ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |16-6-2021

>> ಪಿಯು ವಿದ್ಯಾರ್ಥಿಗಳ ಉತ್ತೀರ್ಣ ಪ್ರಶ್ನಿಸಿದ್ದ ಅರ್ಜಿ ನಾಳೆ ವಿಚಾರಣೆ >> ಬುಧವಾರವೂ ಬಿಡುಗಡೆಯಾಗದ ನತಾಶಾ, ದೇವಾಂಗನಾ >> ಪತ್ರಕರ್ತ ಕಪ್ಪನ್‌ಗೆ ಕೊಂಚ ನಿರಾಳ >> ಟ್ವಿಟರ್‌ ಮೇಲೆ ಮುಗಿಬಿದ್ದ ಕಾನೂನು ಸಚಿವ >> ಸುನಂದಾ ಪುಷ್ಕರ್‌ ಪ್ರಕರಣ
ಪೀಠದಿಂದ: ನ್ಯಾಯಾಲಯದ ಚುಟುಕು ಸುದ್ದಿಗಳು |16-6-2021

ದ್ವಿತೀಯ ಪಿಯು ಪರೀಕ್ಷೆ ಮಾನದಂಡ ಪ್ರಶ್ನಿಸಿದ್ದ ಅರ್ಜಿ: ನಾಳೆ ಕರ್ನಾಟಕ ಹೈಕೋರ್ಟ್‌ನಲ್ಲಿ ವಿಚಾರಣೆ

ಕೋವಿಡ್‌ ಸಾಂಕ್ರಾಮಿಕದ ಹಿನ್ನೆಲೆಯಲ್ಲಿ ದ್ವಿತೀಯ ಪಿಯುಸಿಯ ವಿದ್ಯಾರ್ಥಿಗಳನ್ನು ಉತ್ತೀರ್ಣಗೊಳಿಸುವ ಸಂಬಂಧ ಪುನರಾವರ್ತಿತರು, ಬಾಹ್ಯವಾಗಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳು ಹಾಗೂ ಹೊಸಬರಿಗೆ ಭಿನ್ನ ಮಾನದಂಡ ಅನುಸರಿಸಿ ಅಧಿಸೂಚನೆ ಹೊರಡಿಸಿದ ರಾಜ್ಯ ಸರ್ಕಾರದ ನಡೆಯನ್ನು ಕರ್ನಾಟಕ ಹೈಕೋರ್ಟ್‌ ಈಚೆಗೆ ಪ್ರಶ್ನಿಸಿತ್ತು. ಪ್ರಕರಣದ ಮುಂದಿನ ವಿಚಾರಣೆ ನಾಳೆ (ಗುರುವಾರ) ನಡೆಯಲಿದೆ.

Class Room
Class Room

ಪ್ರಥಮ ಪಿಯುಸಿಯಲ್ಲಿ ಪಡೆದ ಅಂಕಗಳನ್ನು ಆಧರಿಸಿ ದ್ವಿತೀಯ ಪಿಯುಸಿಯಿಂದ ಸಾಮಾನ್ಯ/ಹೊಸ ವಿದ್ಯಾರ್ಥಿಗಳನ್ನು ಪಾಸು ಮಾಡಲಾಗುವುದು. ಪುನರಾವರ್ತಿತರಿಗೆ ಮಾತ್ರ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ ಎಂದು ಜೂನ್‌ 3ರ ಅಧಿಸೂಚನೆಯಲ್ಲಿ ಪದವಿಪೂರ್ವ ಶಿಕ್ಷಣ ಮಂಡಳಿ ತಿಳಿಸಿತ್ತು. ಅಧಿಸೂಚನೆ ಪ್ರಶ್ನಿಸಿ ಸಲ್ಲಿಸಲಾಗಿದ್ದ ಪಿಐಎಲ್‌ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ ವಿ ನಾಗರತ್ನ ಮತ್ತು ಹಂಚಾಟೆ ಸಂಜೀವ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ “ಪುನರಾವರ್ತಿತರು, ಹೊಸಬರು, ಬಾಹ್ಯ ವಿದ್ಯಾರ್ಥಿಗಳಿಗೆ ಭಿನ್ನ ಅಳತೆಗೋಲು ಮಾಡಲು ಹೇಗೆ ಸಾಧ್ಯ?” ಎಂದು ಸರ್ಕಾರವನ್ನು ಈ ಹಿಂದಿನ ವಿಚಾರಣೆ ವೇಳೆ ಪ್ರಶ್ನಿಸಿತ್ತು.

