Kangana Ranaut, Bombay High Court  
ಸುದ್ದಿಗಳು

ನಟಿ ಕಂಗನಾ ವಿರುದ್ಧದ ಎಫ್ಐಆರ್ ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್, ಹೊಸದಾಗಿ ಪ್ರಕರಣ ಪರಿಗಣಿಸಲು ಸೂಚನೆ

ಕಾರ್ಯವಿಧಾನದ ನ್ಯೂನತೆಗಳ ಆಧಾರದ ಮೇಲೆ ಆದೇಶ ನೀಡಲಾಗಿದೆಯೇ ವಿನಾ ಪ್ರಕರಣದ ಅರ್ಹತೆಯ ಆಧಾರದಲ್ಲಿ ಅಲ್ಲ. ಹಾಗಾಗಿ ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ಮ್ಯಾಜಿಸ್ಟ್ರೇಟ್ ಅವರಿಗೆ ಸೂಚಿಸಲಾಗಿದೆ ಎಂದು ಪೀಠ ತಿಳಿಸಿದೆ.

Bar & Bench

ರೈತರನ್ನು ಭಯೋತ್ಪಾದಕರಿಗೆ ಹೋಲಿಕೆ ಮಾಡಿದ ಟ್ವೀಟ್‌ಗೆ ಸಂಬಂಧಿಸಿದಂತೆ ಬಾಲಿವುಡ್‌ ನಟಿ ಕಂಗನಾ ರನೌತ್‌ ಅವರ ವಿರುದ್ಧ ದಾಖಲಿಸಲಾಗಿದ್ದ ಎಫ್‌ಐಆರ್‌ ಅನ್ನು ಕರ್ನಾಟಕ ಹೈಕೋರ್ಟ್‌ ಗುರುವಾರ ತಳ್ಳಿ ಹಾಕಿದೆ. ರನೌತ್‌ ಅವರ ವಿರುದ್ಧ ಮ್ಯಾಜಿಸ್ಟ್ರೇಟ್‌ ಅವರು ಕಳೆದ‌ ಅಕ್ಟೋಬರ್ 9ರಂದು ಯಾಂತ್ರಿಕವಾಗಿ ಆದೇಶ ಜಾರಿ ಮಾಡಿದ್ದಾರೆ ಎಂದು ಗಮನದಲ್ಲಿಟ್ಟುಕೊಂಡ ನ್ಯಾಯಾಲಯ ಕಾರ್ಯವಿಧಾನದ ಆಧಾರದ ಮೇಲೆ ಈ ಆದೇಶ ನೀಡಿದೆ. ಪ್ರಕರಣವನ್ನು ಹೊಸದಾಗಿ ಪರಿಗಣಿಸುವಂತೆ ಪೀಠ ಮ್ಯಾಜಿಸ್ಟ್ರೇಟ್‌ ಅವರಿಗೆ ತಿಳಿಸಿದೆ.

“ಮನವಿಗೆ ಅನುಮತಿ ನೀಡಲಾಗಿದೆ. ಆದೇಶವನ್ನು ತಳ್ಳಿಹಾಕಲಾಗಿದ್ದು ಮ್ಯಾಜಿಸ್ಟ್ರೇಟ್‌ ಅವರ ಪರಿಗಣನೆಗೆ ಕಳುಹಿಸಲಾಗುತ್ತಿದೆ. ಪ್ರಕರಣವನ್ನು ಹೊಸದಾಗಿ ಪರಿಗಣಿಸಬೇಕಿದೆ” ಎಂದು ಏಕಸದಸ್ಯ ಪೀಠದ ನ್ಯಾಯಮೂರ್ತಿ ಎಚ್‌ ಪಿ ಸಂದೇಶ್‌ ಹೇಳಿದರು.

