Mahesh Joshi & Karnataka HC 
ಸುದ್ದಿಗಳು

ಕಸಾಪ ಅಧ್ಯಕ್ಷ ಮಹೇಶ್‌ ಜೋಶಿಯಿಂದ ಭದ್ರತೆಗೆ ಮನವಿ: ಸೂಚನೆ ಪಡೆಯಲು ಸರ್ಕಾರಿ ವಕೀಲರಿಗೆ ಹೈಕೋರ್ಟ್‌ ಆದೇಶ

ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಅವರ ಜೀವಕ್ಕೆ ಅಪಾಯವಿದೆ. ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ ಬಳಿಕ ಅವರಿಗೆ ಗಂಭೀರ ಬೆದರಿಕೆ ಹಾಕಲಾಗುತ್ತಿದೆ ಎಂದು ಆಕ್ಷೇಪಿಸಿದ ಹಿರಿಯ ವಕೀಲ ಎಸ್‌ ಬಸವರಾಜು.

Bar & Bench

ಜೀವ ಬೆದರಿಕೆ ಇರುವುದರಿಂದ ಕೂಡಲೇ ಅಂಗ ರಕ್ಷಕರ ಮೂಲಕ ಭದ್ರತೆ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ಮಹೇಶ್‌ ಜೋಶಿ ಸಲ್ಲಿಸಿರುವ ಅರ್ಜಿಯ ಸಂಬಂಧ ಸೂಚನೆ ಪಡೆಯಲು ಸರ್ಕಾರಿ ವಕೀಲಿಗೆ ಕರ್ನಾಟಕ ಹೈಕೋರ್ಟ್‌ ಸೋಮವಾರ ನಿರ್ದೇಶಿಸಿದೆ.

ಮಹೇಶ್‌ ಜೋಶಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.

ಹಿರಿಯ ವಕೀಲ ಎಸ್‌ ಬಸವರಾಜು ಅವರು “ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಅವರ ಜೀವಕ್ಕೆ ಅಪಾಯವಿದೆ. ಮಂಡ್ಯದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನ ನಡೆಸಿದ ಬಳಿಕ ಅವರಿಗೆ ಗಂಭೀರ ಬೆದರಿಕೆ ಹಾಕಲಾಗುತ್ತಿದೆ. ಜಿಲ್ಲಾ ಉಸ್ತುವಾರಿ ಸಚಿವರು, ಮಂಡ್ಯ ಜಿಲ್ಲೆಯ ಶಾಸಕರು ಅನುಮತಿ ನೀಡಿದ್ದರೆ ಜೋಶಿ ಅವರಿಗೆ ಹೊಡೆದು ಹಾಕಲಾಗುತ್ತಿತ್ತು ಎಂದು ಹೇಳಲಾಗಿದೆ. ಈ ಥರದ ಬೆದರಿಕೆಗಳು ದಿನನಿತ್ಯ ಬರುತ್ತಿವೆ. ಈ ಹಿಂದೆ ಜೋಶಿ ಅವರಿಗೆ ರಕ್ಷಣೆ ಒದಗಿಸಲಾಗಿತ್ತು” ಎಂದರು.

ವಾದ ಆಲಿಸಿದ ಪೀಠವು “ಜೋಶಿ ಅವರ ಬೆದರಿಕೆ ಇದೆ ಎಂಬುದನ್ನು ಹಿರಿಯ ವಕೀಲ ಬಸವರಾಜು ಅವರು ದಾಖಲೆಗಳ ಮೂಲಕ ಸಾದರಪಡಿಸಿದ್ದಾರೆ. ಸರ್ಕಾರದ ವಕೀಲರು ಮಾಹಿತಿ ಪಡೆದು, ವಾದ ಮಂಡಿಸಬೇಕು. ಹೀಗಾಗಿ, ವಿಚಾರಣೆಯನ್ನು ಗುರುವಾರಕ್ಕೆ ಮುಂದೂಡಲಾಗಿದೆ ಎಂದು ಆದೇಶಿಸಿತು.

“ಬೆದರಿಕೆ ಇರುವ ಹಿನ್ನೆಲೆಯಲ್ಲಿ ಅವರು ತಮ್ಮ ಕರ್ತವ್ಯವನ್ನು ಮುಕ್ತವಾಗಿ ನಿರ್ವಹಿಸಲು ತೊಂದರೆ ಆಗಿದೆ. ಆದ್ದರಿಂದ ಅವರಿಗೆ 24X7 ಭದ್ರತೆ ಒದಗಿಸುವ ಗನ್‌ಮೆನ್‌ ಜೊತೆಗೆ ಸೂಕ್ತ ಪೊಲೀಸ್‌ ರಕ್ಷಣೆ ಒದಗಿಸಲು ಸರ್ಕಾರಕ್ಕೆ ನಿರ್ದೇಶಿಸಬೇಕು” ಎಂದು ಕೋರಲಾಗಿದೆ.

2024ರ ಡಿಸೆಂಬರ್ 21ರಂದು ರಾತ್ರಿ 10 ಗಂಟೆಗೆ ಮಂಡ್ಯದ ಹೋಟೆಲ್ ಅಮರಾವತಿಯಲ್ಲಿ ಕಸಾಪ ಕೇಂದ್ರ ಕಾರ್ಯಕಾರಿ ಸಮಿತಿ ಸಭೆ ನಡೆದಿತ್ತು. 88ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮುಂದಿನ ಜಿಲ್ಲೆ ಸ್ಥಳ ಆಯ್ಕೆ ಕುರಿತು ಕಾರ್ಯಕಾರಿ ಸಮಿತಿ ಸಭೆಯಲ್ಲಿ ಚರ್ಚೆ ನಡೆಸಲಾಯಿತು. ಈ ವೇಳೆ ಮಂಡ್ಯ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಮದ್ದೂರಿನ ಹರ್ಷ ಪೆನ್ನೆದೊಡ್ಡಿ ಮತ್ತಿತರರು ಯಾರ ಅನುಮತಿಯಿಲ್ಲದೆ ಸಭಾಂಗಣಕ್ಕೆ ನುಗ್ಗಿ ಗದ್ದಲ ಎಬ್ಬಿಸಿ ತಮ್ಮ ವಿರುದ್ಧ ವಾಗ್ದಾಳಿ ನಡೆಸಿದರು. ಅಲ್ಲಿ ಹಾಜರಿದ್ದ ಹಲವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದ್ದರು. ಇದಾದ ಬಳಿಕ ಅರ್ಜಿದಾರರಿಗೆ ಎಗ್ಗಿಲ್ಲದೇ ಜೀವ ಬೆದರಿಕೆ ಕರೆಗಳು ಬರುತ್ತಲೇ ಇವೆ. ಹೀಗಾಗಿ ರಕ್ಷಣೆ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.