ಬಿಜೆಪಿಗರ ಜೊತೆ ಕಾಣಿಸಿಕೊಂಡ ಮಾತ್ರಕ್ಕೆ ಸಿಪಿಐ (ಎಂ) ಪ್ರತಿನಿಧಿ ಪಕ್ಷಾಂತರ ಮಾಡಿದ್ದಾರೆ ಎಂದಲ್ಲ: ಕೇರಳ ಹೈಕೋರ್ಟ್

“ಎರಡನೇ ಪ್ರತಿವಾದಿಯು ಸಿಪಿಐ (ಎಂ) ಸದಸ್ಯತ್ವ ತ್ಯಜಿಸಿದ್ದಾರೆ ಎಂಬುದನ್ನು ಸಾಬೀತುಪಡಿಸಲು ಯಾವುದೇ ದಾಖಲೆಗಳಿಲ್ಲ” ಎಂದು ಕೇರಳ ಹೈಕೋರ್ಟ್‌ ಹೇಳಿದ್ದು, ಆಯೋಗದ ನಿರ್ಧಾರಕ್ಕೆ ನ್ಯಾಯಾಲಯ ಸಮ್ಮತಿ ಸೂಚಿಸಿದೆ.
BJP Representative Image
BJP Representative Image
Published on

ಬಿಜೆಪಿ ಸದಸ್ಯರ ಜೊತೆ ಸಿಪಿಐ (ಎಂ) ಪ್ರತಿನಿಧಿ ಕಾಣಿಸಿಕೊಂಡಿದ್ದಾರೆ ಎಂಬ ಮಾತ್ರಕ್ಕೆ ಅವರು ಬಿಜೆಪಿ ಸೇರಿದ್ದಾರೆ ಎಂದಲ್ಲ ಎಂದು ಕೇರಳ ಹೈಕೋರ್ಟ್ ಹೇಳಿದೆ.

ಬಿಜೆಪಿ ಸದಸ್ಯರ ಜೊತೆ ಗುರುತಿಸಿಕೊಂಡಿರುವ ಹಿನ್ನೆಲೆಯಲ್ಲಿ ಅಂಬಾಲಪ್ಪರ ಗ್ರಾಮ ಪಂಚಾಯಿತಿ ಸದಸ್ಯರಾದ ಎರಡನೇ ಪ್ರತಿವಾದಿಯನ್ನು ಅನರ್ಹಗೊಳಿಸುವಂತೆ ಕೋರಿ ಅದೇ ಗ್ರಾಮದ ವ್ಯಕ್ತಿಯೊಬ್ಬರು ಸಲ್ಲಿಸಿದ್ದ ಮನವಿಯನ್ನು ಕೇರಳ ಚುನಾವಣಾ ಆಯೋಗ ವಜಾಗೊಳಿಸಿತ್ತು. ಆಯೋಗದ ನಿರ್ಧಾರವನ್ನು ಪ್ರಶ್ನಿಸಿ ಕೇರಳ ಹೈಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸಲಾಗಿತ್ತು.

ಸದಸ್ಯರೊಬ್ಬರು ಬಿಜೆಪಿ ಕಾರ್ಯಕರ್ತರ ಜೊತೆ ಗುರುತಿಸಿಕೊಂಡಿರುವ ಮಾತ್ರಕ್ಕೆ ಅವರನ್ನು ಅನರ್ಹತೆ ಕಾಯಿದೆ ಅಡಿ ಅನರ್ಹಗೊಳಿಸಲಾಗದು ಎಂದು ನ್ಯಾಯಮೂರ್ತಿ ಮುಹಮ್ಮದ್ ಮುಷ್ತಾಕ್ ಅವರಿದ್ದ ಏಕಸದಸ್ಯ ಪೀಠವು ಮನವಿಯನ್ನು ವಜಾಗೊಳಿಸಿದೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ತನ್ನ ಕಾರ್ಯಕರ್ತನನ್ನು ಸಿಪಿಐ (ಎಂ) ಉಚ್ಚಾಟಿಸಿಲ್ಲ ಎಂಬ ವಿಚಾರವನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ.