ಕಂಗನಾ ಅವರ ಟ್ವೀಟ್‌ಗಳ ಸ್ವರೂಪದ ಬಗ್ಗೆಯೂ ಸಹ ನ್ಯಾಯಾಲಯವು ಅಸಮಾಧಾನ ವ್ಯಕ್ತಪಡಿಸಿತು. “ಆಕೆಯ ಟ್ವಿಟರ್‌ ಗಮನಿಸಿ. ಅವರು ಎಂತಹ ಹೇಳಿಕೆಗಳನ್ನು ನೀಡುತ್ತಾರೆ.... ಯಾರನ್ನು ಬೇಕಾದರೂ ಈಗ ಭಯೋತ್ಪಾದಕ ಎಂದು ಕರೆಯಬಹುದಾಗಿದೆ… ಖ್ಯಾತನಾಮರು ಹೇಳಿಕೆಗಳನ್ನು ನೀಡುವಾಗ ನಾಲಗೆಯನ್ನು ಹಿಡಿತದಲ್ಲಿಟ್ಟುಕೊಳ್ಳಬೇಕು," ಎಂದು ಟ್ವೀಟ್‌ಗಳನ್ನು ಓದಿದ ನಂತರ ನ್ಯಾಯಮೂರ್ತಿಗಳು ಕೆಂಡಾಮಂಡಲಗೊಂಡು ನುಡಿದರು.

ಸೆಪ್ಟೆಂಬರ್‌ 21ರಂದು ಕಂಗನಾ “ಕೃಷಿ ಕಾಯಿದೆಗಳ ಬಗ್ಗೆ ತಪ್ಪು ಮಾಹಿತಿಯನ್ನು ನೀಡುತ್ತಿರುವ ಜನರೇ ಈ ಹಿಂದೆ ಸಿಎಎ ಬಗ್ಗೆಯೂ ತಪ್ಪು ಮಾಹಿತಿ ನೀಡಿ ಗಲಭೆಗೆ ಕಾರಣರಾಗಿದ್ದರು. ಇವರು ದೇಶದಲ್ಲಿ ಭಯದ ಸ್ಥಿತಿಯನ್ನು ಉಂಟು ಮಾಡುತ್ತಿದ್ದು ಭಯೋತ್ಪಾದಕರಾಗಿದ್ದಾರೆ” ಎಂದಿದ್ದರು.

ಇದನ್ನು ಪ್ರಶ್ನಿಸಿ ವಕೀಲ ಎಲ್‌ ರಮೇಶ್‌ ನಾಯಕ್‌ ಅವರು ದೂರು ದಾಖಲಿಸಿದ್ದರು. ಅಕ್ಟೋಬರ್‌ 9 ರಂದು ಜೆಎಂಎಫ್‌ ನ್ಯಾಯಾಲಯ ಕಂಗನಾ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಸೂಚಿಸಿತ್ತು. ಆದೇಶವನ್ನು ರದ್ದುಪಡಿಸುವಂತೆ ಕೋರಿ ಕಂಗನಾ ರಾಜ್ಯ ಹೈಕೋರ್ಟ್‌ ಮೊರೆ ಹೋಗಿದ್ದರು. ದೂರಿನಲ್ಲಿ ಉಲ್ಲೇಖಿಸಲಾದ ಆರೋಪಗಳು ಸಂಜ್ಞೇಯ ಅಪರಾಧವೇ ಅಲ್ಲವೇ ಎಂಬ ಬಗ್ಗೆ ಮ್ಯಾಜಿಸ್ಟ್ರೇಟ್‌ ಅವರು ವಿವರಿಸಿಲ್ಲ ಎಂದು ಹೈಕೋರ್ಟ್‌ ತನ್ನ ಆದೇಶದಲ್ಲಿ ತಿಳಿಸಿದೆ. ಆದೇಶ ಯಾಂತ್ರಿಕವಾಗಿದ್ದು ಹೊಸದಾಗಿ ಪರಿಗಣಿಸುವಂತೆ ಅದನ್ನು ಮರಳಿಸಿದೆ. ಕಾರ್ಯವಿಧಾನದ ನ್ಯೂನತೆಗಳ ಆಧಾರದ ಮೇಲೆ ಈ ಆದೇಶ ನೀಡಲಾಗಿದೆಯೇ ವಿನಾ ಅರ್ಹತೆ ಆಧಾರದಲ್ಲಿ ಅಲ್ಲ ಎಂದು ಪೀಠ ಗುರುವಾರ ಸ್ಪಷ್ಟಪಡಿಸಿದೆ.