Karnataka HC 
ಸುದ್ದಿಗಳು

ಆನ್‌ಲೈನ್‌ ಜೂಜು, ಬೆಟ್ಟಿಂಗ್‌ ನಿಷೇಧ ಕೋರಿ ಪಿಐಎಲ್‌ ಸಲ್ಲಿಕೆ: ರಾಜ್ಯ ಸರ್ಕಾರದ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್‌

Bar & Bench

ಸೂಕ್ತವಾದ ನಿಯಂತ್ರಣ ಕ್ರಮ ಜಾರಿಗೊಳಿಸುವವರೆಗೆ ಎಲ್ಲಾ ವಿಧದ ಆನ್‌ಲೈನ್‌ ಜೂಜಾಟ ಮತ್ತು ಬೆಟ್ಟಿಂಗ್‌ ಮೇಲೆ ನಿಷೇಧ ಹೇರುವಂತೆ ಕೋರಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಮನವಿಗೆ ಸಂಬಂಧಿಸಿದಂತೆ ಕರ್ನಾಟಕ ಹೈಕೋರ್ಟ್‌ ರಾಜ್ಯ ಸರ್ಕಾರದ ಪ್ರತಿಕ್ರಿಯೆ ಬಯಸಿದ್ದು, ಈ ಸಂಬಂಧ ನೋಟಿಸ್‌ ಜಾರಿಗೊಳಿಸಿದೆ.

ಆನ್‌ಲೈನ್‌ ಜೂಜಾಟ ಮತ್ತು ಆನ್‌ಲೈನ್‌ ಗೇಮ್‌ಗಳ ಮೇಲೆ ನಿಯಂತ್ರಣ ಹೇರುವುದು ಅತ್ಯಗತ್ಯವಾಗಿದ್ದು, ಈ ಸಂಬಂಧ ಯಾವುದೇ ನಿಯಂತ್ರಣ ಕ್ರಮಗಳನ್ನು ರಾಜ್ಯ ಸರ್ಕಾರ ಜಾರಿಗೊಳಿಸಿಲ್ಲ ಎಂದು ಡಿ ಶಾರದಾ ಅವರು ಸಲ್ಲಿಸಿದ್ದ ಪಿಐಎಲ್‌ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್‌ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿದೆ.

ಕೋವಿಡ್‌ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಸಮಾಜದಲ್ಲಿ ಸುಲಭವಾಗಿ ವಂಚನೆಗೊಳಗಾಗುವ ಮತ್ತು ಅಸಹಾಯಕ ಸಮುದಾಯಗಳು ವಿಶೇಷವಾಗಿ ಯುವಕರು ಆನ್‌ಲೈನ್‌ ಜೂಜಾಟ ಮತ್ತು ಬೆಟ್ಟಿಂಗ್‌ಗೆ ಬಲಿಯಾಗುತ್ತಿದ್ದಾರೆ ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿದೆ.

ಆನ್‌ ಲೈನ್‌ ಜೂಜಾಟ ಮತ್ತು ಗೇಮ್‌ಗಳ ಮೇಲೆ ನಿಯಂತ್ರಣ ಹೇರುವ ಸಂಬಂಧ ಇರುವ ಸಾಧ್ಯತೆಗಳನ್ನು ಅನ್ವೇಷಿಸುವಂತೆ ಗುಜರಾತ್‌ ಮತ್ತು ಮದ್ರಾಸ್‌ ಹೈಕೋರ್ಟ್‌ಗಳು ತಮ್ಮ ವ್ಯಾಪ್ತಿಯಲ್ಲಿನ ಶಾಸನಸಭೆಗಳಿಗೆ ಈಚೆಗೆ ನಿರ್ದೇಶಿಸಿರುವುದನ್ನು ಉಲ್ಲೇಖಿಸಲಾಗಿದೆ.

