Karnataka HC 
ಸುದ್ದಿಗಳು

[ದ್ವಿತೀಯ ಪಿಯು ಪರೀಕ್ಷೆ] ಸಮಗ್ರ ನಿರ್ಧಾರ ಕೈಗೊಳ್ಳುವವರೆಗೆ ಫಲಿತಾಂಶ ಪ್ರಕಟಿಸದಂತೆ ಸರ್ಕಾರಕ್ಕೆ ಹೈಕೋರ್ಟ್‌ ಆದೇಶ

ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿ ಪುನರಾವರ್ತಿತರು, ಖಾಸಗಿ ಮತ್ತು ಹೊಸ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ಸರ್ಕಾರ ಅನುಸರಿಸುತ್ತಿರುವ ಭಿನ್ನ ಮಾನದಂಡವನ್ನು ಅರ್ಜಿದಾರರು ಪ್ರಶ್ನಿಸಿದ್ದಾರೆ.

Bar & Bench

ದ್ವಿತೀಯ ಪಿಯುಸಿ ಪರೀಕ್ಷೆಗೆ ಸಂಬಂಧಿಸಿದಂತೆ ಎಲ್ಲ ವಿಭಾಗದ ವಿದ್ಯಾರ್ಥಿಗಳನ್ನು ಒಳಗೊಳ್ಳುವ ಕುರಿತು ಸಮಗ್ರ ನಿರ್ಧಾರ ಕೈಗೊಳ್ಳುವವರೆಗೆ ಹೊಸ ವಿದ್ಯಾರ್ಥಿಗಳ ಫಲಿತಾಂಶವನ್ನು ಪ್ರಕಟಿಸಕೂಡದು ಎಂದು ರಾಜ್ಯ ಸರ್ಕಾರಕ್ಕೆ ಕರ್ನಾಟಕ ಹೈಕೋರ್ಟ್‌ ಗುರುವಾರ ಆದೇಶಿಸಿದೆ.

ಕೋವಿಡ್‌ ಹಿನ್ನೆಲೆಯಲ್ಲಿ ಪುನರಾವರ್ತಿತರು (ರಿಪೀಟರ್ಸ್‌), ಖಾಸಗಿ ವಿದ್ಯಾರ್ಥಿಗಳು ಮತ್ತು ಹೊಸಬರನ್ನು (ಫ್ರೆಶರ್ಸ್‌) ಉತ್ತೀರ್ಣಗೊಳಿಸುವುದಕ್ಕೆ ಸಂಬಂಧಿಸಿದಂತೆ ಭಿನ್ನ ಮಾನದಂಡ ಅನುಸರಿಸಲು ಮುಂದಾಗಿದ್ದ ರಾಜ್ಯ ಸರ್ಕಾರದ ನಿಲುವನ್ನು ಪ್ರಶ್ನಿಸಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಲಾಗಿತ್ತು. ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಹಂಚಾಟೆ ಸಂಜೀವ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಆದೇಶ ಹೊರಡಿಸಿದೆ.

“ಸಮಗ್ರ ನಿರ್ಧಾರ ಕೈಗೊಳ್ಳುವವರೆಗೆ ದ್ವಿತೀಯ ಪಿಯು ಪರೀಕ್ಷೆ ಬರೆಯದಿರುವ ಹೊಸಬರ ಫಲಿತಾಂಶವನ್ನು ಪ್ರಕಟಿಸ ಬಾರದು” ಎಂದು ಪೀಠ ಹೇಳಿದೆ. ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ದ್ವಿತೀಯ ಪಿಯುಸಿಯಿಂದ ಸಾಮಾನ್ಯ/ಹೊಸ ವಿದ್ಯಾರ್ಥಿಗಳನ್ನು ಪಾಸು ಮಾಡಲಾಗುವುದು. ಪುನರಾವರ್ತಿತರಿಗೆ ಮಾತ್ರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ" ಎಂದು ಜೂನ್‌ 3ರ ಅಧಿಸೂಚನೆಯಲ್ಲಿ ಪದವಿಪೂರ್ವ ಶಿಕ್ಷಣ ಇಲಾಖೆ ಘೋಷಿಸಿತ್ತು.

ಫಲಿತಾಂಶಕ್ಕೆ ಸಂಬಂಧಿಸಿದಂತೆ 12 ತಜ್ಞ ಸದಸ್ಯರ ಸಮಿತಿಯನ್ನು ರಚಿಸಲಾಗಿದ್ದು, ಅವರು ನೀಡುವ ವರದಿಯನ್ನು ಆಧರಿಸಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ ಎಂದು ಪೀಠಕ್ಕೆ ವಿವರಿಸಲಾಯಿತು. “ಎಲ್ಲಾ ವಿಭಾಗದ ವಿದ್ಯಾರ್ಥಿಗಳನ್ನು ಗಮನದಲ್ಲಿಟ್ಟುಕೊಂಡು ಸಮಗ್ರ ನಿರ್ಧಾರ ಕೈಗೊಳ್ಳಬೇಕು” ಎಂದು ನ್ಯಾಯಾಲಯ ನಿರ್ದೇಶನ ನೀಡಿದೆ.

