High Court of Karnataka  
ಸುದ್ದಿಗಳು

[ಕರ್ನಾಟಕ-ಕೇರಳ ಗಡಿ ನಿರ್ಬಂಧ] “ರಸ್ತೆಗಳನ್ನು ನಿರ್ಬಂಧಿಸಿಡಲಾಗದು” ಎಂದು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ತರಾಟೆ

ಕೋವಿಡ್‌ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿಯಲ್ಲಿ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್‌ ವಿಚಾರಣೆಯನ್ನು ನ್ಯಾಯಾಲಯ ನಡೆಸಿತು.

Bar & Bench

ಕೋವಿಡ್‌ ಸಾಂಕ್ರಾಮಿಕತೆಯ ಕಾರಣ ನೀಡಿ ಕರ್ನಾಟಕ-ಕೇರಳ ಗಡಿಯನ್ನು ನಿರ್ಬಂಧಿಸಿರುವ ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ಹೈಕೋರ್ಟ್‌ ಶುಕ್ರವಾರ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಕೇಂದ್ರ ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ರಸ್ತೆಗಳನ್ನು ನಿರ್ಬಂಧಿಸುವಂತಿಲ್ಲ; ಇದಕ್ಕೆ ಬದಲಾಗಿ ಜನರ ಆರೋಗ್ಯ ತಪಾಸಣೆ ನಡೆಸಲು ವ್ಯವಸ್ಥೆ ಕಲ್ಪಿಸಬೇಕು ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಅವರ ನೇತೃತ್ವದ ವಿಭಾಗೀಯ ಪೀಠವು ಮೌಖಿಕವಾಗಿ ಹೇಳಿದೆ. “ನೀವು ಹೀಗೆ ರಸ್ತೆಗಳನ್ನು ಮುಚ್ಚಲಾಗದು. ಕೋವಿಡ್‌ ಸೋಂಕಿತರನ್ನು ತಪಾಸಣೆ ನಡೆಸಲು ಗಡಿಪ್ರದೇಶಗಳಲ್ಲಿ ವ್ಯವಸ್ಥೆ ಕಲ್ಪಿಸಿ” ಎಂದು ಪೀಠ ಹೇಳಿತು.

ರಾಜ್ಯ ಸರ್ಕಾರದ ನಿರ್ಧಾರವು ಕೇಂದ್ರ ಗೃಹ ಇಲಾಖೆಯು ಜನವರಿ 27ರಂದು ಹೊರಡಿಸಿದ ಆದೇಶಕ್ಕೆ ವಿರುದ್ಧವಾಗಿದೆ. ಅಂತರ ರಾಜ್ಯಗಳ ಜನರ ಓಡಾಟ ಅಥವಾ ಸರಕು-ಸಾಗಣೆಗೆ ನಿರ್ಬಂಧ ವಿಧಿಸಬಾರದು ಎಂದು ಆದೇಶದಲ್ಲಿ ಕೇಂದ್ರ ಉಲ್ಲೇಖಿಸಿದೆ. “ಕೇಂದ್ರ ಸರ್ಕಾರದ ಆದೇಶದಲ್ಲಿನ 8ನೇ ಕಲಮಿಗೆ ವಿರುದ್ಧವಾಗಿ ಕರ್ನಾಟಕ ಸರ್ಕಾರ ನಿರ್ಧಾರ ಕೈಗೊಂಡಿದೆ” ಎಂದು ನ್ಯಾಯಾಲಯ ಹೇಳಿದೆ. ತಕ್ಷಣ ಕೇಂದ್ರ ಸರ್ಕಾರದ ಆದೇಶಕ್ಕೆ ಅನುಗುಣವಾಗಿ ಕಾರ್ಯಪ್ರವೃತ್ತವಾಗುವಂತೆ ಪೀಠವು ಸೂಚಿಸಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಕೇರಳ-ಕರ್ನಾಟಕ ಗಡಿಯಲ್ಲಿ ಸಾರ್ವಜನಿಕರ ಓಡಾಟಕ್ಕೆ ನಿರ್ಬಂಧ ವಿಧಿಸಿದ್ದ ರಾಜ್ಯ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆಯನ್ನು ವಿಭಾಗೀಯ ಪೀಠವು ನಡೆಸಿತು. ಎರಡು ರಾಜ್ಯಗಳ ಗಡಿ ಭಾಗವನ್ನು ಸಂಪರ್ಕಿಸುವ ಇಪ್ಪತ್ತೈದು ಕೇಂದ್ರಗಳ ಪೈಕಿ ಸದ್ಯ ನಾಲ್ಕನ್ನು ಮಾತ್ರವೇ ತೆರೆಯಲಾಗಿದೆ ಎಂದು ವಿಚಾರಣೆಯ ಸಂದರ್ಭದಲ್ಲಿ ಅರ್ಜಿದಾರ ವಕೀಲರು ಹೇಳಿದರು.

ಇದನ್ನು ಆಲಿಸಿದ ಕೇಂದ್ರ ಸರ್ಕಾರದ ವಕೀಲರು ಯಾವುದೇ ರಸ್ತೆ ಮುಚ್ಚುವುದಕ್ಕೆ ಕೇಂದ್ರ ಸರ್ಕಾರ ಸೂಚಿಸಿಲ್ಲ. “ರಾಜ್ಯ ಸರ್ಕಾರ ಅವುಗಳನ್ನು ತೆರೆಯಬೇಕು” ಎಂದರು.

ದಕ್ಷಿಣ ಕನ್ನಡ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಖ್ಯಸ್ಥರು ಹಾಗೂ ಜಿಲ್ಲಾಧಿಕಾರಿಯು ಗಡಿ ಪ್ರದೇಶಗಳಲ್ಲಿನ ಓಡಾಟಕ್ಕೆ ಸಂಬಂಧಿಸಿದ ತಮ್ಮ ಆದೇಶದಲ್ಲಿ ಬದಲಾವಣೆಗಳನ್ನು ಮಾಡಿದ್ದಾರೆ ಎಂದು ರಾಜ್ಯ ಸರ್ಕಾರದ ಪರ ವಕೀಲರು ತಿಳಿಸಿದರು. ಮಾರ್ಚ್‌ 11ಕ್ಕೆ ವಿಚಾರಣೆ ಮುಂದೂಡಲಾಗಿದೆ.