ಕೋವಿಡ್‌ಗೆ ಸಂಬಂಧಿಸಿದಂತೆ ನಾಗರಿಕರು ತಮ್ಮ ಕುಂದುಕೊರತೆಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಕ್ತಪಡಿಸುವುದಕ್ಕೆ ಸರ್ಕಾರುಗಳು, ಪೊಲೀಸರು ಯಾವುದೇ ತೆರನಾದ ನಿರ್ಬಂಧ ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಶುಕ್ರವಾರ ಸ್ಪಷ್ಟವಾಗಿ ಹೇಳಿದೆ.
ಸರ್ಕಾರಗಳು ಅಂಥ ಕ್ರಮಕೈಗೊಳ್ಳುವುದು ಕಂಡುಬಂದರೆ ಅದನ್ನು ಸುಪ್ರೀಂ ಕೋರ್ಟ್ ನಿಂದನೆ ಎಂದು ಪರಿಗಣಿಸಲಾಗುವುದು ಎಂದು ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಎಲ್ ನಾಗೇಶ್ವರ್ ರಾವ್ ಮತ್ತು ರವೀಂದ್ರ ಭಟ್ ಅವರಿದ್ದ ಪೀಠ ಕಟುವಾಗಿ ಎಚ್ಚರಿಸಿದೆ.
“ನಾನು ಈ ವಿಚಾರವನ್ನು ಪ್ರಾರಂಭದಲ್ಲೇ ಸ್ಪಷ್ಟಪಡಿಸುತ್ತೇನೆ. ನಾಗರಿಕರು ಸಾಮಾಜಿಕ ಮಾಧ್ಯಮ ಅಥವಾ ಇಂಟರ್‌ನೆಟ್ ಮೂಲಕ ತಮ್ಮ ಅಹವಾಲುಗಳನ್ನು ಹಂಚಿಕೊಂಡರೆ ಅದನ್ನು ತಪ್ಪಾದ ಮಾಹಿತಿ ಎಂದು ಹೇಳುವಂತಿಲ್ಲ. ಮಾಹಿತಿಯ ಯಾವುದೇ ನಿರ್ಬಂಧ ನಮಗೆ ಬೇಡ. ಅಹವಾಲು ಹೇಳಿಕೊಳ್ಳುವ ಜನರ ವಿರುದ್ಧ ಕ್ರಮಕ್ಕೆ ಸೂಚಿಸಿದರೆ ಅದನ್ನು ನಾವು ನ್ಯಾಯಾಂಗ ನಿಂದನೆ ಎಂದು ಪರಿಗಣಿಸುತ್ತೇವೆ” ಎಂದು ನ್ಯಾಯಮೂರ್ತಿ ಚಂದ್ರಚೂಡ್ ಹೇಳಿದ್ದಾರೆ.
ಎಲ್ಲಾ ರಾಜ್ಯಗಳು ಮತ್ತು ಅಲ್ಲಿನ ಪೊಲೀಸ್ ಮಹಾನಿರ್ದೇಶಕರಿಗೆ ಈ ಕಠಿಣ ಸಂದೇಶ ರವಾನೆಯಾಗಬೇಕು. ನಿರ್ಬಂಧ ಹೇರುವ ಮಾಹಿತಿಯು ಮೂಲ ನಿಯಮಗಳಿಗೆ ವಿರುದ್ಧವಾಗಿದೆ ಎಂದೂ ಅವರು ಹೇಳಿದ್ದಾರೆ.
ಸಾಮಾಜಿಕ ಮಾಧ್ಯಮದ ಮೂಲಕ ತಪ್ಪಾಗಿ ಕೋವಿಡ್ ಸಹಾಯ ಕೋರುವವರ ವಿರುದ್ಧ ಕಠಿಣವಾದ ಸಿವಿಲ್ ಮತ್ತು ಕ್ರಿಮಿನಲ್ ಕ್ರಮಕೈಗೊಳ್ಳುವಂತೆ ಈಚೆಗೆ ಉತ್ತರ ಪ್ರದೇಶ ಸರ್ಕಾರ ಆದೇಶಿಸಿತ್ತು.
ದೇಶದ ಕೋವಿಡ್ ಪರಿಸ್ಥಿತಿಯ ನಿರ್ವಹಣೆಗೆ ಸಂಬಂಧಿಸಿದ ಸಮಸ್ಯೆಗಳ ಕುರಿತು ಸುಪ್ರೀಂ ಕೋರ್ಟ್ ಈಚೆಗೆ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಪ್ರಕರಣದ ವಿಚಾರಣೆಯನ್ನು ಪೀಠ ನಡೆಸಿತು.