ತನ್ನ ವಿರುದ್ಧದ ಕ್ರಿಮಿನಲ್ ವಿಚಾರಣೆಯನ್ನು ಶ್ರೀನಗರದ ಬದಲಿಗೆ ಜಮ್ಮುವಿನ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂಬ ಮಾಜಿ ಆರೋಗ್ಯ ಸಚಿವ ಶಬೀರ್ ಅಹ್ಮದ್ ಅವರ ಕೋರಿಕೆಯನ್ನು ಮನ್ನಿಸುವ ವೇಳೆ ಜಮ್ಮು ಕಾಶ್ಮೀರ ಹಾಗೂ ಲಡಾಖ್ ಹೈಕೋರ್ಟ್ ನ್ಯಾಯಾಲಯವು, “ಕಾಶ್ಮೀರ ಕಣಿವೆಯಲ್ಲಿ ಪ್ರತ್ಯೇಕತಾವಾದಿಗಳ ಸಿದ್ಧಾಂತಕ್ಕೆ ಮಣಿಯದ ಮುಖ್ಯವಾಹಿನಿಯ ರಾಜಕಾರಣಿಗಳು ಮತ್ತು ಜನರ ಮೇಲೆ ಈಗಲೂ ದಾಳಿ ನಡೆಯುತ್ತಿದೆ” ಎಂಬುದಾಗಿ ಹೇಳಿದೆ [ಶಬೀರ್ ಅಹ್ಮದ್ ಖಾನ್ ಮತ್ತು ಜಮ್ಮು ಕಾಶ್ಮೀರ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಶ್ರೀನಗರದಲ್ಲಿ ನ್ಯಾಯಯುತ ವಿಚಾರಣೆ ನಡೆಯುವುದಿಲ್ಲ ಎಂಬ ಅರ್ಜಿದಾರರಾದ ಮಾಜಿ ಸಚಿವರ ಆತಂಕ ಸಮಂಜಸ ಎನಿಸುತ್ತಿದೆ ಎಂದು ನ್ಯಾ. ಸಂಜಯ್ ಧರ್ ಅವರಿದ್ದ ಏಕಸದಸ್ಯ ಪೀಠ ಗುರುವಾರ ತಿಳಿಸಿತು.
“ಕಾಶ್ಮೀರ ಕಣಿವೆಯಲ್ಲಿ ಮುಖ್ಯವಾಹಿನಿಯ ರಾಜಕಾರಣಿಗಳು ಮತ್ತು ಪ್ರತ್ಯೇಕತಾವಾದಿಗಳ ಸಿದ್ಧಾಂತಕ್ಕೆ ಮಣಿಯದ ಜನರ ಮೇಲೆ ದಾಳಿಯ ಘಟನೆಗಳು ನಡೆಯುತ್ತಿವೆ ಎಂಬುದು ಎಲ್ಲರಿಗೂ ತಿಳಿದಿರುವ ಸತ್ಯ. ಆದ್ದರಿಂದ ತಮ್ಮ ಜೀವಕ್ಕೆ ತೊಂದರೆ ಇದೆ ಎಂದು ನ್ಯಾಯಾಲಯದಲ್ಲಿ ವಿಚಾರಣೆ ಎದುರಿಸುತ್ತಿರುವ ಅರ್ಜಿದಾರರ ಆತಂಕ ಆಧಾರಹಿತ ಎನ್ನಲಾಗದು” ಎಂದು ನ್ಯಾಯಾಲಯ ಹೇಳಿತು.
ಪ್ರತ್ಯೇಕತಾವಾದಿ ನಾಯಕರೊಬ್ಬರ ಪತ್ನಿಯಾದ ಮಹಿಳಾ ವೈದ್ಯೆಯೊಬ್ಬರಿಗೆ ಕಿರುಕುಳ ನೀಡಿದ ಆರೋಪ ಖಾನ್ ಅವರ ಮೇಲಿತ್ತು. ಅವರ ವಿರುದ್ಧ ರಣಬೀರ್ ದಂಡ ಸಂಹಿತೆಯ (ಆರ್‌ಪಿಸಿ) ಸೆಕ್ಷನ್ 354 (ಮಹಿಳೆಯರ ಮೇಲಿನ ದೌರ್ಜನ್ಯ) ಮತ್ತು 509ರ (ಮಹಿಳೆಯರ ಘನತೆಗೆ ಕುತ್ತು ತರುವುದು) ಅಡಿ ಪ್ರಕರಣ ದಾಖಲಿಸಲಾಗಿತ್ತು. ಇದರಿಂದಾಗಿ ಆರೋಗ್ಯ ಸಚಿವರಾಗಿದ್ದ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಿತ್ತು.
ಖಾನ್ ಅವರು ಶ್ರೀನಗರದ ಮುಖ್ಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ನಡೆಯುತ್ತಿರುವ ತಮ್ಮ ವಿರುದ್ಧದ ಪ್ರಕರಣವನ್ನು ವರ್ಗಾಯಿಸುವಂತೆ ಕೋರಿದ್ದರು.