ಕೇರಳ ಮುಖ್ಯಮಂತ್ರಿ ಭಾಗವಹಿಸಿದ್ದ ಎಂಡೋಸಲ್ಫಾನ್ ಸಂತ್ರಸ್ತರ ಸಭೆಯಲ್ಲಿ ಕ್ರಿಮಿನಾಶಕವು ಆರೋಗ್ಯ ಸಮಸ್ಯೆ ಉಂಟುಮಾಡುತ್ತದೆ ಎಂಬ ವರದಿಗಳು ಸುಳ್ಳು ಎಂಬ ಫಲಕ ಹಿಡಿದು ಸಭೆಯಲ್ಲಿ ಪಾಲ್ಗೊಂಡಿದ್ದ ವ್ಯಕ್ತಿಯ ವಿರುದ್ಧ ಜಾರಿಯಲ್ಲಿರುವ ಕ್ರಿಮಿನಲ್ ಪ್ರಕ್ರಿಯೆ ವಜಾಗೊಳಿಸಲು ಕೇರಳ ಹೈಕೋರ್ಟ್ ನಿರಾಕರಿಸಿದೆ.
ಪ್ಲಾಂಟೇಶನ್ ಕಾರ್ಪೊರೇಶನ್ ಆಫ್ ಇಂಡಿಯಾ ಸಂಸ್ಥೆಯ ಮಾಜಿ ಉದ್ಯೋಗಿ ಹಾಗೂ ಅರ್ಜಿದಾರ ಗಂಗಾಧರನ್ ನಾಯರ್ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್ 153ರ ಅಡಿ ದೂರು ದಾಖಲಿಸಲಾಗಿದ್ದು, ಈ ಸಂಬಂಧ ಪೊಲೀಸರು ಕಾಸರಗೋಡಿನ ಪ್ರಥಮ ದರ್ಜೆ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಆರೋಪ ಪಟ್ಟಿಯನ್ನೂ ಸಲ್ಲಿಸಿದ್ದಾರೆ. ಕ್ರಿಮಿನಾಶಕ ತಯಾರಿಕೆಯಲ್ಲಿ ಪಾಲ್ಗೊಂಡಿದ್ದ ಎನ್ನಲಾದ ಆರೋಪಿಯ ನಡೆಯು ದೊಂಬಿಗೆ ಕಾರಣವಾಗುವ ಸಾಧ್ಯತೆ ಇತ್ತು ಎನ್ನಲಾಗಿದ್ದು, ಆತನ ವಿರುದ್ಧ ಕೇರಳ ಸಾರ್ವಜನಿಕ ಸಭೆಗೆ ಅಡಚಣೆ ತಡೆ ಕಾಯಿದೆ-1961ರ ಅಡಿ ದೂರು ದಾಖಲಿಸಲಾಗಿದೆ.
ಐಪಿಸಿಯ ಸೆಕ್ಷನ್ 153ರ ಅಡಿ ದೊಂಬಿ ನಡೆದರೆ ಮಾತ್ರ ಅಪರಾಧವಲ್ಲ ಎಂದಿರುವ ನ್ಯಾಯಮೂರ್ತಿ ಎಂ ಆರ್ ಅನಿತಾ ಅವರಿದ್ದ ಏಕಸದಸ್ಯ ಪೀಠವು ಅರ್ಜಿದಾರರ ವಿರುದ್ಧ ಎಫ್‌ಐಆರ್ ವಜಾಗೊಳಿಸಲು ನಿರಾಕರಿಸಿದೆ.