ಯಥೇಚ್ಛ ಸಂಖ್ಯೆಯ ಜಾಮೀನು ಅರ್ಜಿ ಬಾಕಿ: ದೇವಾಂಗನಾ, ನತಾಶಾ ಬಿಡುಗಡೆ ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿಕೆ

ಭಾರಿ ಸಂಖ್ಯೆಯ ಜಾಮೀನು ಅರ್ಜಿಗಳ ವಿಚಾರಣೆ ಬಾಕಿ ಇರುವುದರಿಂದ ದೆಹಲಿ ಗಲಭೆ ಆರೋಪಿಗಳಾದ ದೇವಾಂಗನಾ ಕಲಿತಾ ಮತ್ತು ನತಾಶಾ ನರ್ವಾಲ್‌ ಅವರನ್ನು ತಕ್ಷಣ ಬಿಡುಗಡೆ ಮಾಡಬೇಕೆಂದು ಕೋರಿದ್ದ ಅರ್ಜಿಯನ್ನು ನಾಳೆ (ಗುರುವಾರ) ವಿಚಾರಣೆ ನಡೆಸುವುದಾಗಿ ದೆಹಲಿಯ ಕಡ್‌ಕಡ್‌ಡೂಮಾ ನ್ಯಾಯಾಲಯ ತಿಳಿಸಿದೆ. ಗುರುವಾರ ಬೆಳಿಗ್ಗೆ 11 ಗಂಟೆಗೆ ನ್ಯಾಯಾಲಯ ಆದೇಶ ಜಾರಿಗೊಳಿಸುವುದಾಗಿ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ರಿವಿಂದರ್‌ ಬೇಡಿ ತಿಳಿಸಿದ್ದಾರೆ.

Natasha and Devangana
Natasha and Devangana

ದೆಹಲಿ ಹೈಕೋರ್ಟ್‌ ಇಬ್ಬರು ಹೋರಾಟಗಾರ್ತಿಯರಿಗೆ ಮಂಗಳವಾರ ಜಾಮೀನು ನೀಡಿತ್ತು. ಆದರೆ ವಿಳಾಸ ಮತ್ತು ಶ್ಯೂರಿಟಿಗಳನ್ನು ಪರಿಶೀಲಿಸಬೇಕಿರುವುದರಿಂದ ಅವರನ್ನು ಮಂಗಳವಾರವೇ ಬಿಡುಗಡೆ ಮಾಡದಿರಲು ಕೆಳ ನ್ಯಾಯಾಲಯ ನಿರ್ಧರಿಸಿತು. ಬುಧವಾರ ಮಧ್ಯಾಹ್ನದ ಹೊತ್ತಿಗೆ ಪರಿಶೀಲನಾ ವರದಿ ಸಲ್ಲಿಸುವಂತೆ ನ್ಯಾಯಾಲಯ ದೆಹಲಿ ಪೊಲೀಸರಿಗೆ ಸೂಚಿಸಿತ್ತು. ಈ ಮಧ್ಯೆ ಬುಧವಾರದ ವಿಚಾರಣೆ ವೇಳೆ ನ್ಯಾಯಾಲಯ ಮಾಧ್ಯಮಗಳಿಗೆ ಪ್ರವೇಶ ನೀಡಿರಲಿಲ್ಲ ಎಂದು ವರದಿಯಾಗಿತ್ತು.

ಕಾಲಮಿತಿಯಲ್ಲಿ ತನಿಖಾ ವರದಿ ಸಲ್ಲಿಸದ ಪೊಲೀಸರು: ಪತ್ರಕರ್ತ ಕಪ್ಪನ್‌ ವಿರುದ್ಧದ ಅಪರಾಧ ಕೈಬಿಟ್ಟ ಮಥುರಾ ನ್ಯಾಯಾಲಯ

ಕಳೆದ ವರ್ಷ ಉತ್ತರ ಪ್ರದೇಶದ ಹಾಥ್‌ರಸ್‌ನಲ್ಲಿ ನಡೆದಿದ್ದ ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ವರದಿ ಮಾಡಲು ತೆರಳುತ್ತಿದ್ದಾಗ ಬಂಧಿತರಾಗಿದ್ದ ಕೇರಳದ ಮೂಲದ ಪತ್ರಕರ್ತ ಸಿದ್ದಿಕ್ ಕಪ್ಪನ್‌ ಮತ್ತು ಇತರರ ವಿರುದ್ಧ ದಾಖಲಿಸಲಾಗಿದ್ದ ಜಾಮೀನುಸಹಿತ ಪ್ರಕರಣಗಳನ್ನು ಬುಧವಾರ ಮಥುರಾ ನ್ಯಾಯಾಲಯ ಕೈಬಿಟ್ಟಿದೆ. ಕಾಲಮಿತಿಯಲ್ಲಿ ಪೊಲೀಸರು ತನಿಖಾ ವರದಿ ಸಲ್ಲಿಸದಿರುವ ಹಿನ್ನೆಲೆಯಲ್ಲಿ ಅವುಗಳನ್ನು ದೂರಿನಿಂದ ತೆಗೆದು ಹಾಕಲಾಗಿದೆ.

