ಸುದ್ದಿಗಳು

[ಬ್ರೇಕಿಂಗ್] ರೈತ ವಿರೋಧಿ ಟ್ವೀಟ್ ಮಾಡಿದ್ದ ನಟಿ ಕಂಗನಾ ವಿಚಾರಣೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಕಾರ

ಕಳೆದ ಅಕ್ಟೋಬರ್ 9ರಂದು ಬೆಂಗಳೂರಿನ ಜೆಎಂಎಫ್‌ಸಿ ನ್ಯಾಯಾಲಯ ರನೌತ್ ವಿರುದ್ಧ ಎಫ್ಐಆರ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿತ್ತು.

Bar & Bench

ರೈತರ ಪ್ರತಿಭಟನೆ ಕುರಿತು ಅವಹೇಳನಕಾರಿ ಟ್ವೀಟ್ ಮಾಡಿರುವ ಬಾಲಿವುಡ್ ನಟಿ ಕಂಗನಾ ರನೌತ್ ವಿರುದ್ಧದ ವಿಚಾರಣೆಗೆ ತಡೆ ನೀಡಲು ಕರ್ನಾಟಕ ಹೈಕೋರ್ಟ್ ಮಂಗಳವಾರ ನಿರಾಕರಿಸಿದೆ.

ವಿಚಾರಣೆ ವೇಳೆ ರನೌತ್‌ ಪರ ಹಾಜರಾದ ರಿಜ್ವಾನ್ ಸಿದ್ದಿಕಿ ನಟಿ ವಿರುದ್ಧದ ವಿಚಾರಣೆ ತಡೆಯಲು ಕೋರಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಪೀಠ “ಮೊದಲು ನೀವು ಕಚೇರಿ ಆಕ್ಷೇಪಣೆ ಸಲ್ಲಿಸಿ. ನಂತರವಷ್ಟೇ ನಿಮ್ಮ ವಾದ ಪರಿಗಣಿಸಬಹುದು” ಎಂದರು. ಇದಕ್ಕಾಗಿ ಕಂಗನಾ ಅವರಿಗೆ ಒಂದು ವಾರಗಳ ಕಾಲ ಸಮಯಾವಕಾಶ ನೀಡಿದ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಅವರು ಪ್ರಕರಣವನ್ನು ಮಾರ್ಚ್‌ 18ಕ್ಕೆ ಮುಂದೂಡಿದ್ದಾರೆ.

ಕಳೆದ ಅಕ್ಟೋಬರ್‌ ಬೆಂಗಳೂರಿನ ಪ್ರಥಮ ದರ್ಜೆ ಜೆಎಂಎಫ್‌ಸಿ ನ್ಯಾಯಾಲಯ ರನೌತ್‌ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಪೊಲೀಸರಿಗೆ ಸೂಚಿಸಿತ್ತು. ಸೆಪ್ಟೆಂಬರ್‌ 21ರಂದು ಕಂಗನಾ “ಕೃಷಿ ಕಾಯಿದೆಗಳ ಬಗ್ಗೆ ತಪ್ಪು ಮಾಹಿತಿಯನ್ನು ನೀಡುತ್ತಿರುವ ಜನರೇ ಈ ಹಿಂದೆ ಸಿಎಎ ಬಗ್ಗೆಯೂ ತಪ್ಪು ಮಾಹಿತಿ ನೀಡಿ ಗಲಭೆಗೆ ಕಾರಣರಾಗಿದ್ದರು. ಇವರು ದೇಶದಲ್ಲಿ ಭಯದ ಸ್ಥಿತಿಯನ್ನು ಉಂಟು ಮಾಡುತ್ತಿದ್ದು ಭಯೋತ್ಪಾದಕರಾಗಿದ್ದಾರೆ” ಎಂದು ಟ್ವೀಟ್‌ ಮಾಡಿದ್ದರು.

ಜೆಎಂಎಫ್‌ಸಿ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಕಂಗನಾ ಕರ್ನಾಟಕ ಹೈಕೋರ್ಟ್‌ ಮೊರೆ ಹೋಗಿದ್ದರು. ವಕೀಲ ರಮೇಶ್‌ ನಾಯಕ್‌ ಅವರು ಕಂಗನಾ ಟ್ವೀಟ್‌ ಪ್ರಶ್ನಿಸಿ ದಾವೆ ಹೂಡಿದ್ದರು.