Kerala High Court Advocates Association (KHCAA) and Kerala High Court 
ಸುದ್ದಿಗಳು

ಶನಿವಾರವೂ ಕೆಲಸ: ಕೇರಳ ಹೈಕೋರ್ಟ್ ವಕೀಲರ ಸಂಘದ ಆಕ್ಷೇಪ

ಪ್ರತಿ ತಿಂಗಳ ಎರಡು ಶನಿವಾರಗಳಂದು ನಿಯಮಿತ ನ್ಯಾಯಾಲಯ ಕಲಾಪ ನಡೆಸುವ ಕುರಿತು ತಮ್ಮ ಅಭಿಪ್ರಾಯ ತಿಳಿಸುವಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಕಳುಹಿಸಿದ್ದ ಪತ್ರಕ್ಕೆ ಸಂಘ ಆಕ್ಷೇಪ ವ್ಯಕ್ತಪಡಿಸಿದೆ.

Bar & Bench

ಪ್ರಕರಣಗಳು ಬಾಕಿ ಉಳಿಯುವುದನ್ನು ತಪ್ಪಿಸಲು ಕೇರಳ ಹೈಕೋರ್ಟ್‌ನಲ್ಲಿ ಪ್ರತಿ ತಿಂಗಳ ಎರಡು ಶನಿವಾರ ನಿಯಮಿತ ನ್ಯಾಯಾಲಯ ಕಲಾಪ ನಡೆಸುವ ಪ್ರಸ್ತಾವನೆಗೆ ಕೇರಳ ಹೈಕೋರ್ಟ್‌ ವಕೀಲರ ಸಂಘ (ಕೆಎಚ್‌ಸಿಎಎ) ಆಕ್ಷೇಪ ವ್ಯಕ್ತಪಡಿಸಿದೆ.

ಈ ಸಂಬಂಧ ಜನವರಿ 23ರಂದು ಪತ್ರ ಬರೆದಿರುವ ಅದು ಇಂತಹ ನಿರ್ಣಯದಿಂದಾಗಿ ವಕೀಲ ವೃತ್ತಿ ಹಾಗೂ ನ್ಯಾಯ ವಿತರಣಾ ವ್ಯವಸ್ಥೆಯ ಮೇಲೆ ದೂರಗಾಮಿ ಪರಿಣಾಮ ಉಂಟಾಗಲಿದೆ ಎಂದಿದೆ.

ಪ್ರಸ್ತಾವನೆ ಬಗ್ಗೆ ತನಗೆ ಗಂಭೀರ ಆತಂಕ ಮತ್ತು ತೀವ್ರ ವಿರೋಧ ಇದೆ ಎಂದಿರುವ ಅದು ಶನಿವಾರ ಕಲಾಪ ನಡೆದರೆ ವಕೀಲರ ವೃತ್ತಿಪರ ಹಾಗೂ ವೈಯಕ್ತಿಕ ಜೀವನ, ನ್ಯಾಯದ ಲಭ್ಯತೆ, ಕೆಲಸ–ಜೀವನ ಸಮತೋಲನ ಮತ್ತು ಈಗಾಗಲೇ ಇರುವ ಮೂಲಸೌಕರ್ಯ ಹಾಗೂ ಸಾರಿಗೆ ಸಮಸ್ಯೆಗಳ ಮೇಲೆ ದೂರಗಾಮಿ ಪರಿಣಾಮ ಉಂಟಾಗುತ್ತದೆ. ಇದು ಕೇವಲ ವಕೀಲರಿಗಷ್ಟೇ ಅಲ್ಲದೆ, ಸಂಪೂರ್ಣ ನ್ಯಾಯ ವಿತರಣಾ ವ್ಯವಸ್ಥೆಯ ಮೇಲೂ ಪರಿಣಾಮ ಬೀರುತ್ತದೆ ಎಂದಿದೆ.

ಪ್ರಕರಣಗಳು ಬಾಕಿ ಉಳಿಯುವುದನ್ನು ತಪ್ಪಿಸಲು ರಾಜ್ಯ ನ್ಯಾಯಾಲಯ ನಿರ್ವಹಣಾ ವ್ಯವಸ್ಥೆಗಳ (ಎಸ್‌ಸಿಎಂಎಸ್‌) ಸಮಿತಿ ಶಿಫಾರಸ್ಸು ಮಾಡಿದ್ದು ಇದು ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಚಾಲನೆ ನೀಡಿದ್ದ ಪ್ರಸ್ತಾವನೆ ಎಂದು ಹೈಕೋರ್ಟ್‌ ರಿಜಿಸ್ಟ್ರಾರ್‌ ಜನರಲ್‌ ತಿಳಿಸಿದ್ದರು.

ಶನಿವಾರಗಳಂದು 10–15 ವರ್ಷಕ್ಕಿಂತ ಹಳೆಯ ಬಾಕಿ ಪ್ರಕರಣಗಳಿಗೆ ಮಾತ್ರ ಆದ್ಯತೆ ನೀಡಿ ವಿಚಾರಣೆ ನಡೆಸಬೇಕು. ಹೊಸ ಅರ್ಜಿಗಳು ಮತ್ತು ಪ್ರವೇಶ ವಿಚಾರಗಳನ್ನು ಪಟ್ಟಿ ಮಾಡಬಾರದು ಎಂಬಂತಹ ಶಿಫಾರಸ್ಸುಗಳನ್ನು ಸಮಿತಿ ಮಾಡಿತ್ತು. ಈ ಶಿಫಾರಸ್ಸುಗಳ ಕುರಿತು ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವ ಮುನ್ನ ಕೆಎಚ್‌ಸಿಎಎ ಅಭಿಪ್ರಾಯ ಪಡೆಯಲು ಹೈಕೋರ್ಟ್‌ ಆಡಳಿತ ಸಮಿತಿ ನಿರ್ಧರಿಸಿತ್ತು.

ಆದರೆ ತಾನು ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಅನುಮತಿ ಪಡೆಯದೆ ಮತ್ತು ವಿವರವಾದ ಸಮಾಲೋಚನೆ ನಡೆಸದೆ ನಿರ್ಧಾರ ಕೈಗೊಳ್ಳಲಾಗದು ಎಂದು ಕೆಎಚ್‌ಸಿಎಎ ತಿಳಿಸಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ ಬರುವ ವಕೀಲರ ಮೇಲೆ ಶನಿವಾರ ಕಲಾಪಗಳು ಅತಿಯಾದ ಭಾರ ಹೊರಿಸುತ್ತವೆ. ವಿಷಯವನ್ನು ಪಾರದರ್ಶಕವಾಗಿ ಚರ್ಚಿಸಲು ಸಾಮಾನ್ಯ ಸಭೆ ಕರೆಯಲು ಸಮಾಯವಕಾಶ ನೀಡಬೇಕು. ಜನವರಿ 31ರ ನಂತರ ಪಾಲುದಾರರ ಸಭೆ ನಡೆಸಬೇಕು ಎಂದು ಸಂಘ ಮನವಿ ಮಾಡಿದೆ.

[ಪತ್ರಗಳು]

KHCAA_reply_letter.pdf
Preview
KHC_LETTER___Regular_sitting_satarday.pdf
Preview