Lawyers
Lawyers 
ಸುದ್ದಿಗಳು

ಕೋವಿಡ್‌ ಮನವಿ ಸಲ್ಲಿಸುವ ವಕೀಲರಿಗೆ ದಂಡ ವಿಧಿಸಲಾಗುವುದು ಎಂದ ಹೈಕೋರ್ಟ್‌: ಅಮಿಕಸ್‌ ಕ್ಯೂರಿಗೆ ಸಲಹೆ ನೀಡಲು ಸೂಚನೆ

Bar & Bench

ನ್ಯಾಯಾಲಯದ ಆದೇಶಗಳನ್ನು ಓದದೇ ಕೋವಿಡ್‌ ಸಂಬಂಧಿತ ಮನವಿಗಳನ್ನು ಸಲ್ಲಿಸುವ ವಕೀಲರಿಗೆ 25,000 ರೂಪಾಯಿ ದಂಡ ವಿಧಿಸಲಾಗುವುದು ಎಂದು ಕರ್ನಾಟಕ ಹೈಕೋರ್ಟ್‌ ಈಚೆಗೆ ಎಚ್ಚರಿಸಿದೆ.

“ಕೋವಿಡ್‌ ಸಂಬಂಧ ಹಲವು ಮನವಿಗಳನ್ನು ಸಲ್ಲಿಸಲಾಗಿದೆ. ವಕೀಲರ ಪರಿಷತ್‌ನ ಸದಸ್ಯರು ನ್ಯಾಯಾಲಯದ ಆದೇಶಗಳನ್ನು ಓದುವುದಿಲ್ಲ. ಇದರಿಂದ ಮನವಿಗಳ ಸಂಖ್ಯೆ ದುಪ್ಪಟ್ಟಾಗುತ್ತಿದೆ… ಹೀಗಾದರೆ, ನಾವು ಇನ್ನು ಮುಂದೆ 25,000 ರೂಪಾಯಿಗಳನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಪಾವತಿಸುವಂತೆ ಆದೇಶಿಸುತ್ತೇವೆ” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಹೇಳಿತು.

ಕೋವಿಡ್‌ ಸಾಂಕ್ರಾಮಿಕತೆಯ ಈ ಸಂದರ್ಭದಲ್ಲಿ ಬಡತನ ರೇಖೆಗಿಂತ ಕೆಳಗಿರುವವರಿಗೆ (ಬಿಪಿಎಲ್‌) ಅವರ ಮನೆ ಬಾಗಿಲಿಗೆ ಆಹಾರದ ಕಿಟ್‌ಗಳನ್ನು ತಲುಪಿಸುವಂತೆ ಕೋರಿ ವಕೀಲ ರಮೇಶ್‌ ನಾಯಕ್‌ ಎಂಬವರು ಸಲ್ಲಿಸಿದ್ದ ಮನವಿಯ ವಿಚಾರಣೆಯ ಸಂದರ್ಭದಲ್ಲಿ ಪೀಠವು ಮೇಲಿನ ಅಭಿಪ್ರಾಯ ವ್ಯಕ್ತಪಡಿಸಿದೆ.

ರಾಜ್ಯದಲ್ಲಿ ಕೋವಿಡ್‌ ಪರಿಸ್ಥಿತಿಗೆ ಸಂಬಂಧಿಸಿದಂತೆ ನ್ಯಾಯಾಲಯ ಸ್ವಯಂಪ್ರೇರಿತವಾಗಿ ದಾಖಲಿಸಿಕೊಂಡಿರುವ ಮನವಿಯಲ್ಲಿ ಮಧ್ಯಪ್ರವೇಶಿಸಲು ರಮೇಶ್‌ ಅವರು ಕೋರಿದ್ದರು. ಸಿಜೆ ಓಕಾ ನೇತೃತ್ವದ ರಜಾಕಾಲದ ಪೀಠವು ಗುರುವಾರ ವಿಚಾರಣೆಗೆ ಕುಳಿತಾಗ ಕೋವಿಡ್‌ಗೆ ಸಂಬಂಧಿಸಿದ ಹಲವು ಅರ್ಜಿಗಳನ್ನು ವಿಚಾರಣೆಗೆ ನಿಗದಿಗೊಳಿಸಲಾಗಿತ್ತು.

“ಇತ್ತೀಚಿನ ದಿನಗಳಲ್ಲಿ ಎಲ್ಲರೂ ಕೋವಿಡ್‌ಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸಲು ಮುಂದಾಗುತ್ತಿದ್ದಾರೆ...” ಎಂದ ಪೀಠವು ನ್ಯಾಯಾಲಯದ ಆದೇಶಗಳನ್ನು ಓದುವಂತೆ ವಕೀಲರಿಗೆ ಸಲಹೆ ನೀಡಿತು.

ಕೋವಿಡ್‌ ವ್ಯಾಪಿಸುವುದನ್ನು ನಿಯಂತ್ರಿಸುವ ಸಂಬಂಧ ಹಲವು ವಕೀಲರು ಸಲಹೆಗಳನ್ನು ನೀಡುತ್ತಿದ್ದಾರೆ. “ಹಲವು ವಕೀಲರು ಈಗ ಸಲಹೆ ನೀಡುತ್ತಿದ್ದಾರೆ… ಕೆಲವು ಅರ್ಥಪೂರ್ಣವಾಗಿದ್ದು, ಕೆಲವು ಅಷ್ಟೇನು ಪ್ರಾಮುಖ್ಯವಾಗಿಲ್ಲ. ಅಂಥವುಗಳನ್ನು ನಮಗೆ ವರ್ಗಾಯಿಸಬಹುದು. ಅವುಗಳನ್ನು ತಾಳೆ ಮಾಡುತ್ತೇನೆ. ಇದರಿಂದ ನ್ಯಾಯಾಲಯದ ಸಮಯ ಉಳಿಯಲಿದೆ” ಎಂದು ಅಮಿಕಸ್‌ ಕ್ಯೂರಿ ವಿಕ್ರಮ್‌ ಹುಯಿಲಗೋಳ ಹೇಳಿದರು.

ಈ ಹಿನ್ನೆಲೆಯಲ್ಲಿ ನ್ಯಾಯಾಲಯವು “ಯಾವುದೇ ಸಂಬಂಧಿತ ವಾಸ್ತವಿಕ ಅಂಶವನ್ನು ನ್ಯಾಯಾಲಯದ ಗಮನಕ್ಕೆ ತರಲು ವಕೀಲರು ಬಯಸಿದರೆ, ಅವರು ಅದನ್ನು ಅಮಿಕಸ್ ಕ್ಯೂರಿಗೆ ಕಳುಹಿಸಬಹುದು. ಇದರಿಂದ ವಕೀಲರ ಪರಿಷತ್‌ ಸದಸ್ಯರು ಯಾವ ಸಮಸ್ಯೆಗಳನ್ನು ಎತ್ತಲು ಬಯಸುತ್ತಾರೋ ಅದನ್ನು ನ್ಯಾಯಾಲಯವು ಸರಿಯಾಗಿ ನಿಭಾಯಿಸಲಿದೆ” ಎಂದು ನ್ಯಾಯಾಲಯವು ತನ್ನ ಆದೇಶದಲ್ಲಿ ಹೇಳಿದೆ.