Kannada and Karnataka High Court 
ಸುದ್ದಿಗಳು

ಶಾಲೆಗಳಲ್ಲಿ ಕನ್ನಡ ಕಡ್ಡಾಯ ಪ್ರಶ್ನಿಸಿ ಮನವಿ: ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದ ಕರ್ನಾಟಕ ಹೈಕೋರ್ಟ್‌

ಕನ್ನಡ ಭಾಷಾ ಕಲಿಕಾ ಕಾಯಿದೆ-2015 ಸಿಬಿಎಸ್‌ಇ ಮತ್ತು ಐಸಿಎಸ್‌ಇ ನೋಂದಾಯಿತ ಶಾಲೆಗಳಿಗೆ ಅನ್ವಯಿಸುವುದನ್ನು ಪ್ರಶ್ನಿಸಿ ನಾಲ್ಕನೇ ತರಗತಿ ವಿದ್ಯಾರ್ಥಿ ಮನವಿ ಸಲ್ಲಿಸಿದ್ದಾರೆ.

Bar & Bench

ರಾಜ್ಯದ ಎಲ್ಲಾ ಶಾಲೆಗಳಲ್ಲೂ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಸುವುದನ್ನು ಕಡ್ಡಾಯಗೊಳಿಸಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ನಾಲ್ಕನೇ ತರಗತಿ ವಿದ್ಯಾರ್ಥಿಯೊಬ್ಬರು ಕರ್ನಾಟಕ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದಾರೆ.

ಕನ್ನಡ ಭಾಷಾ ಕಲಿಕಾ ಕಾಯಿದೆ-2015 ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್‌ಇ) ಮತ್ತು ಭಾರತೀಯ ಪ್ರೌಢಶಿಕ್ಷಣ ಸರ್ಟಿಫಿಕೇಟ್‌ನ (ಐಸಿಎಸ್‌ಇ) ನೋಂದಾಯಿತ ಶಾಲೆಗಳಿಗೂ ಅನ್ವಯಿಸುವುದನ್ನು ಪ್ರಶ್ನಿಸಿ ವಿದ್ಯಾರ್ಥಿ ಕೀರ್ತನ್ ಸುರೇಶ್‌ ಅವರು ಸಲ್ಲಿಸಿರುವ ಮನವಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್‌ ದೇವದಾಸ್‌ ನೇತೃತ್ವದ ಏಕಸದಸ್ಯ ಪೀಠವು ರಾಜ್ಯ ಸರ್ಕಾರಕ್ಕೆ ನೋಟಿಸ್‌ ಜಾರಿ ಮಾಡಿದೆ. ವಿಚಾರಣೆಯನ್ನು ಮೂರು ವಾರಗಳ ಕಾಲ ಮುಂದೂಡಲಾಗಿದೆ.

“ರಾಜ್ಯ ಸರ್ಕಾರದ ಕಾಯಿದೆಯು ಸಂವಿಧಾನದ 14ನೇ ವಿಧಿಯ ಜೊತೆಗೆ 19 (1) (ಜಿ), 21 ಮತ್ತು 301ನೇ ವಿಧಿಯನ್ನು ಉಲ್ಲಂಘಿಸುತ್ತದೆ. ಅಲ್ಲದೇ, ಇದು ಕಳೆದ ವರ್ಷದ ಜುಲೈ 29ರಂದು ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿರುವ ರಾಷ್ಟ್ರೀಯ ಶಿಕ್ಷಣ ನೀತಿಗೆ 2020ರ ಗುರಿ ಮತ್ತು ಉದ್ದೇಶಗಳಿಗೆ ವಿರುದ್ಧವಾಗಿದೆ” ಎಂದು ವಕೀಲ ಸುವಿದತ್‌ ಎಂ ಎಸ್‌ ಅವರ ಮೂಲಕ ಸಲ್ಲಿಸಲಾಗಿರುವ ಮನವಿಯಲ್ಲಿ ತಿಳಿಸಲಾಗಿದೆ.

ಕನ್ನಡ ಭಾಷಾ ಕಲಿಕಾ ಕಾಯಿದೆ 2015 ಅನ್ನು ಅಸಾಂವಿಧಾನಿಕ, ಕಾನೂನುಬಾಹಿರ ಮತ್ತು ಸಿಬಿಎಸ್‌ಇ/ಐಸಿಎಸ್‌ಇ ನೋಂದಾಯಿತ ಸಂಸ್ಥೆಗಳನ್ನು ಹೊರತಾಗಿಸಿಲ್ಲವಾದ್ದರಿಂದ ಕಾಯಿದೆಗೆ ಯಾವುದೇ ಅಧಿಕಾರ ಇಲ್ಲ ಎಂದು ಘೋಷಿಸಬೇಕು ಎಂದು ಕೋರಲಾಗಿದೆ.

