ದರೆ? ಕಣ್ಣೊರೆಸುವ ತಂತ್ರ ಅನುಸರಿಸಿದ್ದೀರಿ. ನ್ಯಾಯಾಲಯಕ್ಕೆ ಸಹಾಯ ಮಾಡದ ಪರಿಣಾಮ ಏನಾಗಲಿದೆ ಎಂಬುದಕ್ಕೆ ಅಧಿಕಾರಿಗಳಿಗೆ ಸಿದ್ಧವಾಗಿರಲು ಹೇಳಿ' ಎಂದು ಕಿಡಿಕಾರಿದ ಪೀಠ.
Ola cab and Karnataka HC
Ola cab and Karnataka HC
Published on

ಓಲಾ ಕ್ಯಾಬ್‌ನ ಚಾಲಕ ಲೈಂಗಿಕ ಕಿರುಕುಳ ನೀಡಿದ್ದಕ್ಕೆ ಸಂಬಂಧಿಸಿದಂತೆ ಯುವತಿಯೊಬ್ಬರು ಆರು ವರ್ಷಗಳ ಹಿಂದೆ ದೂರು ನೀಡಿದ್ದರೂ ಈ ಸಂಬಂಧ ಯಾವುದೇ ಕ್ರಮಕೈಗೊಳ್ಳದ ರಾಜ್ಯ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಅಲ್ಲದೇ, ಮುಂದಿನ ಪರಿಣಾಮಗಳನ್ನು ಎದುರಿಸಲು ಸಾರಿಗೆ ಇಲಾಖೆಯ ಅಧಿಕಾರಿಗಳಿಗೆ ಸಿದ್ಧವಾಗಿರುವಂತೆ ಗುಡುಗಿದೆ.

ಕೆಲಸದ ಸ್ಥಳದಲ್ಲಿ ಮಹಿಳೆಯರಿಗೆ ಲೈಂಗಿಕ ಕಿರುಕುಳ (ನಿಷೇಧ, ತಡೆ ಮತ್ತು ಪರಿಹಾರ) ಕಾಯಿದೆ 2013ರ ಸೆಕ್ಷನ್‌ಗಳ ಅನ್ವಯ ಓಲಾ ಕ್ಯಾಬ್ಸ್‌ನ ಮಾತೃಸಂಸ್ಥೆ ಎಎನ್‌ಐ ಟೆಕ್ನಾಲಜೀಸ್‌ ಪ್ರೈವೇಟ್‌ ಲಿಮಿಟೆಡ್‌ನ ಆಂತರಿಕ ದೂರು ಸಮಿತಿಗೆ 2018ರ ಸೆಪ್ಟೆಂಬರ್‌ 30ರಂದು ನೀಡಿರುವ ದೂರಿನ ತನಿಖೆ ನಡೆಸಲು ನಿರ್ದೇಶಿಸುವಂತೆ ಕೋರಿ 22 ವರ್ಷದ ಯುವತಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿ ನ್ಯಾಯಮೂರ್ತಿ ಎಂ ಜಿ ಎಸ್‌ ಕಮಲ್‌ ಅವರ ಏಕಸದಸ್ಯ ಪೀಠ ಆದೇಶ ಕಾಯ್ದಿರಿಸಿತು.

