

ಕನಿಷ್ಠ 25 ಜನರ ಸಾವಿಗೆ ಕಾರಣವಾದ ಗೋವಾದ ಅರ್ಪೋರಾದಲ್ಲಿರುವ ನೈಟ್‌ಕ್ಲಬ್ ಬೆಂಕಿಗಾಹುತಿಯಾದ ಪ್ರಕರಣವನ್ನು ನ್ಯಾಯಾಂಗ ತನಿಖೆ ನಡೆಸುವಂತೆ ಕೋರಿ ಬಾಂಬೆ ಹೈಕೋರ್ಟ್ ಗೋವಾ ಪೀಠದಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಸಲ್ಲಿಸಲಾಗಿದೆ [ಐಶ್ವರ್ಯ ಅರ್ಜುನ್ ಸಲಗಾಂವ್ಕರ್ ಮತ್ತು ಗೋವಾ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಉತ್ತರ ಗೋವಾದ ಅರ್ಪೋರಾದಲ್ಲಿರುವ 'ಬಿರ್ಚ್ ಬೈ ರೋಮಿಯೋ ಲೇನ್' ನೈಟ್ ಕ್ಲಬ್‌ನಲ್ಲಿ ಡಿಸೆಂಬರ್ 6ರ ತಡರಾತ್ರಿ ಬೆಂಕಿ ಅವಘಡ ಸಂಭವಿಸಿತ್ತು.
ಅನೇಕ ಬಾರಿ ಕೆಡವಲು ಆದೇಶ ನೀಡಿದ್ದರೂ ಮತ್ತು ಸೂಕ್ತ ನಿರ್ಮಾಣ ಪರವಾನಗಿ ಇಲ್ಲದೆ ನೈಟ್‌ಕ್ಲಬ್ ಕಾರ್ಯನಿರ್ವಹಿಸುತ್ತಿತ್ತು ಎಂಬ ವರದಿಗಳನ್ನು ಸಾಮಾಜಿಕ ಕಾರ್ಯಕರ್ತೆ ಐಶ್ವರ್ಯ ಸಲ್ಗಾಂವ್ಕರ್ ಸಲ್ಲಿಸಿರುವ ಅರ್ಜಿ ಉಲ್ಲೇಖಿಸಿದೆ.
ಸಾರ್ವಜನಿಕರ ಜೀವ ರಕ್ಷಿಸಲು ಅಗತ್ಯವಾದ ಮೂಲಭೂತ ಕಾನೂನು ಜಾರಿಗೆ ತರಲು ಸ್ಥಳೀಯಾಡಳಿತ ಸಂಸ್ಥೆಗಳು ಸಂಪೂರ್ಣ ವಿಫಲವಾಗಿರುವುದನ್ನು ಘಟನೆ ತೋರಿಸುತ್ತದೆ. ರಾಷ್ಟ್ರೀಯ ಕಟ್ಟಡ ಸಂಹಿತೆಯ ನಿಯಮಗಳ ಪ್ರಕಾರ ತುರ್ತಾಗಿ ವಾಹನಗಳು ಸಂಚರಿಸಲು 6 ಮೀಟರ್ ಅಗಲದ ದಾರಿ ಇರಬೇಕು. ಆದರೆ ಈ ವ್ಯವಸ್ಥೆ ಇಲ್ಲದೆ ಇದ್ದುದರಿಂದ ಅಗ್ನಿಶಾಮಕ ವಾಹನಗಳು ಸುಮಾರು 400 ಮೀಟರ್ ದೂರದಲ್ಲೇ ನಿಲ್ಲಬೇಕಾಯಿತು. ಪರಿಣಾಮ ಬೆಂಕಿ ನಂದಿಸುವುದು ಅಸಾಧ್ಯವಾಯಿತು. ನೈಟ್‌ಕ್ಲಬ್ ಅಗ್ನಿ ಸುರಕ್ಷತಾ ನಿಯಮಗಳನ್ನು ಪಾಲಿಸಿಲ್ಲ ಎಂಬುದನ್ನು ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಅವರೇ ಖುದ್ದು ಒಪ್ಪಿಕೊಂಡಿದ್ದಾರೆ ಎಂದು ಅರ್ಜಿದಾರರು ಹೇಳಿದ್ದಾರೆ.
