ಇಶಾ ಫೌಂಡೇಶನ್‌ನ ಕಾವೇರಿ ಕಾಲಿಂಗ್ ಯೋಜನೆಯು ತನ್ನದಲ್ಲ ಎಂದು ಪ್ರಕಟಿಸುವ ಇರಾದೆಯನ್ನು ರಾಜ್ಯ ಸರ್ಕಾರ ಹೊಂದಿದೆಯೇ ಎಂದು ಕರ್ನಾಟಕ ಹೈಕೋರ್ಟ್ ಸೋಮವಾರ ಪ್ರಶ್ನಿಸಿದೆ.
“ನೀವು ಅಧಿಸೂಚನೆ ಪ್ರಕಟಿಸುವಿರೇ? ಕಾವೇರಿ ಕಾಲಿಂಗ್ ಯೋಜನೆಯು ರಾಜ್ಯ ಸರ್ಕಾರದ್ದಲ್ಲ ಎಂದು ಉಲ್ಲೇಖಿಸಿ. ನೀವು ಹೇಳಿದ್ದೇ ಹೇಳುತ್ತಿರುವ ಹಾಗಿಲ್ಲ, ಸ್ಚಚ್ಛವಾಗಿ ಹೊರಬರಬೇಕು” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕಾ ಮತ್ತು ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ವಿಭಾಗೀಯ ಪೀಠವು ಹೇಳಿದೆ. ಪ್ರಕರಣದ ವಿಚಾರಣೆಯನ್ನು ಡಿಸೆಂಬರ್ 9ಕ್ಕೆ ಮುಂದೂಡಲಾಗಿದೆ.
ಸಾರ್ವಜನಿಕರು ಮತ್ತು ರೈತರ ಸಹಕಾರದಿಂದ ಅರಣ್ಯ ಮತ್ತು ಹಸಿರೀಕರಣವನ್ನು ಹೆಚ್ಚಿಸುವ ಉದ್ದೇಶದಿಂದ ಕೃಷಿ ಅರಣ್ಯ ಪ್ರೋತ್ಸಾಹ ಯೋಜನೆಯನ್ನು ಜಾರಿಗೊಳಿಸಲು ಅರಣ್ಯ ಇಲಾಖೆ ಮುಂದಾಗಿತ್ತು. ಕಾವೇರಿ ಕಾಲಿಂಗ್ ಯೋಜನೆಯ ಮೂಲಕ ಇಶಾ ಫೌಂಡೇಶನ್ ಯೋಜನೆ ಜಾರಿಗೊಳಿಸುತ್ತಿದೆ ಎನ್ನುವುದು ತಿಳಿದ ಬಳಿಕ ನ್ಯಾಯಾಲಯವು ಮೇಲಿನ ಪ್ರಶ್ನೆ ಹಾಕಿತು. ಇದೇ ವೇಳೆ ಈ ಕುರಿತು ಸರ್ಕಾರ ಹೊರಡಿಸಿರುವ ಆದೇಶದ ಬಗ್ಗೆ ಪೀಠವು ರಾಜ್ಯ ಸರ್ಕಾರವನ್ನು ಪ್ರಶ್ನಿಸಿತು.
ಸಾರ್ವಜನಿಕರಿಂದ ಯೋಜನೆಗೆ ಹಣ ಸಂಗ್ರಹಿಸುವುದರಿಂದ ಹಿಂದೆ ಸರಿಯುವಂತೆ ಸೂಚನೆ ನೀಡುವಂತೆ ಕೋರಿ ಸಲ್ಲಿಸಲಾಗಿದ್ದ ಸ್ವಯಂ ಪ್ರೇರಿತ ಮನವಿಯ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.
ನದಿ ಪುನರುಜ್ಜೀನ ಯೋಜನೆಯ ಉದ್ದೇಶಗಳಲ್ಲಿ ಒಂದಾಗಿದ್ದು, ಅದನ್ನು ಸರ್ಕಾರ ಜಾರಿಗೊಳಿಸುತ್ತಿದೆ ಎಂದು ಅಮಿಕಸ್ ಕ್ಯೂರಿ ವಕೀಲೆ ವಿದ್ಯುಲ್ಲತಾ ಅವರು ಪೀಠಕ್ಕೆ ವಿವರಿಸಿದ ಬಳಿಕ ನ್ಯಾಯಾಲಯವು ಮೇಲಿನ ವಿಚಾರಗಳನ್ನು ಪ್ರಸ್ತಾಪಿಸಿತು. ವಾರ್ಷಿಕ 8.40 ಕೋಟಿ ರೂಪಾಯಿಯಂತೆ 10 ವರ್ಷಗಳ ಕಾಲ ವಿಸ್ತರಿಸಿರುವ ಯೋಜನೆ ಇದಾಗಿದೆ ಎಂದು ಪೀಠಕ್ಕೆ ವಿವರಿಸಲಾಯಿತು. ಆದರೆ, ಯೋಜನೆಯಲ್ಲಿ ಎಲ್ಲಿಯೂ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸುವ ಬಗ್ಗೆ ಉಲ್ಲೇಖಿಸದೆ ಇರುವ ಬಗ್ಗೆ ಅವರು ಪೀಠಕ್ಕೆ ಮಾಹಿತಿ ನೀಡಿದರು. ಹಾಗಾಗಿ, ಹಣ ಸಂಗ್ರಹ ಮಾಡುವುದರ ಕ್ರಮಬದ್ಧತೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದರು.
ಇದೇ ವೇಳೆ, ಕಾವೇರಿ ಕಾಲಿಂಗ್ ಯೋಜನೆಯನ್ನು ದೇಶಾದ್ಯಂತ ವಿಸ್ತರಿಸಿರುವುದರಿಂದ ವಿದ್ಯುಲತಾ ಅವರು ಭಾರತ ಸರ್ಕಾರವನ್ನು ಪ್ರಕರಣದಲ್ಲಿ ಸೇರ್ಪಡೆಗೊಳಿಸುವಂತೆ ಕೋರಿದರು.