Supreme Court, Article 370 
ಸುದ್ದಿಗಳು

ಸಂವಿಧಾನದ 370ನೇ ವಿಧಿ ಬೆಂಬಲಿಸಿ ಸುಪ್ರೀಂ ಕೋರ್ಟ್ ಮೊರೆ ಹೋದ ಕಾಶ್ಮೀರಿ ಪಂಡಿತರ ಸಂಘಟನೆ

ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ ಮತ್ತು ಈ ನಿಟ್ಟಿನಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಿಷ್ಕ್ರಿಯತೆಯನ್ನು ಪರಿಗಣಿಸುವಂತೆ ಯೂತ್ 4 ಪನುನ್ ಕಾಶ್ಮೀರ್ ಸಂಘಟನೆ, ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದೆ.

Bar & Bench

ಕಾಶ್ಮೀರಿ ಹಿಂದೂಗಳ ಸಂಘಟನೆಯಾದ ಯೂತ್ 4 ಪನುನ್ ಕಾಶ್ಮೀರ್, 2019ರಲ್ಲಿ ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರ ಬೆಂಬಲಿಸಿ ಸುಪ್ರೀಂ ಕೋರ್ಟ್‌ಗೆ ಮಧ್ಯಪ್ರವೇಶ ಅರ್ಜಿ (ಐಎ) ಸಲ್ಲಿಸಿದೆ.

ಜಮ್ಮು ಕಾಶ್ಮೀರ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370ನೇ ವಿಧಿ ರದ್ದುಗೊಳಿಸಿದ್ದ ಕೇಂದ್ರ ಸರ್ಕಾರದ ನಿರ್ಧಾರ ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಎಲ್ಲಾ ಅರ್ಜಿಗಳನ್ನು ವಜಾಗೊಳಿಸುವಂತೆ ಸಂಘಟನೆ ಸುಪ್ರೀಂ ಕೋರ್ಟನ್ನು ಒತ್ತಾಯಿಸಿದೆ.

"ಭಾರತದ ಉಳಿದ ಭಾಗಗಳೊಂದಿಗೆ ಹಿಂದಿನ ಜಮ್ಮು ಮತ್ತು ಕಾಶ್ಮೀರದ ಮಾನಸಿಕ ಏಕೀಕರಣ ನಡೆಯದಿರುವುದಕ್ಕೆ 370 ಮತ್ತು 35ಎ ವಿಧಿಗಳು ದೊಡ್ಡ ಕಾರಣವಾಗಿದ್ದು ರಾಜ್ಯ ಕಾಶ್ಮೀರಿ ಪಂಡಿತರ ಜನಾಂಗೀಯ ನಿರ್ಮೂಲನೆಗೆ ಇಂಬು ನೀಡುವ ಪ್ರತ್ಯೇಕತಾವಾದಿ ಕಲ್ಪನೆಗಳ ಸಂತಾನೋತ್ಪತ್ತಿ ಕೇಂದ್ರವಾಗಿತ್ತು" ಎಂದು ಅರ್ಜಿಯಲ್ಲಿ ವಿವರಿಸಲಾಗಿದೆ.

ಅರ್ಜಿಯ ಪ್ರಮುಖಾಂಶಗಳು

  • ಕಾಶ್ಮೀರಿ ಪಂಡಿತರ ಮೇಲೆ ನಡೆದ ದೌರ್ಜನ್ಯ ಮತ್ತು ಈ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಿಷ್ಕ್ರಿಯತೆಯನ್ನು ಸುಪ್ರೀಂ ಕೋರ್ಟ್‌ ಗಣನೆಗೆ ತೆಗೆದುಕೊಳ್ಳಬೇಕು.

  • ಸಂವಿಧಾನದ 370ನೇ ವಿಧಿ ರದ್ದಾದ ನಂತರ, ಜಮ್ಮು ಮತ್ತು ಕಾಶ್ಮೀರದಲ್ಲಿ ʼಹಿಂದೂಗಳನ್ನು ಗುರಿಯಯಾಗಿಸಿಕೊಂಡ ಹತ್ಯೆಗಳುʼ ಹೆಚ್ಚಿವೆ.

