Karnataka HC 
ಸುದ್ದಿಗಳು

ಶತಮಾನದ ಹಿಂದೆ ಹೈಕೋರ್ಟ್‌ ಮೂಲ ಕಟ್ಟಡ ನಿರ್ಮಾಣ: ಹೈಕೋರ್ಟ್‌ ಕಟ್ಟಡ ತಪಾಸಣೆ ಕೋರಿದ್ದ ಮನವಿ ವಜಾ ಮಾಡಿದ ಹೈಕೋರ್ಟ್‌

ಬಿಬಿಎಂಪಿಯು ಹೈಕೋರ್ಟ್‌ ಕಟ್ಟಡಕ್ಕೆ ಮಂಜೂರಾತಿ ಪತ್ರ ಮತ್ತು ಸ್ವಾಧೀನ ಪ್ರಮಾಣಪತ್ರ ನೀಡಿಲ್ಲ ಎಂದು ಅರ್ಜಿದಾರರು ವಾದಿಸಿದ ಬಳಿಕ ಹೈಕೋರ್ಟ್‌ ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.

Bar & Bench

ಹೈಕೋರ್ಟ್‌ ಕಟ್ಟಡವನ್ನು ಪರಿಶೀಲಿಸುವಂತೆ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಗೆ (ಬಿಬಿಎಂಪಿ) ನಿರ್ದೇಶಿಸಬೇಕು ಎಂದು ಕೋರಿ ಸಲ್ಲಿಸಿದ್ದ ಮನವಿಯನ್ನು ಕರ್ನಾಟಕ ಹೈಕೋರ್ಟ್‌ ಶುಕ್ರವಾರ ವಜಾ ಮಾಡಿದೆ.

ಬಿಬಿಎಂಪಿಯು ಹೈಕೋರ್ಟ್‌ ಕಟ್ಟಡಕ್ಕೆ ಮಂಜೂರಾತಿ ಪತ್ರ ಮತ್ತು ಸ್ವಾಧೀನ ಪ್ರಮಾಣಪತ್ರ ನೀಡಿಲ್ಲ ಎಂದು ಅರ್ಜಿದಾರರು ವಾದಿಸಿದರು. ಇದನ್ನು ಆಲಿಸಿದ ಪೀಠವು “ಶತಮಾನದ ಹಿಂದೆ ಹೈಕೋರ್ಟ್‌ ಮೂಲ ಕಟ್ಟಡವನ್ನು ನಿರ್ಮಿಸಲಾಗಿದೆ…” ಎಂದು ಪ್ರತಿಕ್ರಿಯಿಸಿತು.

ಇಂಥ ವಿಚಾರಗಳನ್ನು ಹೈಕೋರ್ಟ್‌ ಮತ್ತು ರಾಜ್ಯ ಸರ್ಕಾರ ಪರಿಶೀಲಿಸಲಿದೆ. ಖಾಸಗಿ ವ್ಯಕ್ತಿಗಳಿಗೆ ಈ ಕೆಲಸ ಸಂಬಂಧಿಸಿದ್ದಲ್ಲ ಎಂದಿತು.

ವಿದೇಶಿ ವಿಶ್ವವಿದ್ಯಾಲಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದು, ವಾಸ್ತುಶಿಲ್ಪಕ್ಕೆ ಸಂಬಂಧಿಸಿದಂತೆ ಸಾಕಷ್ಟು ಜ್ಞಾನ ಸಂಪಾದಿಸಿರುವುದಾಗಿ ಅರ್ಜಿದಾರರು ವಿಚಾರಣೆಯ ಸಂದರ್ಭದಲ್ಲಿ ಹೇಳಿದರು. ಆಗ ಪೀಠವು “ಇದರಿಂದ ನಿಮಗೆ ವೈಯಕ್ತಿಕ ಹಿತಾಸಕ್ತಿ ಇದೆ” ಎಂಬುದು ತಿಳಿಯುತ್ತದೆ ಎಂದಿತು.

ಹೈಕೋರ್ಟ್‌ ಕಟ್ಟಡ ದಾಖಲೀಕರಣಕ್ಕೆ ನ್ಯಾಯಾಲಯಕ್ಕೆ ಒಪ್ಪಿಗೆ ನೀಡಬೇಕು ಎಂದು ಅರ್ಜಿದಾರರು ಕೋರಿದರು. ಆಗ ನ್ಯಾಯಾಲಯವು “ಹೈಕೋರ್ಟ್‌ ಕಟ್ಟಡವು ಸಾರ್ವಜನಿಕ ಬಿಲ್ಡಿಂಗ್‌ ಆಗಿದೆ. ನಿಯಮಗಳನ್ನು ಪಾಲಿಸದೇ ಖಾಸಗಿ ವ್ಯಕ್ತಿ ಅದನ್ನು ಮಾಡಲು ಅನುಮತಿಸಲಾಗದು” ಎಂದು ಹೇಳಿ ಮನವಿ ವಜಾ ಮಾಡಿತು.

ಹೈಕೋರ್ಟ್‌ ಕಟ್ಟಡದ ನೆಲಮಾಳಿಗೆ ಬಳಕೆಗೆ ಸಂಬಂಧಿಸಿದಂತೆ ಎರಡು ವರ್ಷಗಳ ಹಿಂದೆ ಸಲ್ಲಿಸಲಾಗಿರುವ ಮನವಿಯಲ್ಲಿ ಮಧ್ಯಪ್ರವೇಶ ಮೆಮೊವನ್ನಾಗಿ ವಜಾ ಮಾಡಲಾದ ಅರ್ಜಿ ಸಲ್ಲಿಸಲಾಗಿತ್ತು.

ಹೈಕೋರ್ಟ್‌ ನೆಲಮಾಳಿಗೆಯನ್ನು ಕಚೇರಿಯನ್ನಾಗಿ ಬಳಸುವುದು ಕಾನೂನಿಗೆ ವಿರುದ್ಧವಾಗಿದೆ ಎಂದು ತಗಾದೆ ಎತ್ತಿ ವಕೀಲ ರಮೇಶ್‌ ನಾಯ್ಕ್‌ ಪ್ರಮುಖ ಮನವಿ ಸಲ್ಲಿಸಿದ್ದರು.

ವಿಚಾರಣೆಯ ಸಂದರ್ಭದಲ್ಲಿ ಇಂದು ಪೀಠವು “ಹೈಕೋರ್ಟ್‌ನ ನೆಲಮಾಳಿಗೆಯಲ್ಲಿರುವ ಶೇ. 50ರಷ್ಟು ಕಚೇರಿಗಳನ್ನು ಇದಾಗಲೇ ಸ್ಥಳಾಂತರಿಸಲಾಗಿದೆ” ಎಂದು ಮೌಖಿಕವಾಗಿ ಹೇಳಿತು. ವಿಚಾರಣೆಯನ್ನು ಸೆಪ್ಟೆಂಬರ್‌ 3ಕ್ಕೆ ಮುಂದೂಡಲಾಗಿದೆ.