Veena Thaikkandiyil, Karnataka High Court  Veena Thaikkandiyil image source: Linkedin
ಸುದ್ದಿಗಳು

ಎಸ್‌ಎಫ್‌ಐಒ ತನಿಖೆ ಪ್ರಶ್ನಿಸಿ ಮೇಲ್ಮನವಿ ಸಲ್ಲಿಸಿದ ಕೇರಳ ಸಿಎಂ ಪುತ್ರಿ ವೀಣಾ: ಕೇಂದ್ರಕ್ಕೆ ಹೈಕೋರ್ಟ್‌ ನೋಟಿಸ್‌

ಎಸ್‌ಎಫ್‌ಐಒ 2024ರ ಜನವರಿ 31ರಂದು ಹೊರಡಿಸಿರುವ ಆದೇಶ ವಜಾ ಮಾಡುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವೀಣಾ ಮೇಲ್ಮನವಿ ಸಲ್ಲಿಸಿದ್ದಾರೆ.

Bar & Bench

ತಾನು ನಿರ್ದೇಶಕಿಯಾಗಿರುವ ಮಾಹಿತಿ ತಂತ್ರಜ್ಞಾನ ಸಂಸ್ಥೆ ಎಕ್ಸಾಲಾಜಿಕ್‌ ಸಲ್ಯೂಷನ್ಸ್‌ ವಿರುದ್ಧ ಕೇಂದ್ರ ಸರ್ಕಾರವು ಗಂಭೀರ ವಂಚನೆ ತನಿಖಾ ಕಚೇರಿ (ಎಸ್‌ಎಫ್‌ಐಒ) ತನಿಖೆಗೆ ಆದೇಶಿಸಿದ್ದನ್ನು ಎತ್ತಿಹಿಡಿದಿರುವ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಅವರ ಪುತ್ರಿ ಟಿ ವೀಣಾ ಸಲ್ಲಿಸಿದ್ದ ಅರ್ಜಿ ಸಂಬಂಧ ಕೇಂದ್ರ ಸರ್ಕಾರಕ್ಕೆ ಸೋಮವಾರ ಕರ್ನಾಟಕ ಹೈಕೋರ್ಟ್‌  ನೋಟಿಸ್‌ ಜಾರಿ ಮಾಡಿದೆ.

ಎಸ್‌ಎಫ್‌ಐಒ 2024ರ ಜನವರಿ 31ರಂದು ಹೊರಡಿಸಿರುವ ಆದೇಶ ವಜಾ ಮಾಡುವಂತೆ ಕೋರಿದ್ದ ಅರ್ಜಿ ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ವೀಣಾ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಮತ್ತು ನ್ಯಾಯಮೂರ್ತಿ ಸಿ ಎಂ ಪೂಣಚ್ಚ ಅವರ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.

ಎಕ್ಸಾಲಾಜಿಕ್‌ ಸಲ್ಯೂಷನ್ಸ್‌ ಪರ ವಕೀಲರು “ಕಂಪನಿ ಕಾಯಿದೆ ಸೆಕ್ಷನ್‌ 210ರ (ಕಂಪನಿಯ ವಿಚಾರಗಳಿಗೆ ಸಂಬಂಧಿಸಿದ ತನಿಖೆ) ಅಡಿ ತನಿಖೆ ಪೂರ್ಣಗೊಳ್ಳುವವರೆಗೆ ಸೆಕ್ಷನ್‌ 212ರ ಅಡಿ ಎಸ್‌ಎಫ್‌ಐಒ ತನಿಖೆಗೆ ಆದೇಶಿಸುವಂತಿಲ್ಲ. ಹೀಗಾಗಿ ಆದೇಶಕ್ಕೆ ತಡೆ ನೀಡಬೇಕು” ಎಂದು ಕೋರಿದರು. ಆಗ ಪೀಠವು “ಇದೊಂದು ಉತ್ತಮ ಪ್ರಶ್ನೆಯಾಗಿದ್ದು, ಈ ವಿಚಾರದ ಕುರಿತು ಯಾವುದೇ ತೀರ್ಪು ಬಂದಿಲ್ಲ. ಎಸ್‌ಎಫ್‌ಐಒ ಸ್ಥಾನಮಾನದ ಕುರಿತು ಪರಿಶೀಲಿಸಲಾಗುವುದು. ಆದರೆ, ಈ ಹಂತದಲ್ಲಿ ಮಧ್ಯಂತರ ಆದೇಶ ನೀಡಲಾಗದು” ಎಂದ ನ್ಯಾಯಾಲಯವು ಎಸ್‌ಎಫ್‌ಐಒ ನಿರ್ದೇಶಕರು ಮತ್ತು ಕೇಂದ್ರ ಸರ್ಕಾರಕ್ಕೆ ನೋಟಿಸ್‌ ಜಾರಿಗೊಳಿಸಿ, ವಿಚಾರಣೆಯನ್ನು ಡಿಸೆಂಬರ್‌ 3ಕ್ಕೆ ಮುಂದೂಡಿತು.