  • ಹಿಂದಿನ ಆಡಳಿತದಲ್ಲಿ ರಾಜ್ಯದ ಹೊರಗಿನವರನ್ನು ಮದುವೆಯಾದವರು ಕಾಶ್ಮೀರದಲ್ಲಿ ಶಾಶ್ವತವಾಗಿ ಉಳಿಯುವ ಸೌಲಭ್ಯ ಕಳೆದುಕೊಳ್ಳುತ್ತಿದ್ದುದರಿಂದ 370ನೇ ವಿಧಿ ಕಾಶ್ಮೀರಿ ಪಂಡಿತರ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸಿದೆ.

  • ಜಮ್ಮು ಕಾಶ್ಮೀರಕ್ಕೆ ಅನ್ವಯವಾಗುವ ರಣಬೀರ್ ದಂಡ ಸಂಹಿತೆ (ಆರ್‌ಪಿಸಿ), ದೇಶದ ಉಳಿದ ಭಾಗಗಳಿಗೆ ಅನ್ವಯವಾಗುವ ಭಾರತೀಯ ದಂಡ ಸಂಹಿತೆಗಿಂತ ಭಿನ್ನವಾದ ನಿಬಂಧನೆಗಳನ್ನು ಒಳಗೊಂಡಿದೆ.  

  • ಸಲಿಂಗಕಾಮ ಅಪರಾಧವಲ್ಲ ಎಂಬ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಇಲ್ಲಿ (ಕಾಶ್ಮೀರದಲ್ಲಿ) ಸ್ವಾಗತಿಸಿರಲಿಲ್ಲ; ಐಪಿಸಿ ಇಲ್ಲ ಅನ್ವಯವಾಗುವುದಿಲ್ಲ ಎಂಬ ಕಾರಣಕ್ಕಾಗಿ ಹಿಂದಿನ ಜಮ್ಮು ಮತ್ತು ಕಾಶ್ಮೀರ ರಾಜ್ಯ ಅದನ್ನು ಸ್ವಾಗತಿಸಿರಲಿಲ್ಲ.

  • ಬಂದೂಕು ಬಳಕೆ ಮತ್ತು ಸಾಮೂಹಿಕ ಕವಾಯತಿಗೆ ಆರ್‌ಪಿಸಿ ಅವಕಾಶ ಮಾಡಿಕೊಟ್ಟಿತ್ತು.

  • ಸಂವಿಧಾನದ 370ನೇ ವಿಧಿ ರದ್ದುಗೊಳಿಸುವ ಕ್ರಮ ಸಂಪೂರ್ಣವಾಗಿ ಕಾನೂನುಬದ್ಧವಾಗಿದ್ದು ಸಾಂವಿಧಾನಿಕ ಪರಿಮಾಣದಲ್ಲಿದೆ. ಹೀಗಾಗಿ ಈ ಕ್ರಮ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳನ್ನು‌ ವಜಾಗೊಳಿಸಬೇಕು.

ವಿಶೇಷ ಸ್ಥಾನಮಾನ ವಿಧಿಯನ್ನು ರದ್ದುಗೊಳಿಸಿರುವುದನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ನ ಸಾಂವಿಧಾನಿಕ ಪೀಠ  ಆಗಸ್ಟ್ 2ರಿಂದ ಪ್ರಾರಂಭಿಸಲಿದೆ. ಸೋಮವಾರ ಮತ್ತು ಶುಕ್ರವಾರ ಹೊರತುಪಡಿಸಿ, ಪ್ರತಿದಿನವೂ ಪ್ರಕರಣದ ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿದೆ. ಸಂವಿಧಾನದ 370ನೇ ವಿಧಿ ರದ್ದುಗೊಳಿಸಿದ ಸುಮಾರು ನಾಲ್ಕು ವರ್ಷಗಳ ನಂತರ ಅರ್ಜಿಗಳ ವಿಚಾರಣೆ ಆರಂಭವಾಗಿದೆ.