Karnataka HC and Justice M G S Kamal
Karnataka HC and Justice M G S Kamal

ಅಗ್ರಿಗೇಟರ್‌ ನಿಯಮಗಳ ಅನುಪಾಲನೆ ಜವಾಬ್ದಾರಿ ಹೊತ್ತಿರುವ ಸಾರಿಗೆ ಪ್ರಾಧಿಕಾರದ ಅಧಿಕಾರಿಯ ಮಾಹಿತಿಯನ್ನು ಒಳಗೊಂಡು, ಪ್ರಕರಣ ಆರಂಭವಾದಾಗಿನಿಂದ ಇಲ್ಲಿಯವರೆಗೆ ಏನೆಲ್ಲಾ ಕ್ರಮಕೈಗೊಳ್ಳಲಾಗಿದೆ ಎಂಬ ಕುರಿತು ಅಫಿಡವಿಟ್‌ ಸಲ್ಲಿಸುವಂತೆ ಕಳೆದ ವಿಚಾರಣೆಯಲ್ಲಿ ರಾಜ್ಯ ಸರ್ಕಾರಕ್ಕೆ ನ್ಯಾಯಾಲಯವು ಆದೇಶಿಸಿತ್ತು. ಇಂದು ವಿಚಾರಣೆಯ ಸಂದರ್ಭದಲ್ಲಿ ಪ್ರಕರಣ ಕೇಂದ್ರಿತವಾಗಿ ಯಾವುದೇ ಮಾಹಿತಿ ಇಲ್ಲದ ಸರ್ಕಾರದ ಅಫಿಡವಿಟ್‌ಗೆ ನ್ಯಾಯಾಲಯವು ಕೆಂಡಾಮಂಡಲವಾಯಿತು.

“(ಸರ್ಕಾರ ಸಲ್ಲಿಸಿರುವುದು) ಯಾವ ಅಫಿಡವಿಟ್‌ ಇದು. ಈ ಪ್ರಕರಣಕ್ಕೂ ಇದಕ್ಕೂ ಏನು ಸಂಬಂಧ? ಯುವತಿಯ ಮೇಲೆ ಓಲಾ ಚಾಲಕ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆಯನ್ನು ನಿಯಮದ ಪ್ರಕಾರ ಓಲಾ ಸಂಸ್ಥೆಯು ಸರ್ಕಾರದ ಗಮನಕ್ಕೆ ತಂದಿಲ್ಲ ಎಂದು ನೀವು ಸುಮ್ಮನೇ ಕುಳಿತಿದ್ದೀರಾ? ನೀವು ಏನು ಮಾಡಿದ್ದೀರಿ? ಈ ಪ್ರಶ್ನೆ ಕೇಳುತ್ತಿದ್ದೇವೆ ಎಂದರೆ ನಾವು ಉತ್ತಮ ಉತ್ತರದ ನಿರೀಕ್ಷೆಯಲ್ಲಿದ್ದೇವೆ ಎಂದರ್ಥ. ಇದು ಕಣ್ಣೊರೆಸುವ ತಂತ್ರ” ಎಂದು ಮೌಖಿಕವಾಗಿ ಸರ್ಕಾರಕ್ಕೆ ಚಾಟಿ ಬೀಸಿತು.

ಆಗ ಸರ್ಕಾರದ ಪರ ವಕೀಲರು “ಅಗ್ರಿಗೇಟರ್‌ ನಿಯಮಗಳು ಬಂದ ಮೇಲೆ ಏನೆಲ್ಲಾ ಕ್ರಮಕೈಗೊಂಡಿದ್ದೇವೆ ಎಂದು ಹೇಳಿದ್ದೇವೆ. ಈ ಸುರಕ್ಷತಾ ಕ್ರಮಕೈಗೊಂಡಿದ್ದೇವೆ ಎಂಬುದನ್ನು ಪೀಠಕ್ಕೆ ತಿಳಿಸುತ್ತಿದ್ದೇವೆ” ಎಂದು ಸಮಜಾಯಿಷಿ ನೀಡಲು ಮುಂದಾದರು.