“ಅದಾಗ್ಯೂ, ಕಂಪ್ಯೂಟರ್‌ ಮತ್ತು ಇನ್ನಿತರ ಮಾದರಿಯ ಸಂವಹನ ಸಾಧನ/ಸಂಪನ್ಮೂಲಗಳನ್ನು ಬಳಸಿ ಸೈಬರ್‌ಸ್ಪೇಸ್‌ನಲ್ಲಿ ನಡೆಯುವ ಎಲ್ಲಾ ರೀತಿಯ ಬೆಟ್ಟಿಂಗ್ ಮತ್ತು ಬಾಜಿ ಕಟ್ಟುವುದನ್ನು ನಿಯಂತ್ರಿಸುವುದನ್ನು ಕರ್ನಾಟಕವು ಸಂತೋಷದಿಂದ ಮರೆತುಹೋಗಿದೆ… ಈ ಕಾನೂನುಬಾಹಿರ ಮತ್ತು ಅನಿಯಂತ್ರಿತ ಚಟುವಟಿಕೆಗೆ ಈ ನ್ಯಾಯಾಲಯವು ತಡೆಯೊಡ್ಡದಿದ್ದರೆ ಅಪಾರವಾದ ಅನ್ಯಾಯ ಎಸಗಿದಂತಾಗುತ್ತದೆ. ಇದರ ನಷ್ಟವನ್ನು ಹಣದ ಮೂಲಕ ತುಂಬಿಕೊಳ್ಳಲಾಗದು. ಇದರಿಂದ ಸರ್ಕಾರ ಅಥವಾ ಬೇರೆಯವರಿಗೆ ಯಾವುದೇ ತೆರನಾದ ಸಮಸ್ಯೆ ಅಥವಾ ನಷ್ಟವಾಗುವುದಿಲ್ಲ” ಎಂದು ಮನವಿಯಲ್ಲಿ ವಿವರಿಸಲಾಗಿದೆ.

ಆನ್‌ಲೈನ್‌ ಗೇಮ್‌ ಅಥವಾ ಚಟುವಟಿಕೆಯು ಅದೃಷ್ಟದ ಆಟವೋ ಅಥವಾ ಇದಕ್ಕೆ ವಿಶೇಷ ಪರಿಣತಿಯ ಅಗತ್ಯತೆ ಇದೆಯೋ ಎನ್ನುವುದನ್ನು ಪರಿಶೀಲಿಸಲು ರಾಜ್ಯ ಸರ್ಕಾರದ ಬಳಿ ಯಾವುದೇ ಕಾರ್ಯವಿಧಾನ ಇಲ್ಲ ಎಂದು ಉಲ್ಲೇಖಿಸಲಾಗಿದ್ದು, ರಮ್ಮಿ ಆಟದ ಉದಾಹರಣೆ ನೀಡಲಾಗಿದೆ. ಆಫ್‌ಲೈನ್‌ನಲ್ಲಿ ಆಡುವಾಗ ಇದು ಕೌಶಲ್ಯತೆಯ ಆಟವಾಗಿ ಕಂಡರೆ, ಆನ್‌ಲೈನ್‌ನಲ್ಲೂ ಹಾಗೆಯೇ ಎಂದು ಹೇಳಲಾಗದು ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಸಮಾಜದ ಸಾಮಾಜಿಕ ಮತ್ತು ಆರ್ಥಿಕ ಆರೋಗ್ಯದ ಮೇಲೆ ಪರಿಣಾಮ ಬೀರುವ ಚಟುವಟಿಕೆಯ ಮೇಲೆ ವಿಶೇಷವಾಗಿ ಸಾಂಕ್ರಾಮಿಕತೆಯ ಸಂದರ್ಭದಲ್ಲಿ ನಿಗಾ ಇಡುವಂತೆ ಮತ್ತು ನಿಯಂತ್ರಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸುವ ಅಧಿಕಾರ ನ್ಯಾಯಾಲಯಕ್ಕೆ ಇದೆ ಎಂದು ಪಿಐಎಲ್‌ನಲ್ಲಿ ವಿವರಿಸಲಾಗಿದೆ.

ಎಲ್ಲಾ ವಿಧದ ಆನ್‌ಲೈನ್‌ ಬೆಟ್ಟಿಂಗ್‌ ಮತ್ತು ಜೂಜಾಟಗಳನ್ನು ನಿಷೇಧಿಸುವಂತೆ ಸೆಪ್ಟೆಂಬರ್‌ 12ರಂದು ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಇದಕ್ಕೆ ಸರ್ಕಾರದಿಂದ ಸೂಕ್ತ ಸ್ಪಂದನೆ ದೊರೆಯದಿದ್ದಾಗ ನ್ಯಾಯಾಲಯದ ಕದ ತಟ್ಟಬೇಕಾಯಿತು ಎಂದು ಮನವಿದಾರರ ಪರ ವಕೀಲ ಶ್ರೀಧರ್‌ ಪ್ರಭು ಹೇಳಿದ್ದಾರೆ. ಜನವರಿ 12ಕ್ಕೆ ವಿಚಾರಣೆ ನಿಗದಿಗೊಳಿಸಲಾಗಿದೆ.