ಉದ್ಯೋಗದ ನಿಮಿತ್ತ ಮೇಲಿಂದ ಮೇಲೆ ವರ್ಗಾವಣೆಯಾಗುವವರು ತಮ್ಮ ಮಕ್ಕಳನ್ನು ಸಾಮಾನ್ಯವಾಗಿ ಸಿಬಿಎಸ್‌ಇ ಅಥವಾ ಐಸಿಎಸ್‌ಇ ನೋಂದಾಯಿತ ಶಾಲೆಗೆ ಸೇರಿಸುತ್ತಾರೆ. ಒಂದೊಮ್ಮೆ ಮಧ್ಯಂತರದಲ್ಲಿ ವರ್ಗಾವಣೆಯಾದರೂ ಬೇರೆ ಸ್ಥಳದಲ್ಲಿ ಅವರ ಕಲಿಕೆಗೆ ಯಾವುದೇ ತೊಂದರೆಯಾಗದಿರಲಿ ಎಂಬುದಕ್ಕಾಗಿ ಹೀಗೆ ಮಾಡಲಾಗುತ್ತದೆ ಎಂದು ಅರ್ಜಿದಾರರು ಹೇಳಿದ್ದಾರೆ.

“ಎರಡನೇ ಭಾಷೆಯನ್ನಾಗಿ ಮಗು ಕನ್ನಡ ಕಲಿಯುವುದು ಕಡ್ಡಾಯವಾದರೆ ಒಂದೊಮ್ಮೆ ಅವರು ಮುಂದಿನ ವರ್ಷ ಬೇರೆ ರಾಜ್ಯಕ್ಕೆ ವರ್ಗಾವಣೆಯಾದರೆ ಅವರಿಗೆ ಅತಂತ್ರ ಸ್ಥಿತಿ ಎದುರಾಗಲಿದೆ” ಎಂದು ಮನವಿಯಲ್ಲಿ ಹೇಳಲಾಗಿದೆ.

ವರ್ಗಾವಣೆಯ ಉದ್ಯೋಗದಲ್ಲಿರುವ ಪೋಷಕರು ಮತ್ತು ಮಕ್ಕಳಿಗೆ ಅನುಕೂಲವಾಗಿಸುವ ಉದ್ದೇಶದಿಂದಲೇ ಸಿಬಿಎಸ್‌ಇ/ಐಸಿಎಸ್‌ಇ ಶಿಕ್ಷಣ ನೀಡಲಾಗುತ್ತಿದೆ. ಒಂದೊಮ್ಮೆ ವರ್ಗಾವಣೆಯಾದರೂ ಆ ಸ್ಥಳದಲ್ಲಿ ಶಿಕ್ಷಣದಲ್ಲಿ ಅವರಿಗೆ ಸಮಸ್ಯೆಯಾಗುವುದಿಲ್ಲ. ಶಿಕ್ಷಣದ ಗುಣಮಟ್ಟ ಮತ್ತು ಕಲಿಕಾ ವಿಧಾನಕ್ಕೆ ಸಂಬಂಧಿಸಿದಂತೆ ಸಮಸ್ಯೆಯಾಗದು ಎಂದು ತಕರಾರು ಎತ್ತಲಾಗಿದೆ.

ಕಾಯಿದೆಯ ಅನ್ವಯ ಕನ್ನಡವನ್ನು ಪ್ರಥಮ ಅಥವಾ ದ್ವಿತೀಯ ಭಾಷೆಯನ್ನಾಗಿ ಕಲಿಯುವುದು ಕಡ್ಡಾಯವಾದರೆ ಮಕ್ಕಳು ತಾವು ಮಾಡದ ತಪ್ಪಿಗೆ ಭಾರಿ ಸಮಸ್ಯೆ ಎದುರಿಸಬೇಕಾಗುತ್ತದೆ. ಚಿಕ್ಕಂದಿನಿಂದಲೂ ಕನ್ನಡದ ಕಲಿಯದಿರುವುದು ಮತ್ತು ಮಕ್ಕಳ ಪೋಷಕರು ಭಾಷಾ ಅಲ್ಪಸಂಖ್ಯಾತರಾಗಿರುವವರಿಗೆ ಪ್ರಾದೇಶಿಕ ಭಾಷೆ ಬರೆಯುವುದು, ಮಾತನಾಡುವುದು ಮತ್ತು ಓದುವುದು ಕಷ್ಟಸಾಧ್ಯವಾಗಲಿದೆ ಎಂದು ಹೇಳಲಾಗಿದೆ.

