ಶಾಲೆಗೆ ಮಕ್ಕಳ ಗೈರಿನ ಕುರಿತು ಸರ್ಕಾರದ ಪ್ರತಿಕ್ರಿಯೆ ಬಯಸಿದ ಹೈಕೋರ್ಟ್‌: ಸರ್ವೆ ನಡೆಸಲು ಬಿಬಿಎಂಪಿಗೆ ನಿರ್ದೇಶನ

ಪಂಚಾಯತ್‌ ರಾಜ್‌ ಇಲಾಖೆಯು ಇತ್ತೀಚೆಗೆ ನಡೆಸಿದ ಸರ್ವೆಯಲ್ಲಿ ಗ್ರಾಮೀಣ ಪ್ರದೇಶದಲ್ಲಿ 3 ರಿಂದ 6 ವಯೋಮಾನದ 1,26,245 ಮಕ್ಕಳು ಶಾಲಾ ಕಲಿಕೆಯಿಂದ ಹೊರಗಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.
School Kids
School Kids

ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ಶಾಲೆ ತೊರೆದಿರುವ ಹೆಚ್ಚಿನ ಸಂಖ್ಯೆಯ ಮಕ್ಕಳು ಮರಳಿ ಶಾಲೆಗೆ ಸೇರ್ಪಡೆಯಾಗುತ್ತಿಲ್ಲ ಎಂಬ ಗಂಭೀರ ವಿಚಾರಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸುವಂತೆ ಈಚೆಗೆ ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ನಿರ್ದೇಶಿಸಿದೆ.

ಸದ್ಯ ಶಾಲೆಗೆ ಹೋಗದ 0-18 ವಯೋಮಾನದ ಮಕ್ಕಳನ್ನು ಪತ್ತೆ ಹಚ್ಚುವ ಸಂಬಂಧ ಬಿಬಿಎಂಪಿ ಅಧಿಕಾರಿಗಳು ಮನೆ ಮನೆಗೆ ತೆರಳಿ ಸರ್ವೆ ನಡೆಸಬಹುದು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಎನ್‌ ಎಸ್‌ ಸಂಜಯ್‌ ಗೌಡ ನೇತೃತ್ವದ ವಿಭಾಗೀಯ ಪೀಠ ಹೇಳಿದೆ.

“ಹೆಚ್ಚಿನ ಸಂಖ್ಯೆಯ ಮಕ್ಕಳು ಶಾಲೆಗೆ ಹಾಜರಾಗುತ್ತಿಲ್ಲ. ಅಲ್ಲದೇ, ಅವರು ಶಾಲೆಯಲ್ಲಿ ನೋಂದಣಿಯನ್ನು ಮಾಡಿಸುತ್ತಿಲ್ಲ ಎಂಬ ಗಂಭೀರ ವಿಚಾರದ ಬಗ್ಗೆ ರಾಜ್ಯ ಸರ್ಕಾರವು ಪ್ರತಿಕ್ರಿಯಿಸಬೇಕು. ಈ ಸಂಬಂಧ ಜಾರಿಗೊಳಿಸಲಾಗಿರುವ ನೋಟಿಸ್‌ಗೆ ಆಗಸ್ಟ್‌ 24ರೊಳಗೆ ಪ್ರತಿಕ್ರಿಯೆ ದಾಖಲಿಸಬೇಕು… 2012ರ ನಿಯಮಗಳ 6ನೇ ವಿಧಿಯ 1ನೇ ಉಪ ನಿಯಮದ ಅನ್ವಯ 0 ರಿಂದ 14 ವಯೋಮಾನದ ಮಕ್ಕಳ ಸರ್ವೆಯನ್ನು ನಡೆಸುವುದು ಬಿಬಿಎಂಪಿ ಹೊಣೆಯಾಗಿದೆ. ನ್ಯಾಯಾಲಯದ ನಿರ್ದೇಶನಕ್ಕೆ ಕಾಯದೆ ಬಿಬಿಎಂಪಿಯು 0-18 ವಯೋಮಾನದ ಮಕ್ಕಳ ಸರ್ವೆ ನಡೆಸಬಹುದಾಗಿದೆ” ಎಂದು ಆದೇಶದಲ್ಲಿ ತಿಳಿಸಲಾಗಿದೆ.

