ಸುದ್ದಿಗಳು

ಕೋವಿಡ್ ಲಸಿಕೆಯ ಎರಡನೇ ಡೋಸ್ ಹೇಗೆ ಹೊಂದಿಸುತ್ತೀರಿ ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್ ಪ್ರಶ್ನೆ

ಸಕಾಲದಲ್ಲಿ ಲಸಿಕೆ ಹಾಕುವ ಸಲುವಾಗಿ ಎರಡನೇ ಡೋಸ್ ಲಸಿಕೆಗಳಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಎ ಎಸ್ ಓಕಾ ಮತ್ತು ಅರವಿಂದ್ ಕುಮಾರ್ ನೇತೃತ್ವದ ಪೀಠ ತಿಳಿಸಿತು.

Bar & Bench

ರಾಜ್ಯದಲ್ಲಿ 1.60 ಕೋಟಿ ಮಂದಿಗೆ ಕೋವಿಡ್‌ ಲಸಿಕೆಯ ಎರಡನೇ ಡೋಸ್‌ ನೀಡಬೇಕಿದ್ದು ಅಷ್ಟು ಲಸಿಕೆಯನ್ನು ಹೇಗೆ ಹೊಂದಿಸಲಾಗುತ್ತದೆ ಎಂಬ ಕುರಿತು ಮಾಹಿತಿ ನೀಡುವಂತೆ ಕರ್ನಾಟಕ ಹೈಕೋರ್ಟ್‌ ಶುಕ್ರವಾರ ರಾಜ್ಯ ಸರ್ಕಾರವನ್ನು ಪ್ರಶ್ನಿಸಿದೆ.

ಅಮಿಕಸ್‌ ಕ್ಯೂರಿ (ನ್ಯಾಯಾಲಯಕ್ಕೆ ಸಹಕರಿಸುವ ವಕೀಲ) ವಿಕ್ರಂ ಹುಯಿಲ ಗೋಳ ಅವರು ಸಲ್ಲಸಿದ ವರದಿ ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಎ ಎಸ್‌ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ನೇತೃತ್ವದ ಪೀಠ, ಸಕಾಲದಲ್ಲಿ ಲಸಿಕೆ ಹಾಕುವ ಸಲುವಾಗಿ ಎರಡನೇ ಡೋಸ್‌ ಲಸಿಕೆಗಳಿಗಾಗಿ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ತಿಳಿಸಿತು.

ಜುಲೈ 8ರಂದು ಸರ್ಕಾರ ನೀಡಿರುವ ಕೋವಿಡ್‌ ಮಾಹಿತಿ ಪ್ರಕಾರ ಜುಲೈ- ಆಗಸ್ಟ್‌ ತಿಂಗಳಲ್ಲಿ 1,60,25,665 ಮಂದಿಗೆ ಎರಡನೇ ಡೋಸ್ ಲಸಿಕೆ ಅಗತ್ಯವಿದೆ. ಏಕೆಂದರೆ 2,04,62,938 ಮಂದಿ ಏಪ್ರಿಲ್‌ನಲ್ಲಿ ಮೊದಲ ಡೋಸ್‌ ಪಡೆದಿದ್ದಾರೆ. ಮೇ ತಿಂಗಳಲ್ಲಿ ಕೇವಲ 44,37,273 ಮಂದಿಗೆ ಮಾತ್ರ ಎರಡನೇ ಡೋಸ್‌ ನೀಡಲಾಗಿದೆ. ಸರ್ಕಾರಿ ಮತ್ತು ಖಾಸಗಿ ಕೋಟಾ ಮೂಲಕ ಕೇಂದ್ರ ಸರ್ಕಾರ 49.77 ಲಕ್ಷ ಡೋಸ್ ಕೋವಿಶೀಲ್ಡ್ ಮತ್ತು 10.2 ಲಕ್ಷ ಕೋವಾಕ್ಸಿನ್ ಡೋಸ್‌ಗಳನ್ನು ಜುಲೈನಲ್ಲಿ ನೀಡಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ರಾಜ್ಯದಲ್ಲಿ ಲಸಿಕೆ ಕೊರತೆ ಇಲ್ಲ ಎಂಬ ಮಾಹಿತಿ ನೀಡುತ್ತಾ, ಹೆಚ್ಚುವರಿ ಅಡ್ವೊಕೇಟ್‌ ಜನರಲ್‌ ಧ್ಯಾನ್‌ ಚಿನ್ನಪ್ಪ ಅವರು ಸದ್ಯ 6.72 ಲಕ್ಷ ಕೋವಿಶೀಲ್ಡ್‌ ಮತ್ತು 2.3 ಲಕ್ಷ ಕೋವ್ಯಾಕ್ಸಿನ್‌ ಡೋಸ್‌ ಲಭ್ಯವಿದೆ ಎಂದರು.

ವಿಚಾರಣೆ ವೇಳೆ ಕರ್ನಾಟಕ ಕಾನೂನು ಸೇವೆಗಳ ಪ್ರಾಧಿಕಾರದ ಪರ ವಕೀಲರು ಪ್ರಾಧಿಕಾರದ ವರದಿಯೊಂದರ ಪ್ರಕಾರ ಕೆಲ ಮಕ್ಕಳು ಅದರಲ್ಲಿಯೂ ಕಟ್ಟಡ ಕಾರ್ಮಿಕರ ಮಕ್ಕಳು ಕೋವಿಡ್‌ ಕಾರಣದಿಂದ ನಿಯಮಿತವಾಗಿ ಪಡೆಯಬೇಕಿದ್ದ ರೋಗ ನಿರೋಧಕ ಲಸಿಕೆಗಳನ್ನು ಪಡೆದಿಲ್ಲ ಎಂದು ತಿಳಿಸಿದರು. ಆಗ ನ್ಯಾಯಾಲಯ ಪ್ರಾಧಿಕಾರದ ಶಿಫಾರಸುಗಳನ್ನು ಪರಿಶೀಲಿಸುವಂತೆ ಸರ್ಕಾರಕ್ಕೆ ಸೂಚಿಸಿತು.

ಅಲ್ಲದೆ ಕೋವಿಡ್‌ ಮುಂಚೂಣಿ ಕಾರ್ಯಕರ್ತರ ಕುಟುಂಬದ ಸದಸ್ಯರಿಗೆ ಆದ್ಯತೆ ಮೇರೆಗೆ ಲಸಿಕೆ ನೀಡುವ ಬಗ್ಗೆ ಸರ್ಕಾರ ಪ್ರತಿಕ್ರಿಯೆ ಸಲ್ಲಿಸಬೇಕು. ಚಾಮರಾಜನಗರ ಆಮ್ಲಜನಕ ಕೊರತೆ ದುರ್ಘಟನೆಯಲ್ಲಿ ಮೃತಪಟ್ಟ ಕುಟುಂಬದವರಿಗೆ ಪರಿಹಾರ ಧನ ಹೆಚ್ಚಿಸುವ ಸಂಬಂಧ ಸಚಿವ ಸಂಪುಟಲ್ಲಿ ನಿರ್ಣಯ ಕೈಗೊಂಡು ಮಾಹಿತಿ ನೀಡಬೇಕು ಎಂದು ಸೂಚಿಸಿದ ನ್ಯಾಯಾಲಯ ವಿಚಾರಣೆಯನ್ನು ಜುಲೈ 16ಕ್ಕೆ ಮುಂದೂಡಿತು.