ಆನ್‌ಲೈನ್ ಜೂಜು ನಿಷೇಧಿಸುವ ಕರ್ನಾಟಕ ಪೊಲಿಸ್ (ತಿದ್ದುಪಡಿ) ಕಾಯಿದೆ-2021ರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿರುವ ವಿವಿಧ ಗೇಮಿಂಗ್ ಸಂಸ್ಥೆಗಳು ನ್ಯಾಯಾಲಯದ ಅಂತಿಮ ಆದೇಶಕ್ಕೆ ಒಳಪಟ್ಟಂತೆ ಕಾಯಿದೆ ಜಾರಿಗೆ ಮಧ್ಯಂತರ ತಡೆಯಾಜ್ಞೆ ನೀಡುವಂತೆ ಗುರುವಾರ ಕರ್ನಾಟಕ ಹೈಕೋರ್ಟ್ ಮುಂದೆ ವಾದ ಮಂಡಿಸಿದವು.
ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಮತ್ತಿತರ ಕಂಪೆನಿಗಳು ಸಲ್ಲಿಸಿರುವ ರಿಟ್ ಮನವಿಗಳ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ನೇತೃತ್ವದ ವಿಶೇಷ ವಿಭಾಗೀಯ ಪೀಠ ನಡೆಸಿತು.
ಆನ್‌ಲೈನ್ ಗೇಮಿಂಗ್ ಸಂಸ್ಥೆಗಳ ಒಕ್ಕೂಟವಾದ ಆಲ್ ಇಂಡಿಯಾ ಗೇಮಿಂಗ್ ಫೆಡರೇಷನ್ ಅನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಸಿ ಆರ್ಯಮಾ ಸುಂದರಂ ಅವರು “ಕರ್ನಾಟಕ ಸರ್ಕಾರ ಜಾರಿಗೊಳಿಸಿರುವ ಆಕ್ಷೇಪಿತ ಕಾಯಿದೆಯು ಸಂವಿಧಾನಕ್ಕೆ ವಿರುದ್ಧವಾಗಿದೆ. ಆನ್‌ಲೈನ್ ಗೇಮ್‌ಗಳು ಕೌಶಲಕ್ಕೆ ಸಂಬಂಧಿಸಿದ್ದಾಗಿವೆ. ಹೀಗಾಗಿ, ಇದು ಜೂಜಾಟವಲ್ಲ” ಎಂದರು.
ಸುಮಾರು ಒಂದು ತಾಸು ವಾದ ಮಂಡಿಸಿದ ಅವರು ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ಆನ್‌ಲೈನ್ ಗೇಮಿಂಗ್ ಸಂಬಂಧಿಸಿದಂತೆ ತೀರ್ಪು ಮತ್ತು ಅಭಿಪ್ರಾಯ ವ್ಯಕ್ತಪಡಿಸಿರುವುದನ್ನು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡುವ ಯತ್ನ ಮಾಡಿದರು. “ಈ ಕ್ಷೇತ್ರದಲ್ಲಿ 3,500ಕ್ಕೂ ಹೆಚ್ಚು ಉದ್ಯೋಗಿಗಳಾಗಿದ್ದಾರೆ. 300 ಕೋಟಿ ರೂಪಾಯಿ ಬಂಡವಾಳ ಹೂಡಲಾಗಿದೆ. ನಿಷೇಧ ಮುಂದುವರಿದರೆ ಉದ್ಯೋಗಿಗಳು ಮತ್ತು ಪಾಲುದಾರರು ಆನ್‌ಲೈನ್ ಗೇಮಿಂಗ್ ಕಂಪೆನಿಗಳ ವಿರುದ್ಧ ಕ್ರಿಮಿನಲ್ ದೂರು ದಾಖಲಿಸಬಹುದು. ಹೀಗಾಗಿ, ಕಾಯಿದೆಯನ್ನು ಪರಿಗಣನೆಗೆ ಒಳಪಡಿಸಬೇಕಿದೆ” ಎಂದು ವಾದಿಸಿದರು.