ರಿಜಿಸ್ಟ್ರಾರ್‌ ಆಫ್‌ ಕಂಪೆನೀಸ್‌ ಎಕ್ಸಾಲಾಜಿಕ್‌ ವಿರುದ್ಧ ನಡೆಸಿದ ಪ್ರಾಥಮಿಕ ತನಿಖೆ ಆಧರಿಸಿ ಎಸ್‌ಎಫ್‌ಐಒ ಕ್ರಮಕೈಗೊಂಡಿತ್ತು. ಎಕ್ಸಾಲಾಜಿಕ್‌ಗೆ 1.72 ಕೋಟಿ ರೂಪಾಯಿ ಪಾವತಿಸಿರುವುದಕ್ಕೆ ವಿನಾಯಿತಿ ನೀಡುವಂತೆ ಕೊಚ್ಚಿನ್‌ ಮಿನರಲ್ಸ್‌ ಮತ್ತು ರುಟೈಲ್‌ ಲಿಮಿಟೆಡ್‌ (ಸಿಎಂಆರ್‌ಎಲ್‌) ಕೋರಿದ್ದ ಮನವಿಯನ್ನು ಆದಾಯ ತೆರಿಗೆ ಮಧ್ಯಂತರ ಇತ್ಯರ್ಥ ಮಂಡಳಿ ನಿರಾಕರಿಸಿತ್ತು.

ಸಿಎಂಆರ್‌ಎಲ್‌ನಲ್ಲಿ ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ಕಾರ್ಪೊರೇಶನ್‌ (ಕೆಎಸ್‌ಐಡಿಸಿ) ಶೇ.13ರಷ್ಟು ಷೇರು ಹೊಂದಿದೆ. ಈಚೆಗೆ ಸಿಎಂಆರ್‌ಎಲ್‌ನ ಕೊಚ್ಚಿ ಕಚೇರಿಯಲ್ಲಿ ಎಸ್‌ಎಫ್‌ಐಒ ಶೋಧ ನಡೆಸಿತ್ತು. ಆನಂತರ ಕೆಎಸ್‌ಐಡಿಸಿ ಕಚೇರಿಯಲ್ಲಿ ದಾಖಲೆ ಪರಿಶೀಲಿಸಿತ್ತು. ಇದನ್ನು ಪ್ರಶ್ನಿಸಿ ಕೆಎಸ್‌ಐಡಿಸಿ ಕೇರಳ ಹೈಕೋರ್ಟ್‌ ಮೆಟ್ಟಿಲೇರಿತ್ತು. ತನಿಖೆಗೆ ಸರ್ಕಾರಿ ಒಡೆತನದ ಸಂಸ್ಥೆ ಭೀತಿಗೊಂಡಿರುವುದೇಕೆ ಎಂದು ಎಸ್‌ಎಫ್‌ಐಒ ಪ್ರಶ್ನಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ.

2017ರ ನಂತರ ಮೂರು ವರ್ಷಗಳ ಕಾಲ 1.72 ಕೋಟಿಯನ್ನು ಕೊಚ್ಚಿನ್‌ ಮಿನರಲ್ಸ್‌ ಮತ್ತು ರುಟೈಲ್‌ ಲಿಮಿಟೆಡ್‌ನಿಂದ (ಸಿಎಂಆರ್‌ಎಲ್‌) ಪಡೆದಿರುವುದು ವಿವಾದಕ್ಕೆ ಕಾರಣವಾಗಿತ್ತು. ಯಾವುದೇ ಸೇವೆ ಪಡೆಯದೆ ಎಕ್ಸಾಲಾಜಿಕ್‌ ಸಲ್ಯೂಷನ್ಸ್‌ಗೆ ಹಣ ಪಾವತಿಸಲಾಗಿದೆ ಎಂದು ಆದಾಯ ತೆರಿಗೆ ಮಧ್ಯಂತರ ಇತ್ಯರ್ಥ ಮಂಡಳಿ ಹೇಳಿತ್ತು. ಇದು ಸಿಎಂ ಪುತ್ರಿಯ ಕಂಪನಿಯಾಗಿರುವುದರಿಂದ ಮಾಹಿತಿ ತಂತ್ರಜ್ಞಾನ ಸೇವೆಯ ನೆಪದಲ್ಲಿ ಲಂಚ ಪಾವತಿಸಲಾಗಿದೆ ಎಂಬ ಆರೋಪ ಕೇಳಿ ಬಂದಿತ್ತು.