Kappan Siddique, Uttar Pradesh, Jail
Kappan Siddique, Uttar Pradesh, Jail

ಆರು ತಿಂಗಳ ಒಳಗೆ ಉತ್ತರ ಪ್ರದೇಶ ಪೊಲೀಸರು ತನಿಖಾ ವರದಿ ಸಲ್ಲಿಸಲು ವಿಫಲವಾಗಿರುವ ಹಿನ್ನೆಲೆಯಲ್ಲಿ ದೂರು ಕೈಬಿಡಲಾಗಿದೆ ಎಂದು ನ್ಯಾಯಾಲಯ ಹೇಳಿದೆ. ಜಾಮೀನುರಹಿತ ಪ್ರಕರಣಗಳನ್ನು ದಾಖಲಿಸಿರುವ ಹಿನ್ನೆಲೆಯಲ್ಲಿ ಕಪ್ಪನ್‌ ಮತ್ತು ಇತರರು ಜೈಲಿನಲ್ಲೇ ಉಳಿಯಲಿದ್ದಾರೆ. ಕಪ್ಪನ್‌ ವಿರುದ್ಧ ದೇಶದ್ರೋಹ ಮತ್ತು ಕಾನೂನುಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯಿದೆ ಅಡಿಯೂ ದೂರು ದಾಖಲಿಸಲಾಗಿದೆ.

ಐಟಿ ನಿಯಮ ಪಾಲಿಸಲು ವಿಫಲ: ಟ್ವಿಟರ್‌ ಮೇಲೆ ಮುಗಿಬಿದ್ದ ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌

ಕೇಂದ್ರ ಸರ್ಕಾರ ಈಚೆಗೆ ಜಾರಿಗೊಳಿಸಿರುವ ನೂತನ ಐಟಿ ನಿಯಮಗಳನ್ನು ಪಾಲಿಸುವಲ್ಲಿ ಸಾಮಾಜಿಕ ಜಾಲತಾಣ ಟ್ವಿಟರ್‌ ವಿಫಲವಾಗಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಟೀಕಿಸಿದ್ದು ತಮ್ಮ ಹೇಳಿಕೆಯನ್ನು ಆನ್‌ಲೈನ್‌ನಲ್ಲಿ ಬಿಡುಗಡೆ ಮಾಡಿದ್ದಾರೆ. ಮಾಧ್ಯಮ ತಿರುಚುವಿಕೆ ಪರವಾದ ಟ್ವಿಟರ್‌ ನೀತಿ ಕುರಿತು ಪ್ರಸಾದ್‌ ಆತಂಕ ವ್ಯಕ್ತಪಡಿಸಿದ್ದಾರೆ. ಉತ್ತರ ಪ್ರದೇಶದಲ್ಲಿ ಘಟನೆಯೊಂದು ನಡೆದಿದ್ದು, ವೀಡಿಯೊದಲ್ಲಿ ಮುಸ್ಲಿಂ ವ್ಯಕ್ತಿಯ ಮೇಲೆ ಹಿಂದೂಗಳು ದಾಳಿ ನಡೆಸುತ್ತಿರುವಂತೆ ಚಿತ್ರಿತವಾಗಿದೆ. ಆದರೆ ಪೊಲೀಸರು "ದಾಳಿ ಮಾಡಿದ್ದು ಹಿಂದೂ ಮತ್ತು ಮುಸ್ಲಿಂ ಸಮುದಾಯಗಳೆರಡಕ್ಕೂ ಸೇರಿದವರು" ಎಂದು ತಿಳಿಸಿದ್ದು "ಇದಕ್ಕೆ ಖಾಸಗಿ ವೈಮನಸ್ಸು ಕಾರಣವೇ ಹೊರತು ಕೋಮುದ್ವೇಷವಲ್ಲ" ಎಂದು ಪ್ರತಿಪಾದಿಸಿದ್ದಾರೆ. ಈ ಘಟನೆಯನ್ನು ಪ್ರಸಾದ್‌ ಉಲ್ಲೇಖಿಸಿದ್ದಾರೆ.