2025ರ ಮೇ 3ರಂದು ಶಿರಗಾಂವಿನ ಶ್ರೀ ಲೈರಾಯಿ ದೇವಿ ದೇವಳದ ಲೈರಾಯಿ ಜಾತ್ರೆಯಲ್ಲಿ ನಡೆದ ಕಾಲ್ತುಳಿತ ದುರಂತಕ್ಕೂ ಈ ಘಟನೆಗೂ ಸಾಮ್ಯತೆ ಇದೆ. ಈ ಎರಡೂ ಘಟನೆಗಳು ಗೋವಾದಲ್ಲಿ ಅಕ್ರಮ ನಿರ್ಮಾಣಗಳು, ರಾಷ್ಟ್ರೀಯ ಕಟ್ಟಡ ಸಂಹಿತೆಯ ಉಲ್ಲಂಘನೆ, ಅಗ್ನಿ ಸುರಕ್ಷತಾ ಕ್ರಮಗಳ ಪರಿಶೀಲನೆಯಲ್ಲಿನ ಲೋಪ, ಪೊಲೀಸರ ಸಿದ್ಧತೆಯ ಕೊರತೆಯ ಜೊತೆಗೆ ವಿಪತ್ತು ನಿರ್ವಹಣಾ ಕಾಯಿದೆ 2005 ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಮಾರ್ಗಸೂಚಿಗಳ ಉಲ್ಲಂಘನೆಯನ್ನು ಹೇಳುತ್ತವೆ ಎಂದು ದೂರಲಾಗಿದೆ.
ಹೀಗಾಗಿ, ಹೈಕೋರ್ಟ್ ಮಧ್ಯಪ್ರವೇಶಿಸದೆ ಹೋದರೆ ಗೋವಾದಲ್ಲಿ ಅಕ್ರಮ ವಾಣಿಜ್ಯ ಕೇಂದ್ರಗಳು ಮತ್ತು ನಿಯಂತ್ರಣವಿಲ್ಲದೆ ನಡೆಸಲಾಗುವ ಕಾರ್ಯಕ್ರಮಗಳು ನಿರಪರಾಧಿಗಳ ಜೀವ ಕಸಿದುಕೊಳ್ಳುತ್ತವೆ. ಅದ್ದರಿಂದ, ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ನ್ಯಾಯಾಂಗ ಆಯೋಗ ರಚಿಸಿ ಜನ ಜಂಗುಳಿ ನಿರ್ವಹಣಾ ವೈಫಲ್ಯ ಮತ್ತು ಆಡಳಿತದ ನಿರ್ಲಕ್ಷ್ಯವನ್ನು ತನಿಖೆ ಮಾಡಬೇಕು ಎಂದು ಅರ್ಜಿ ಕೋರಿದೆ.
ಸರ್ಕಾರ ರಾಜ್ಯಮಟ್ಟದಲ್ಲಿ ಅಗ್ನಿ ಸುರಕ್ಷತಾ ಪರಿಶೀಲನೆ ನಡೆಸಬೇಕು. ಅಗತ್ಯ ಪರವಾನಿಗೆಗಳಿಲ್ಲದ ಎಲ್ಲ ಕಟ್ಟಡಗಳನ್ನು ಮುಚ್ಚಬೇಕು ಇಲ್ಲವೇ ಧ್ವಂಸಗೊಳಿಸಬೇಕು ಎಂದು ಮನವಿ ಮಾಡಲಾಗಿದೆ.
ಅರ್ಜಿದಾರರ ಪರವಾಗಿ ವಕೀಲ ಅಂಕುರ್ ಕುಮಾರ್ ಅವರು ನ್ಯಾಯಮೂರ್ತಿಗಳಾದ ಸಾರಂಗ್ ವಿ ಕೊತ್ವಾಲ್ ಮತ್ತು ಆಶಿಶ್ ಎಸ್ ಚವಾಣ್ ಅವರಿದ್ದ ವಿಭಾಗೀಯ ಪೀಠದೆದುರು ಪ್ರಕರಣ ಪ್ರಸ್ತಾಪಿಸಿದರು. ಡಿಸೆಂಬರ್ 16 ರಂದು ಮುಂದಿನ ವಿಚಾರಣೆ ನಡೆಯಲಿದೆ.