ಸಿಎಂಆರ್‌ಎಲ್‌ ಜೊತೆ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಕಂಪನಿಗಳ ಕಾಯಿದೆ ಸೆಕ್ಷನ್‌ 206(4)ರ ಅಡಿ ತನಿಖೆ ನಡೆಸುವುದಾಗಿ 2021ರಲ್ಲಿ ರಿಜಿಸ್ಟ್ರಾರ್‌ ಆಫ್‌ ಕಂಪನೀಸ್‌ (ಆರ್‌ಒಸಿ) ನೋಟಿಸ್‌ ಜಾರಿ ಮಾಡಿತ್ತು. ಇದರ ಭಾಗವಾಗಿ ಎಕ್ಸಾಲಾಜಿಕ್‌ ತನ್ನ ನಿಲುವು ವ್ಯಕ್ತಪಡಿಸಿತ್ತು. 2022ರ ಜೂನ್‌ನಲ್ಲಿ ಕಂಪನಿಯ ಅಧಿಕೃತ ಪ್ರತಿನಿಧಿ ಮತ್ತು ಆನಂತರ ಜುಲೈನಲ್ಲಿ ಸ್ವತಃ ವೀಣಾ ವಿಜಯನ್‌ ಅವರು ಆರ್‌ಒಸಿ ಮುಂದೆ ಹಾಜರಾಗಿ ಹೇಳಿಕೆ ದಾಖಲಿಸಿದ್ದರು.

ಆದಾಗ್ಯೂ, ಕೇರಳ ರಾಜ್ಯ ಕೈಗಾರಿಕಾ ಅಭಿವೃದ್ಧಿ ಮಂಡಳಿಯು (ಕೆಎಸ್‌ಐಡಿಸಿ) ಸಿಎಂಆರ್‌ಎಲ್‌ನಲ್ಲಿ ಶೇ. 13.4 ಷೇರು ಹೊಂದಿದ್ದು, ಕೆಎಸ್‌ಐಡಿಸಿಯು ಪಿಣರಾಯಿನ್‌ ವಿಜಯನ್‌ ಅವರ ನಿರ್ದೇಶನದ ಪ್ರಕಾರ ನಡೆದುಕೊಂಡಿದ್ದು, ಪುತ್ರಿ ವೀಣಾ ಕಂಪನಿಗೆ ಹಣ ವರ್ಗಾಯಿಸಿದೆ ಎಂಬರ್ಥದ ಆರೋಪ ಮಾಡಿ 2023ರಲ್ಲಿ ಆರ್‌ಒಸಿಯು ಷೋಕಾಸ್‌ ನೋಟಿಸ್‌ ಜಾರಿ ಮಾಡಿತ್ತು.

2024ರ ಜನವರಿಯಲ್ಲಿ ಸಿಎಂಆರ್‌ಎಲ್‌, ಕೆಎಸ್‌ಐಡಿಸಿ ಮತ್ತು ಎಕ್ಸಾಲಾಜಿಕ್‌ ಸಲ್ಯೂಷನ್ಸ್‌ ನಡುವಿನ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಕಂಪನೀಸ್‌ ಕಾಯಿದೆ ಸೆಕ್ಷನ್‌ 210ರ ಅಡಿ ತನಿಖೆಗೆ ಆದೇಶಿಸಲಾಗಿತ್ತು. ಜನವರಿ 31ರಂದು ಎಸ್‌ಎಫ್‌ಐಒ ತನಿಖೆಗೆ ಆದೇಶಿಸಲಾಗಿದ್ದು, ಕೆಲವು ದಾಖಲೆ ಹಾಜರುಪಡಿಸಲು ಎಕ್ಸಾಲಾಜಿಕ್‌ ಸಲ್ಯೂಷನ್ಸ್‌ಗೆ ನಿರ್ದೇಶಿಸಲಾಗಿತ್ತು.