ಸುದ್ದಿಗಳು

ವೈದ್ಯರ ವಿರುದ್ಧದ ಮಾನಹಾನಿ ಪ್ರಕರಣದ ವಿಚಾರಣೆಗೆ ತಡೆ: ಡಾ. ಕಕ್ಕಿಲ್ಲಾಯ ಅವರಿಗೆ ನೋಟಿಸ್ ನೀಡಿದ ಕರ್ನಾಟಕ ಹೈಕೋರ್ಟ್

ಮಾಸ್ಕ್ ಧರಿಸದೆ ಡಾ ಕಕ್ಕಿಲ್ಲಾಯ ಅವರು ಸೂಪರ್ ಮಾರ್ಕೆಟ್ ಪ್ರವೇಶಿಸಿದ್ದು ತಪ್ಪು ಎಂಬ ಐಎಂಎ ಪದಾಧಿಕಾರಿಗಳ ಹೇಳಿಕೆಯನ್ನು ಪ್ರಶ್ನಿಸಿ ಅವರು ಜಿಲ್ಲಾ ನ್ಯಾಯಾಲಯದ ಮೆಟ್ಟಿಲೇರಿದ್ದರು.

Bar & Bench

ಭಾರತೀಯ ವೈದ್ಯಕೀಯ ಸಂಘದ ಪದಾಧಿಕಾರಿಗಳ ವಿರುದ್ಧ ಮಂಗಳೂರಿನ ವೈದ್ಯ ಬಿ ಶ್ರೀನಿವಾಸ ಕಕ್ಕಿಲ್ಲಾಯ ಅವರು ಜಿಲ್ಲಾ ನ್ಯಾಯಾಲಯದಲ್ಲಿ ಹೂಡಿರುವ ಮಾನನಷ್ಟ ಮೊಕದ್ದಮೆ ವಿಚಾರಣೆಗೆ ಕರ್ನಾಟಕ ಹೈಕೋರ್ಟ್‌ ಇತ್ತೀಚೆಗೆ ತಡೆಯಾಜ್ಞೆ ನೀಡಿದೆ.

ಭಾರತೀಯ ವೈದ್ಯಕೀಯ ಸಂಘದ (ಐಎಂಎ) ಮಂಗಳೂರು ಘಟಕ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿದ ನ್ಯಾ. ಎಂ ನಾಗಪ್ರಸನ್ನಅವರಿದ್ದ ಪೀಠ ಡಾ. ಕಕ್ಕಿಲ್ಲಾಯ ಅವರಿಗೆ ನೋಟಿಸ್‌ ನೀಡಿ ವಿಚಾರಣೆಯನ್ನು ಆಗಸ್ಟ್‌ 26ಕ್ಕೆ ಮುಂದೂಡಿದೆ.

ಪ್ರತಿವಾದಿಗಳಿಗೆ ನೋಟಿಸ್‌ ಜಾರಿಗೊಳಿಸಲು ಸೂಚಿಸಿರುವ ನ್ಯಾಯಾಲಯವು ಅಲ್ಲಿಯವರೆಗೆ ಪ್ರಕರಣದ (ಸಿ ಸಿ ನಂಬರ್‌ 461/2022) ವಿಚಾರಣೆಗೆ ತಡೆ ನೀಡಿರುವುದಾಗಿ ಆದೇಶಿಸಿದೆ.

ಕೋವಿಡ್ ನಿರ್ಬಂಧ ಜಾರಿಯಲ್ಲಿದ್ದ ವೇಳೆ ಮಾಸ್ಕ್ ಇಲ್ಲದೇ ಸೂಪರ್ ಮಾರ್ಕೆಟ್ ಪ್ರವೇಶಿಸಿದ್ದ ಡಾ ಕಕ್ಕಿಲ್ಲಾಯ ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.‌ ಮುಖಗವಸು ಧರಿಸದೆ ಸೂಪರ್ ಮಾರ್ಕೆಟ್ ತೆರಳಿದ್ದು ತಪ್ಪು ಎಂದು ಐಎಂಎ ಪದಾಧಿಕಾರಿಗಳು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ್ದರು.

ಇದನ್ನು ಪ್ರಶ್ನಿಸಿ ರಾಜ್ಯ ಐಎಂಎ ವೈದ್ಯರ ಕಿರುಕುಳ ತಡೆ ಸಮಿತಿ ಅಧ್ಯಕ್ಷ ಡಾ ಗಣೇಶ್‌ ಪ್ರಸಾದ್‌ ಮುದ್ರಾಜೆ ಹಾಗೂ ಐಎಂಎ ಮಂಗಳೂರು ಘಟಕದ ಪದಾಧಿಕಾರಿಗಳ ವಿರುದ್ಧ ಕಕ್ಕಿಲ್ಲಾಯ ಅವರು ಜಿಲ್ಲಾ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ಈ ಮೊಕದ್ದಮೆಯ ವಿಚಾರಣೆ ನಡೆಸದಂತೆ ತಡೆಯಾಜ್ಞೆ ನೀಡಬೇಕೆಂದು ಡಾ. ಮುದ್ರಾಜೆ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರನ್ನು ವಕೀಲ ಕೆದಂಬಾಡಿ ಕೃಷ್ಣಮೂರ್ತಿ ಪ್ರತಿನಿಧಿಸಿದ್ದರು.