ರಮ್ಮಿ ಸಂಸ್ಥೆ ಪ್ರತಿನಿಧಿಸಿದ್ದ ಹಿರಿಯ ವಕೀಲ ಮುಕುಲ್ ರೋಹಟ್ಗಿ ಅವರು “ಕೌಶಲಕ್ಕೆ ಸಂಬಂಧಿಸಿದ ಆಟಗಳನ್ನು ನಿಷೇಧಿಸಲು ಜಾರಿಗೆ ತಂದಿರುವ ಪೊಲೀಸ್ ತಿದ್ದುಪಡಿ ಕಾಯಿದೆ ಅಧಿಕಾರತೀತವಾಗಿದೆ. ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕಾನೂನು ಸ್ವೇಚ್ಛೆಯಿಂದ ಕೂಡಿದೆ” ಎಂದು ತಕರಾರು ಎತ್ತಿದರು.
ಮತ್ತೊಬ್ಬ ಅರ್ಜಿದಾರರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಡಿ ಎಲ್ ಎನ್ ರಾವ್ ಅವರು “ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಕರ್ನಾಟಕ ಸರ್ಕಾರವು ಪೊಲೀಸ್ ಕಾಯಿದೆಗೆ ತಿದ್ದುಪಡಿ ತಂದಿದೆ. ಶಾಸಕಾಂಗದ ಮಿತಿಯನ್ನು ಮೀರಿ ಕಾನೂನು ರೂಪಿಸಲಾಗಿದ್ದು, ಇದು ಸಂವಿಧಾನದ 19(1)(ಜಿ)ಗೆ ವಿರುದ್ಧವಾಗಿದೆ. ಹೀಗಾಗಿ, ಪೊಲೀಸ್ ತಿದ್ದುಪಡಿ ಕಾಯಿದೆಗೆ ತಡೆ ನೀಡಬೇಕು” ಎಂದು ಕೋರಿದರು.
ಹಿರಿಯ ವಕೀಲ ಸಜ್ಜನ್ ಪೂವಯ್ಯ ಅವರು “ರಮ್ಮಿ ಮತ್ತು ಕುದುರೆ ರೇಸ್ ಕೌಶಲಕ್ಕೆ ಸಂಬಂಧಿಸಿದ ಆಟಗಳು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಆಕ್ಷೇಪಾರ್ಹವಾದ ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯಿದೆಯಲ್ಲೂ ಕೌಶಲದ ಆಟಗಳಿಗೆ ರಕ್ಷಣೆ ಒದಗಿಸಲಾಗಿದೆ. ಕೇರಳ ಹೈಕೋರ್ಟ್ ಮತ್ತು ಮದ್ರಾಸ್ ಹೈಕೋರ್ಟ್‌ಗಳು ಇಂಥದ್ದೇ ಕಾನೂನುಗಳನ್ನು ವಜಾ ಮಾಡಿವೆ. ಹೀಗಾಗಿ, ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟು ಕರ್ನಾಟಕ ಪೊಲೀಸ್ ತಿದ್ದುಪಡಿ ಕಾಯಿದೆಗೆ ತಡೆಯಾಜ್ಞೆ ನೀಡಬೇಕು” ಎಂದು ಮನವಿ ಮಾಡಿದರು.
ಡ್ರೀಮ್ ಇಲವೆನ್ ಪ್ರತಿನಿಧಿಸಿದ್ದ ವಕೀಲರಾದ ಎಸ್ ಬಸವರಾಜ್ ಹಾಗೂ ಶ್ರೀನಿವಾಸ್ ರಾಘವನ್ ಅವರು ಕಾಯಿದೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಹಿರಿಯ ವಕೀಲ ವಾದವನ್ನು ಬೆಂಬಲಿಸಿದರು. ಸುಮಾರು ಎರಡೂವರೆಗೆ ತಾಸಿಗೂ ಹೆಚ್ಚು ಜಾಲ ಪ್ರಕರಣದ ವಿಚಾರಣೆ ನಡೆಸಿದ ಪೀಠವು ವಿಚಾರಣೆ ಮುಂದೂಡಿತು. ಹಿರಿಯ ವಕೀಲ ಅಭಿಷೇಕ್ ಮನು ಸಿಂಘ್ವಿ ಹಾಗೂ ಇನ್ನೂ ಕೆಲ ಅರ್ಜಿದಾರರ ಪರ ವಕೀಲರು ವಾದ ಮಂಡಿಸಬೇಕಿದ್ದು, ಆನಂತರ ಕಾಯಿದೆಯನ್ನು ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ ಸಮರ್ಥಿಸಲಿದ್ದಾರೆ.