Gavel 
ಸುದ್ದಿಗಳು

ಸಿಪಿಎಂ ಕಾರ್ಯಕರ್ತನ ಹತ್ಯೆ: 8 ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೇರಳ ನ್ಯಾಯಾಲಯ

ಮೊದಲ ಆರೋಪಿ ಶಂಭು ಮತ್ತು ಅಶೋಕನ್ ನಡುವಿನ ವೈಯುಕ್ತಿಕ ವೈಷಮ್ಯವೇ ಅಶೋಕನ್ ಹತ್ಯೆಗೆ ಕಾರಣ ಎನ್ನಲಾಗಿದೆ.

Bar & Bench

ಸಿಪಿಎಂ ಕಾರ್ಯಕರ್ತ ಕಟ್ಟಕಡ ಅಶೋಕನ್ ಅವರನ್ನು 2013ರಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 8 ಮಂದಿ ಆರ್‌ಎಸ್‌ಎಸ್‌ ಕಾರ್ಯಕರ್ತರಿಗೆ ಕೇರಳ ನ್ಯಾಯಾಲಯ ಬುಧವಾರ ಜೀವಾವಧಿ ಶಿಕ್ಷೆ ವಿಧಿಸಿದೆ.

ಶಂಭು, ಶ್ರೀಜಿತ್, ಹರಿ, ಅಂಬಿಲಿ, ಸಂತೋಷ್, ಸಜೀವ್, ಅಶೋಕನ್ ಅಲಿಯಾಸ್ ಅನ್ನಿ ಮತ್ತು ಪ್ರಶಾಂತ್ (ಅಲಿಯಾಸ್ ಪಜಿಂಜಿ) ಕೊಲೆ ಆರೋಪಿಗಳು ಎಂದು ತಿರುವನಂತಪುರದ ಸೆಷನ್ಸ್ ನ್ಯಾಯಾಲಯ  ಜನವರಿ 10 ರಂದು ತೀರ್ಪು ನೀಡಿತ್ತು.

ಮೊದಲ ಆರೋಪಿ ಶಂಭು ಮತ್ತು ಅಶೋಕನ್‌ ನಡುವಿನ ವೈಯುಕ್ತಿಕ ವೈಷಮ್ಯವೇ ಅಶೋಕನ್‌ ಹತ್ಯೆಗೆ ಕಾರಣ ಎನ್ನಲಾಗಿದೆ. ಅಶೋಕನ್‌ ಸ್ನೇಹಿತನಿಗೆ ಶಂಭು ಸ್ವಲ್ಪ ಹಣವನ್ನು ಸಾಲವಾಗಿ ನೀಡಿದ್ದ.

ಮರುಪಾವತಿಗಾಗಿ ಶಂಭು ಸ್ನೇಹಿತನನ್ನು ಬೆದರಿಸಿದ್ದು ಅಶೋಕನ್ ಜೊತೆ ಗಲಾಟೆಗೆ ಕಾರಣವಾಗಿತ್ತು. 2013ರ ಮೇ 5ರಂದು ಸಂಜೆ ಆಲಂಕೋಡ್‌ ಜಂಕ್ಷನ್‌ನಲ್ಲಿ ಅಶೋಕನ್‌ ಅವರನ್ನು ಬರ್ಬರವಾಗಿ ಥಳಿಸಿ ಹತ್ಯೆ ಮಾಡಲಾಗಿತ್ತು.

ಪ್ರಕರಣದಲ್ಲಿ ಮೊದಲು ಹತ್ತೊಂಬತ್ತು ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿತ್ತು. ಅವರಲ್ಲಿ ಇಬ್ಬರು ಮಾಫಿ ಸಾಕ್ಷಿಗಳಾಗಿ ಬದಲಾಗಿದ್ದರು. ಒಬ್ಬಾತ ನಿಧನ ಹೊಂದಿದ್ದ. ಎಂಟು ಮಂದಿ ಆರೋಪಿಗಳನ್ನು ಖುಲಾಸೆಗೊಳಿಸಿದ್ದು, ಉಳಿದ ಎಂಟು ಮಂದಿಗೆ ಶಿಕ್ಷೆ ವಿಧಿಸಲಾಗಿದೆ.