ಆನ್‌ಲೈನ್ ಆಟ ಸೇರಿದಂತೆ ಸ್ಕಿಲ್ ಗೇಮ್‌ಗಳನ್ನು ನಿಷೇಧಿಸುವ ಮತ್ತು ಅಪರಾಧೀಕರಿಸುವ ಕಾನೂನನ್ನು ರದ್ದುಗೊಳಿಸಿದ ಕರ್ನಾಟಕ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ [ಕರ್ನಾಟಕ ಸರ್ಕಾರ ಮತ್ತು ಅಖಿಲ ಭಾರತ ಗೇಮಿಂಗ್ ಫೆಡರೇಶನ್ ನಡುವಣ ಪ್ರಕರಣ].
ಆನ್‌ಲೈನ್ ಗೇಮಿಂಗ್ ನಿಷೇಧಿಸಿದ ಕರ್ನಾಟಕ ಪೊಲೀಸ್ (ತಿದ್ದುಪಡಿ) ಕಾಯಿದೆ- 2021ರ ಕೆಲವು ನಿಯಮಾವಳಿಗಳನ್ನು ಹೈಕೋರ್ಟ್ ಕಳೆದ ಫೆಬ್ರವರಿ 14ರಂದು ರದ್ದುಗೊಳಿಸಿತ್ತು.
ಸಂವಿಧಾನದ ಪ್ರಕಾರ ಸೂಕ್ತ ಕಾಯಿದೆ ಜಾರಿಗೊಳಿಸುವುದನ್ನು ತಡೆಯಲು ತೀರ್ಪಿನಲ್ಲಿರುವ ಯಾವುದೇ ಅಂಶವನ್ನು ಅಡ್ಡಿ ಎಂದು ಪರಿಗಣಿಸಲಾಗದು ಎಂದು ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್ ದೀಕ್ಷಿತ್ ಅವರನ್ನೊಳಗೊಂಡ ವಿಭಾಗೀಯ ಪೀಠ ತಿಳಿಸಿತ್ತು.
"ಸಾರ್ವಜನಿಕ ಸುವ್ಯವಸ್ಥೆ" ಮತ್ತು "ಸಾರ್ವಜನಿಕ ಆರೋಗ್ಯ" ಕಾಪಾಡಲು ವಿಶೇಷವಾಗಿ ಸೈಬರ್ ಅಪರಾಧದ ಅಪಾಯ ಭಾರೀ ಪ್ರಮಾಣದಲ್ಲಿ ಹೆಚ್ಚಿದ್ದು ಪೊಲೀಸರಿಗೆ ಸಂಬಂಧಿಸಿದಂತೆ ತಿದ್ದುಪಡಿ ಕಾಯಿದೆಯ ಅಗತ್ಯವನ್ನು ಹೈಕೋರ್ಟ್ ಗಮನಿಸಿಲ್ಲ ಎಂದು ರಾಜ್ಯ ಸರ್ಕಾರ ತನ್ನ ಮೇಲ್ಮನವಿಯಲ್ಲಿ ಪ್ರತಿಪಾದಿಸಿದೆ. ಕಳೆದ ಮೂರು ವರ್ಷಗಳಲ್ಲಿ ರಾಜ್ಯಾದ್ಯಂತ ಇಂತಹ 28,000 ಪ್ರಕರಣಗಳು ದಾಖಲಾಗಿವೆ ಎಂದು ಅದು ಹೇಳಿದೆ.
ರದ್ದಾಗಿರುವ ಕಾನೂನು ಯಾವುದೇ ಸೂಕ್ತ ವ್ಯಕ್ತಿ ಅಥವಾ ಸಂಸ್ಥೆ ಆಡಬಹುದಾದ ಕೌಶಲ್ಯದ ಆಟಗಳನ್ನು ನಿಷೇಧಿಸಿಲ್ಲ ಅಥವಾ ನಿಯಂತ್ರಿಸಲು ಯತ್ನಿಸಿಲ್ಲ ಎಂದು ನ್ಯಾಯವಾದಿ ಶುಭ್ರಾಂಶು ಪಾಧಿ ಅವರ ಮೂಲಕ ಸಲ್ಲಿಸಲಾದ ಮೇಲ್ಮನವಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ ಸಂವಿಧಾನದ 19ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಕಾನೂನು ರದ್ದುಗೊಳಿಸುವ ಮೂಲಕ ಪ್ರಮಾಣಾನುಗುಣ ಪರೀಕ್ಷೆ (ಪ್ರಮಾಣಾನುಗುಣ ಪರೀಕ್ಷೆ ಎಂಬುದು ನ್ಯಾಯಾಲಯಗಳು, ಅದರಲ್ಲಿಯೂ ಸಾಂವಿಧಾನಿಕ ನ್ಯಾಯಾಲಯಗಳು, ಕಠಿಣ ಪ್ರಕರಣಗಳನ್ನು ನಿರ್ಧರಿಸಲು ಬಳಸುವ ಕಾನೂನು ವಿಧಾನವಾಗಿದೆ, ಇದು ಎರಡು ಅಥವಾ ಹೆಚ್ಚಿನ ಕಾನೂನುಬದ್ಧ ಹಕ್ಕುಗಳು ಘರ್ಷಣೆಯಾಗುವ ಸಂದರ್ಭದಲ್ಲಿ ಬಳಕೆಯಾಗುತ್ತದೆ.) ಮಾಡುವಲ್ಲಿ ಹೈಕೋರ್ಟ್ "ಗಂಭೀರ ತಪ್ಪೆಸಗಿದೆ" ಎಂದು ಅದು ಉಲ್ಲೇಖಿಸಿದೆ.
ಅಕ್ಟೋಬರ್ 5, 2021 ರಂದುಕರ್ನಾಟಕ ಸರ್ಕಾರ ಜಾರಿಗೆ ತಂದಿದ್ದ ತಿದ್ದುಪಡಿಕಾಯಿದೆ ಮೊದಲೇ ಹಣ ಪಾವತಿಸಿ ಟೋಕನ್ ಪಡೆದು ಆಡುವ ಇಲ್ಲವೇ ನಂತರ ಪಾವತಿಸಬಹುದಾದ ಜೂಜು ಅಥವಾಬೆಟ್ಟಿಂಗ್ಗಳನ್ನುನಿಷೇಧಿಸಿದೆ. ಅಲ್ಲದೆ ಇದು ಯಾವುದೇ ಜೂಜಾಟಕ್ಕೆ ಸಂಬಂಧಿಸಿದಂತೆ ವರ್ಚುವಲ್ ನಗದು ಮತ್ತು ಹಣದ ಎಲೆಕ್ಟ್ರಾನಿಕ್ ವರ್ಗಾವಣೆಯನ್ನು ಕೂಡ ತಡೆಯುತ್ತಿತ್ತು. ತಿದ್ದುಪಡಿ ಕಾಯಿದೆ ಉಲ್ಲಂಘಿಸಿದರೆ ಗರಿಷ್ಠ ಮೂರು ವರ್ಷಗಳ ಜೈಲು ಶಿಕ್ಷೆ ಮತ್ತು ₹ 1 ಲಕ್ಷದವರೆಗೆ ದಂಡ ವಿಧಿಸಬಹುದಾಗಿತ್ತು.