1998, 1999 ಹಾಗೂ 2004ನೇ ಸಾಲಿನ ಕೆಎಎಸ್ ಅಕ್ರಮ ನೇಮಕಾತಿ ಹಗರಣದಲ್ಲಿ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಡಲಿದೆ ಎಂಬ ಷರತ್ತಿನ ಮೇಲೆ ನೀಡಲಾಗಿದ್ದ ಎಲ್ಲ ಬಡ್ತಿಗಳನ್ನು ಹಿಂಪಡೆಯುವಂತೆ ಕೋರಿರುವ ಅರ್ಜಿ ಸಂಬಂಧ ರಾಜ್ಯ ಸರ್ಕಾರ ಹಾಗೂ ಕರ್ನಾಟಕ ಲೋಕಸೇವಾ ಆಯೋಗಕ್ಕೆ (ಕೆಪಿಎಸ್ ಸಿ) ಸುಪ್ರೀಂಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.
ಕೆ. ಆರ್. ಖಲೀಲ್ ಆಹಮದ್, ಎಸ್. ಆರ್. ವೀರಣ್ಣ ಸೇರಿ ಆರು ಮಂದಿ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಸಂಜಯ್ ಕಿಶನ್ ಕೌಲ್ ಹಾಗೂ ನ್ಯಾಯಮೂರ್ತಿ ಎಂ.ಎಂ.ಸುಂದರೇಶ್ ಅವರಿದ್ದ ವಿಭಾಗೀಯ ಪೀಠ ಶುಕ್ರವಾರ ವಿಚಾರಣೆ ನಡೆಸಿತು.
ವಾದ ಆಲಿಸಿದ ಪೀಠ ಅರ್ಜಿಯಲ್ಲಿ ಪ್ರತಿವಾದಿಗಳಾಗಿರುವ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಕೆಪಿಎಸ್‌ಸಿ ಕಾರ್ಯದರ್ಶಿಗೆ ನೋಟಿಸ್ ಜಾರಿಗೊಳಿಸಿ, 6 ವಾರಗಳ ಒಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿ ವಿಚಾರಣೆ ಮುಂದೂಡಿತು.
ಮನವಿ ಏನು?
1998, 1999 ಹಾಗೂ 2004ನೇ ಸಾಲಿನಲ್ಲಿ ನೇಮಕಗೊಂಡಿದ್ದ ಅಧಿಕಾರಿಗಳಿಗೆ ಐಎಎಸ್, ಐಪಿಎಸ್ ಸೇರಿ ಎಲ್ಲ ಬಡ್ತಿಗಳನ್ನು ನೀಡಲಾಗಿದೆ. ಆ ಬಡ್ತಿಯು ಅಕ್ರಮ ನೇಮಕಾತಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡುವ ಅಂತಿಮ ತೀರ್ಪಿಗೆ ಒಳಪಡುತ್ತದೆ ಎಂಬ ಷರತ್ತು ವಿಧಿಸಲಾಗಿತ್ತು. 2016ರಲ್ಲಿ ಹೈಕೋರ್ಟ್ ನೀಡಿದ ಅಂತಿಮ ತೀರ್ಪಿನಲ್ಲಿ ಅನರ್ಹರನ್ನು ಗುರುತಿಸಿ, ಹೊಸದಾಗಿ ಪಟ್ಟಿ ಪ್ರಕಟಿಸುವಂತೆ ಆದೇಶಿಸಲಾಗಿತ್ತು. ಹೈಕೋರ್ಟ್ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ವಿಶೇಷ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಇದರಿಂದ, ಹೈಕೋರ್ಟ್ ಆದೇಶವೇ ಅಂತಿಮವಾಗಿದೆ. ಆದ್ದರಿಂದ, ಈ ಮೂರೂ ಬ್ಯಾಚ್‌ಗಳ ಅಧಿಕಾರಿಗಳಿಗೆ ನೀಡಿರುವ ಬಡ್ತಿಗಳ ಜತೆಗೆ ಅವರಿಗೆ ನೀಡಿರುವ ಹೆಚ್ಚುವರಿ ಭತ್ಯೆಗಳನ್ನೂ ಸರ್ಕಾರ ಹಿಂಪಡೆಯಬೇಕಿತ್ತು. ಆದರೆ, ಈವರೆಗೂ ಯಾರಿಗೂ ಸರ್ಕಾರ ಹಿಂಬಡ್ತಿ ನೀಡಿಲ್ಲ. ಸರ್ಕಾರಕ್ಕೆ ನಿರ್ದೇಶನ ನೀಡಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು 2020ರ ನ.13ರಂದು ಹೈಕೋರ್ಟ್ ವಜಾಗೊಳಿಸಿದೆ. ಆದ್ದರಿಂದ, ಸರ್ಕಾರ ಸೂಕ್ತ ನಿರ್ದೇಶನ ನೀಡಬೇಕೆಂದು ಅರ್ಜಿದಾರರು ಕೋರಿದ್ದಾರೆ.