Kerala High Court 
ಸುದ್ದಿಗಳು

ಫೋನ್ ಮೂಲಕ ಪೊಲೀಸರನ್ನು ನಿಂದಿಸುವುದು ಐಪಿಸಿ ಸೆಕ್ಷನ್ 294ರಡಿ ಅಶ್ಲೀಲತೆಯ ಅಪರಾಧವಲ್ಲ: ಕೇರಳ ಹೈಕೋರ್ಟ್

ದೂರವಾಣಿ ಮೂಲಕ ಪೊಲೀಸ್ ಠಾಣಾಧಿಕಾರಿ ಜೊತೆ ಮಾತನಾಡುವಾಗ ನಿಂದನೀಯ ಭಾಷೆ ಬಳಸಿದ ಆರೋಪದ ಮೇಲೆ 51 ವರ್ಷದ ಮಹಿಳೆಯ ವಿರುದ್ಧ ದಾಖಲಿಸಲಾದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸುವ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿತು.

Bar & Bench

ದೂರವಾಣಿ ಕರೆ ಮಾಡಿ ಪೊಲೀಸರ ವಿರುದ್ಧ ನಿಂದನೀಯ ಪದಗಳನ್ನು ಬಳಸುವುದು ಐಪಿಸಿ ಸೆಕ್ಷನ್‌ 294 (ಬಿ) ಅಡಿ ಅಶ್ಲೀಲತೆಯ ಅಪರಾಧವಾಗದು ಎಂದು ಕೇರಳ ಹೈಕೋರ್ಟ್‌ ಈಚೆಗೆ ತಿಳಿಸಿದೆ.

ದೂರವಾಣಿ ಮೂಲಕ ಪೊಲೀಸ್‌ ಠಾಣಾಧಿಕಾರಿ ಜೊತೆ ಮಾತನಾಡುವಾಗ ನಿಂದನೀಯ ಭಾಷೆ ಬಳಸಿದ ಆರೋಪದ ಮೇಲೆ 51 ವರ್ಷದ ಮಹಿಳೆಯ ವಿರುದ್ಧ ದಾಖಲಿಸಲಾದ ಕ್ರಿಮಿನಲ್ ಮೊಕದ್ದಮೆ ರದ್ದುಗೊಳಿಸುವ ವೇಳೆ ನ್ಯಾಯಮೂರ್ತಿ ಪಿ ವಿ ಕುಂಞಿಕೃಷ್ಣನ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.

“ಐವತ್ತೊಂದು ವರ್ಷದ ಪ್ರಜೆಯಾದ ಅರ್ಜಿದಾರೆ ಅಲಪ್ಪುಳ ಉತ್ತರ ಪೊಲೀಸ್ ಠಾಣೆಯ ಠಾಣಾಧಿಕಾರಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆಂದು ಆರೋಪಿಸಲಾಗಿದೆ. ಅಂತಿಮ ವರದಿಯಲ್ಲಿನ ಸಂಪೂರ್ಣ ಆರೋಪವನ್ನು ಒಪ್ಪಿದರೂ ಐಪಿಸಿ ಸೆಕ್ಷನ್‌ 294 (ಬಿ), 506 (ಐ) ಹಾಗೂ ಪೊಲೀಸ್ ಕಾಯಿದೆಯ ಸೆಕ್ಷನ್ 120 (ಒ) ಅಡಿ ಅಪರಾಧ ಎಸಗಿಲ್ಲ ಎಂದು ನಾನು ಪರಿಗಣಿಸುತ್ತೇನೆ” ಎಂಬುದಾಗಿ ಆದೇಶದಲ್ಲಿ ತಿಳಿಸಲಾಗಿದೆ.

ಜೇಮ್ಸ್ ಜೋಸ್ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣವನ್ನು ಆಧರಿಸಿದ ನ್ಯಾ. ಕುಂಞಿಕೃಷ್ಣನ್ , ಆಪಾದಿತ ಘಟನೆ ಮತ್ತು ಆರೋಪಿ ಮಹಿಳೆ ಫೋನ್‌ನಲ್ಲಿ ಬಳಸಿದ ಪದಗಳು, ಆರೋಪಗಳು ನಿಜವೆಂದು ಭಾವಿಸಿದರೂ ಇದು ಐಪಿಸಿ ಸೆಕ್ಷನ್ 294 (ಬಿ) ಅಡಿ ಅಪರಾಧವಾಗದು ಎಂದು ಹೇಳಿದ್ದಾರೆ.

ಪೊಲೀಸ್ ಅಧಿಕಾರಿಯ ವಿರುದ್ಧ ಮಹಿಳೆ ನೀಡಿದ ದೂರಿಗೆ ಪ್ರತಿಯಾಗಿ ಮಹಿಳೆಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗಿದೆ ಎಂದು ಮೇಲ್ನೋಟಕ್ಕೆ ಕಂಡುಬಂದಿರುವುದಾಗಿ ಹೈಕೋರ್ಟ್‌ ತಿಳಿಸಿದೆ.   

ಈ ಹಿನ್ನೆಲೆಯಲ್ಲಿ ಪ್ರಕರಣ ರದ್ದುಗೊಳಿಸಿದ ನ್ಯಾಯಾಲಯ ಅರ್ಜಿದಾರೆಯ ವಿರುದ್ಧ ಹೇಗೆ ಕ್ರಿಮಿನಲ್‌ ದೂರು ದಾಖಲಿಸಲಾಯಿತು ಎಂಬ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಹೀಗಾಗಿ ನ್ಯಾಯಾಲಯ ಪ್ರಕರಣವನ್ನು ರದ್ದುಗೊಳಿಸಿದೆ. ಇದಲ್ಲದೆ, ಅರ್ಜಿದಾರ-ಮಹಿಳೆಯ ವಿರುದ್ಧ ಕ್ರಿಮಿನಲ್ ದೂರು ಹೇಗೆ ದಾಖಲಾಗಿದೆ ಎಂಬುದರ ಕುರಿತು ತನಿಖೆ ನಡೆಸುವಂತೆ ಜಿಲ್ಲಾ ಪೊಲೀಸ್ ಮುಖ್ಯಸ್ಥರಿಗೆ ನಿರ್ದೇಶನ ನೀಡಿದೆ.