ಇದರಿಂದ ಮತ್ತಷ್ಟು ಕೆರಳಿದ ನ್ಯಾಯಾಲಯವು “ಓಲಾಕ್ಕೆ ನೋಟಿಸ್‌ ಜಾರಿ ಮಾಡುವುದಕ್ಕೆ ಮುನ್ನಾ ಏನಾಗಿದೆ ಎಂಬ ಮಾಹಿತಿಯೇ ಇಲ್ಲ. ಆಂತರಿಕವಾಗಿ ಏನು ಮಾಡಿದ್ದೀರಿ? ನಿಮ್ಮ ಅಧಿಕಾರಿಗಳು ಸುಮ್ಮನೆ ಕುಳಿತಿದ್ದರೆ? ನೀವೇನು ಮಾಡಿದ್ದೀರಿ ಎಂಬುದು ತಿಳಿಯುವುದಕ್ಕಾಗಿ ನಿಮಗೆ ಅಫಿಡವಿಟ್‌ ಸಲ್ಲಿಸಿ ಎಂದು ಸೂಚಿಸಿದ್ದು. ನೀವು ಯಾವ ಕ್ರಮಕೈಗೊಂಡಿದ್ದೀರಿ ಎಂಬುದರಲ್ಲಿ ನಮಗೆ ಆಸಕ್ತಿ ಇಲ್ಲ. ಆಂತರಿಕವಾಗಿ ಯಾರನ್ನು ಹೊಣೆಗಾರರನ್ನಾಗಿ ಮಾಡಿದ್ದೀರಿ ಎಂಬುದನ್ನು ತಿಳಿಯುವುದು ನಮ್ಮ ಉದ್ದೇಶವಾಗಿತ್ತು. ನಿಮ್ಮ ಅಫಿಡವಿಟ್‌ನ ನಿರ್ದಿಷ್ಟ ಪ್ಯಾರಾ ಓದಿ ನಿಮ್ಮ ಆತ್ಮಸಾಕ್ಷಿಯನ್ನು ಸಮಾಧಾನಪಡಿಸಿಕೊಳ್ಳಿ. ಅಧಿಕೃತ ಮನವಿ (ಮೆಮೊರಂಡಂ) ಬರುವವರೆಗೆ ನೀವು ಕಾಯತ್ತಿದ್ದೀರಾ. ಹಾಲಿ ಅರ್ಜಿಯು ಅರ್ಧ ದಶಕದಿಂದ ಬಾಕಿ ಇದೆ. ನ್ಯಾಯಾಲಯವು ಹೇಳಿದ್ದರಿಂದ ಈ ದಾಖಲೆಗಳ ಜೊತೆ ಬಂದಿದ್ದೀರಿ. ಆದರೆ ಅವೂ ನಿರಾಶಾದಾಯಕವಾಗಿದೆ.  ಇದರರ್ಥ ನೀವು ಯಾವುದರಲ್ಲೂ ಉತ್ತಮವಲ್ಲ ಎಂಬುದಾಗಿದೆ. ಯಾವುದೇ ಕ್ರಮಕೈಗೊಳ್ಳುವ ಆಸಕ್ತಿಯನ್ನು ನೀವು ಹೊಂದಿಲ್ಲ. ಆಗಲಿ, ನಾವು ಹೇಗೆ ಕ್ರಮ ತೆಗೆದುಕೊಳ್ಳಬೇಕು ಎಂದು ನೋಡುತ್ತೇವೆ. ಇದು ದುರುದೃಷ್ಟಕರ. ಇಂಥ ಪ್ರಕರಣದಲ್ಲಿ ನ್ಯಾಯಾಲಯ ಎಚ್ಚರಿಸಿದರೂ ಇಂಥ ನಿರಾಶಾದಾಯ ಪ್ರತಿಕ್ರಿಯೆ ಮೂಲಕ ಬರುತ್ತೀರಿ. ಇದು ದುರದೃಷ್ಟಕರ. ನೆನಪಿಸಿಕೊಳ್ಳಿ. ಇದು ದಾಖಲೆಗೆ ಹೋಗುತ್ತದೆ. ಅಧಿಕಾರಿಗಳ ಹೆಸರು ಕೊಡಿ” ಎಂದು ಕಟುವಾಗಿ ನುಡಿಯಿತು.

Also Read
[ಓಲಾ ಚಾಲಕನಿಂದ ಲೈಂಗಿಕ ಕಿರುಕುಳ] ಆಂತರಿಕ ದೂರು ಸಮಿತಿ ನಿರಾಸಕ್ತಿಯಿಂದ ನ್ಯಾಯಾಲಯದ ಆತ್ಮಸಾಕ್ಷಿಗೆ ಆಘಾತ: ನ್ಯಾ.ಕಮಲ್