“ಬಿಜೆಪಿ ಸದಸ್ಯರ ಜೊತೆ ಸಿಪಿಐ (ಎಂ) ಸದಸ್ಯ ಗುರುತಿಸಿಕೊಂಡಿದ್ದಾರೆ ಎಂಬ ಮಾತ್ರಕ್ಕೆ ಅವರು ಬಿಜೆಪಿ ಸೇರಿದ್ದಾರೆ ಎಂದು ಹೇಳಲಾಗದು. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ತನ್ನ ಕಾರ್ಯಕರ್ತ ಹಾಗೂ ಎರಡನೇ ಪ್ರತಿವಾದಿಯು ವಿರೋಧಿ ಪಡೆ ಜೊತೆ ಗುರುತಿಸಿಕೊಂಡಿದ್ದಾರೆ ಎಂದು ಸಿಪಿಐ (ಎಂ) ತನ್ನ ಸದಸ್ಯನನ್ನು ಉಚ್ಚಾಟಿಸಿಲ್ಲ ಎಂಬುದನ್ನು ಗಣನೆಗೆ ತೆಗೆದುಕೊಳ್ಳಬೇಕಿದೆ.”
ಕೇರಳ ಹೈಕೋರ್ಟ್

ಬಿಜೆಪಿ ಸೇರುವ ಬಯಕೆಯನ್ನು ಪ್ರತಿವಾದಿಯು ಸುದ್ದಿಗೋಷ್ಠಿಯಲ್ಲಿ ವ್ಯಕ್ತಪಡಿಸಿದ್ದಾರೆ ಎಂದು ಅರ್ಜಿದಾರರು ವಾದಿಸಿದ್ದರು. ಆದರೆ, ಪ್ರತಿವಾದಿಯು ಅಂಥ ಯಾವುದೇ ಹೇಳಿಕೆ ನೀಡಿಲ್ಲ ಎಂದು ಪ್ರತಿಕ್ರಿಯಿಸಿದ್ದರು. ಅರ್ಜಿದಾರರು ತಮ್ಮ ಆರೋಪಕ್ಕೆ ಪೂರಕವಾದ ದಾಖಲೆಗಳನ್ನು ಸಲ್ಲಿಸಿಲ್ಲ ಎಂದು ಹೇಳಿರುವ ಕೇರಳ ಚುನಾವಣಾ ಆಯೋಗದ ವಾದವನ್ನು ಏಕಸದಸ್ಯ ಪೀಠವು ಬೆಂಬಲಿಸಿದೆ.

“ಎರಡನೇ ಪ್ರತಿವಾದಿಯು ಬಿಜೆಪಿ ಸದಸ್ಯರು ಅಥವಾ 'ಹಿಂದೂ ಅಕ್ಕಿಯಾ ವೇದಿ' ಜೊತೆ ಇದ್ದರು ಎಂಬುದನ್ನು ಹೊರತುಪಡಿಸಿ ಸಿಪಿಐ (ಎಂ) ಸದಸ್ಯತ್ವ ತ್ಯಜಿಸುತ್ತಾರೆ ಎಂಬುದನ್ನು ಸಾಬೀತುಪಡಿಸುವ ಯಾವುದೇ ದಾಖಲೆಗಳು ಇಲ್ಲ.”
ನ್ಯಾಯಮೂರ್ತಿ ಎ ಎಂ ಮುಷ್ತಾಕ್
Also Read
ಬಿಜೆಪಿ ನಾಯಕರಾದ ಅನುರಾಗ್, ಪರೇಶ್ ದ್ವೇಷಭಾಷಣ; ಎಫ್ಐಆರ್ ಕೋರಿಕೆ ವಜಾಗೊಳಿಸಿದ ದೆಹಲಿ ನ್ಯಾಯಾಲಯ

ಪ್ರತಿವಾದಿಯು ಪಕ್ಷದ ಸಭೆಗಳಲ್ಲಿ ಭಾಗವಹಿಸುತ್ತಿಲ್ಲ ಎಂಬ ಅರ್ಜಿದಾರರ ಹೆಚ್ಚುವರಿ ವಾದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಇದಕ್ಕೆ ಅವರ ವಿರುದ್ಧ ಶಿಸ್ತುಕ್ರಮ ಜರುಗಿಸಬೇಕೆ ವಿನಾ ಅವರನ್ನು ಅನರ್ಹಗೊಳಿಸಲಾಗದು ಎಂದು ಹೇಳಿ ಅರ್ಜಿ ವಜಾಗೊಳಿಸಿತು.

Kannada Bar & Bench
kannada.barandbench.com