Law Minister RS Prasad
Law Minister RS PrasadYouTube

“ಉತ್ತರ ಪ್ರದೇಶದಲ್ಲಿ ನಡೆದಿರುವ ಘಟನೆಯನ್ನೇ ಉಲ್ಲೇಖಿಸುವುದಾದರೆ ನಕಲಿ ಸುದ್ದಿ ವಿರುದ್ಧ ಹೋರಾಡುವ ವಿಚಾರದಲ್ಲಿ ಟ್ವಿಟರ್‌ ಸ್ವೇಚ್ಛಾಚಾರ ಬಯಲಾಗಿದೆ. ತನ್ನ ಮಾಹಿತಿ ಪರಿಶೀಲನೆ ವಿಧಾನದ ಬಗ್ಗೆ ಅಪಾರ ಉತ್ಸಾಹ ತೋರುವ ಟ್ವಿಟರ್‌ ಉತ್ತರ ಪ್ರದೇಶ ಪ್ರಕರಣ ಒಳಗೊಂಡು ಹಲವು ಪ್ರಕರಣಗಳಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಲು ವಿಫಲವಾಗಿದೆ. ಇದರಿಂದ ನಕಲಿ ಸುದ್ದಿಯ ವಿರುದ್ಧ ಹೋರಾಡುವ ವಿಚಾರದಲ್ಲಿ ಟ್ವಿಟರ್‌ ಬದ್ಧತೆ ತೋರುತ್ತಿಲ್ಲ ಎಂಬುದು ಸ್ಪಷ್ಟವಾಗಿದೆ” ಎಂದಿದ್ದಾರೆ.

[ಸುನಂದಾ ಸಾವಿನ ಪ್ರಕರಣ] ತರೂರ್ ವಿರುದ್ಧದ ಆರೋಪ ನಿಗದಿಪಡಿಸುವ ಕುರಿತು ಜುಲೈ 2ರಂದು ದೆಹಲಿ ಕೋರ್ಟ್‌ ತೀರ್ಪು

ಪತ್ನಿ ಸುನಂದಾ ಪುಷ್ಕರ್‌ ಸಾವಿಗೆ ಸಂಬಂಧಿಸಿದ ಕ್ರಿಮಿನಲ್‌ ಪ್ರಕರಣದಲ್ಲಿ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ವಿರುದ್ಧ ಆರೋಪ ನಿಗದಿಪಡಿಸಬೇಕೆ ಎಂಬ ಕುರಿತು ಜುಲೈ 2ರಂದು ತೀರ್ಪು ಪ್ರಕಟಿಸುವುದಾಗಿ ದೆಹಲಿಯ ರೌಸ್‌ ಅವೆನ್ಯೂ ನ್ಯಾಯಾಲಯ ಬುಧವಾರ ತಿಳಿಸಿದೆ. ಈ ಬಗ್ಗೆ ಏಪ್ರಿಲ್ 12 ರಂದು ಅದು ತೀರ್ಪು ಕಾಯ್ದಿರಿಸಿತ್ತು

Shashi Tharoor, Sunanda Pushkar
Shashi Tharoor, Sunanda Pushkar

2014 ರ ಜನವರಿಯಲ್ಲಿ ನವದೆಹಲಿಯ ಪಂಚತಾರಾ ಹೋಟೆಲ್‌ನ ಕೋಣೆಯೊಂದರಲ್ಲಿ ಸುನಂದಾ ಶವವಾಗಿ ಪತ್ತೆಯಾಗಿದ್ದರು. ಇದನ್ನು ಆಧರಿಸಿ ದೆಹಲಿ ಪೊಲೀಸರು ಎಫ್‌ಐಆರ್‌ ದಾಖಲಿಸಿಕೊಂಡ ಹಿನ್ನೆಲೆಯಲ್ಲಿ ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತ್ತು. ದೆಹಲಿ ಪೊಲೀಸರು ಸೆಕ್ಷನ್ 498 ಎ (ಕ್ರೌರ್ಯ) ಮತ್ತು 306 (ಆತ್ಮಹತ್ಯೆಗೆ ಪ್ರಚೋದನೆ) ಅಡಿಯಲ್ಲಿ ಅಥವಾ ಪರ್ಯಾಯವಾಗಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 302 (ಕೊಲೆ) ಅಡಿಯಲ್ಲಿ ಆರೋಪಗಳನ್ನು ನಿಗದಿಪಡಿಸುವಂತೆ ನ್ಯಾಯಾಲಯವನ್ನು ಕೋರಿದ್ದರು. ಆಲ್‌ಪ್ರಜೋಲಮ್ ಸೇವನೆಯಿಂದ ಆಕೆ ಸಾವನ್ನಪ್ಪಿದ್ದಾರೆ ಎಂದು ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಅತುಲ್ ಶ್ರೀವಾಸ್ತವ ವಾದಿಸಿದ್ದರು. ಆದರೆ ಆಕ್ಷೇಪಿಸಲಾದ ಔಷಧ ಸುನಂದಾ ದೇಹದಲ್ಲಿ ಪತ್ತೆಯಾಗಿಲ್ಲ ಎಂದು ವಿಧಿ ವಿಜ್ಞಾನ ವರದಿಗಳು ಹೇಳುತ್ತಿರುವುದಾಗಿ ಹಿರಿಯ ವಕೀಲ ವಿಕಾಸ್ ಪಹ್ವಾ ತಿಳಿಸಿದ್ದರು.

Related Stories

No stories found.
Kannada Bar & Bench
kannada.barandbench.com