ಸ್ಕಾಟ್ಲೆಂಡ್‌ನಿಂದ ಭಾರಿ ಪ್ರಮಾಣದಲ್ಲಿ ವಿಸ್ಕಿ ರಫ್ತು ಮಾಡುವ ʼಡಿಯಾಜಿಯೊ ಸ್ಕಾಟ್ಲೆಂಡ್ʼ ಮದ್ಯ ಕಂಪನಿಯಿಂದ ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಸಿಬಿಐ ದಾಖಲಿಸಿರುವ ಹೊಸ ಭ್ರಷ್ಟಾಚಾರ ಪ್ರಕರಣ ರದ್ದುಗೊಳಿಸುವಂತೆ ಕೋರಿ ಕಾಂಗ್ರೆಸ್ ನಾಯಕ ಮತ್ತು ಶಿವಗಂಗಾ ಕ್ಷೇತ್ರದ ಸಂಸದ ಕಾರ್ತಿ ಚಿದಂಬರಂ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
2005 ರಲ್ಲಿ ಕಾರ್ತಿ ಅವರ ತಂದೆ ಪಿ ಚಿದಂಬರಂ ಕೇಂದ್ರ ಹಣಕಾಸು ಸಚಿವರಾಗಿದ್ದಾಗ ಮದ್ಯ ಆಮದು ನಿಷೇಧ ತೆಗೆದುಹಾಕಲು ಡಿಯಾಜಿಯೊ ಸ್ಕಾಟ್ಲೆಂಡ್ ಕಂಪೆನಿಯಿಂದ ಲಂಚ ಪಡೆದಿದ್ದರು ಎಂದು ಸಿಬಿಐ ಆರೋಪಿಸಿದೆ.
ಚಿದಂಬರಂ ಅವರ ಅರ್ಜಿ ಗುರುವಾರ ನ್ಯಾಯಮೂರ್ತಿ ವಿಕಾಸ್ ಮಹಾಜನ್ ಅವರ ಮುಂದೆ ವಿಚಾರಣೆಗೆ ಬಂದಿತು. ಆದರೆ, ಪ್ರಕರಣದಲ್ಲಿ ವಾದ ಮಂಡಿಸುವ ವಕೀಲರು ಲಭ್ಯವಿಲ್ಲದ ಕಾರಣ ಚಿದಂಬರಂ ಪರ ವಕೀಲರು ವಿಚಾರಣೆ ಮುಂದೂಡುವಂತೆ ಕೋರಿದರು. ಅದಕ್ಕೆ ಅವಕಾಶ ನೀಡಿದ ನ್ಯಾಯಾಲಯ ಪ್ರಕರಣವನ್ನು ಏಪ್ರಿಲ್ 16ಕ್ಕೆ ಮುಂದೂಡಿತು.
ಚಿದಂಬರಂ ವಿರುದ್ಧ ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 420 (ವಂಚನೆ) ಮತ್ತು ಭ್ರಷ್ಟಾಚಾರ ತಡೆ ಕಾಯ್ದೆಯಡಿಯಲ್ಲಿನ ಅಪರಾಧಗಳಿಗಾಗಿ ಸಿಬಿಐ ಪ್ರಕರಣ ದಾಖಲಿಸಿದೆ.
ಚಿದಂಬರಂ ಅವರು ಏರ್‌ಸೆಲ್-ಮ್ಯಾಕ್ಸಿಸ್ ಪ್ರಕರಣ, ಐಎನ್‌ಎಕ್ಸ್ ಮೀಡಿಯಾ ಪ್ರಕರಣ ಮತ್ತು ಚೈನೀಸ್ ವೀಸಾ ಪ್ರಕರಣದಲ್ಲೂ ಆರೋಪಿಯಾಗಿದ್ದಾರೆ.