ಸುಮಾರು ಐದು ಲಕ್ಷ ಹೊಸ ವಿದ್ಯಾರ್ಥಿಗಳಿದ್ದಾರೆ. ಅಂಕ ಸುಧಾರಣೆಗಾಗಿ ಹಿಂದಿನ ವರ್ಷದ ಫಲಿತಾಂಶವನ್ನು ಹಿಂಪಡೆದಿರುವ ಅಥವಾ ನಪಾಸಾಗಿರುವ ವಿದ್ಯಾರ್ಥಿಗಳು ಮತ್ತೊಮ್ಮೆ ಪರೀಕ್ಷೆ ಬರೆಯಬೇಕಿದೆ. ಇನ್ನೊಂದು ವಿಭಾಗದಲ್ಲಿ ಖಾಸಗಿ ವಿದ್ಯಾರ್ಥಿಗಳಿದ್ದು, ಅವರು ಪಿಯು ವ್ಯವಸ್ಥೆಯ ಭಾಗವಾಗಿಲ್ಲ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು.

ಪಿಯುಸಿ ವ್ಯವಸ್ಥೆಯಲ್ಲಿ ಓದದ ವಿದ್ಯಾರ್ಥಿಗಳು ಖಾಸಗಿ ವಿದ್ಯಾರ್ಥಿಗಳಾಗಿದ್ದು, ಈ ಕುರಿತಾದ ದತ್ತಾಂಶ ಲಭ್ಯವಿಲ್ಲದ ಕಾರಣ ಸಾಂಕ್ರಾಮಿಕ ಮುಗಿದ ತಕ್ಷಣ ಅವರು ಪರೀಕ್ಷೆ ಬರೆಯಬೇಕಿದೆ ಎಂದು ಹೆಚ್ಚುವರಿ ಸರ್ಕಾರಿ ವಕೀಲರು ಪೀಠಕ್ಕೆ ತಿಳಿಸಿದರು.

ಅರ್ಜಿದಾರರು ಖಾಸಗಿ ವಿದ್ಯಾರ್ಥಿಗಳ ಬಗ್ಗೆ ಹೆಚ್ಚು ಒತ್ತು ನೀಡಿಲ್ಲ. ಆದರೆ, ಪುನರಾವರ್ತಿತರ ಬಗ್ಗೆ ಆಸ್ಥೆ ವಹಿಸಿದ್ದಾರೆ. ಪ್ರಥಮ ಪಿಯುಸಿ ಓದಿರುವ ವಿದ್ಯಾರ್ಥಿಗಳು ಇತರ ವಿದ್ಯಾರ್ಥಿಗಳಂತೆ ಸಮಾನತೆ ಕೋರಿದ್ದಾರೆ. “ಪರಿಸ್ಥಿತಿ ಸರಿಯಿದ್ದರೆ ಎಲ್ಲರೂ ಪರೀಕ್ಷೆ ಬರೆಯುತ್ತಿದ್ದರು. ಪುನರಾವರ್ತಿತರನ್ನು ಪರೀಕ್ಷೆ ಬರೆಯುವಂತೆ ಸೂಚಿಸುತ್ತಿರುವುದನ್ನು ಅವರು ಪ್ರಶ್ನಿಸುತ್ತಿದ್ದಾರೆ. 12 ಸದಸ್ಯರ ತಜ್ಞರ ಸಮಿತಿ ವರದಿ ನೀಡುವವರೆಗೆ ಪರೀಕ್ಷೆ ನಡೆಸಬೇಡಿ. ಪ್ರಥಮ ಪಿಯುಸಿ ಫಲಿತಾಂಶವನ್ನೂ ಪ್ರಕಟಿಸಕೂಡದು. ಪ್ರಥಮ ಪಿಯುಸಿ ಫಲಿತಾಂಶ ಪ್ರಕಟಿಸಿಬಿಟ್ಟರೆ ಅವರು ಮುಂದೆ ಹೋಗುತ್ತಾರೆ… ಪುನರಾವರ್ತಿತರು ಹಿಂದೆ ಉಳಿಯಲಿದ್ದಾರೆ. ನೀವು ಸಮಾನತೆ ಅನುಸರಿಸಬೇಕು” ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

“ಕಾಲೇಜು ಪ್ರವೇಶಾತಿಗೆ ಎಲ್ಲಾ ವಿದ್ಯಾರ್ಥಿಗಳಿಗೂ ಸಮಾನ ವೇದಿಕೆ ಸಿಗಬೇಕು. ಯಾವ ಕಾರಣಕ್ಕಾಗಿ ಅವರು ನಪಾಸಾಗಿದ್ದಾರೆ. ಯಾವ ಕಾರಣಕ್ಕಾಗಿ ಅವರು ಪರೀಕ್ಷೆ ಬರೆಯಬೇಕಿದೆ. ನಾವು ನಿರ್ಣಯಕರಾಗಬಾರದು. ಅಲ್ಲಿ ಸಮಾನ ವೇದಿಕೆ ಇರಬೇಕು” ಎಂದು ನ್ಯಾಯಾಲಯ ಹೇಳಿದೆ.

“ಪುನರಾವರ್ತಿತರು ಮತ್ತು ಹೊಸಬರನ್ನು ಒಂದೇ ಕಡೆ ಇಡಬೇಕು. ಇದರಲ್ಲಿ ಖಾಸಗಿ ವಿದ್ಯಾರ್ಥಿಗಳನ್ನು ಪ್ರತ್ಯೇಕಿಸಬೇಕು” ಎಂದಿರುವ ಪೀಠ ವಿಚಾರಣೆಯನ್ನು ಜುಲೈ 5ಕ್ಕೆ ಮುಂದೂಡಿದೆ.