ಶಾಸಕ ಪಿವಿ ಶ್ರೀನಿಜಿನ್ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಸಾರ ಮಾಡಿದ ಆರೋಪದ ಮೇಲೆ ಯೂಟ್ಯೂಬ್ ಚಾನೆಲ್ ಮರುನಾದನ್ ಮಲಯಾಳಿ ಸಂಪಾದಕ ಮತ್ತು ಪ್ರಕಾಶಕ ಶಾಜನ್ ಸ್ಕರಿಯಾ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಕೇರಳ ನ್ಯಾಯಾಲಯ ಶುಕ್ರವಾರ ವಜಾಗೊಳಿಸಿದೆ.
ಶಾಸಕ ಶ್ರೀಜಿನ್ ಪರಿಶಿಷ್ಟ ಸಮುದಾಯಕ್ಕೆ ಸೇರಿದವರು ಎಂಬ ಬಗ್ಗೆ ಸ್ಕರಿಯ ಅವರಿಗೆ ತಿಳಿದಿತ್ತು. ಹೀಗಾಗಿ ಈ ಕಾಯಿದೆಯ ಅಡಿಯಲ್ಲಿ ಅಪರಾಧ ದಾಖಲಿಸಲು ಈ ಸುದ್ದಿ ಪ್ರಕಟಣೆ ಸಾಕಾಗುತ್ತದೆ ಎಂದು ಎಸ್‌ಸಿ/ಎಸ್‌ಟಿ ಕಾಯಿದೆಯಡಿ ರೂಪುಗೊಂಡಿರುವ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಹನಿ ಎಂ ವರ್ಗೀಸ್ ತಿಳಿಸಿದರು.
ಕಾಯಿದೆಯ ಸೆಕ್ಷನ್ 3 (1) (ಆರ್) ಮತ್ತು 3 (1) (ಯು) ಮತ್ತು ಕೇರಳ ಪೊಲೀಸ್ ಕಾಯಿನದೆಯ ಸೆಕ್ಷನ್ 120 (ಯು) ಅಡಿಯಲ್ಲಿ ಆರೋಪ ಹೊತ್ತಿರುವ ಸ್ಕರಿಯಾ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯ ಈ ತೀರ್ಪು ನೀಡಿದೆ.
ಸಂಪಾದಕ ಸ್ಕರಿಯಾ ಅವರು ತಮ್ಮ ಯೂಟ್ಯೂಬ್ ವಾಹಿನಿ ಮರುನಾದನ್ ಮಲಯಾಳಿಯಲ್ಲಿ ಶಾಸಕ ಶ್ರೀನಿಜಿನ್ ಅವರ ವಿರುದ್ಧ ಅವಹೇಳನಕಾರಿ ಸುದ್ದಿ ಪ್ರಕಟಿಸಿದ್ದಾರೆ ಎಂಬುದು ಪ್ರಾಸಿಕ್ಯೂಷನ್ ವಾದವಾಗಿತ್ತು. ಪರಿಶಿಷ್ಟ ಜಾತಿಗೆ ಸೇರಿದ ಶಾಸಕ ಶ್ರೀನಿಜಿನ್ ಅವರನ್ನು ಅವಮಾನಿಸುವ ಉದ್ದೇಶದಿಂದ ಸುದ್ದಿ ಬಿತ್ತರಿಸಲಾಗಿತ್ತು ಎಂದು ಆರೋಪಿಸಲಾಗಿತ್ತು.