“... ಸಭೆಯಲ್ಲಿ ಭಾಗವಹಿಸಿದ್ದವರು ಎಂಡೋಸಲ್ಫಾನ್ ಸಂತ್ರಸ್ತರಾಗಿದ್ದು, ಅಧಿಕಾರಿಗಳು ಸಿದ್ಧಪಡಿಸಿದ ಪಟ್ಟಿಯಲ್ಲಿದ್ದವರೇ ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಅರ್ಹರು ಸಭೆಯಲ್ಲಿ ಪಾಲ್ಗೊಂಡಿದ್ದಿರಬಹುದು ಎಂಬುದನ್ನೂ ಅಲ್ಲಗಳೆಯಲಾಗದು. ಕಾಸರಗೋಡು ಜಿಲ್ಲೆಯಲ್ಲಿ ಎಂಡೋಸಲ್ಫಾನ್ ದುರಂತ ನಡೆದಿಲ್ಲ ಎನ್ನುವಂಥ ಫಲಕ ನೋಡಿದವರಿಗೆ ಹೇಗಾಗಿರಬೇಕು?” ಎಂದು ಪೀಠವು ಪ್ರಶ್ನಿಸಿದೆ.
“ಪರಿಣಾಮ ಏನಾಗಬಹುದು ಎಂಬುದನ್ನು ಯೋಚಿಸದಿರುವ ಅರ್ಜಿದಾರರ ನಡೆಯು ಮೇಲ್ನೋಟಕ್ಕೆ ವಿವೇಚನಾರಹಿತವಾಗಿದೆ. ಎಂಡೋಸಲ್ಫಾನ್ ನಿಂದ ನೈಜವಾಗಿ ಹಾನಿ ಅನುಭವಿಸಿದ ಸಂತ್ರಸ್ತರು ಫಲಕ ನೋಡಿ ಪ್ರಚೋದನೆಗೆ ಒಳಗಾಗುವು ಸಾಧ್ಯತೆಯನ್ನು ತಳ್ಳಿಹಾಕಲಾಗದು.”ನ್ಯಾಯಮೂರ್ತಿ ಎಂ ಆರ್ ಅನಿತಾ
“ಎಂಡೋಸಲ್ಫಾನ್ ಸಂತ್ರಸ್ತರಿಗೆ ಪರಿಹಾರ ವಿತರಿಸುವ ಸಭೆಯಲ್ಲಿ ಮುಖ್ಯಮಂತ್ರಿ ಪಾಲ್ಗೊಂಡು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಭಾಷಣ ಮಾಡುವ ಸಂದರ್ಭದಲ್ಲಿ ಅರ್ಜಿದಾರರು/ಆರೋಪಿಯು ವಿವಾದಾತ್ಮಕ ಫಲಕ ಹಿಡಿದಿರುವುದು ಅಲ್ಲಿ ಪಾಲ್ಗೊಂಡಿರುವ, ಮೇಲ್ನೋಟಕ್ಕೆ ಸಂತ್ರಸ್ತರೆನಿಸಿದವರ ಮನದಲ್ಲಿ ಅನುಮಾನ ಹುಟ್ಟುಹಾಕುವಂಥದ್ದು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಕಾರ್ಯಕ್ರಮದಲ್ಲಿ ಹಾಗೂ ಮತ್ತಿತರೆಡೆ ಸಮಸ್ಯೆ ಉಂಟುಮಾಡುವುದು ಅರ್ಜಿದಾರರ ಉದ್ದೇಶವಾಗಿತ್ತೇ ಎಂಬುದು ಸಾಕ್ಷ್ಯ ಪರಿಶೀಲನೆಯ ಸಂದರ್ಭದಲ್ಲಿ ರುಜುವಾತಾಗಬೇಕಿದ” ಎಂದು ನ್ಯಾಯಪೀಠ ಹೇಳಿದೆ.
ಅರ್ಜಿದಾರ, ಆರೋಪಿ ನಾಯರ್ ಪರವಾಗಿ ವಕೀಲರಾದ ಶೈಜನ್ ಸಿ ಜಾರ್ಜ್ ಮತ್ತು ಸಜಿತಾ ಜಾರ್ಜ್ ವಾದಿಸಿದರು. ಸರ್ಕಾರವನ್ನು ಸರ್ಕಾರಿ ಅಭಿಯೋಜಕ ಸಿ ಕೆ ಸುರೇಶ್ ಪ್ರತಿನಿಧಿಸಿದ್ದರು.