ತುಮಕೂರು ಜಿಲ್ಲೆಯ ಮಧುಗಿರಿ ತಾಲ್ಲೂಕಿನ ಜನಕಲೋಟಿ ಗ್ರಾಮದಲ್ಲಿನ ರೈತರೊಬ್ಬರ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಸೋಡಿಯಂ ಬಳಸಿ ವಿಜ್ಞಾನ ಪ್ರಯೋಗ ನಡೆಸಿದ ಆರೋಪಕ್ಕೆ ಸಂಬಂಧಿಸಿದಂತೆ ಯೂ–ಟ್ಯೂಬರ್ ಹಾಗೂ ಡ್ರೋನ್ ಪ್ರತಾಪ್ ಅಲಿಯಾಸ್ ಎನ್ ಎಂ ಪ್ರತಾಪ್ ವಿರುದ್ಧ ದಾಖಲಾಗಿದ್ದ ಕ್ರಿಮಿನಲ್ ಪ್ರಕರಣವನ್ನು ಕರ್ನಾಟಕ ಹೈಕೋರ್ಟ್ ಈಚೆಗೆ ರದ್ದುಪಡಿಸಿದೆ.
ಪ್ರಕರಣ ರದ್ದತಿ ಕೋರಿ ಪ್ರತಾಪ್ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಏಕಸದಸ್ಯ ಪೀಠ ಪುರಸ್ಕರಿಸಿದೆ.
"ಪ್ರತಾಪ್ ಕೃತ್ಯವನ್ನು ಈ ನ್ಯಾಯಾಲಯ ಸಮರ್ಥಿಸುವುದಾಗಲಿ ಅಥವಾ ಪ್ರಶಂಸಿಸುವುದಾಗಲಿ ಇಲ್ಲ. ಆದರೆ, ವಾಸ್ತವವಾಗಿ ಅದು ದುರುದ್ದೇಶಪೂರಿತ ಕ್ರಮವಲ್ಲ; ಬದಲಾಗಿ ಪ್ರತಾಪ್ ನಡೆಸಿರುವುದು ಕೇವಲ ಶೈಕ್ಷಣಿಕ ಉದ್ದೇಶದ ಕ್ರಮವಾಗಿದೆ. ಅಂತಹ ಕ್ರಮಕ್ಕಾಗಿ ಆತ ತನಿಖೆ ಹಾಗೂ ಆ ಬಳಿಕದ ಕ್ರಿಮಿನಲ್ ವಿಚಾರಣೆಯ ಅವಮಾನವನ್ನು ಎದುರಿಸುವ ಅಗತ್ಯವಿಲ್ಲ" ಎಂದು ನ್ಯಾಯಾಲಯ ಹೇಳಿದೆ.
"ಅರ್ಜಿದಾರರು ಪ್ರಯೋಗವನ್ನು ನಡೆಸಿದ ರೀತಿಯನ್ನು ಈ ನ್ಯಾಯಾಲಯ ಸಮರ್ಥಿಸುವುದಿಲ್ಲವಾದರೂ, ಸೆಕ್ಷನ್ 3ರ ಅಡಿಯಲ್ಲಿ ಅಗತ್ಯವಾಗಿರುವಂತಹ ಯಾವುದೇ ದುರುದ್ದೇಶವನ್ನು ಪ್ರತಾಪ್ ವಿರುದ್ಧ ಸಾಬೀತುಪಡಿಸಲು ಸಾಧ್ಯವಾಗಿಲ್ಲ" ಎಂದು ನ್ಯಾಯಾಲಯ ಹೇಳಿದೆ.
ಪ್ರಕರಣದ ಹಿನ್ನೆಲೆ: ತುಮಕೂರು ಜಿಲ್ಲೆಯ ಮಧುಗಿರಿಯ ಐ ಡಿ ಹೋಬಳಿಯ ಜನಕಲೋಟಿ ಗ್ರಾಮದಲ್ಲಿನ ಶ್ರೀರಾಯರ ಬೃಂದಾವನ ಫಾರ್ಮ್ಸ್ ಜಮೀನಿನಲ್ಲಿರುವ ಕೃಷಿ ಹೊಂಡದಲ್ಲಿ ಪ್ರತಾಪ್ ಮತ್ತು ಆತನ ಸಹಾಯಕರು ಕಾರಿನಲ್ಲಿ ಬಂದು ಯಾವುದೋ ಸ್ಫೋಟಕವನ್ನು ಪ್ಲಾಸ್ಟಿಕ್ ಕವರ್‌ನಲ್ಲಿ ಉಂಡೆ ಮಾಡಿ ಹೊಂಡಕ್ಕೆ ಎಸೆದಿದ್ದಾರೆ. ಇದರಿಂದ ಸ್ಫೋಟಕ ವಸ್ತು ಜನರು ಭಯಬೀಳುವಂತೆ ಭಯಾನಕವಾಗಿ ಸಿಡಿದಿದ್ದು, ಕೃಷಿ ಹೊಂಡದ ನೀರು ಹೊರಗೆ ಚಿಮ್ಮಿದೆ. ಈ ಸಂದರ್ಭದಲ್ಲಿ ಪ್ರತಾಪ್ ಕೈಗಳಿಗೂ ಗಾಯಗಳಾಗಿದ್ದವು ಎನ್ನಲಾಗಿದೆ. ಮಾನವ ಜೀವಕ್ಕೆ ಮತ್ತು ಆಸ್ತಿ-ಪಾಸ್ತಿಗೆ ಹಾನಿಯಾಗುವಂತೆ ಶ್ರೀ ರಾಯರ ಬೃಂದಾವನ ಫಾರ್ಮ್ಸ್ ಕೃಷಿ ಹೊಂಡದ ನೀರಿನಲ್ಲಿ ಸ್ಫೋಟಕ ಸಿಡಿಸಿದ ಡ್ರೋನ್ ಪ್ರತಾಪ್, ಆತನ ಸಹಾಯಕರು ಹಾಗೂ ಫಾರ್ಮ್ಸ್ ಮಾಲೀಕ ಜಿತೇಂದ್ರ ಜೈನ್ ವಿರುದ್ಧ ಕ್ರಮಕೈಗೊಳ್ಳುವಂತೆ ಪೊಲೀಸ್ ಇಲಾಖೆಯ ಗುಪ್ತಚರ ವಿಭಾಗದ ಗೋಪಾಲಕೃಷ್ಣ ನೀಡಿದ ದೂರಿನ ಅನ್ವಯ 2024ರ ಡಿಸೆಂಬರ್ 12ರಂದು ಮಧುಗಿರಿ ತಾಲ್ಲೂಕಿನ ಮಿಡಿಗೇಶಿ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿತ್ತು.
ಪ್ರತಾಪ್, ಅನಾಮಿಕರೊಬ್ಬರು ಹಾಗೂ ಜಿತೇಂದ್ರ ಜೈನ್ ವಿರುದ್ಧ ಸ್ಫೋಟಕ ವಸ್ತುಗಳ ಕಾಯಿದೆ ಸೆಕ್ಷನ್ 3, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್ 288 (ಮನುಷ್ಯರ ಬದುಕಿಗೆ ಎರವಾಗುವ ಸ್ಫೋಟಕವನ್ನು ಅಜಾಗರೂಕತೆಯಿಂದ ಬಳಸುವುದು) ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದನ್ನು ಈಗ ನ್ಯಾಯಾಲಯ ವಜಾಗೊಳಿಸಿದೆ.