ಆದರೆ ಜಿಲ್ಲಾ ಕ್ರೀಡಾ ಪರಿಷತ್ತಿನ ಅಧ್ಯಕ್ಷರಾಗಿರುವ ಶಾಸಕ ಶ್ರೀನಿಜಿನ್ ವ್ಯಾಪ್ತಿಗೆ ಬರುವ ಕ್ರೀಡಾ ಹಾಸ್ಟೆಲ್‌ನ ದುರಾಡಳಿತ ತೋರಿಸಲು ಈ ಸುದ್ದಿ ಪ್ರಸಾರ ಮಾಡಲಾಗಿತ್ತು. ಆದರೆ ಶಾಸಕರು ಎಸ್‌ಸಿ ಸಮುದಾಯಕ್ಕೆ ಸೇರಿದವರು ಎಂಬುದನ್ನು ತಿಳಿದು ಇದನ್ನು ಪ್ರಕಟಿಸಿರಲಿಲ್ಲ. ಅಲ್ಲದೆ, ಸುದ್ದಿಯಲ್ಲಿ ಶಾಸಕರ ಜಾತಿ ಅಥವಾ ಸಮುದಾಯದ ಬಗ್ಗೆ ಏನನ್ನೂ ಉಲ್ಲೇಖಿಸಿಲ್ಲ ಎಂಬುದು ಸ್ಕರಿಯಾ ಪರ ವಕೀಲರ ವಾದವಾಗಿತ್ತು.
ಶಾಸಕ ಶ್ರೀನಿಜಿನ್ ಮತ್ತು ಪಬ್ಲಿಕ್ ಪ್ರಾಸಿಕ್ಯೂಟರ್ ಪರ ವಕೀಲರು ಅರ್ಜಿದಾರರ ವಾದವನ್ನು ತಳ್ಳಿಹಾಕಿದರು. ವಿಧಾನಪರಿಷತ್ ಚುನಾವಣೆಯಲ್ಲಿ ಎಸ್‌ಸಿ ಸಮುದಾಯಕ್ಕೆ ಮೀಸಲಾದ ಸ್ಥಾನದಲ್ಲಿ ಆಯ್ಕೆಯಾದ ಕಾರಣ ಶಾಸಕ ಶ್ರೀನಿಜಿನ್ ಎಸ್‌ಸಿ ಸಮುದಾಯಕ್ಕೆ ಸೇರಿದವರು ಎಂಬುದು ಸ್ಕರಿಯಾ ಅವರಿಗೆ ತಿಳಿದಿರುವ ಹೆಚ್ಚಿನ ಸಾಧ್ಯತೆಗಳಿವೆ ಎಂದು ಅವರು ಪ್ರತಿಪಾದಿಸಿದರು.
ಸ್ಕರಿಯಾ ಅವರು ಶಾಸಕರನ್ನು 'ಮಾಫಿಯಾ ಡಾನ್' ಎಂದು ಸಂಬೋಧಿಸಿ ಈ ಹಿಂದೆ ಪ್ರಕಟಿಸಿದ್ದ ಸುದ್ದಿಯನ್ನು ತೆಗೆದುಹಾಕಿದ್ದಾರೆ ಎಂಬುದನ್ನು ಗಮನಿಸಿದ ನ್ಯಾಯಾಲಯ ʼಶಾಸಕರು ಎಸ್ ಸಿ ಸಮುದಾಯಕ್ಕೆ ಸೇರಿದವರು ಎಂದು ಸ್ಕರಿಯಾ ಅವರಿಗೆ ತಿಳಿದಿತ್ತು. ಹೀಗಾಗಿ ಈ ಸುದ್ದಿಯನ್ನು ಪ್ರಕಟಿಸಿರುವುದೇ ಎಸ್‌ಸಿ/ ಎಸ್‌ಟಿ ಕಾಯಿದೆಯಡಿ ಅಪರಾಧ ದಾಖಲಿಸಲು ಸಾಕಾಗುತ್ತದೆʼ ಎಂದು ತಿಳಿಸಿತು. ಇದರೊಂದಿಗೆ ಸಂಪಾದಕ ಸ್ಕರಿಯಾ ಅವರ ಜಾಮೀನು ಅರ್ಜಿಯನ್ನು ಅದು ವಜಾಗೊಳಿಸಿತು.