“ಭಾಷಾ ಅಲ್ಪಸಂಖ್ಯಾತ ಗುಂಪುಗಳಿಗೆ ಸೇರಿದ ಮಕ್ಕಳಿಗೆ ಶಿಕ್ಷಣದ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಬೋಧನೆಗಾಗಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸುವುದು ಪ್ರತಿ ರಾಜ್ಯ ಮತ್ತು ಸ್ಥಳೀಯ ಪ್ರಾಧಿಕಾರದ ಕರ್ತವ್ಯವಾಗಿದೆ” ಎಂದು ಸಂವಿಧಾನದ 350ಎ ವಿಧಿಯಲ್ಲಿ ಉಲ್ಲೇಖಿಸಿರುವುದನ್ನು ಒತ್ತಿ ಹೇಳಲಾಗಿದೆ. ಆದರೆ, ಸಂವಿಧಾನದ 350ಎ ವಿಧಿಯ ಪ್ರಕಾರ, ಯಾವುದೇ ಶಿಕ್ಷಣ ಸಂಸ್ಥೆಯು ಮಾತೃ ಭಾಷೆಯನ್ನು ಬೋಧನಾ ಮಾಧ್ಯಮವಾಗಿ ಅಳವಡಿಸಿಕೊಳ್ಳುವಂತೆ ಒತ್ತಾಯಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿಲ್ಲ ಎಂದು ವಾದಿಸಲಾಗಿದೆ.

“ಸಂವಿಧಾನದ 350ಎ ವಿಧಿಯ ಪ್ರಕಾರ ಭಾಷಾ ಅಲ್ಪಸಂಖ್ಯಾತ ಗುಂಪುಗಳಿಗೆ ಸೇರಿದ ಮಕ್ಕಳಿಗೆ ಶಿಕ್ಷಣದ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯಲ್ಲಿ ಬೋಧನೆಗಾಗಿ ಸಾಕಷ್ಟು ಸೌಲಭ್ಯಗಳನ್ನು ಒದಗಿಸುವುದು ಪ್ರತಿಯೊಂದು ರಾಜ್ಯ ಮತ್ತು ಪ್ರತಿ ಸ್ಥಳೀಯ ಪ್ರಾಧಿಕಾರದ ಕರ್ತವ್ಯವಾಗಿದೆ. ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮಧ್ಯಪ್ರವೇಶಿಸಲಾಗದು. ಸಂವಿಧಾನದ 19ನೇ ವಿಧಿ ಅಡಿಯಲ್ಲಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಶಾಲೆಗಳನ್ನು ಸ್ಥಾಪಿಸುವ ಮತ್ತು ನಿರ್ವಹಿಸುವ ಹಕ್ಕು ಅವರಿಗೆ ಇದೆ” ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಕನ್ನಡದಲ್ಲಿ ಕಲಿಯುವುದನ್ನು ಕಡ್ಡಾಯಗೊಳಿಸುವುದರಿಂದ ಮಕ್ಕಳ ಪೋಷಕರು ವರ್ಗಾವಣೆಗೊಂಡು ಅಲ್ಲಿಗೆ ಹೋಗಿ ಪುನರ್‌ ನೆಲೆ ಕಂಡುಕೊಳ್ಳಬೇಕಾಗುತ್ತದೆ. ಅಲ್ಲದೇ, ತಮಗೆ ಪರಿಚಿತವಲ್ಲದ ಪ್ರಾದೇಶಿಕ ಭಾಷೆಯಲ್ಲಿ ಎಲ್ಲವನ್ನೂ ಕಲಿಯುವ ಸ್ಥಿತಿ ನಿರ್ಮಾಣವಾದಾಗ ಮಕ್ಕಳಿಗೆ ಸಮಸ್ಯೆಯಾಗುತ್ತದೆ ಎಂಬುದನ್ನು ಕಾಯಿದೆ ರೂಪಿಸುವಾಗ ಅರ್ಥೈಸಿಕೊಂಡಿಲ್ಲ ಎಂದು ಹೇಳಲಾಗಿದೆ.

“ಆಕ್ಷೇಪಾರ್ಹವಾದ ಕಾಯಿದೆಯು ಅಸಮಾನತೆಯಿಂದ ಕೂಡಿದ್ದು, ಅರ್ಜಿದಾರರ ಮೇಲೆ ಅನಗತ್ಯ ಹೊರೆ ಮತ್ತು ಸಂಕಷ್ಟವನ್ನು ಹೇರುತ್ತದೆ. ಸಂವಿಧಾನದ 19 ಮತ್ತು 30ನೇ ವಿಧಿಯ ಅಡಿಯಲ್ಲಿ ಅವರ ಹಕ್ಕುಗಳ ಮೇಲೆ ತರ್ಕಹೀನ ನಿರ್ಬಂಧಗಳನ್ನು ವಿಧಿಸುತ್ತದೆ” ಎಂದು ಹೇಳಲಾಗಿದೆ.