ಅಪಾರ ಸಂಖ್ಯೆಯ ಮಕ್ಕಳು ಶಾಲೆಯಿಂದ ವಂಚಿತರಾಗುತ್ತಿದ್ದಾರೆ ಎಂಬ ಮಾಧ್ಯಮ ವರದಿಗಳನ್ನು ಆಧರಿಸಿ ದಾಖಲಿಸಿಕೊಳ್ಳಲಾಗಿರುವ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯನ್ನು ವಿಭಾಗೀಯ ಪೀಠವು ನಡೆಸಿತು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು 0 ರಿಂದ 18 ವಯೋಮಾನದ ಮಕ್ಕಳನ್ನು ಕೇಂದ್ರೀಕರಿಸಿ ಮನೆಮನೆ ಬಾಗಿಲಿಗೆ ತೆರಳಿ ಸರ್ವೆ ಮಾಡುತ್ತಿದ್ದು, ಇದರಿಂದ ಗ್ರಾಮೀಣ ಪ್ರದೇಶದಲ್ಲಿ 3 ರಿಂದ 6 ವಯೋಮಾನದ 1,26,245 ಮಕ್ಕಳು ಶಾಲೆಗೆ ತೆರಳುತ್ತಿಲ್ಲ. ಈ ಪೈಕಿ 6 ರಿಂದ 18 ವಯೋಮಾನದ 33,344 ಮಕ್ಕಳು ಶಾಲೆಗೆ ತೆರಳುತ್ತಿಲ್ಲ. ಅಲ್ಲದೇ, 9,716 ಮಕ್ಕಳು ಶಾಲೆಯಲ್ಲಿ ನೋಂದಣಿಯನ್ನೇ ಮಾಡಿಸಿಲ್ಲ ಎಂಬ ವಿಚಾರ ಬಹಿರಂಗವಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಬೆಂಗಳೂರು ಹೊರತುಪಡಿಸಿ ನಗರ ಪ್ರದೇಶದಲ್ಲಿ 6-18 ವಯೋಮಾನದ 8,781 ಮಕ್ಕಳು ಶಾಲಾ ಕಲಿಕೆಯಿಂದ ಹೊರಗುಳಿದಿದ್ದಾರೆ. ನಗರ ಪ್ರದೇಶದ 4,800 ಮಕ್ಕಳು ಯಾವುದೇ ಶಾಲೆಯಲ್ಲಿ ನೋಂದಣಿ ಮಾಡಿಸಿಲ್ಲ ಎಂದು ಜುಲೈ 26ರ ವರದಿಯಲ್ಲಿ ವಿವರಿಸಲಾಗಿದೆ.

Also Read
ದೀರ್ಘಕಾಲ ಶಾಲೆ ಮುಚ್ಚಿರುವ ಕುರಿತು ಜಾಗೃತಿ ಮೂಡಿಸುತ್ತಿರುವ ಇಬ್ಬರು ವಕೀಲ ತಾಯಂದಿರು: ನಾಳೆ ಸಂವಾದ ಕಾರ್ಯಕ್ರಮ

“ಕರ್ನಾಟಕದಲ್ಲಿ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ನಿಯಮಗಳು 2012ರ ಪ್ರಕಾರ 0-14 ವಯೋಮಾನದ ಮಕ್ಕಳ ಕುರಿತು ಮನೆಮನೆ ಬಾಗಿಲಿಗೆ ತೆರಳಿ ಸರ್ವೆ ಮಾಡಬೇಕಿದೆ. ಆದರೆ, ಇದರಿಂದ ಒಂದು ಹೆಜ್ಜೆ ಮುಂದೆ ಹೋಗಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆಯು 0 ರಿಂದ 18 ವಯೋಮಾನದ ಮಕ್ಕಳ ಸರ್ವೆ ನಡೆಸಿದೆ. ಶಾಲೆಗೆ ತೆರಳಿದಿರುವ 0 ರಿಂದ 14 ವಯೋಮಾನದ ಮಕ್ಕಳ ಸರ್ವೆಯನ್ನು ಮನೆಮನೆ ಬಾಗಿಲಿಗೆ ತೆರಳಿ ಬಿಬಿಎಂಪಿ ನಡೆಸಬೇಕು” ಎಂದು ಹಿರಿಯ ವಕೀಲ ಹಾಗೂ ಅಮಿಕಸ್‌ ಕ್ಯೂರಿಯಾದ ಕೆ ಎನ್‌ ಫಣೀಂದ್ರ ಹೇಳಿದರು.

“ಹಿರಿಯ ವಕೀಲರು ಸರಿಯಾಗಿ ಹೇಳಿದ್ದು, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ತಾಜ್‌ ಇಲಾಖೆ ನಡೆಸಿರುವ ರೀತಿಯಲ್ಲಿಯೇ ಬಿಬಿಎಂಪಿಯು ಸರ್ವೆ ನಡೆಸಬೇಕು” ಎಂದು ಪೀಠ ಹೇಳಿತು. ವಿಚಾರಣೆಯನ್ನು ಆಗಸ್ಟ್‌ 24ಕ್ಕೆ ಮುಂದೂಡಲಾಗಿದೆ.

Related Stories

No stories found.
Kannada Bar & Bench
kannada.barandbench.com