ಆಗ ಸರ್ಕಾರದ ವಕೀಲರು “ಸ್ವಲ್ಪ ಸಮಯ ಕೊಡಬೇಕು” ಎಂದು ಮನವಿ ಮಾಡಿದರು. ಈ ಕೋರಿಕೆಯನ್ನು ಸಾರಾಸಗಟವಾಗಿ ನಿರಾಕರಿಸಿದ ಪೀಠವು “ನಾವು ಮತ್ತೆ ಸಮಯ ನೀಡುವುದಿಲ್ಲ. ಈಗಾಗಲೇ ನಿಮಗೆ ನಾಲ್ಕು ವಾರ ಸಮಯ ನೀಡಿದ್ದೇವೆ. ಅಧಿಕಾರಿಗಳ ಹೆಸರು ಕೊಡಿ” ಎಂದು ಆದೇಶಿಸಿತು. “ಈ ಪ್ರಕರಣದಲ್ಲಿ ನೀವು ಆಕ್ಷೇಪಣೆ ಸಲ್ಲಿಸಿದ್ದೀರಾ? ಅದರ ಅಗತ್ಯವಿಲ್ಲ ಬಿಡಿ. ನಿಮ್ಮ ಅಧಿಕಾರಿಗಳಿಗೆ ನ್ಯಾಯಾಲಯಕ್ಕೆ ಯಾವುದೇ ಸಹಾಯ ಮಾಡಬೇಡಿ ಎಂದು ಹೇಳಿ. ಆಮೇಲೆ ಏನು ಪರಿಣಾಮವಾಗುತ್ತದೆ ಎಂಬುದಕ್ಕೆ ಅಧಿಕಾರಿಗಳಿಗೆ ಸಿದ್ಧವಾಗಿರಲು ಹೇಳಿ” ಎಂದು ಖಡಕ್‌ ಎಚ್ಚರಿಕೆ ನೀಡಿತು.

ಇದಕ್ಕೂ ಮುನ್ನ, ಓಲಾ ಪರವಾಗಿ ಹಿರಿಯ ವಕೀಲ ಧ್ಯಾನ್‌ ಚಿನ್ನಪ್ಪ ಅವರು “ಮಧ್ಯಸ್ಥಿಕೆ ಸಂಸ್ಥೆಯಾದ ಓಲಾ ಏನೆಲ್ಲಾ ಕ್ರಮಕೈಗೊಳ್ಳಬೇಕು ಅದನ್ನು ಕೈಗೊಂಡಿದೆ. ಚಾಲಕನ ವಿರುದ್ಧ ಕ್ರಮವಾಗಿದೆ. ಇಲ್ಲಿ ಚಾಲಕನನ್ನು ಉದ್ಯೋಗಿ ಎಂದು ಪರಿಣಿಸಬಾರು. ಈ ನೆಲೆಯಲ್ಲಿ ಅರ್ಜಿ ವಜಾಕ್ಕೆ ಅರ್ಹವಾಗಿದೆ” ಎಂದರು.

ಅರ್ಜಿದಾರರ ಪರ ವಕೀಲರು “ಹಾಲಿ ಪ್ರಕರಣದಲ್ಲಿ ಆರೋಪಿತ ಚಾಲಕ ಓಲಾ ಫೀಡ್ಸ್‌ ಪ್ರೈ. ಲಿಮೆಟೆಡ್‌ ಹೆಸರಿನಲ್ಲಿ ನೋಂದಾಯಿತವಾಗಿದ್ದ ಕಾರು ಚಾಲನೆ ಮಾಡಿದ್ದಾರೆ. ದೂರು ನೀಡಿದ ನಂತರ ಶಾಸನಬದ್ಧವಾಗಿ ನಮ್ಮನ್ನು ಸಂಪರ್ಕಿಸಿಯೇ ಇಲ್ಲ. ಇಂಥ ಸಂದರ್ಭದಲ್ಲಿ ಓಲಾ ಕೈ ತೊಳೆದುಕೊಳ್ಳುತ್ತದೆ ಎಂದರೆ ಸಾಕಷ್ಟು ಗ್ರಾಹಕರು ಬೇರೆ ದಾರಿ ನೋಡಿಕೊಳ್ಳುತ್ತಾರೆ” ಎಂದು ಆಕ್ಷೇಪಿಸಿದರು. ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಆದೇಶ ಕಾಯ್ದಿರಿಸಿತು.

Kannada Bar & Bench
kannada.barandbench.com